Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ನೋಟು ರದ್ದು: ಮೊಬೈಲ್ ಕಾಮರ್ಸ್ ವಹಿವಾಟು ದುಪ್ಪಟ್ಟು

aaytmಬೆಂಗಳೂರು: ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟು ಗಳ ಚಲಾವಣೆ ಹಿಂದಕ್ಕೆ ಪಡೆದ ಬೆನ್ನಲ್ಲೇ ಮೊಬೈಲ್‌ ಪಾವತಿ ಮತ್ತು ಕಾಮರ್ಸ್‌ ಕಂಪೆನಿಗಳಿಗೆ ಶುಕ್ರದಸೆ ಆರಂಭವಾಗಿದ್ದು, ಅವುಗಳ  ಹಣಕಾಸು ವಹಿವಾಟು ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ.

ಪ್ರಧಾನಿ ನರೇಂದ್ರ ಮೋದಿ ನ.  8ರಂದು ನೋಟು ರದ್ದು ಮಾಡುವ ನಿರ್ಧಾರ ಪ್ರಕಟಿಸಿದ ಗಂಟೆಗಳ ಒಳಗಾಗಿ ‘ನಗದುರಹಿತ ಸೇವೆ’ ಒದಗಿಸುತ್ತಿರುವ ಮೊಬೈಲ್‌ ವ್ಯಾಲೆಟ್ ಕಂಪೆನಿಗಳ   ಆ್ಯಪ್‌ ಡೌನ್‌ಲೋಡ್‌ ಪ್ರಮಾಣ ಮತ್ತು ಬಳಕೆದಾರರ ಸಂಖ್ಯೆ ಏಕಾಏಕಿ ದಾಖಲೆಯ ಪ್ರಮಾಣದಲ್ಲಿ ಏರಿದೆ.

ಇಷ್ಟೇ ಅಲ್ಲ, ಭಾರತೀಯ ಸ್ಟೇಟ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಸೇರಿದಂತೆ ವಿವಿಧ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಆನ್‌ಲೈನ್‌ ವಹಿವಾಟು ಮತ್ತು ಆ್ಯಪ್‌ಗಳ ಡೌನ್‌ಲೋಡ್‌ ಕೂಡ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಾಗಿದೆ.

11 ಪೇಮೆಂಟ್ ಬ್ಯಾಂಕ್‌ಗಳಿಗೆ ಲೈಸೆನ್ಸ್ ನೀಡಿ ವರ್ಷ ಕಳೆದಿದ್ದರೂ ಒಂದು ಬ್ಯಾಂಕ್ ಕೂಡಾ ಕಾರ್ಯಾರಂಭ ಮಾಡಿಲ್ಲ. ಮೂರು ಸಂಸ್ಥೆಗಳು ತಮ್ಮ ಲೈಸೆನ್ಸ್ ಅನ್ನೇ ಹಿಂದಿರುಗಿಸಿದ್ದವು. ಪೇಟಿಎಂ, ಏರ್‌ಟೆಲ್ ಎಂ ಕಾಮರ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಮಾತ್ರ ತಮ್ಮ ವ್ಯಾಪಾರ ಮಾದರಿಯ ಯೋಜನೆಯನ್ನು ರಿಸರ್ವ್ ಬ್ಯಾಂಕ್‌ಗೆ ನೀಡಿದ್ದವು.

ಈಗಿನ ಬೆಳವಣಿಗೆ, ಮೂರೂ ಸಂಸ್ಥೆಗಳಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸುವುದಕ್ಕೆ ಬೇಕಿರುವ ಉತ್ಸಾಹ ಮತ್ತು ಧೈರ್ಯವನ್ನು ನೀಡುತ್ತಿದೆ. ಆಶ್ಚರ್ಯಕರ ಬೆಳವಣಿಗೆ! 15 ಕೋಟಿ ಬಳಕೆದಾರರನ್ನು  ಹೊಂದಿರುವ ದೇಶದ ಮುಂಚೂಣಿ ಮೊಬೈಲ್‌ ಕಾಮರ್ಸ್‌ ಕಂಪೆನಿ  ಪೇಟಿಯಂನ  (Paytm) ಆ್ಯಪ್‌ ಡೌನ್‌ಲೋಡ್‌ ಪ್ರಮಾಣ ಶೇ 200ರಷ್ಟು ಏರಿಕೆ ಕಂಡಿದ್ದು, ಬಳಕೆದಾರರ ಸಂಖ್ಯೆ ಶೇ 435ರಷ್ಟು ಹೆಚ್ಚಾಗಿದೆ.

ಪೇಟಿಯಂ ಖಾತೆಗೆ ಹಣ ಜಮಾ ಮಾಡುತ್ತಿರುವ ಗ್ರಾಹಕರ ಪ್ರಮಾಣ ಶೇ 100ರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ  ಕೇವಲ ಎಂಟು ದಿನಗಳಲ್ಲಿ ಪೇಟಿಯಂ ಒಟ್ಟಾರೆ ವಹಿವಾಟು ಏಕಾಏಕಿ ಶೇ 250ರಷ್ಟು ಏರಿಕೆಯಾಗಿದೆ.

ಐದು ಕೋಟಿ ಡೌನ್‌ಲೋಡ್‌: ನವೆಂಬರ್‌ ಎರಡನೇ ವಾರದಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 5 ಕೋಟಿಗಿಂತಲೂ ಹೆಚ್ಚು ಜನರು ಪೇಟಿಯಂ ಆ್ಯಂಡ್ರಾಯ್ಡ್‌  ಆ್ಯಪ್‌ ಡೌನ್‌ಲೋನ್‌ ಮಾಡಿಕೊಂಡಿದ್ದಾರೆ. ಇದರಿಂದ  ಆ್ಯಂಡ್ರಾಯ್ಡ್‌ ಕಾರ್ಯನಿರ್ವಹಣಾ ತಂತ್ರಾಂಶದಲ್ಲಿ ಈ ಆ್ಯಪ್‌ ಬಳಸುತ್ತಿರುವವರ ಸಂಖ್ಯೆ 7.5 ಕೋಟಿಗೆ ಏರಿದೆ.

ವಹಿವಾಟು ಸಂಖ್ಯೆ 50 ಲಕ್ಷ! ಪೇಟಿಯಂ ಮೂಲಕ ಗ್ರಾಹಕರು ನಡೆಸುವ ದಿನದ ವಹಿವಾಟಿನ ಸಂಖ್ಯೆ (Transaction) 50 ಲಕ್ಷ ತಲುಪಿದ್ದು,  ವಹಿವಾಟು ಮೊತ್ತ 24 ಸಾವಿರ ಕೋಟಿ ತಲುಪುವ ಸನಿಹದಲ್ಲಿದೆ.  ದೇಶದ ಮೊಬೈಲ್‌ ಕಾಮರ್ಸ್‌ ವಹಿವಾಟಿನಲ್ಲಿ ಇದೊಂದು ದಾಖಲೆಯಾಗಿದೆ.

ನಗದು ರಹಿತ ವ್ಯವಸ್ಥೆಯತ್ತ ದೇಶ:  ಇಡೀ ದೇಶ ನಗದುರಹಿತ ವ್ಯವಸ್ಥೆಯತ್ತ ಮುಖ ಮಾಡಿದೆ. ಮುಂದಿನ ದಿನಗಳಲ್ಲಿ ನಗದು ಆಧಾರಿತ ವಹಿವಾಟು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎನ್ನುತ್ತಾರೆ ಪೇಟಿಯಂ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಮಧುರ್‌ ದೇವ್ರಾ.

ನೋಟು ಚಲಾವಣೆ ರದ್ದಾದ ಕಾರಣ ದೇಶದ ಜನರು ಎಷ್ಟು ಬೇಗ ನಗದುರಹಿತ ವ್ಯವಸ್ಥೆಯತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಅತ್ಯಂತ ಸುಲಭ ಹಾಗೂ ಸುರಕ್ಷಿತವಾಗಿರುವ ನಗದುರಹಿತ ವಹಿವಾಟು ಅನಿವಾರ್ಯವಾಗಲಿದೆ ಎನ್ನುತ್ತಾರೆ ಪೇಟಿಯಂ ವಕ್ತಾರೆ ಸೋನಿಯಾ ಧವನ್‌.  ನಗದುರಹಿತ ವಹಿವಾಟು ಕಪ್ಪುಹಣ ಮತ್ತು ನಕಲಿ ನೋಟು ಚಲಾವಣೆಗೆ ಕಡಿವಾಣ ಹಾಕಲಿದೆ ಎನ್ನುವುದು ಅವರ ವಿಶ್ವಾಸ.

ಲಾಭವೇನು?: ನಗದುರಹಿತ ವಹಿವಾಟಿನಿಂದ ನೋಟುಗಳ ಬಳಕೆ  ತಗ್ಗುತ್ತದೆ.  ಎಲ್ಲ ವಹಿವಾಟು ಪಾರದರ್ಶಕ ಮತ್ತು ಸುರಕ್ಷಿತವಾಗಿರುತ್ತದೆ. ನಕಲಿನೋಟುಗಳ ಹಾವಳಿಗೆ ಕಡಿವಾಣ ಬೀಳಲಿದೆ.

ಏನೆಲ್ಲ ಸಾಧ್ಯ? ಹಣ ವರ್ಗಾವಣೆ, ಆನ್‌ಲೈನ್‌ ಶಾಪಿಂಗ್‌, ಮೊಬೈಲ್‌ ಶುಲ್ಕ ಪಾವತಿ, ಡಿಟಿಎಚ್‌ ಬಿಲ್‌ ಪಾವತಿ, ಟಿಕೆಟ್‌ ಬುಕಿಂಗ್‌ ಸೇರಿದಂತೆ ಇನ್ನೂ ಉಪಯೋಗ ಪಡೆಯಬಹುದು.

ಬಳಕೆ ಸುಲಭ: ಮೊಬೈಲ್‌ ಕಾಮರ್ಸ್‌ ಆ್ಯಪ್‌ ಡೌನ್‌ಲೋಡ್‌ ಮಾಡಿ, ಮೊಬೈಲ್‌ ನಂಬರ್‌ ಸೇರಿ ಇನ್ನಿತರ ಮಾಹಿತಿ ನೀಡಿ ಲಾಗ್‌ ಇನ್‌ ಆಗಬೇಕು. ಆ್ಯಪ್‌ ಮೂಲಕ ಹಣ ಸ್ವೀಕರಿಸುವ ವ್ಯಾಪಾರಿ ಬಳಿ, ಖರೀದಿಸುವ ವಸ್ತುಗಳಿಗೆ  ವಾಲೆಟ್‌ನಿಂದ ವ್ಯಾಪಾರಿಯ ಮೊಬೈಲ್‌ ಸಂಖ್ಯೆ ನಮೂದಿಸಿ ಕ್ಷಣದಲ್ಲಿ ಹಣ ವರ್ಗಾವಣೆ ಮಾಡಬಹುದು.
*

10 ಪ್ರಾದೇಶಿಕ ಭಾಷೆಯಲ್ಲಿ ಆ್ಯಪ್‌
ಗ್ರಾಹಕರಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಪೇಟಿಯಂ ಕಂಪೆನಿಯು ಕನ್ನಡ, ಮಲಯಾಳ, ತಮಿಳು, ತೆಲುಗು ಸೇರಿದಂತೆ ಹತ್ತು  ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ  ಆ್ಯಪ್‌ ಬಿಡುಗಡೆ ಮಾಡಿದೆ.

ಹತ್ತು ಕೋಟಿಗೂ ಹೆಚ್ಚು ಸ್ಮಾರ್ಟ್‌ಫೋನ್‌ ಗ್ರಾಹಕರನ್ನು ತಲುಪುವ ಗುರಿ ಹೊಂದಿರುವ ಕಂಪೆನಿ, ಪ್ರಾದೇಶಿಕ ಭಾಷೆಗಳಲ್ಲಿ ಆ್ಯಪ್‌ ಬಿಡುಗಡೆ ಮಾಡುವ ಮೂಲಕ ಎರಡು ಮತ್ತು ಮೂರನೇ ಹಂತದ ನಗರಗಳ ಗ್ರಾಹಕರನ್ನು ಶೇ 40ರಿಂದ ಶೇ 70ಕ್ಕೆ ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿದೆ.

ಕಂಪೆನಿಯ ಈ ಕ್ರಮ ಇದು ಪ್ರಾದೇಶಿಕ ಗ್ರಾಹಕರ ಮಹತ್ವವನ್ನು ಮನವರಿಕೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಿತರ ಕಂಪೆನಿಗಳೂ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ಒದಗಿಸಲು ಮುಂದಾಗಬಹುದು.

ಪೇಟಿಯಂ ವರ್ಷಾಂತ್ಯದಲ್ಲಿ 350 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಫೋನ್‌ ಮೂಲಕ ನಗದುರಹಿತ ಬ್ಯಾಂಕಿಂಗ್‌ ಸೇವೆ ಒದಗಿಸುವ ಪೇಮೆಂಟ್‌ ಬ್ಯಾಂಕ್‌ ಆರಂಭಿಸುವುದಾಗಿ ತಿಳಿಸಿದೆ. 2020ರ ಒಳಗಾಗಿ 50 ಕೋಟಿ ಬಳಕೆದಾರರನ್ನು ಹೊಂದುವ ಗುರಿ ಹೊಂದಿರುವುದಾಗಿ ಪೇಟಿಯಂ ಹೇಳಿದೆ.
*
ನೋಟು ರದ್ದಾದ ನಂತರ ವ್ಯಾಪಾರ ಅರ್ಧದಷ್ಟು ಕಡಿಮೆಯಾಗಿದೆ. ಈಗ 2000ಕ್ಕೆ ಚಿಲ್ಲರೆ ಕೊಡಲು ಸಾಧ್ಯವಾಗುತ್ತಿಲ್ಲ. ಡಿಜಿಟಲ್‌ ವಾಲೆಟ್‌ ಇದ್ರೆ ಚಿಲ್ಲರೆ ಸಮಸ್ಯೆ ನಿವಾರಣೆಯಾಗುತ್ತದೆ.
ಜಂಷಿದ್‌,
ವ್ಯಾಪಾರಿ

No Comments

Leave A Comment