Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಲುಷಿತ ವಾತಾವರಣ: ಭಾರತ ತೊರೆದ ಪಾಕ್‌ ಹೈಕಮಿಷನ್‌ನ ಆರು ಅಧಿಕಾರಿಗಳು

ನವದೆಹಲಿ: ರಾಜಧಾನಿ ನವದೆಹಲಿಯ ಪಾಕಿಸ್ತಾನಿ ಹೈಕಮಿಷನ್ ಕಚೇರಿಯ ಆರು ಅಧಿಕಾರಿಗಳು ಬುಧವಾರ ಭಾರತ ತೊರೆದಿದ್ದಾರೆ. ಹೈಕಮಿಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪಾಕಿಸ್ತಾನದ ಪರವಾಗಿ ಗೂಢಚರ್ಯೆಯಲ್ಲಿ ತೊಡಗಿದ್ದ ಸಂಗತಿ ಬೆಳಕಿಗೆ ಬಂದ ನಂತರದ ಬೆಳವಣಿಗೆ ಇದು.

ಎಷ್ಟು ಜನ ಅಧಿಕಾರಿಗಳು ಭಾರತ ತೊರೆದಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪಾಕಿಸ್ತಾನ ಹೈಕಮಿಷನ್ ಕಚೇರಿಯ ಮೂಲಗಳ ಪ್ರಕಾರ, ಆರು ಜನ ಅಧಿಕಾರಿಗಳು ಭಾರತ ತೊರೆದಿದ್ದಾರೆ ಅಥವಾ ತೊರೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ.

‘ಈ ಕಲುಷಿತ ವಾತಾವರಣದಲ್ಲಿ ಕೆಲಸ ಮಾಡುವುದು ಅಸಾಧ್ಯ ಎಂದು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಭಾರತದ ಸರ್ಕಾರವು ನಮ್ಮ ಅಧಿಕಾರಿಗಳನ್ನು ಬೆದರಿಸುತ್ತಿದೆ, ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ. ಹಾಗಾಗಿ, ಇಂತಹ ಪರಿಸ್ಥಿತಿಯಲ್ಲಿ ನಮಗೆ ಇಲ್ಲಿದ್ದು ಕೆಲಸ ಮಾಡಲು ಆಗದು’ ಎಂದು ಹೈಕಮಿಷನರ್‌ ಕಚೇರಿಯ ಸಿಬ್ಬಂದಿಯೊಬ್ಬರು ಹೇಳಿದರು.

ಅಧಿಕಾರಿಗಳಾದ ಸೈಯದ್‌ ಫಾರೂಕ್‌ ಹಬೀಬ್, ಖಾದಿಮ್ ಹುಸೇನ್, ಮುದಾಸಿರ್ ಚೀಮಾ ಮತ್ತು ಶಾಹಿದ್ ಇಕ್ಬಾಲ್‌ ಅವರು ದೇಶ ತೊರೆದಿದ್ದಾರೆ ಎಂದು ಗೊತ್ತಾಗಿದೆ.

ಗೂಢಚರ್ಯೆ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಅಡಿ ಪಾಕಿಸ್ತಾನದ ಮೆಹಮೂದ್‌ ಅಖ್ತರ್‌ ಎಂಬ ವ್ಯಕ್ತಿ ಭಾರತದಲ್ಲಿ ಕೆಲಸ ಮಾಡಲು ತನ್ನ ಸಮ್ಮತಿ ಇಲ್ಲ ಎಂದು ಸರ್ಕಾರ ಘೋಷಿಸಿದ ನಂತರ, ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.

ಭಾರತಕ್ಕೆ ಮರಳಲು ಅಧಿಕಾರಿಗಳಿಗೆ ಸೂಚನೆ?
ಇಸ್ಲಾಮಾಬಾದ್‌:
ಇಲ್ಲಿನ  ಭಾರತೀಯ ಹೈಕಮಿಷನ್‌ ಕಚೇರಿಯ ಕನಿಷ್ಠ ಇಬ್ಬರು ಅಧಿಕಾರಿಗಳಿಗೆ ವಾಪಸ್‌ ತೆರಳುವಂತೆ ಪಾಕಿಸ್ತಾನ ಸೂಚನೆ ನೀಡುವ ಸಾಧ್ಯತೆಗಳಿವೆ.

ವಿಧ್ವಂಸಕ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ  ಪಾಕಿಸ್ತಾನ ಈ ಕ್ರಮಕೈಗೊಂಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇಬ್ಬರು ಅಧಿಕಾರಿಗಳನ್ನು ಗುರುತಿಸಲಾಗಿದ್ದು, ಅವರ ಭಾವಚಿತ್ರಗಳನ್ನು ಪಾಕಿಸ್ತಾನದ ವಿವಿಧ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.

ಅಧಿಕಾರಿಗಳಾದ ರಾಜೇಶ್‌ ಅಗ್ನಿಹೋತ್ರಿ ಹಾಗೂ ಬಲ್ಬೀರ್‌ ಸಿಂಗ್‌್ ಅವರನ್ನು ಉಚ್ಚಾಟಿಸುವ ಸಾಧ್ಯತೆಗಳಿವೆ ಎಂದು ಜಿಯೋ ಸುದ್ದಿವಾಹಿನಿ ವರದಿ ಮಾಡಿದೆ.

ಅಗ್ನಿಹೋತ್ರಿ ಅವರು ನೇರವಾಗಿ ಭಾರತೀಯ ಗುಪ್ತಚರ ಸಂಸ್ಥೆ ‘ರಾ’ದ ಜತೆಗೆ ಸಂಪರ್ಕ ಹೊಂದಿದ್ದು, ಸಿಂಗ್‌ ಬೇಹುಗಾರಿಕೆ ಸಂಸ್ಥೆ (ಐಬಿ) ಪರ ಕೆಲಸ ಮಾಡಲು ತಮ್ಮ ಹುದ್ದೆಯನ್ನು ಬಳಸಿಕೊಂಡಿದ್ದರು. ಈ ಇಬ್ಬರು ತಮ್ಮ ನಿಜವಾದ ಗುರುತು ಪತ್ತೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದು  ಮೂಲಗಳು ತಿಳಿಸಿವೆ.

ಬಲ್ಬೀರ್‌ ಸಿಂಗ್‌ ಪಾಕಿಸ್ತಾನದಲ್ಲಿ ಉಗ್ರರ ಜಾಲವನ್ನು ನಡೆಸುತ್ತಿದ್ದು, ಈಗಾಗಲೇ ವಜಾಗೊಂಡಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಸುರ್ಜಿತ್‌ ಸಿಂಗ್‌ ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.

No Comments

Leave A Comment