Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪೀಣ್ಯದಲ್ಲಿ ಸಿಕ್ಕಿ ಬಿದ್ದ ಸಂಚಿನ ಸೂತ್ರಧಾರ ರುದ್ರೇಶ್ ಹತ್ಯೆ ಪ್ರಕರಣ: ಪಿಎಫ್‌ಐ ಮುಖಂಡ ಸೆರೆ

eem-shareefಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ ಪಿಎಫ್‌ಐನ (ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯಾ)  ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಅಸೀಂ ಷರೀಫ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಜೆ.ಸಿ.ನಗರದ ಎಸ್‌.ಕೆ ಗಾರ್ಡನ್‌ ನಿವಾಸಿಯಾದ ಅಸೀಂ, ಬೆನ್ಸನ್‌ಟೌನ್‌ನಲ್ಲಿ ಪೇಯಿಂಟ್ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾನೆ. ನಾಲ್ವರು ಸಹಚರರ ಮೂಲಕ ರುದ್ರೇಶ್ ಅವರನ್ನು ಕೊಲೆ ಮಾಡಿಸಿದ್ದ ಈತ, ಆ ಸಹಚರರು ಪೊಲೀಸರಿಗೆ ಸಿಕ್ಕಿ ಬಿದ್ದ ನಂತರ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ. ಅಸೀಂ ಬುಧವಾರ ನಗರಕ್ಕೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತು. ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಸಂಜೆ ಪೀಣ್ಯದಲ್ಲಿ ವಶಕ್ಕೆ ಪಡೆದೆವು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹತ್ಯೆ ಸಂಬಂಧ ಮಜರ್, ಮುಜೀಬ್, ವಾಸೀಂ ಹಾಗೂ ಇರ್ಫಾನ್ ಅವರನ್ನು ಅ.27ರಂದು ಬಂಧಿಸಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ‘ಆರ್‌ಎಸ್‌ಎಸ್ ಪಥಸಂಚಲನದ ವೇಳೆ ರುದ್ರೇಶ್ ಸೇರಿ ಕನಿಷ್ಠ ಇಬ್ಬರು ಕಾರ್ಯಕರ್ತರನ್ನು ಕೊಲ್ಲುವಂತೆ ಅಸೀಂ ಸೂಚಿಸಿದ್ದರು. ಅದರಂತೆ ನಾವು ಎರಡು ಬೈಕ್‌ಗಳಲ್ಲಿ ದಾಳಿಗೆ ಇಳಿದಿದ್ದೆವು. ಆದರೆ, ರುದ್ರೇಶ್ ಅವರನ್ನು ಮಾತ್ರ ಕೊಲ್ಲುವುದು ಸಾಧ್ಯವಾಯಿತು’ ಎಂದು ಹೇಳಿಕೆ ಕೊಟ್ಟರು. ಆ ಹೇಳಿಕೆ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.

ಅಸೀಂನನ್ನು ಬುಧವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು,  ಹೆಚ್ಚಿನ ವಿಚಾರಣೆಗಾಗಿ ನ.16ರವರೆಗೆ ತಮ್ಮ ಕಸ್ಟಡಿಗೆ ಪಡೆದಕೊಂಡಿದ್ದಾರೆ.
ಯಶಸ್ಸು ಸಹಿಸಲಿಲ್ಲ: ‘ಮೂಲಭೂತವಾದದ ಬಗ್ಗೆ ಒಲವು ಇರಿಸಿಕೊಂಡಿದ್ದ ಅಸೀಂಗೆ, ಕ್ರಮೇಣ ಜಿಹಾದಿ ಸೆಳೆತದಿಂದ ಅನ್ಯಕೋಮಿನ ವಿರುದ್ಧ ದ್ವೇಷ ಬೆಳೆಯಿತು. ಈ ಕಾರಣದಿಂದ ಸಂಘ ಪರಿವಾರ ಹಾಗೂ ಬಲಪಂಥೀಯ ವಿಚಾರಧಾರೆಗಳ ವಿರುದ್ಧ  ಆತ ಸಮರ ಸಾರಿದ್ದ’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಪಿಎಫ್‌ಐ ಚಟುವಟಿಕೆಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅಸೀಂಗೆ, ಸಂಘಟನೆಯ ಮುಖಂಡರು ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದರು. ಹೀಗಾಗಿಯೇ ಆತನಿಗೆ ಬೆಂಗಳೂರು ಘಟಕದ ಹೊಣೆಗಾರಿಕೆ ನೀಡಿದ್ದರು.’

‘ಮುಸ್ಲಿಂ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಸಂಘ ಪರಿವಾರ ಸಂಘಟಿಸಿದ್ದ ರುದ್ರೇಶ್, ರಾಜಕೀಯ ವಾಗಿಯೂ ಪ್ರಾಬಲ್ಯ ಹೊಂದಿದ್ದರು. ಈ ಬೆಳವಣಿಗೆಗಳು ಅಸೀಂನ ಕೋಪಕ್ಕೆ ಕಾರಣವಾಗಿತ್ತು.’

‘ನಂತರ ರುದ್ರೇಶ್ ಹತ್ಯೆಗೆ ಸಂಚು ರೂಪಿಸಿದ ಆರೋಪಿ, ಶಿವಾಜಿನಗರದಲ್ಲಿ ತನ್ನ ಸಮುದಾಯಕ್ಕೆ ಸೇರಿದ ಯಾವ ಹುಡುಗರು ತನ್ನಂತೆಯೇ ರುದ್ರೇಶ್‌ ಅವರನ್ನು ದ್ವೇಷಿಸುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾರಂಭಿಸಿದ್ದ.’

‘ಆಗ ಗ್ಯಾರೇಜ್ ಸ್ಥಳಾಂತರದ ವಿಚಾರವಾಗಿ ರುದ್ರೇಶ್–ಮಜರ್ ಮಧ್ಯೆ ಗಲಾಟೆ ನಡೆದಿದ್ದ ಸಂಗತಿ ಆತನಿಗೆ ಗೊತ್ತಾಯಿತು. ಕೂಡಲೇ ಮಜರ್‌ನನ್ನು ಸಂಪರ್ಕಿಸಿದ ಆತ, ರುದ್ರೇಶ್ ಹತ್ಯೆಗೆ ಸಂಚು ಹೆಣೆದಿದ್ದ. ಇದಕ್ಕೆ ಸಂಘಟನೆಯ ಪ್ರಮುಖರ ಬೆಂಬಲ ಕೂಡ ಸಿಕ್ಕಿತ್ತು.’

‘ಅದರಂತೆ ಮಜರ್, ವಾಸೀಂ, ಇರ್ಫಾನ್ ಹಾಗೂ ಮುಜೀಬ್ ಅವರು ಕಾಮರಾಜ ರಸ್ತೆಯಲ್ಲಿ ರುದ್ರೇಶ್ ಅವರನ್ನು ಹತ್ಯೆಗೈದಿದ್ದರು. ಈ ಸಂದರ್ಭದಲ್ಲಿ ಅಸೀಂ ಮನೆಯಲ್ಲೇ ಉಳಿದುಕೊಂಡಿದ್ದ. ಕೃತ್ಯ ಎಸಗಿದ ಕೂಡಲೇ ಆರೋಪಿಗಳು ಬೆನ್ಸನ್‌ಟೌನ್‌ಗೆ ತೆರಳಿದ್ದರು. ಅಲ್ಲಿ ಆರೋಪಿಗಳು ಅಸೀಂನಿಂದ ಹಣ ಪಡೆದುಕೊಂಡು ಪರಾರಿಯಾಗಿದ್ದರು.’
‘ಘಟನೆ ನಂತರ ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಸೀಂ, ಕೃತ್ಯದಲ್ಲಿ ಪಿಎಫ್‌ಐನ ಪಾತ್ರವಿದೆ ಎಂಬ ಆರೋಪ ಕೇಳಿ ಬರುತ್ತಿದ್ದಂತೆಯೇ ನಗರ ತೊರೆಯಲು ನಿರ್ಧರಿಸಿದ್ದ.’

‘ಆದರೆ, ಹಂತಕರ ಬಗ್ಗೆ ಸುಳಿವು ಸಿಗದೆ ಪೊಲೀಸರು ಪರದಾಡುತ್ತಿರುವುದನ್ನು ಅರಿತ ಆತ, ಈಗ ತಲೆಮರೆಸಿಕೊಂಡರೆ ತನ್ನ ಮೇಲೆಯೇ ಅನುಮಾನ ಬರುತ್ತದೆಂದು ನಗರದಲ್ಲೇ ಉಳಿದಿದ್ದ. ಆದರೆ, ನಾಲ್ವರು ಆರೋಪಿಗಳು ಬಲೆಗೆ ಬಿದ್ದ ಬಳಿಕ ಅಸೀಂ ನೆರೆ ರಾಜ್ಯಗಳಲ್ಲಿ ಭೂಗತನಾಗಿದ್ದ’ ಎಂದು ರುದ್ರೇಶ್‌ ಹತ್ಯೆ ಪ್ರಕರಣದ ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ತಡರಾತ್ರಿ ವಿಚಾರಣೆ
ರುದ್ರೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನವಾಗುತ್ತಿದ್ದಂತೆಯೇ ಡಿಜಿಪಿ ಓಂಪ್ರಕಾಶ್ ಅವರು ಇನ್ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಬುಧವಾರ ರಾತ್ರಿ ಹಿರಿಯ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದರು.

ತನಿಖಾ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ನಂತರ ರಾತ್ರಿ 12 ಗಂಟೆಗೆ ರಾಮಮೂರ್ತಿನಗರ ಠಾಣೆಗೆ ತೆರಳಿ ಅಸೀಂ ಷರೀಫ್‌ನನ್ನು ಖುದ್ದು ವಿಚಾರಣೆಗೆ ಒಳಪಡಿಸಿದರು ಎಂದು ತಿಳಿದು ಬಂದಿದೆ.

ಕೇಂದ್ರ  ತಂಡಗಳಿಂದಲೂ ವಿಚಾರಣೆ
ಅಸೀಂನ ಬಂಧನದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಗುಪ್ತದಳದ ಅಧಿಕಾರಿಗಳ ತಂಡಗಳು ಗುರುವಾರ ಬೆಳಿಗ್ಗೆ ನಗರಕ್ಕೆ ಬಂದವು.

ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹಿಂದೂ ಮುಖಂಡರ ಹತ್ಯೆ ಪ್ರಕರಣಗಳಲ್ಲಿ ಅಸೀಂನ ಪಾತ್ರವಿದೆಯೇ ಎಂಬ ಬಗ್ಗೆ ಕೇಂದ್ರದ ತನಿಖಾ ತಂಡಗಳು ಆತನನ್ನು ಒಂದು ತಾಸಿಗೂ ಹೆಚ್ಚು ವಿಚಾರಣೆಗೆ ಒಳಪಡಿಸಿದವು.

ಅರೋಪಿಗಳಿಗೆ ಅಲ್‌–ಉಮ್ಮಾ ಸಂಘಟನೆ ಜತೆ ಸಂಪರ್ಕವಿದೆ ಎಂಬ ಸುಳಿವಿನ ಮೇರೆಗೆ ತಮಿಳುನಾಡು ಪೊಲೀಸರು ಸಹ ಬುಧವಾರ ಸಂಜೆಯೇ ಬೆಂಗಳೂರಿಗೆ ಬಂದು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment