Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ದೇಶಕ್ಕೇ ಮಾದರಿ ಕ್ರೀಡಾನೀತಿ ರಚನೆ- ಪ್ರಮೋದ್

unnamed__2_ಉಡುಪಿ: ರಾಜ್ಯದಲ್ಲಿ ಕ್ರೀಡಾ ನೀತಿ ರೂಪಿಸುವ ಕುರಿತಂತೆ ರಾಜ್ಯದ ಕಲಬುರಗಿ, ಉಡುಪಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಕ್ರೀಡಾಪಟುಗಳು, ಕ್ರೀಡಾ ಪ್ರೋತ್ಸಾಹಕರು ಮತ್ತು ಕ್ರೀಡಾ ಸಂಘ ಸಂಸ್ಥೆಗಳಿಂದ ಸಂಗ್ರಹಿಸುವ ಅಭಿಪ್ರಾಯಗಳನ್ನು ಕ್ರೂಡೀಕರಿಸಿ, ಇಡೀ ದೇಶದಲ್ಲೇ ಅತ್ಯುತ್ತಮವಾದ ಕ್ರೀಡಾ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಮಂಗಳವಾರ ಉಡುಪಿಯ ಪುರಭವನದಲ್ಲಿ ರಾಜ್ಯದ ಕ್ರೀಡಾ ನೀತಿಯ ಬಗ್ಗೆ ಉಡುಪಿ, ದ.ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕ್ರೀಡಾಪಟುಗಳು ಮತ್ತು ಸಂಘ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಕ್ರೀಡಾಪುಟುಗಳು ಮತ್ತು ಕ್ರೀಡಾ ಸಂಘ ಸಂಸ್ಥೆಗಳು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ರಾಜ್ಯ ಸಚಿವ ಸಂಪುಟದ ಮುಂದೆ ಮಂಡಿಸುವ ಮೊದಲು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ, ಮುಖ್ಯಮಂತ್ರಿಗಳಿಗೆ ಕ್ರೀಡಾ ನೀತಿ ಕುರಿತ ವರದಿಯನ್ನು ಸಲ್ಲಿಸಲಾಗುವುದು.

ಕ್ರೀಡಾನೀತಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಸಿ‌ಎಸ್‌ಆರ್ ನಿಧಿಯನ್ನು ಕ್ರೀಡಾ ಉತ್ತೇಜನಕ್ಕೆ ಬಳಸುವುದರ ಕುರಿತು ಹಾಗೂ ರಾಜ್ಯದ ಸುಮಾರು ೫೦೦ ಕ್ರೀಡಾಪಟುಗಳ ಮೇಲ್ವಿಚಾರಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದರ ಕುರಿತು ಚಿಂತನೆ ನಡೆಸಿದೆ ಅಲ್ಲದೇ ಖಾಸಗಿ ಸಂಸ್ಥೆಗಳಿಂದ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿಸಿ, ಕ್ರೀಡಾಂಗಣಗಳ ಬಳಕೆಯನ್ನು ಸರಕಾರ ಮತ್ತು ಖಾಸಗಿಯಾಗಿ ಬಳಸಿಕೊಳ್ಳುವ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕ್ರೀಡಾನೀತಿ ರಚಿಸುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು, ೭ ನೇ ತರಗತಿಯಿಂದ ಪ್ರಾರಂಭವಾಗಿ ಪದವಿ ಶಿಕ್ಷಣದ ವೇಳೆಗೆ ಒಬ್ಬ ಕ್ರೀಡಾಪಟು ಅಂತಾರಾಷ್ಠ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ನೀತಿ ರೂಪಿಸಬೇಕು, ಕ್ರೀಡಾಪಟುಗಳನ್ನು ರೂಪಿಸುವ ಖಾಸಗಿ ಸಂಸ್ಥೆಗಳಿಗೆ ಸರಕಾರದ ನೆರವು ಸಿಗಬೇಕು, ಕ್ರೀಡಾಪಟುಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೃಪಾಂಕಗಳು ಸಿಗಬೇಕು, ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಆಗಬೇಕು, ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಚಟುವಟಿಕೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಕ್ರೀಡಾ ಸಾಮಗ್ರಿಗಳು ಇರಬೇಕು, ಕ್ರೀಡಾಕೂಟಗಳು ನಡೆಯುವ ಕುರಿತು ವ್ಯವಸ್ಥಿತ ಕ್ಯಾಲೆಂಡರ್ ಸಿದ್ದಪಡಿಸಬೇಕು, ಖಾಸಗಿ ಮತ್ತು ಸರಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳ ನೇಮಕಕ್ಕೆ ಆದ್ಯತೆ ನೀಡಬೇಕು, ಕ್ರೀಡಾ ಚಟುವಟಿಕೆಗೆ ಅಸೋಸಿಯೇಷನ್ ಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು, ರಾಜ್ಯದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನಿಗಧಿಯಾಗಬೇಕು, ರಾಜ್ಯಮಟ್ಟದಲ್ಲಿ ಸಮಗ್ರ ಕೀಡಾ ಸ್ಪರ್ಧೆ ಏರ್ಪಡಿಸಿ ಕ್ರೀಡಾಪಟುಗಳನ್ನು ಗುರುತಿಸುವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಮಾತನಾಡಿ, ಕ್ರೀಡಾಪಟುಗಳ ಟ್ಯಾಲೆಂಟ್ ಹಂಟ್ ಯೋಜನೆ ಜಾರಿಗೆ ಬರಲಿ, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ತರಬೇತುದಾರರಿಗೂ ಸಹ ಪ್ರೋತ್ಸಾಹ ದೊರೆಯಬೇಕು, ಕ್ರೀಡಾ ತರಬೇತಿಗೆ ರೀಸರ್ಚ್ ಸೆಂಟರ್ ಪ್ರಾರಂಭ ಆಗಬೇಕು, ಕ್ರೀಡಾ ಪ್ರೋತ್ಸಾಹ ಧನ ಹೆಚ್ಚಳ ಮತ್ತು ವಿಕಲ ಚೇತನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆಯಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ಕ್ರೀಡಾಪಟು ದಿನೇಶ್ ಕುಂದರ್ ಮಾತನಾಡಿ, ಕ್ರೀಡಾಪಟುಗಳಿಗೆ ಆಧುನಿಕ ಉಪಕರಣಗಳು ಮತ್ತು ಮೂಲ ಸೌಕರ್ಯ ಸಿಗಬೇಕು, ತರಬೇತುದಾರರು ಪ್ರತಿಭೆಗಳನ್ನು ಗುರುತಿಸಿ, ತರಬೇತಿ ನೀಡಬೇಕು; ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರಕಾರದಿಂದ ಹೆಚ್ಚಿನ ನೆರವು ಸಿಗಬೇಕು, ಕ್ರೀಡಾ ಇಲಾಖೆಗೆ ಪ್ರತ್ಯೇಕ ಅನುದಾನ ಮತ್ತು ಉತ್ತಮ ಅಧಿಕಾರಿಗಳ ನೇಮಕ ಆಗಬೇಕು ಎಂದು ಹೇಳಿದರು.

ಕ್ರೀಡಾಪಟು ಹಾಗೂ ಕ್ರೀಡಾ ತರಬೇತುದಾರ ಹಾಗೂ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಫಾದರ್ ಗೋಮ್ಸ್ ಮಾತನಾಡಿ, ಕ್ರೀಡಾ ಔಷಧಿಗಳ ಬಳಕೆ ಬಗ್ಗೆ , ಕ್ರೀಡಾಪಟುಗಳಿಗೆ ಮಾನಸಿಕ ಸಿದ್ದತೆಗೊಳಿಸಲು ಗೈಡ್ ಮತ್ತು ಕೌನ್ಸಿಲರ್ ಗಳ ನೇಮಕ, ಇತರೆ ದೇಶದ ಕ್ರೀಡಾಪಟುಗಳನ್ನು ಅಭ್ಯಸಿಸಿ ಇಲ್ಲಿನ ಕ್ರೀಡಾಪಟುಗಳಿಗೆ, ಬಾಲ್ಯದಲ್ಲಿಯೇ ತರಬೇತಿ ನೀಡಬೇಕು, ಕ್ರೀಡಾಪಟುಗಳು ಮಾನಸಿಕವಾಗಿ ಉಲ್ಲಾಸವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಿದ್ದ ಶಿವಕುಮಾರ್ ಮಾತನಾಡಿ, ಕ್ರೀಡಾಪಟುಗಳಿಗೆ ದಿನಭತ್ಯೆ ಹೆಚ್ಚಳ ಮಾಡಬೇಕು ಎಂದರು, ನಳಿನಿ ಡೇಸಾ ಮಾತನಾಡಿ, ಕ್ರೀಡಾಪಟುಗಳಿಗೆ ಸರಕಾರ ಜೀವನಕ್ಕೆ ಭದ್ರತಾ ಭಾವನೆ ಮೂಡಿಸಬೇಕು ಎಂದರು, ದೈಹಿಕ ಶಿಕ್ಷಕಿ ಲವೀನಾ ಅವರು ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಬೇಕು ಎಂದರು. ಬಾಣೂರು ಚೆನ್ನಪ್ಪ ಕ್ರೀಡೆಯಲ್ಲಿ ಯೋಗ ಅಳವಡಿಸಿ ಎಂದರು,
ಮಂಗಳೂರಿನ ಶ್ರೀಧರ ಶೆಟ್ಟಿ ಮಾತನಾಡಿ, ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ನೀಗಿಸಿ ಎಂದರು. ಕೃಷ್ಣ ಶೆಣ್ಯೆ ಮಾತನಾಡಿ, ಕಂಪೆನಿಗಳು ಸಿ‌ಎಸ್‌ಆರ್ ನಿಧಿಯನ್ನು ಕಡ್ಡಾಯವಾಗಿ ಕ್ರೀಡಾ ಚಟುವಟಿಕೆಗಳಿಗೆ ಬಳಸಬೇಕು , ಕ್ರೀಡಾ ಹಾಸ್ಟೆಲ್ ಗಳಲ್ಲಿ ಪಾರದರ್ಶಕ ನೇಮಕ ಆಗಲಿ ಎಂದರು. ಸೀತಾನದಿ ವಿಠಲ ಶೆಟ್ಟಿ ಮಾತನಡಿ, ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಕ್ರೀಡಾ ನಿರ್ದೇಶನಾಲಯ ಪ್ರಾರಂಭ ಆಗಲಿ ಎಂದರು.
ಚಿಕ್ಕಮಗಳೂರಿನ ವೀಣಾ ಮಾತನಾಡಿ, ಕ್ರೀಡಾಪಟುಗಳು ಸರಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಪ್ರಾಯೋಜಕತ್ವ ಪಡೆಯುವ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಬೇಕು, ಕ್ರೀಡಾ ಪ್ರಶಸ್ತಿಗಳ ಆಯ್ಕೆ ಪಾರದರ್ಶಕವಾಗಿರಬೇಕು ಎಂದರು.

ಈ ಬಗ್ಗೆ ಮಾತನಾಡಿದ ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರ್ ವಾಲ್, ಈ ಬಾರಿಯಿಂದ ಕ್ರೀಡಾ ಪ್ರಶಸ್ತ್ತಿಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತಿದ್ದು, ಆನ್ ಲೈನ್ ನಲ್ಲಿ ಅಭ್ಯರ್ಥಿಗಳ ಆಯ್ಕೆ , ಅರ್ಹತೆ, ಮಾನದಂಡ, ತಿರಸ್ಕೃತವಾಗಿರುವ ಕುರಿತು ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯಲ್ಲಿ ರಾಜ್ಯದಲ್ಲಿ ೩೦ ಕೋಟಿ ಅನುದಾನ ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಮೀಸಲಾಗಿದ್ದು, ಈ ಕುರಿತು ಎಲ್ಲಾ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವ ಪ್ರಮೋದ್ ಮಧ್ವರಾಜ್ , ಕ್ರೀಡಾ ನೀತಿ ರಚನಾ ಸಮಿತಿಗೆ ಪುತ್ತೂರಿನ ಫಿಲೋಮಿನಾ ಕಾಲೇಜಿನ ಫಾದರ್ ಗೋಮ್ಸ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಿ ಸಭೆಯಲ್ಲೇ ಆದೇಶಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸಿ‌ಇ‌ಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ , ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.
ಉಡುಪಿಯ ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. (ಪೋಟೊ ಲಗತ್ತಿಸಿದೆ)

 

No Comments

Leave A Comment