Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಟಿಪ್ಪು ಜಯಂತಿಯ ಪರ– ವಿರುದ್ಧ ತೀವ್ರಗೊಂಡ ಹೇಳಿಕೆಗಳು ಕೊಡಗು ಮತ್ತಷ್ಟು ಸೂಕ್ಷ್ಮ: ಕಟ್ಟೆಚ್ಚರ

yyಮಡಿಕೇರಿ: ಪ್ರಕೃತಿಯ ಮಡಿಲಲ್ಲಿ ಮಂಜಿನ ನಡುವೆ ತಣ್ಣಗಿರಬೇಕಿದ್ದ ಕೊಡಗಿನಲ್ಲಿ ಈಗ ಬಿಸಿಯ ವಾತಾವರಣ. ಈ ಬಾರಿಯೂ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಪರ–ವಿರುದ್ಧದ ಹೇಳಿಕೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ನಡುವೆ ಸರ್ಕಾರದ ಆದೇಶದಂತೆ ನ. 10ರಂದು ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದೆ. ಕಳೆದ ವರ್ಷ ಮಡಿಕೇರಿಯಲ್ಲಿ ನಡೆದಿದ್ದ ಗಲಭೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದ ಸ್ಥಳವನ್ನು ಸದ್ಯಕ್ಕೆ ಗೋಪ್ಯವಾಗಿ ಇಡಲಾಗಿದೆ.
ಆದರೆ, ಮೂಲಗಳ ಪ್ರಕಾರ ಬಂದೋಬಸ್ತ್‌ಗೆ ಅನುಕೂಲವಾಗುವ ನಗರದ ಹಳೆ ಕೋಟೆ ಆವರಣದ ಸಭಾಂಗಣದಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ಜಯಂತಿಗೆ ಸೀಮಿತ ಅತಿಥಿಗಳನ್ನು ಆಹ್ವಾನಿಸಿ, ಅವರಿಗೆ ಗುರುತಿನ ಚೀಟಿ ನೀಡಲೂ ಚಿಂತಿಸಲಾಗಿದೆ. ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ಪೂರ್ಣಗೊಳಿಸುವ ನಿರ್ಧಾರಕ್ಕೂ ಜಿಲ್ಲಾಡಳಿತ ಬಂದಿದೆ.
ಮಡಿಕೇರಿಗೆ ಸೀಮಿತವಾಗಿ 107 ಸೆಕ್ಷನ್‌ ಜಾರಿ ಮಾಡಲಾಗಿದ್ದು, ರೌಡಿಶೀಟರ್‌, 2015ರ ಗಲಭೆಯಲ್ಲಿ ಭಾಗಿಯಾದ ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತಿದೆ. 120ಕ್ಕೂ ಹೆಚ್ಚು ಮಂದಿ ‘ನಾವು ಯಾವುದೇ ರೀತಿಯ ಅಹಿತಕರ ಘಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಈಗಾಗಲೇ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಕೆಲವರು ಪೊಲೀಸರ ಬಿಗಿ ಕ್ರಮಕ್ಕೆ ಹೆದರಿ ಊರನ್ನೇ ತೊರೆಯುತ್ತಿದ್ದಾರೆ.
ಜಿಲ್ಲೆಯಾದ್ಯಂತ ಬಂದೋಬಸ್ತ್‌ಗೆ 40 ಕೆಎಸ್‌ಆರ್‌ಪಿ ತುಕಡಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಜಿಲ್ಲೆಯಾದ್ಯಂತ ನ. 8ರಿಂದ ನಿಷೇಧಾಜ್ಞೆ ಜಾರಿ ಮಾಡುವ ಸಾಧ್ಯತೆಯಿದೆ.
ಶುಕ್ರವಾರ ಪೊಲೀಸರು ಪಥಸಂಚಲನ ಸಹ ನಡೆಸಿದರು. ನಗರದಲ್ಲಿ ಸಾರ್ವಜನಿಕರ ಸಭೆ– ಸಮಾರಂಭಗಳಿಗೆ ಅನುಮತಿ ನೀಡುತ್ತಿಲ್ಲ. ಜಿಲ್ಲಾಡಳಿತ ಭವನದ ಎದುರು ಮನವಿ ಸಲ್ಲಿಸಲು ಮಾತ್ರ ಸಂಘಟನೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಬ್ಯಾನರ್‌, ಪೋಸ್ಟರ್‌ ಅಳವಡಿಕೆಗೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಪೊಲೀಸರು ಹಗಲು–ರಾತ್ರಿ ಗಸ್ತು ತಿರುಗುತ್ತಿದ್ದಾರೆ. ವಸತಿಗೃಹ, ಹೋಂಸ್ಟೇಗಳ ತಪಾಸಣೆಗೆ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಆದೇಶಿಸಿದ್ದು, ಹೋಂಸ್ಟೇಗಳಿಗೆ ಬರುವ ಪ್ರವಾಸಿಗರ ವಿಳಾಸ ಬರೆದಿಟ್ಟುಕೊಳ್ಳುವಂತೆ ಮಾಲೀಕರಲ್ಲಿ ಕೋರಿದ್ದಾರೆ.
ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹೊರತು ಪಡಿಸಿ ಸಾರ್ವಜನಿಕರು ಜಯಂತಿ ಆಚರಿಸುವಂತಿಲ್ಲ. ಮೆರವಣಿಗೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಯ ಗಡಿಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆಯಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ.

ಪ್ರತಿ ಚೆಕ್‌ಪೋಸ್ಟ್‌ನಲ್ಲಿ ನಾಲ್ಕು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು, ಒಳ ಮತ್ತು ಹೊರಹೋಗುವ ವಾಹನಗಳನ್ನು ತಪಾಸಣೆ ನಡೆಸಿ, ಚಾಲಕರ ವಿಳಾಸ ಬರೆದಿಟ್ಟುಕೊಳ್ಳಲಾಗುತ್ತಿದೆ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕುಟ್ಟ, ಮಾಕುಟ್ಟ ಗಡಿಭಾಗದಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಅಗತ್ಯಬಿದ್ದರೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯುವ ಸಿದ್ಧತೆಯಲ್ಲಿ ಪೊಲೀಸರಿದ್ದಾರೆ. ಈ ಮಧ್ಯೆ ಸಂಘಟನೆಗಳ ಚಲನ– ವಲನವನ್ನು ಗಮನಿಸುತ್ತಿರುವ ಗುಪ್ತಚರ ಇಲಾಖೆ ಸಿಬ್ಬಂದಿ, ಕೊಡಗಿನ ಸೂಕ್ಷ್ಮತೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ರವಾನಿಸಿದ್ದಾರೆ. ಗೋಪ್ಯಸಭೆಗಳು, ಅದರಲ್ಲಿ ಪಾಲ್ಗೊಂಡ ಮುಖಂಡರ ವಿವರವನ್ನೂ ಕಲೆ ಹಾಕಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ನ. 10ರಂದೇ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಮುಖಂಡರು ಕುಟ್ಟಪ್ಪ ಹುತಾತ್ಮ ದಿನ ಆಚರಿಸಲು ತೀರ್ಮಾನಿಸಿದ್ದಾರೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ‘ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಬಿಡುವುದಿಲ್ಲ’ ಎಂದು ಘೋಷಿಸಿದ್ದಾರೆ.
No Comments

Leave A Comment