Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಪುತ್ತೂರು ಪೆರಿಗೇರಿ ದರೋಡೆ ಪ್ರಕರಣ 10 ಮಂದಿ ಆರೋಪಿಗಳ ಸೆರೆ

putturಮಂಗಳೂರು: ಪುತ್ತೂರು ತಾಲೂಕು ಪೆರಿಗೇರಿ ಪಾದೆಕರಿಯ ವಿಷ್ಣು ಭಟ್‌ ಅವರ ಮನೆಯಲ್ಲಿ ಅ. 25ರಂದು ಹಾಡಹಗಲೇ ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ ತಂಡದ 12 ಮಂದಿಯಲ್ಲಿ 10 ಮಂದಿಯನ್ನು ಡಿಸಿಐಬಿ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಅವರು ದರೋಡೆ ಮಾಡಿದ ಸೊತ್ತು, ದರೋಡೆಗೆ ಉಪಯೋಗಿಸಿದ ಎರಡು ಕಾರು ಗಳನ್ನು° ವಶ ಪಡಿಸಿಕೊಳ್ಳಲಾಗಿದೆ. ಕೃಷ್ಣಾಪುರ 8 ನೇ ಬ್ಲಾಕ್‌ ಗೋಪುರೊಟ್ಟು ಮನೆಯ ಕೃಷ್ಣ  ಶೆಟ್ಟಿ  (35), ಸುರತ್ಕಲ್‌ ಸೂರಿಂಜೆ ಗ್ರಾಮ ಮದ್ಯ ಕುಲ್ಲಂಗಲ್‌ ಗುಡ್ಡೆಯ ಮಿಲನ್‌ ಯಾನೆ ಧನುಷ್‌ (24), ಕೃಷ್ಣಾಪುರ 8 ನೆ ಬ್ಲಾಕ್‌ನ ರೂಪೇಶ್‌ ಕುಮಾರ್‌ ಯಾನೆ ರೂಪಿ, ಕಾಟಿಪಳ್ಳದ ಮಿಲ್ಟನ್‌ ಆಲ್ವಿನ್‌ ಪಿಂಟೊ (24), ಸುರತ್ಕಲ್‌ ಇಡ್ಯಾ ಗ್ರಾಮದ ಆಶ್ರಯ ಕಾಲನಿಯ ಭರತ್‌ (19), ಮದ್ಯ ಕುಲ್ಲಂಗಲ್‌ ಗುಡ್ಡೆಯ ರಾಖೀ ಯಾನೆ ರಾಖೇಶ್‌ (19), ಕೃಷ್ಣಾಪುರ 8 ಎ ಬ್ಲಾಕ್‌ನ ರತನ್‌ ಯಾನೆ ರತನ್‌ ರಾಜ್‌ (25),  ಪೆರಾಬೆ ಗ್ರಾಮದ ಸುರೇಶ ಆಚಾರ್ಯ (34), ಸುಳ್ಯ ತಾಲೂಕು ಐವರ್ನಾಡು ಜಬಳ ಮನೆಯ ಪ್ರವೀಣ್‌ ಕುಮಾರ್‌ (23), ಪುತ್ತೂರು ಪಡವಗನ್ನೂರು ಗ್ರಾಮ ಪುಲಿಚಾjಡಿಯ ಶಬರಿ ಕುಮಾರ ನಾಯ್ಕ ಯಾನೆ ವಿಜಯ್‌ ಕುಮಾರ್‌ (24) ಬಂಧಿತರು.

ಹಳೆ ಆರೋಪಿಗಳು 
ರೂಪೇಶ್‌ ಕುಮಾರ್‌ ಮೇಲೆ ಸುರತ್ಕಲ್‌ ಠಾಣೆಯಲ್ಲಿ 1 ಹಲ್ಲೆ ಪ್ರಕರಣ, ಮಿಲ್ಟನ್‌ ಆಲ್ವಿನ್‌ ಪಿಂಟೊ ಮತ್ತು ರತನ್‌ ರಾಜ್‌ ಅವರ ಮೇಲೆ  ಸುರತ್ಕಲ್‌ ಠಾಣೆಯಲ್ಲಿ ತಲಾ 3 ಹಲ್ಲೆ  ಪ್ರಕರಣಗಳಿವೆ.

ಇನ್ನೂ ಇಬ್ಬರು ಬಾಕಿ 
ಇನ್ನಿಬ್ಬರು ಆರೋಪಿಗಳಾದ ಸುರತ್ಕಲ್‌ ಕಾಟಿಪಳ್ಳದ ಯಶೋಧರ ಶೆಟ್ಟಿ ಯಾನೆ ಯಶು (38) ಮತ್ತು ತೋಕೂರು ಜೋಕಟ್ಟೆಯ ನಾಗೇಶ್‌ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.

ಯಶೋಧರ ಶೆಟ್ಟಿ  ಮಂಗಳೂರಿನ ಪಾಂಡು ಪೈ ಕೊಲೆ ಪ್ರಕರಣದ ಆರೋಪಿ ಯಾಗಿದ್ದು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಈತನ ಮೇಲೆ ರೌಡಿ ಶೀಟರ್‌ ತೆರೆಯಲಾಗಿದೆ. ನಾಗೇಶ್‌ ಸುರತ್ಕಲ್‌ ಠಾಣೆ ವ್ಯಾಪ್ತಿಯ 3 ಹಲ್ಲೆ  ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯಾಗಿರುತ್ತಾನೆ.

ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಗುಲಾಬ್‌ರಾವ್‌ ಬೋರಸೆ ಅವರು ರವಿವಾರ ಇಲ್ಲಿ  ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಅಡಿಶನಲ್‌ ಎಸ್‌ಪಿ ಡಾ | ವೇದ ಮೂರ್ತಿ, ಡಿಸಿಬಿಐ ಇನ್ಸ್‌ಪೆಕ್ಟರ್‌ ಅಮಾನುಲ್ಲಾ  ಮುಂತಾದವರು ಉಪಸ್ಥಿತರಿದ್ದರು.

ಘಟನೆಯ ಹಿನ್ನೆಲೆ:  ವಿಷ್ಣು ಭಟ್‌ ಅವರ ಮನೆಗೆ ಅ. 25ರಂದು ಮಧ್ಯಾಹ್ನ 9 ಮಂದಿ ಆರೋಪಿಗಳು ನುಗ್ಗಿ ವಿಷ್ಣು ಭಟ್‌ ಅವರ ಪತ್ನಿ ಮತ್ತು ಕೆಲಸದಾಳನ್ನು ಕಟ್ಟಿಹಾಕಿ ಮನೆಯಲ್ಲಿದ್ದ  ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ದರೋಡೆ ಮಾಡಿಕೊಂಡು ಹೋಗಿದ್ದರು.

ಎರಡು  ತಂಡ ರಚನೆ 
ಪ್ರಕರಣದ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಮಂಗಳೂರು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಅವರ ಮಾರ್ಗದರ್ಶನ ಮತ್ತು ಸಹಕಾರದಿಂದ ಆರೋಪಿಗಳ ಪತ್ತೆ ಕಾರ್ಯ ಸಾಧ್ಯವಾಗಿದೆ ಎಂದು ಎಸ್‌ಪಿ ವಿವರಿಸಿದರು.
ಪತ್ತೆ ಕಾರ್ಯದಲ್ಲಿ ಪುತ್ತೂರು ಎಎಸ್‌ಪಿ ರಿಷ್ಯಂತ್‌, ಪುತ್ತೂರು ಗ್ರಾಮಾಂತರ ಸರ್ಕಲ್‌ ಇನ್ಸ್‌ಪೆಕ್ಟರ್‌ ಅನಿಲ್‌ ಎಸ್‌. ಕುಲಕರ್ಣಿ, ಸುರತ್ಕಲ್‌ ಠಾಣೆಯ ಇನ್ಸ್‌ ಪೆಕ್ಟರ್‌ ಚೆಲುವರಾಜು, ಪಿಎಸ್‌ಐ ಅಬ್ದುಲ್‌ ಖಾದರ್‌, ಡಿಸಿಐಬಿ ಎಎಸ್‌ಐ ಸಂಜೀವ ಪುರುಷ, ಸಿಬಂದಿ ಪಳನಿವೇಲು, ಇಕ್ಬಾಲ್‌, ಲಕ್ಷ್ಮಣ, ಉದಯ ರೈ, ತಾರಾನಾಥ, ಸತೀಶ್‌, ಸಂಪತ್‌ ಕುಮಾರ್‌, ವಿಜಯ ಗೌಡ. ವಾಸು ನಾಯ್ಕ, ಸಿಸಿಬಿ ಘಟಕದ ಚಂದ್ರಶೇಖರ್‌, ಪುತ್ತೂರು ಗ್ರಾಮಾಂತರ ಠಾಣೆಯ ಎಎಸ್‌ಐಗಳಾದ ರುಕ್ಮಯ ನಾಯ್ಕ ಮತ್ತು ತಿಮ್ಮಯ ಗೌಡ, ಹೆಡ್‌ ಕಾನ್‌ಸ್ಟೆಬಲ್‌ ಚಂದ್ರ, ಸಿಬಂದಿ ದಿನೇಶ್‌, ಅಬ್ದುಲ್‌ ರವೂಫ್‌, ವಿನಯ್‌, ಕರುಣಾಕರ, ಹನುಮಂತ, ಮಧು, ದಯಾನಂದ, ಮಹಿಳಾ ಸಿಬಂದಿ ದಿವ್ಯಶ್ರೀ, ಮಮತಾ, ಹೇಮಾವತಿ ಅವರು ಭಾಗವಹಿಸಿದ್ದರು.

ಒಟ್ಟಾರೆಯಾಗಿ ವಶಪಡಿಸಿದ ಸೊತ್ತುಗಳು
ಆರೋಪಿಗಳಿಂದ 50,000 ರೂ. ಮೌಲ್ಯದ ಚಿನ್ನ  ಮತ್ತು ಬೆಳ್ಳಿಯ ಆಭರಣ, 7 ಲಕ್ಷ ರೂ. ಮೌಲ್ಯದ ಕ್ಸೈಲೋ ಕಾರು, 3.5 ಲಕ್ಷ ರೂ. ಮೌಲ್ಯದ ಮಾರುತಿ ಆಲ್ಟೊ  ಕಾರು, ನಾಲ್ಕು ಮೊಬೈಲ್‌ ಫೋನ್‌ ಸಹಿತ ಒಟ್ಟು 11 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು  ವಶಕ್ಕೆ ಪಡೆದುಕೊಳ್ಳಲಾಗಿದೆ.  ಇನ್ನೂ 2 ಉಂಗುರ, 2 ಕಿವಿಯೋಲೆ ಮತ್ತು ನಗದು   ಪತ್ತೆಯಾಗಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣಾಪುರದಲ್ಲಿ  ತೈಲ ಟ್ಯಾಂಕರ್‌ ಕಾರ್ಮಿಕರು
ಯಶೋಧರ ಶೆಟ್ಟಿ  ತಂಡದವರು ಸುರತ್ಕಲ್‌ ಕೃಷ್ಣಾಪುರದಲ್ಲಿ ಆಯಿಲ್‌ ಟ್ಯಾಂಕರ್‌ಗಳ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಸುರೇಶ್‌ ಆಚಾರ್ಯ ಮತ್ತು ಪ್ರವೀಣ್‌ನ ಪರಿಚಯವಿತ್ತು. ಯಶೋಧರ ಶೆಟ್ಟಿ  ತಂಡ ದರೋಡೆ ನಡೆಸುವ ಸಂಚು ರೂಪಿಸಿದ್ದು, .  ಕೃಷ್ಣ ಶೆಟ್ಟಿ , ರೂಪೇಶ್‌, ಭರತ್‌, ಮಿಲನ್‌, ರೂಪೇಶ್‌, ಮಿಲ್ಟನ್‌, ರಾಖೀ, ರತನ್‌ ಹಾಗೂ ನಾಗೇಶ್‌ ಜತೆ ಸೇರಿ ಅ. 25ರಂದು ಎರಡು ವಾಹನಗಳಲ್ಲಿ  ವಿಷ್ಣು ಭಟ್‌ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದರು.

ಕೊಪ್ಪರಿಗೆ ಇರುವ ಶಂಕೆಯಿಂದ ಕೃತ್ಯ
ವಿಷ್ಣು ಭಟ್‌ ಅವರ ಮನೆಯ ದೇವರ ಕೋಣೆಯಲ್ಲಿ ಭಾರೀ ಪ್ರಮಾಣದ ಕೊಪ್ಪರಿಗೆ (ನಿಧಿ ಭಂಡಾರ) ಇದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ  ಈ ದರೋಡೆ ನಡೆದಿತ್ತು. ಕೊಪ್ಪರಿಗೆ ಇರುವ ಬಗ್ಗೆ ಹಲವು ವರ್ಷಗಳಿಂದ ಬಾಯಿ ಮಾತು ಕೇಳಿ ಬರುತ್ತಿತ್ತು. ಸುಮಾರು  4 ಕೋಟಿ ರೂ. ಮೌಲ್ಯದ ನಿಧಿ ಭಂಡಾರ ಇದೆ ಎಂಬುದಾಗಿ 3 ತಿಂಗಳ ಹಿಂದೆ ವಿಷ್ಣು ಭಟ್‌ ಅವರ ಮನೆ ಕೆಲಸಕ್ಕೆ ಹೋಗಿದ್ದ ಅದೇ ಪರಿಸರದ ಶಬರಿ ಕುಮಾರ ನಾಯ್ಕನಿಗೆ ಯಾರೋ ಹೇಳಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ಈ ದೇವರ ಕೋಣೆಗೆ ಹೋಗಲು ಹೊರಗಿನ ಯಾರನ್ನೂ ಬಿಡುತ್ತಿರಲಿಲ್ಲ. ಶಬರಿ ಕುಮಾರ ನಾಯ್ಕ ಈ ವಿಷಯವನ್ನು ತನ್ನ  ಮಿತ್ರ ಪ್ರವೀಣನಿಗೆ ತಿಳಿಸಿದ್ದನು. ಪ್ರವೀಣ್‌ ಈ ಬಗ್ಗೆ ಅಕ್ಕ ಸಾಲಿಗ ವೃತ್ತಿಯ ಸುರೇಶ್‌ ಆಚಾರ್ಯನಿಗೆ ತಿಳಿಸಿದ್ದನು. ಹಾಗೆ ಬಳಿಕ ಈ ವಿಚಾರವನ್ನು ಪ್ರವೀಣ್‌ ಮತ್ತು ಸುರೇಶ್‌ ಆಚಾರ್ಯ ಅವರು ಸ್ನೇಹಿತ ಸುರತ್ಕಲ್‌ನ ಯಶೋಧರ ಶೆಟ್ಟಿ ತಂಡಕ್ಕೆ ತಿಳಿಸಿದ್ದರು.

ಕೃತ್ಯದ ಬಳಿಕ ನಿರಾಶೆ
ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣಗಳು ಸಿಗಬಹುದೆಂದು ದರೋಡೆ ಕೃತ್ಯ ನಡೆಸಿ ದ್ದರು. ಆದರೆ ನಿರೀಕ್ಷೆಯಂತೆ ಕೊಪ್ಪರಿಕೆ ಅಲ್ಲಿರಲಿಲ್ಲ. ಕೇವಲ 50,000 ರೂ. ಮೌಲ್ಯದ ಸೊತ್ತಗಳು ಮಾತ್ರ ಲಭಿಸಿದ್ದು, ದರೋಡೆಕೋರರಿಗೆ ನಿರಾಶೆಯಾಗಿತ್ತು ಎಂದು ಎಸ್‌ಪಿ ತಿಳಿಸಿದರು.  ಕದ್ದ ಸೊತ್ತುಗಳು 1 ನೇ ಆರೋಪಿ ಕೃಷ್ಣ ಶೆಟ್ಟಿ ಬಳಿ ಪತ್ತೆಯಾಗಿವೆ ಎಂದರು.

No Comments

Leave A Comment