ಐಎಸ್ಐಗೆ ರಹಸ್ಯ ಭದ್ರತಾ ಮಾಹಿತಿ ಸೋರಿಕೆ: ಡಿವೈಎಸ್ಪಿ ಅಮಾನತು
ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಮತ್ತು ಉದ್ವಿಗ್ನತೆ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಇಲ್ಲಿನ ಭದ್ರತೆಯ ಕುರಿತಾಗಿ ಕೆಲವು ಅತೀ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐ ಗೆ ಸೋರಿಕೆ ಮಾಡಿರುವ ಗಂಭೀರ ಆರೋಪದ ಮೇಲೆ ಡೆಪ್ಯುಟಿ ಸುಪರಿಂಟೆಂಡೆಂಟ್ ಮಟ್ಟದ ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಅಧಿಕಾರಿಯೋರ್ವರನ್ನು ಅಮಾನತು ಮಾಡಲಾಗಿದೆ.
ಐಎಸ್ಐ ಗೆ ಭದ್ರತಾ ಮಾಹಿತಿ ಸೋರಿಕೆ ಮಾಡಿರುವ ಆರೋಪದಲ್ಲಿ ಅಮಾನತಾಗಿರುವ ಅಧಿಕಾರಿ, ಜಮ್ಮು ಕಾಶ್ಮೀರ ಡಿವೈಎಸ್ಪಿ ತನ್ವೀರ್ ಅಹ್ಮದ್ ಎಂದು ತಿಳಿದು ಬಂದಿದೆ. ತನ್ವೀರ್ ಅಹ್ಮದ್ ಮೇಲಿನ ಆರೋಪಗಳ ಬಗ್ಗೆ ಈಗ ತನಿಖೆಯನ್ನು ಆರಂಭಿಸಲಾಗಿದೆ.
ಆರೋಪಿ ಡಿಎಸ್ಪಿ ತನ್ವೀರ್ ಅಹ್ಮದ್ ಮತ್ತು ಪಾಕ್ ಭದ್ರತಾ ಅಧಿಕಾರಿಗಳ ನಡುವಿನ ಟೆಲಿಫೋನ್ ಸಂಭಾಷಣೆಯ ಮಾಹಿತಿಯನ್ನು ಗೃಹ ಸಚಿವಾಲಯವು ಒದಗಿಸಿರುವ ಪ್ರಕಾರ ಜಮ್ಮು ಕಾಶ್ಮೀರ ಡಿಜಿಪಿ ಕೆ ರಾಜೇಂದ್ರ ಕುಮಾರ್ ಅವರು ಆರೋಪಿ ತನ್ವೀರ್ ಅಹ್ಮದ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
ಆದರೆ ತನ್ವೀರ್ ಅಹ್ಮದ್ ಅವರು ತನ್ನ ಮೇಲಿನ ಮಾಹಿತಿ ಸೋರಿಕೆ ಆರೋಪವನ್ನು ಅಲ್ಲಗಳೆದು ತಾನೇನೂ ತಪ್ಪು ಮಾಡಿಲ್ಲ ಎಂದಿದ್ದಾರೆ. “ಸೇನಾಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ನನಗೆ ಫೋನ್ ಬಂದಿತ್ತು. ಕಾಶ್ಮೀರ ಕಣಿವೆಯಲ್ಲಿ ಎಲ್ಲೆಲ್ಲ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿಯನ್ನು ತನ್ನೊಡನೆ ಹಂಚಿಕೊಳ್ಳುವಂತೆ ಆತ ನನ್ನಲ್ಲಿ ಕೇಳಿಕೊಂಡ; ನಾನು ಆತನನ್ನು ನಂಬಿ ಆತನಿಗೆ ಮಾಹಿತಿ ನೀಡಿದೆ’ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.
“ಫೋನ್ ಕರೆ ಮಾಡಿದ ವ್ಯಕ್ತಿಗೆ ಮಾಹಿತಿ ನೀಡುವ ಮುನ್ನ ನಾನು ಎಸ್ಪಿ ಅವರನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿದ್ದೆ’ ಎಂದು ಆರೋಪಿ ಡಿಎಸ್ಪಿ ತನ್ವೀರ್ ಅಹ್ಮದ್ ಹೇಳಿದ್ದಾರೆ.
ಕಳೆದ ಜುಲೈ 8ರಂದು ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾದ ಬಳಿಕ, ಕಳೆದ 92 ದಿನಗಳಿಂದಲೂ ಹಿಂಸೆಯ ದಳ್ಳುರಿಗೆ ಸಿಲುಕಿರುವ ಕಾಶ್ಮೀರದಲ್ಲಿ ಈ ತನಕ ಕನಿಷ್ಠ 91 ಮಂದಿ ಮೃತಪಟ್ಟಿದ್ದಾರೆ ಮತ್ತು 12,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.