Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಭಾರತೀಯ ಸೈನಿಕರಿಗೆ ಮತ್ತೋರ್ವ ಶತ್ರು; ಸದ್ದಿಲ್ಲದೇ ಕುಗ್ಗಿಸುತ್ತಿರುವ ಅತಿಯಾದ “ಒತ್ತಡ”

india_paraನವದೆಹಲಿ: ಒಂದೆಡೆ ಪಾಕಿಸ್ತಾನ ಮತ್ತೊಂದೆಡೆ ಚೀನಾ ಇವೆರಡೂ ಸಾಲದು ಎಂಬಂತೆ ದೇಶದೊಳಗೇ ನುಗ್ಗಿ ಕಾಟಕೊಡುವ ಯೋಧರು ಇದು ನಮ್ಮ ಪ್ರಮುಖ ಮೂರು ಶತ್ರುಗಳಾದರೆ  ಭಾರತೀಯ ಸೇನೆಯನ್ನು ಕಾಡುತ್ತಿರುವ ಮತ್ತೋರ್ವ ಭಯಾನಕ ಶತ್ರು ಎಂದರೆ ಅತೀವ ಒತ್ತಡವಂತೆ.ಹೌದು..ಗಡಿಯಲ್ಲಿ ಚಳಿ, ಗಾಳಿ, ಬಿಸಿಲು ಎನ್ನದೇ ಪ್ರಾಣದ ಹಂಗು ತೊರೆದು ಶತ್ರುಗಳೊಂದಿಗೆ ಹೋರಾಡುವ ಭಾರತೀಯ ಯೋಧರು ತಮ್ಮೊಳಗೇ ಇರುವ “ಒತ್ತಡ” ಎನ್ನುವ ಮತ್ತೋರ್ವ  ಭಯಾನಕ ಶತ್ರುಗಳೊಂದಿಗೆ ಪ್ರತಿನಿತ್ಯ ಹೋರಾಡುತ್ತಾರಂತೆ.

ಕುಟುಂಬಸ್ಥರಿಂದ ದೂರಾಗಿ ಅವರನ್ನು ಕಾಣುವ ಒತ್ತಡ ಒಂದೆಡೆಯಾದರೆ, ಸಮಯದ ಮಿತಿಯೇ ಇಲ್ಲದೇ ಗಡಿ ಕಾಯುವ ಒತ್ತಡ  ಕೂಡ ಅವರನ್ನು ದಿನೇ ದಿನೇ ಕುಗ್ಗಿಹೋಗುವಂತೆ ಮಾಡುತ್ತಿದೆಯಂತೆ.ಇದಕ್ಕೆ ಇತ್ತೀಚೆಗೆ ಸೇನೆಯಲ್ಲಿ ನಡೆದ ಕೆಲ ದುರಂತಗಳು ನಿದರ್ಶನವಾಗಿದ್ದು, ಕಳೆದ ಆಗಸ್ಟ್ 13ರಂದು ಬಿಎಸ್ ಎಫ್ ಕ್ಯಾಂಪ್ ನಲ್ಲಿ ಓರ್ವ ಯೋಧ ಕೇವಲ ಊಟದ ವಿಚಾರಕ್ಕೆ ನಡೆದ  ವಾಕ್ಸಮರದಿಂದ ಆಕ್ರೋಶಗೊಂಡು ತನ್ನ 26 ವರ್ಷದ ಆಪ್ತ ಗೆಳೆಯ ಮತ್ತು ಸಹೋದ್ಯೋಗಿಯೋರ್ವನನ್ನು ಗುಂಡಿಟ್ಟು ಕೊಂದು ಹಾಕಿದ್ದ. ಅರೆ ಊಟದ ವಿಚಾರಕ್ಕೆ ಸ್ನೇಹಿತನನ್ನೇ ಕೊಲ್ಲಲು  ಸಾಧ್ಯವೇ ಎಂದು ಅನುಮಾನ ಬರಬಹುದು.

ಇದಕ್ಕೆ ತಜ್ಞರು ನೀಡಿರುವ ಕಾರಣ ಕೊಲೆಗೆ ಕಾರಣ ಊಟವಲ್ಲ. ಬದಲಿಗೆ ಗುಂಡು ಹಾರಿಸಿದ ಯೋಧನ ಅತೀ ಒತ್ತಡ ಹಾಗೂ ಆತ ಖಿನ್ನತೆಯಿಂದ  ಬಳಲುತ್ತಿದ್ದನಂತೆ.ಸೇನಾಧಿಕಾರಿಗಳು ಹಾಗೂ ತಜ್ಞರು ಹೇಳುವ ಪ್ರಕಾರ ಸೇನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸೈನಿಕನೂ ಸಮಯದ ಮಿತಿಯಿಲ್ಲದೇ ಕೆಲಸ ಮಾಡಬೇಕಿರುತ್ತದೆ.

ಕೆಲವೊಮ್ಮೆ 8 ಗಂಟೆ  ಕರ್ತವ್ಯದಲ್ಲಿ ನಿರತರಾದರೆ ಇನ್ನೂ ಕೆಲ ಗಂಭೀರ ಪರಿಸ್ಥಿತಿಗಳಲ್ಲಿ 18 ಗಂಟೆಗಳವರೆಗೂ ಕೆಲಸ ಮಾಡಬೇಕಿರುತ್ತದೆ. ಗಡಿಯಲ್ಲಿನ ಒಂದು ಭಾಗವನ್ನು ಓರ್ವ ಯೋಧನ ಸುಪರ್ಧಿಗೆ ವಹಿಸಿದರೆ  ಮತ್ತೆ ಮುಂದಿನ ಪಾಳಿನ ಯೋಧ ಆಗಮಿಸುವವರೆಗೂ ಆತ ಅಲ್ಲಿಯೇ ಕೆಲಸ ನಿರ್ವಹಿಸಬೇಕಾಗುತ್ತದೆ. ಕೆಲವೊಮ್ಮೆ ಈ ಅವಧಿ 8 ರಿಂದ 24 ಗಂಟೆಗಳ ಅವಧಿಗೂ ವಿಸ್ತಾರವಾಗಬಹುದಂತೆ.  ಇನ್ನೂ ಕೆಲ ಕಠಿಣ ಪರಿಸ್ಥಿತಿಗಳಲ್ಲಿ ಊಟ ನೀರು ಇಲ್ಲದೆಯೂ ಯೋಧರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ.ಬೆಳಗ್ಗೆ 6.30ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಾದ ಯೋಧ 5 ಗಂಟೆಗೇ ಸಿದ್ಧನಾಗಿ ತನ್ನ ಜಾಗಕ್ಕೆ ಹೋಗಬೇಕು.

ಕೆಲವೊಮ್ಮೆ ಸೇನಾ ವಾಹನಗಳ ಲಭ್ಯತೆ ಇಲ್ಲವಾದಲ್ಲಿ ಆತ ತನ್ನ ಕ್ಯಾಂಪ್ ನಿಂದ  ಕರ್ತವ್ಯ ನಿಗದಿ ಪಡಿಸಿದ ಸ್ಥಳಕ್ಕೆ ನಡೆದೇ ಹೋಗಬೇಕು. ಇನ್ನು ರಾತ್ರಿ 8ರವರೆಗೂ ಆತ ಕೆಲಸ ಮಾಡಿ ಕ್ಯಾಂಪ್ ಗೆ ಬರುವ ಹೊತ್ತಿಗೇ ರಾತ್ರಿ 10 ರಿಂದ 11 ಗಂಟೆಗಳಾಗಿರುತ್ತವೆ. ಕ್ಯಾಂಪ್ ಗೆ ಬಂದ  ಕೂಡಲೇ ಆತ ಊಟ ಮಾಡಿ ಮಲಗಬೇಕು. ಮತ್ತೆ ಬೆಳಗ್ಗೆ 5 ಸಿದ್ಧನಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಪ್ರತಿನಿತ್ಯ ಇದೇ ಕೆಲಸವಾಗುವುದರಿಂದ ಆತನಲ್ಲಿ ಕ್ರಮೇಣ ಒತ್ತಡ ಹೆಚ್ಚಾಗಿ ಆತ ಖಿನ್ನತೆಗೆ  ಒಳಗಾಗುತ್ತಿದ್ದಾನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒತ್ತಡದಿಂದ ದೂರಾಗಲು ಯೋಗ ಮಾಡಿ: ಯೋಧರಿಗೆ ಸೈನ್ಯಾಧಿಕಾರಿಗಳ ಸಲಹೆಇನ್ನು ಸೇನಾಧಿಕಾರಿಗಳು ಯೋಧರ ಈ ಒತ್ತಡ ಹಾಗೂ ಖಿನ್ನತೆ ಸಮಸ್ಯೆಗೆ ಯೋಗ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆಯಾದರೂ, ಯೋಗ ಮಾಡಲೂ ಕೂಡ ಸೈನಿಕರಿಗೆ  ಸಮಯವಿಲ್ಲದಂತಾಗಿದೆ.

ರಾತ್ರಿ ಕ್ಯಾಂಪ್ ಗೆ ಆಗಮಿಸುವ ಯೋಧರಿಗೆ ಕೇವಲ 4ರಿಂದ 5 ಗಂಟೆಗಳ ಕಾಲ ಮಾತ್ರ ನಿದ್ರಿಸುವ ಸಮಯ ದೊರೆಯುತ್ತದೆ. ಈ ಸಮಯದಲ್ಲಿ ನಿದ್ರೆ ಮಾಡುವುದೇ  ಅಥವಾ ಯೋಗ ಮಾಡುವುದೇ ಎಂದು ಸೈನಿಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಸೈನಿಕರು ನೀಡಿರುವ ಸಲಹೆ ಎಂದರೆ ಸೈನಿಕರ ಪಾಳಿಯನ್ನು ನಿಯಮಿತವಾಗಿ ಬದಲಿಸಬೇಕು ಎಂದು  ಹೇಳುತ್ತಿದ್ದಾರೆ.

ಸೇನೆಯಲ್ಲಿ ಸೈನಿಕರ ಒತ್ತಡ ಕಡಿಮೆ ಮಾಡಲು ಒಂದಷ್ಟು ನುರಿತ ತಜ್ಞರ ತಂಡಗಳಿವೆಯಾದರೂ, ಸೈನಿಕರ ಸಂಖ್ಯೆಗೂ ನುರಿತ ತಜ್ಞರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಇನ್ನು  ಸೈನಿಕರ ಒತ್ತಡ ಶಮನಕ್ಕಾಗಿ ಆಗ್ಗಾಗ್ಗೆ ಕ್ಯಾಂಪ್ ಗಳಲ್ಲಿ ಸಂಗೀತ ಕಾರ್ಯಕ್ರಮ ನೃತ್ಯ, ಕ್ರೀಡಾಕೂಟಗಳಷ್ಟೇ ಅಲ್ಲದೇ ವೈಯುಕ್ತಿಕ ಗೌಪ್ಯ ಸಮಾಲೋಚನೆ ಕೂಡ ನಡೆಸಲಾಗುತ್ತದೆ. ಕೆಲ  ಸಮಸ್ಯೆಗಳನ್ನು ನಾವು ಬಗೆಹರಿಸಬಹುದಾಗಿದ್ದರೆ ಅವುಗಳ ಬಗೆಹರಿಸಲು ಯತ್ನಿಸುತ್ತೇವೆ. ಮತ್ತೆ ಕೆಲವುಗಳನ್ನು ಬಗೆಹರಿಸಲಾಗದ ಸಮಸ್ಯೆಗಳೂ ಕೂಡ ಇರುತ್ತವೆ ಎಂದು ತಜ್ಞರು ಹೇಳಿದ್ದಾರೆ.

No Comments

Leave A Comment