ಕಾವೇರಿ ಕಿಚ್ಚು: ರೈತರ ಮೇಲಿನ 22 ಕೇಸ್ ವಾಪಸ್, 110 ತಾಲೂಕು ಬರಪೀಡಿತವೆಂದು ಘೋಷಣೆ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಟಿಬಿ ಜಯಚಂದ್ರ ಅವರು, 2012 ಮತ್ತು 2013ರಲ್ಲಿ ಮಂಡ್ಯದಲ್ಲಿ ಕಾವೇರಿ ಪ್ರತಿಭಟನೆ ವೇಳೆ ರೈತರ ವಿರುದ್ಧ ದಾಖಲಿಸಲಾಗಿದ್ದ 22 ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಇದೇ ವೇಳೆ ತೀವ್ರ ಮಳೆ ಅಭಾವದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ 22 ಜಿಲ್ಲೆಗಳ 68 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, ಇದೀಗ ಮತ್ತೆ 42 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ತೀರ್ಮಾನಿಸಿದ್ದು, ರಾಜ್ಯದ ಒಟ್ಟು 110 ತಾಲೂಕು ಬರಪೀಡಿತವಾದಂತಾಗಿದೆ ಎಂದು ಜಯಚಂದ್ರ ಹೇಳಿದರು.
ಅತಿವೃಷ್ಠಿ ಮತ್ತು ಬರಪೀಡಿತ ಪ್ರದೇಶಗಳ ಆಧಾರದ ಮೇಲೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ 42 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಸಾಲಿಗೆ ಸೇರ್ಪಡೆಗೊಳಿಸಲಾಗಿದೆ. ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಲ್ಲದೇ 2782 ಎಕರೆ ಅರಣ್ಯ ಭೂಮಿ ಡಿನೋಟಿಫಿಕೇಶನ್ ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದರು.