Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಡಿಸಿಸಿ ಬ್ಯಾಂಕಿಗೆ ನೋಟು ವಿನಿಮಯ ಸಿಗದಿರಲು ಹವಾಲಾ ಭೀತಿ ಕಾರಣ!

rrbiಮುಂಬೈ: ಚಲಾವಣೆ ಕಳೆದುಕೊಂಡಿರುವ 500, 1000 ರೂ. ನೋಟು ವಿನಿಮಯಕ್ಕೆ ಸಹಕಾರಿ ಬ್ಯಾಂಕುಗಳಲ್ಲಿ ಅವಕಾಶ ನೀಡದ ಕಾರಣ ರೈತರು ಭಾರಿ ಪ್ರಮಾಣದಲ್ಲಿ ತೊಂದರೆಗೆ ಒಳಗಾಗಿರುವಾಗಲೇ ತನ್ನ ನಿರ್ಧಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಮರ್ಥಿಸಿಕೊಂಡಿದೆ.

ಸಹಕಾರಿ ಬ್ಯಾಂಕುಗಳು ಹವಾಲಾ ವ್ಯವಹಾರ ಹಾಗೂ ಖೋಟಾ ನೋಟು ಚಲಾವಣೆಗೆ ತುತ್ತಾಗುವ ಸಂಭವವಿರುವುದರಿಂದ ನೋಟುಗಳ ವಿನಿಮಯಕ್ಕೆ ಆ ಬ್ಯಾಂಕುಗಳಿಗೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿದೆ.

ಉತ್ತರಪ್ರದೇಶದ ಸಹಕಾರಿ ಬ್ಯಾಂಕುಗಳಲ್ಲಿ ಸಾಕಷ್ಟು ಶಂಕಾಸ್ಪದ ವ್ಯವಹಾರಗಳು ನಡೆದಿವೆ. ಅಲ್ಲದೆ, ಖೋಟಾನೋಟು ಮೇಲೆ ನಿಗಾ ಇಡುವ ವ್ಯವಸ್ಥೆ ಸಹಕಾರಿ ಬ್ಯಾಂಕುಗಳಲ್ಲಿ ಇಲ್ಲ. ಹೀಗಾಗಿ ನೋಟು ಬದಲಾವಣೆಗೆ ಅವಕಾಶ ನೀಡಲಾಗದು ಎಂದು ಮಹಾರಾಷ್ಟ್ರ ಸರ್ಕಾರದ ನಿಯೋಗಕ್ಕೆ ಆರ್‌ಬಿಐ ಸ್ಪಷ್ಟಪಡಿಸಿದೆ.

ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ದಾಖಲೆಗಳ ವಿಚಾರದಲ್ಲಿ ಸಡಿಲ ನೀತಿ ಹೊಂದಿರುವುದು ಹಾಗೂ ಕೆಲ ಸಹಕಾರಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ನಡೆದಿರುವ ನಿದರ್ಶನಗಳಿರುವ ಹಿನ್ನೆಲೆಯಲ್ಲೂ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ದೇಶಾದ್ಯಂತ 370 ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ಗಳು, 93 ಸಾವಿರ ಪ್ರಾಥಮಿಕ ಕೃಷಿ ಸಾಲ ಸೊಸೈಟಿ(ಪಿಎಸಿಎಸ್‌) ಗಳು ಇದ್ದು, ನೋಟು ನಿಷೇಧದ ಬಳಿಕ ಅವುಗಳ ವ್ಯವಹಾರಕ್ಕೆ ಭಾರಿ ತೊಂದರೆಯಾಗಿದೆ. ಡಿಸಿಸಿ ಬ್ಯಾಂಕುಗಳಲ್ಲಿ 2014ರ ವೇಳೆಗೆ 2.36 ಲಕ್ಷ ರೂ. ಠೇವಣಿ ಇದ್ದರೆ, ಪಿಎಸಿಎಸ್‌ಗಳು 81,900 ಕೋಟಿ ರೂ. ಹೊಂದಿವೆ. ಇವೆರಡೂ ಬ್ಯಾಂಕುಗಳು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರಪ್ರದೇಶ, ಗುಜರಾತ್‌, ತಮಿಳುನಾಡು ಸೇರಿದಂತೆ ದೇಶದ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಜೀವನಾಡಿಯಂತಾಗಿವೆ.

ಈ ಬ್ಯಾಂಕುಗಳಿಗೆ ನೋಟು ಬದಲಾವಣೆ ಅವಕಾಶ ನೀಡದ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಅವರಿಗೆ ಪತ್ರ ಬರೆದಿದ್ದರು.

No Comments

Leave A Comment