Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಭಾಸ್ಕರ್‌ ಶೆಟ್ಟಿ ಕೊಲೆ: ಸಿಐಡಿಯಿಂದ 1,300 ಪುಟ ಚಾರ್ಜ್‌ಶೀಟ್‌ ಸಲ್ಲಿಕೆ

bhaskarಉಡುಪಿ: ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 4 ಹಂತಗಳಲ್ಲಿ ತಯಾರಿಸಲಾಗಿರುವ 1,300 ಪುಟಗಳು ಇರುವ ಆರಂಭಿಕ (ಪ್ರಿಲಿಮಿನರಿ) ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಯನ್ನು ಸಿಐಡಿ ಪೊಲೀಸರ ತಂಡವು ನ. 2ರಂದು ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಈಗಾಲೇ 80ಕ್ಕೂ ಅಧಿಕ ಹೇಳಿಕೆಗಳನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲು ಮಾಡಲಾಗಿದೆ. ತನಿಖೆ ಸಂಪೂರ್ಣಗೊಂಡಿಲ್ಲ. ಕಾನೂನಿನಂತೆ ಈ ಪ್ರಕರಣದಲ್ಲಿ 90 ದಿನದ ಒಳಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲೇಬೇಕು. ಹಾಗಾಗಿ ಮೊದಲ ಆರಂಭಿಕ ಚಾರ್ಜ್‌ಶೀಟ್‌ ಅನ್ನು ಸಲ್ಲಿಕೆ ಮಾಡಿದ್ದೇವೆ. ತನಿಖೆ ಪೂರ್ಣಗೊಂಡಿಲ್ಲ. ತನಿಖೆ ಸಂಪೂರ್ಣ ಮುಗಿದ ಬಳಿಕ ಅಂತಿಮ ಚಾರ್ಜ್‌ಶೀಟ್‌ ಅನ್ನು ಕೋರ್ಟಿಗೆ ಸಲ್ಲಿಸಲಾಗುವುದು. ತನಿಖೆಯ ಹಿತದೃಷ್ಟಿಯಿಂದ ಎಲ್ಲ ವಿಚಾರಗಳನ್ನು ಮುಕ್ತವಾಗಿ ಹೇಳುವುದಿಲ್ಲ. ತನಿಖೆಯಲ್ಲಿ ಕಂಡುಕೊಳ್ಳಲಾದ ಕೆಲವೊಂದು ವಿಷಯಗಳನ್ನು ವಿವರಿಸಲಾಗುವುದು ಎಂದು ಸಿಐಡಿ ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನಿಯಂಗ್‌ ಅವರು ಬುಧವಾರ ಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಉಡುಪಿ ಎಎಸ್‌ಪಿ ವಿಷ್ಣುವರ್ಧನ, ಸಿಐಡಿ ಡಿವೈಎಸ್‌ಪಿ ಎಚ್‌.ಟಿ. ಚಂದ್ರಶೇಖರ್‌, ಉಡುಪಿ ಡಿವೈಎಸ್‌ಪಿ ಎಸ್‌.ಜೆ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

ವಿಚಾರಣೆಯ ದಿಕ್ಕು ತಪ್ಪಿಸಿದ್ದರು…
ಜು. 28ರ ಮಧ್ಯಾಹ್ನದಿಂದ ಭಾಸ್ಕರ್‌ ಶೆಟ್ಟಿಯವರು ನಾಪತ್ತೆಯಾಗಿರುವ ಕುರಿತು ಜು. 29ರಂದು ಅವರ ತಾಯಿ ಗುಲಾಬಿ ಶೆಟ್ಟಿಯವರು ಮಣಿಪಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪತ್ನಿ, ಮಗನ ಮೇಲೆ ಸಂಶಯವಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿತ್ತು. ಅದರಂತೆ ತನಿಖೆ ನಡೆದು ಕೆಲ ದಿನಗಳಲ್ಲೇ ಭಾಸ್ಕರ್‌ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ (50), ಮಗ ನವನೀತ್‌ (20) ಮತ್ತು ನಿರಂಜನ ಭಟ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ತನಿಖೆ ವೇಳೆ ಆರೋಪಿಗಳು ಆರೋಪವನ್ನು ತಳ್ಳಿ ಹಾಕಿದ್ದು, ಮಣಿಪಾಲ ಪೊಲೀಸರ ವಿಚಾರಣೆಯ ದಿಕ್ಕನ್ನು ತಪ್ಪಿಸಿದ್ದರು. ಸಂಶಯಗಳು ಹೆಚ್ಚಾದಂತೆ ಕೊಲೆ ನಡೆಸಿರುವುದನ್ನು ಆರೋಪಿಗಳು ಒಪ್ಪಿಕೊಂಡಂತೆ ಕೊಲೆ ಪ್ರಕರಣವೂ ದಾಖಲಾಗಿತ್ತು. ಪ್ರಕರಣ ತೀವ್ರ ಸ್ವರೂಪಕ್ಕೆ ಹೋದಾಗ ಸರಕಾರವು ಸಿಐಡಿ ತನಿಖೆಗೆ ಹಸ್ತಾಂತರಿಸಿತ್ತು. ಸಿಐಡಿಯ ವಿಶೇಷ ತಂಡ ಕಳೆದ ಆ. 18ರಂದು ಉಡುಪಿಗೆ ಬಂದು ತನಿಖೆ ಕೈಗೆತ್ತಿಕೊಂಡಿತ್ತು ಎಂದರು.

ಆಸ್ತಿ, ಅನೈತಿಕ ಸಂಬಂಧಕ್ಕೆ ಬಲಿ..!
ಆರೋಪಿಗಳಾದ ನಿರಂಜನ ಭಟ್‌, ನವನೀತ್‌ ಶೆಟ್ಟಿ, ಶ್ರೀನಿವಾಸ ಭಟ್‌ ಮತ್ತು ರಾಘವೇಂದ್ರನನ್ನು ಸಿಐಡಿ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗಿತ್ತು. ನಂತರ ಕೃತ್ಯ ನಡೆದ ಸ್ಥಳಕ್ಕೆ ಫೊರೆನ್ಸಿಕ್‌ ತಜ್ಞರು ಮತ್ತು ವಿಶೇಷ ತಜ್ಞರ ತಂಡವನ್ನು ಕರೆಸಿಕೊಂಡು ಪರಿಶೀಲನೆ ನಡೆಸಲಾಯಿತು. ತನಿಖೆಯಲ್ಲಿ ಕಂಡುಕೊಂಡಂತೆ ರಾಜೇಶ್ವರಿ ಶೆಟ್ಟಿ., ನಿರಂಜನ ಭಟ್‌ ಮತ್ತು ನವನೀತ್‌ ಇವರು ಆಸ್ತಿ ವಿಚಾರದಲ್ಲಿ ಹಾಗೂ ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ ವೈಮನಸ್ಸು ಹೊಂದಿದ್ದರು. ಇದೇ ಕಾರಣಕ್ಕಾಗಿ ಭಾಸ್ಕರ್‌ ಶೆಟ್ಟಿಯವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಎಸ್‌ಪಿ ತಿಳಿಸಿದರು..

ಸ್ನಾನ ಮುಗಿಸಿದ ಮೇಲೆ ಅಟ್ಯಾಕ್‌…
ಜು. 28ರಂದು ಅಪರಾಹ್ನ 3 ಗಂಟೆಗೆ ಭಾಸ್ಕರ್‌ ಶೆಟ್ಟಿಯವರು ಹೊಟೇಲ್‌ ದುರ್ಗಾ ಇಂಟರ್‌ನ್ಯಾಶನಲ್‌ನಿಂದ ಇಂದ್ರಾಳಿಯ ಮನೆಗೆ ಹೋಗಿ ಸ್ನಾನ ಮಾಡಿದ ಮೇಲೆ ಸ್ನಾನಗೃಹದಿಂದ ಹೊರಗಡೆ ಬರುತ್ತಿದ್ದಂತೆಯೇ ಮೂವರು ಆರೋಪಿಗಳು ಸೇರಿಕೊಂಡು ಅವರ ಮುಖದ ಮೇಲೆ ಪೆಪ್ಪರ್‌ ಸ್ಪ್ರೆà ಮಾಡಿ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದಿದ್ದರು. ಕೀಟನಾಶಕವನ್ನು ಕುಡಿಸಿ ಬಾತ್‌ಟಬ್‌ನಲ್ಲಿ ಮುಳುಗಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ಬಳಿಕ ಕಾರಿನ ಡಿಕ್ಕಿಯಲ್ಲಿ ಹಾಕಿ ನಂದಳಿಕೆಯ ನಿರಂಜನ ಭಟ್ಟನ ಮನೆಯ ಯಾಗ ಶಾಲೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಕಲ್ಲುಗಳನ್ನು ಇರಿಸಿ ಹೋಮಕುಂಡವನ್ನು ರಚನೆ ಮಾಡಿ ಅದರೊಳಗೆ ಶೆಟ್ಟಿಯವರ ದೇಹವನ್ನು ಇಟ್ಟು ಕರ್ಪೂರ, ತುಪ್ಪ, ಪೆಟ್ರೋಲ್‌ ಇತ್ಯಾದಿಗಳನ್ನು ಹಾಕಿ ದೇಹವನ್ನು ಸುಟ್ಟು ಹಾಕಿದ್ದರು. ಆಮೇಲೆ ಎಲ್ಲ ಸಾಕ್ಷ್ಯಾಧಾರಗಳನ್ನು ನಾಶ ಮಾಡಲಿಕ್ಕೆ ನಿರಂಜನನ ಭಟ್ಟ ಹಾಗೂ ಚಾಲಕ ರಾಘವೇಂದ್ರ ಯಾಗಶಾಲೆಯನ್ನು ನೀರಿನಿಂದ ತೊಳೆದು ಮೂಳೆಗಳನ್ನು ಹಾಗೂ ಹೋಮಕ್ಕೆ ಬಳಸಿದ್ದ ಎಲ್ಲ ಕಲ್ಲುಗಳನ್ನು ನದಿಗೆ ಎಸೆದಿದ್ದರು. ನಿರಂಜನನ ತಂದೆ ಶ್ರೀನಿವಾಸ ಭಟ್‌ ಸುಟ್ಟ ಜಾಗದ ಟೈಲ್ಸ್‌ಗಳನ್ನು ತೆಗೆದು ಹೊಸ ಟೈಲ್ಸ್‌ಗಳನ್ನು ಹಾಕಿಸಿದ್ದರು ಎಂದವರು ವಿವರಿಸಿದರು.

“ಮೂಳೆ, ಕಲ್ಲುಗಳ ಜಪ್ತಿ; ವೀಲುನಾಮೆ ಉಲ್ಲೇಖ’
ತನಿಖೆ ಸಂದರ್ಭ ನದಿಗಳಲ್ಲಿ ಪರಿಶೀಲನೆ ನಡೆಸಿ ಕೆಲವು ಮೂಳೆಗಳನ್ನು ಮತ್ತು ಕಲ್ಲುಗಳನ್ನು ಜಪ್ತಿ ಮಾಡಲಾಗಿದೆ. ಹೆಚ್ಚಿನ ಶೋಧನೆಗಾಗಿ ಹಾಗೂ ಡಿಎನ್‌ಎ ಅನಾಲಿಸಿಸ್‌ ಸಲುವಾಗಿ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಡಿಎನ್‌ಎ ಅನಾಲಿಸಿಸ್‌ ವರದಿ ಆಧಾರದ ಮೇಲೆ ಹಾಗೂ ತನಿಖೆ ಸಂದರ್ಭ ಸಂಗ್ರಹಿತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಅದರಂತೆ ನ. 2ರಂದು ಉಡುಪಿ ನ್ಯಾಯಾಲಯಕ್ಕೆ ಆರಂಭಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಭಾಸ್ಕರ್‌ ಶೆಟ್ಟಿಯವರು ಬರೆದ ವೀಲುನಾಮೆ ಪತ್ತೆಯಾಗಿದೆ. ಅದನ್ನು ಕೂಡಾ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದರು.

ಪ್ರಾಥಮಿಕ ಎಡವಟ್ಟು: ತನಿಖೆಯಲ್ಲಿ
ಮೊದಲಿಗೆ ಆರೋಪಿಗಳು ಮಣಿಪಾಲ ಪೊಲೀಸರ ದಿಕ್ಕು ತಪ್ಪಿಸಿದ್ದರು ಎಂದಾದರೆ ಪ್ರಾಥಮಿಕ ತನಿಖೆಯಲ್ಲಿ ಎಡವಟ್ಟು ಆಗಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಎಸ್‌ಪಿ ಮಾರ್ಟಿನ್‌ ಅವರು ಆ ವಿಷಯ ಕೂಡ ಕೂಡ ತನಿಖೆಯಲ್ಲಿ ಒಳಗೊಂಡಿದೆ. ತನಿಖೆ ಪೂರ್ಣಗೊಂಡ ಮೇಲೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂದರು.

“ರಾಘವೇಂದ್ರನಿಗೂ ಗೊತ್ತಿತ್ತು’
ಪ್ರಕರಣದಲ್ಲಿ ಸಾಕ್ಷ್ಯನಾಶ ಆರೋಪಿ ಚಾಲಕ ರಾಘು ಯಾನೆ ರಾಘವೇಂದ್ರ ಅಮಾಯಕನೆಂದು ಜನ ಮಾತಾಡುತ್ತಿದ್ದಾರಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಆತನಿಗೂ ಕೊಲೆ ನಡೆದ ವಿಚಾರ ತಿಳಿದಿತ್ತು. ನಿರಂಜನನು ರಾತ್ರಿಯೇ ರಾಘವೇಂದ್ರನಲ್ಲಿ ನಡೆದ ಘಟನೆಗಳನ್ನೆಲ್ಲ ಹೇಳಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಎಸ್‌ಪಿ ಮಾರ್ಟಿನ್‌ ತಿಳಿಸಿದರು.

“ಡಿಎನ್‌ಎ-ಪೂರಕ ವರದಿ’
ಭಾಸ್ಕರ್‌ ಶೆಟ್ಟಿಯವರ ಸಹೋದರರು, ತಾಯಿ ಗುಲಾಬಿ ಶೆಟ್ಟಿ ಅವರ ರಕ್ತದ ಮಾದರಿ ಸಂಗ್ರಹಿಸಿ ತಾಳೆಗಾಗಿ ಡಿಎನ್‌ಎ ವರದಿಗೆ ಕಳುಹಿಸಲಾಗಿತ್ತು. ಹಾಗೆಯೇ ಮೂಳೆ ಇನ್ನಿತರ ವಸ್ತುಗಳನ್ನು ಸಹ ಸಿಐಡಿ ಪೊಲೀಸರು ಡಿಎನ್‌ಎ ವರದಿಗೆ ಕಳುಹಿಸಿದ್ದರು. ಡಿಎನ್‌ಎ ವರದಿ ಸಿಐಡಿ ಕೈಸೇರಿದ್ದು, ಚಾರ್ಜ್‌ಶೀಟ್‌ನೊಂದಿಗೆ ಕೋರ್ಟಿಗೆ ಸಲ್ಲಿಸಲಾಗಿದೆ. ಮೂಳೆಯು ಬಹಳ ದಿನಗಳ ಬಳಿಕ ಸಿಕ್ಕಿದ ಕಾರಣ ಅದು ಭಾಸ್ಕರ್‌ ಶೆಟ್ಟಿಯವರದ್ದೇ ಎಂದು ಹೇಳಲು ಕಷ್ಟಸಾಧ್ಯ. ಆದರೆ ಇಲ್ಲಿ ಪತ್ತೆಯಾಗಿದ್ದ ರಕ್ತದ ಕಲೆಗಳು ಮತ್ತು ಇತರ ಕುರುಹುಗಳು ಭಾಸ್ಕರ್‌ ಶೆಟ್ಟಿ ಕೊಲೆಯಾಗಿರುವುದನ್ನು ಡಿಎನ್‌ಎ ಸಾಬೀತುಪಡಿಸಿದೆ. ಹಾಗಾಗಿ ತನಿಖೆಗೆ ಮಹತ್ತರವಾದ ಸಾಕ್ಷ್ಯ ಡಿಎನ್‌ಎಯಿಂದ ಲಭ್ಯವಾಗಿದೆ ಎಂದು ಸಿಐಡಿ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಎಸ್‌ಪಿ ಮಾರ್ಟಿನ್‌ ಅವರಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ, ಆರಂಭಿಕ ಚಾರ್ಜ್‌ಶೀಟ್‌ ಮಾತ್ರ ಸಲ್ಲಿಕೆಯಾಗಿದೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಕೆಲವೊಂದು ವಿಚಾರ ಗೌಪ್ಯವಾಗಿಡಬೇಕಾಗುತ್ತದೆ. ಹಾಗಾಗಿ ಡಿಎನ್‌ಎ ಬಗ್ಗೆ ಏನೂ ಹೇಳಲ್ಲ. ವರದಿ ಬಂದಿದೆ. ಇನ್ನು ಮೊಬೈಲಿನಲ್ಲಿರುವ ಹಲವಾರು ಸಾಕ್ಷ್ಯಗಳಿಗೆ ಸಂಬಂಧಿಸಿ ಸೈಬರ್‌ ಫೊರೆನ್ಸಿಕ್‌ ತಜ್ಞರ ವರದಿ ಸಹಿತ ಕೆಲ ವರದಿಗಳು ಬರಬೇಕಿದೆ. ಅದನ್ನು ಅಂತಿಮ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗುವುದು ಎಂದು ಹೇಳಿದ್ದಾರೆ.

ಸವಾಲಿಕ ಪ್ರಕರಣ: ಮಾರ್ಟಿನ್‌
ಈ ಪ್ರಕರಣವು ಸಿಐಡಿ ತನಿಖಾ ತಂಡಕ್ಕೆ ಸವಾಲಾಗಿತ್ತು. ಹಾಗಾಗಿ ಸಿಐಡಿ ಡಿಜಿಪಿ, ಎಡಿಜಿಪಿ, ಡಿಐಜಿ, ಎಸ್‌ಪಿ ಸಹಿತ ವಿವಿಧ ಹಂತದ ಅಧಿಕಾರಿಗಳೇ ಸ್ವತಃ ತನಿಖೆಯ ಪ್ರಗತಿ ಪರಿಶೀಲನೆಗೆ ಬಂದಿದ್ದರು. ಮಣಿಪಾಲ ಪೊಲೀಸರು ಆರೋಪಿಗಳನ್ನು ಮೊದಲೇ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ಕಾರಣ ಸಿಐಡಿ ಪೊಲೀಸ್‌ ಕಸ್ಟಡಿಗೆ ಆರೋಪಿಗಳನ್ನು ತೆಗೆದುಕೊಳ್ಳಲು ಕಾನೂನು ಅಡಚಣೆ ಉದ್ಭವಿಸಿತ್ತು. ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂಗಾರು ಹವಾಮಾನವೂ ಅಡಚಣೆ ಉಂಟು ಮಾಡಿದ್ದ ಪರಿಣಾಮ ನದಿಯಲ್ಲಿ ಬಿಸಾಡಿದ್ದ ಮೂಳೆ, ಹೋಮಕ್ಕೆ ಬಳಸಿದ್ದ ಕಲ್ಲುಗಳನ್ನು ಜಪ್ತಿ ಮಾಡಲು ಸಿಐಡಿ ತಂಡ ಹಗಲಿರುಳೆನ್ನದೆ ತೊಡಗಿಸಿಕೊಳ್ಳಬೇಕಾಯಿತು. ಎಲ್ಲ ಅಡೆತಡೆಗಳನ್ನು ಮೀರಿ ಪ್ರಕರಣ ಭೇದಿಸುವಲ್ಲಿ ಸಿಐಡಿ ತಂಡವು ಯಶಸ್ವಿಯಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ಚಾರ್ಜ್‌ಶೀಟ್‌ ಸಲ್ಲಿಕೆಯಾಗುವವರೆಗೂ ನಮ್ಮ ಕಾರ್ಯ ಮುಂದುವರಿಯುತ್ತದೆ.
– ಯಡಾ ಮಾರ್ಟಿನ್‌ ಮಾರ್ಬನಿಯಂಗ್‌, ಸಿಐಡಿ ಎಸ್‌ಪಿ.

ಬಂಧನ ವಿಸ್ತರಣೆ
ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ (50), ನವನೀತ್‌ ಬಿ. ಶೆಟ್ಟಿ (20) ಮತ್ತು ನಿರಂಜನ ಭಟ್‌ (26) ಸಹಿತ ಷರತ್ತುಬದ್ದ ಜಾಮೀನಿನಲ್ಲಿರುವ ಇಬ್ಬರು ಆರೋಪಿಗಳಾದ ಶ್ರೀನಿವಾಸ ಭಟ್‌ (56), ರಾಘವೇಂದ್ರ (26) ಅವರನ್ನು ಬುಧವಾರ ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದು, ನ. 17ರಂದು ಎಲ್ಲ ಆರೋಪಿಗಳನ್ನು ಹಾಜರುಪಡಿಸುವಂತೆ ನ್ಯಾಯಾಧೀಶ ಕೆ. ರಾಜೇಶ್‌ ಕರ್ಣಮ್‌ ಅವರು ಆದೇಶಿಸಿದರು.

No Comments

Leave A Comment