Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕೊಲೆ ಒಪ್ಪಿಕೊಳ್ಳಲು ಡೀಲ್‌ಗೆ ಯತ್ನಿಸಿದ್ದ ನಿರಂಜನ

bhaskar-shettyಉಡುಪಿ: ಉದ್ಯಮಿ ಕೆ. ಭಾಸ್ಕರ ಶೆಟ್ಟಿ ಅವರನ್ನು ಕೊಲೆ ನಡೆಸಿ ಹೋಮಕುಂಡದಲ್ಲಿ ಸುಟ್ಟಿರುವುದು ಸಿಐಡಿಗೂ ಬಹುತೇಕ ಖಚಿತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸಾಕ್ಷ್ಯಗಳನ್ನು ಸಿಐಡಿ ಕಲೆಹಾಕಿದೆ. ಮಾಡಿದ್ದ ಕೃತ್ಯಗಳನ್ನು ಸ್ವತಃ ನಿರಂಜನ ಭಟ್‌ (26) ನಂದಳಿಕೆಯ ಇನ್ನೋರ್ವ ವ್ಯಕ್ತಿಯಲ್ಲಿ ತಿಳಿಸಿದ್ದು, ಕೊಲೆ ಮಾಡಿರುವುದನ್ನು ನೀನು ಒಪ್ಪಿಕೊಂಡರೆ ಹಣ, ಆಸ್ತಿ ನೀಡುವುದಾಗಿ ಆಮಿಷವನ್ನೂ ಒಡ್ಡಿದ್ದ ಎನ್ನುವುದನ್ನು ಸಿಐಡಿ ತಂಡ ಪತ್ತೆ ಮಾಡಿದೆ.

ಪೊಲೀಸರ ತನಿಖೆಯಲ್ಲಾದ ಎಲ್ಲ ಎಡವಟ್ಟುಗಳನ್ನು ಗಮನಿಸಿಕೊಂಡು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿಕೊಂಡಿದ್ದ ಸಿಐಡಿ ತಂಡ ಹಂತ ಹಂತವಾಗಿ ಹೊಸ ವಿಷಯಗಳನ್ನು ಪತ್ತೆಹಚ್ಚಿದೆ. ಅದೇ ರೀತಿ ಕೊಲೆಯನ್ನು ಹೇಗೆ ನಡೆಸಲಾಗಿತ್ತು ಮತ್ತು ಆ ಕೊಲೆಯನ್ನು ಮಾಡಿದ್ದು ನಾನೇ ಎಂದು ಪೊಲೀಸರಲ್ಲಿ ಒಪ್ಪಿಕೊಳ್ಳಬೇಕು ಎಂದು ನಿರಂಜನ ಭಟ್ಟನು ಪರಿಚಯಸ್ಥ ವ್ಯಕ್ತಿ ಸತೀಶ್‌ ಪೂಜಾರಿ ಎನ್ನುವಾತನಲ್ಲಿ ಮೊಬೈಲ್‌ ಮೂಲಕ ಸಂಭಾಷಣೆ ನಡೆಸಿ ಹೇಳಿದ್ದ. ನೀನು ಈ ಕೊಲೆಯನ್ನು ಒಪ್ಪಿಕೊಂಡರೆ ಅದಕ್ಕಾಗಿ ಹಣ, ಫ್ಲ್ಯಾಟು, ಕಾರು ಇನ್ನಿತರ ಸೊತ್ತುಗಳನ್ನು ನೀಡು
ವುದಾಗಿಯೂ ಆಮಿಷ ಒಡ್ಡಿರುವುದನ್ನು ಸಿಐಡಿ ಪತ್ತೆ ಹಚ್ಚಿ, ಆತನನ್ನು ಹುಡುಕಾಡಿ ಅಧಿಕೃತರ ಎದುರು ಹಾಜರುಪಡಿಸಿ ಎಲ್ಲ ವಿಷಯಗಳನ್ನು ದಾಖಲಿಸಿಕೊಂಡಿದೆ.

ಮುಂಬಯಿಯ ವ್ಯಕ್ತಿ ಸತೀಶ್‌ ಹೆಚ್ಚಾಗಿ ಮುಂಬಯಿಯಲ್ಲಿರುವ ವ್ಯಕ್ತಿ. ಈತನನ್ನು ಪತ್ತೆಹಚ್ಚಿದ ಸಿಐಡಿ ತಂಡದವರು ಮೌಲ್ಯಯುತ ಸಾಕ್ಷಿಯಾಗಿ ಸಿದ್ಧಪಡಿಸಿ ಕೊಂಡಿದ್ದಾರೆ. ಮುಂದಕ್ಕೆ ಈತ ಸುಳ್ಳು ಹೇಳಬಹುದು. ಹಾಗಾಗಿ ಸಂಭಾಷಣೆಯಲ್ಲಿ ನಿರಂಜನ ಭಟ್‌ ಹೇಳಿದ್ದ ಎಲ್ಲ ನೈಜ ವಿಷಯಗಳನ್ನು ಸಿಆರ್‌ಪಿಸಿ 164 ನಿಯಮದನ್ವಯ ಶುಕ್ರವಾರ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. 2ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶೆ ಝರೀಫಾ ಬಾನು ಅವರ ಸಮ್ಮುಖದಲ್ಲಿ ಸಿಆರ್‌ಪಿಸಿ 164 ಹೇಳಿಕೆ ದಾಖಲುಗೊಂಡಿದೆ. ಕೊಲೆಯ ಕೃತ್ಯಗಳಿಗೆ ಇದು ಮೌಲ್ಯಯುತ ಸಾಕ್ಷಿಯಾಗಲಿದೆ.

ಪೊಲೀಸರಿಗೆ ಸಿಕ್ಕ ರಾಡು ಯಾವುದು?;ಸಿಐಡಿಗೆ ಸಿಕ್ಕಿದ್ದು ಯಾವುದು?
ಕೆ. ಭಾಸ್ಕರ ಶೆಟ್ಟಿ ಅವರ ತಲೆಗೆ ಅವರ ಮಗ ನವನೀತ್‌ ಶೆಟ್ಟಿ ಹೊಡೆದಿದ್ದ ಕಬ್ಬಿಣದ ರಾಡು ಪತ್ತೆ ಯಾದದ್ದು ಮೊನ್ನೆ ಸಿಐಡಿ ತಂಡ ಶೋಧ ಕಾರ್ಯ ನಡೆಸಿದಾಗ. ಅದು ಕೂಡ ಬೇರೆಯೇ ನದಿಯಲ್ಲಿ. ಹಾಗಾದರೆ ಪೊಲೀಸರು ತನಿಖೆ ನಡೆಸಿ ಕಳೆದ ತಿಂಗಳು ವಶಕ್ಕೆ ಪಡೆದುಕೊಕೊಂಡಿದ್ದ ರಾಡು ಯಾವುದು? ಎಲ್ಲ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ
ದಾಗ ಆರೋಪಿಗಳು ತನಿಖೆಯಲ್ಲಿ ಪೊಲೀಸರ ದಾರಿ ತಪ್ಪಿಸಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗುತ್ತದೆ. ಸಿಐಡಿ ತಂಡದವರು ನಿರಂಜನನನ್ನು ಕಸ್ಟಡಿಗೆ ಪಡೆದ ಬಳಿಕ ನವನೀತ್‌ ಶೆಟ್ಟಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು.

ಈ ವೇಳೆ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿರುವ ಸಿಐಡಿ ತಂಡದವರು ಪ್ರಕರಣದ ಕೆಲವು ಸತ್ಯಾಂಶಗಳನ್ನು ಇಬ್ಬರ ಬಾಯಿಂದ ಕಕ್ಕಿಸಿದ್ದಾರೆ. ಹಾಗಾಗಿ ಕೊಲೆಗೆ ಬಳಸಿದ್ದ ರಾಡು ಪತ್ತೆಯಾಗುವಂತಾಯಿತು. ಪೊಲೀಸರು ಈ ಹಿಂದೆ ವಶಕ್ಕೆ ಪಡೆದಿದ್ದ ರಾಡು ಕಟೈìನ್‌ ರಾಡು. ಅದು ಕೃತ್ಯ ನಡೆಸಿದ ಬಳಿಕ ಕ್ಲೀನ್‌ ಮಾಡಲು ಬಳಸಿದ್ದು ಎಂದು ಸಿಐಡಿ ಮೂಲಗಳು ತಿಳಿಸಿವೆ. ಈಗ ಸಿಐಡಿ ವಶಕ್ಕೆ ಪಡೆದದ್ದು ಭಾಸ್ಕರ ಶೆಟ್ಟಿಯವರ ತಲೆಗೆ ಹೊಡೆದ ರಾಡು ಎನ್ನುವುದು ಖಚಿತವಾಗಿದೆ.

“ಹೈ’ ಸೂಚನೆ-ನಿಟ್ಟುಸಿರು’; ಆದರೂ…
ಪ್ರಕರಣದ 1ನೇ ಆರೋಪಿ ರಾಜೇಶ್ವರಿಯನ್ನು ಸಿಐಡಿ ಪೊಲೀಸರ ವಶಕ್ಕೆ ನೀಡಬಾರದು ಎಂದು ಹೈಕೋರ್ಟ್‌ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನಿರಂಜನ ಭಟ್‌ ಮತ್ತು ನವನೀತ ಶೆಟ್ಟಿಯನ್ನು ಸಿಐಡಿ ಕಸ್ಟಡಿಗೆ ನೀಡದ ಜಿಲ್ಲಾ ನ್ಯಾಯಾಧೀಶರು ಆರೋಪಿಗಳಿಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಿದ್ದರು. ಈ ಸಂದರ್ಭ ಆರೋಪಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದೇಶವಾದ ಬಳಿಕ ಇಬ್ಬರೂ ನಸುನಗುತ್ತಾ ಮಾತನಾಡುತ್ತಿದ್ದರು. ಸಿಐಡಿ ವಶಕ್ಕೆ ಕೊಟ್ಟರೆ ನಮಗಿನ್ನು ಉಳಿಗಾಲವಿಲ್ಲ. ಅವರ ವಿಚಾರಣೆಯಲ್ಲಿ ಸಾಕ್ಷ್ಯಗಳೆಲ್ಲ ಸಿಕ್ಕಿದರೆ ಮುಂದಿನ ಗತಿಯೇನು ಎನ್ನುವ ಚಿಂತೆ ಅವರನ್ನು ಕಾಡಿರಬಹುದು. ಹಾಗಾಗಿಯೇ ಆದೇಶಕ್ಕೆ ಮುನ್ನ ಮೌನಿಯಾಗಿದ್ದ ಆರೋಪಿ ಗಳು ಸಿಐಡಿ ಕಸ್ಟಡಿಗೆ ನೀಡಬಾರದು ಎಂದು ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಹಸನ್ಮುಖರಾಗಿದ್ದರು.

ಹೀಗಿದ್ದರೂ ಸಿಐಡಿ ತಂಡವು ಒಬ್ಬೊಬ್ಬರನ್ನಾಗಿ ವಿಚಾರಣೆಗೆ ಪಡೆದುಕೊಂಡು ಹಲವು ಪ್ರಮುಖ ಮಾಹಿತಿ ಕಲೆ ಹಾಕುತ್ತಿತ್ತು. ಹಾಗಾಗಿ ಮತ್ತೆ ಮತ್ತೆ ಸಿಐಡಿಯವರು ಕಸ್ಟಡಿಗೆ ಕೇಳುತ್ತಲೇ ಇದ್ದಾರೆ. ಮುಂದೆ ರಾಜೇಶ್ವರಿಯನ್ನು ವಿಚಾರಣೆಗೆ ಕೇಳಬೇಕು ಎನ್ನುವಷ್ಟರಲ್ಲಿ ಹೈಕೋರ್ಟ್‌ ಪೊಲೀಸ್‌/ಸಿಐಡಿ ಕಸ್ಟಡಿಗೆ ನೀಡದಂತೆ ಹೇಳಿದೆ. ಹೀಗಿದ್ದರೂ ಹೈಕೋರ್ಟ್‌ನ ಸೂಚನೆಯ ಪ್ರತಿಯಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಿರುವ ನ್ಯಾಯಾಧೀಶರು ಬಳಿಕ ಇನ್ನು ಮುಂದಕ್ಕೆ ಸಿಐಡಿ ಕಸ್ಟಡಿಗೆ ನೀಡ ಬೇಕೇ? ಬೇಡವೇ? ಎನ್ನುವ ತೀರ್ಮಾನ ಕೈಗೊಳ್ಳಲಿದ್ದಾರೆ. ಕಸ್ಟಡಿಗೆ ನೀಡಲೇಬಾರದು ಎಂದು ಖಡಾಖಂಡಿತವಾಗಿ ಸೂಚಿಸಿದ್ದರೆ ಮಾತ್ರ ಸಿಐಡಿಯವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಕೇಳಬಹುದು.

ವಿಳಂಬ: ಚಾರ್ಜ್‌ಶೀಟ್‌ಗೆ ತೊಡಕಿಲ್ಲ ಸಿಐಡಿ ವಶಕ್ಕೆ ನೀಡಬಾರದಾಗಿ ಆರೋಪಿಗಳ ಪರ ವಕೀಲರು ಹೈಕೋರ್ಟಿನಿಂದ ಆದೇಶ ತಂದಿದ್ದಾರೆ. ಇನ್ನೂ ಕೂಡ ಆದೇಶದ ಪ್ರತಿ ಸಂಪೂರ್ಣವಾಗಿ ಉಡುಪಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ. ದಿನ ಮುಂದೂಡಿಕೆ ಯಾಗುತ್ತಲಿದೆ. ಹೀಗೆ ಮಾಡಿದರೆ ಸದ್ಯ ಒಂದೂವರೆ ತಿಂಗಳು ತನಿಖಾ ಸಮಯ ಕಳೆದಿದೆ. ಇನ್ನು ಒಂದೂವರೆ ತಿಂಗಳು ಮಾತ್ರ ಇದೆ. ಅದರೊಳಗೆ ದೋಷಾರೋಪ ಪಟ್ಟಿ (ಚಾರ್ಜ್‌ ಶೀಟ್‌) ಸಲ್ಲಿಸಬೇಕು.

ಚಾರ್ಜ್‌ಶೀಟ್‌ನಲ್ಲಿ ಎಲ್ಲ ಸಾಕ್ಷ್ಯಗಳ ಸಂಪೂರ್ಣ ವಿವರ ಇರುತ್ತದೆ. ಒಂದು ವೇಳೆ ರಾಜೇಶ್ವರಿಯನ್ನು ಸಿಐಡಿಯವರ ಕಸ್ಟಡಿಗೆ ನೀಡದಿದ್ದರೂ ಪ್ರಕರಣ ಸಾಬೀತುಪಡಿಸಲು ಬೇಕಾದ ಮಹತ್ವದ ಸಾಕ್ಷ್ಯಗಳನ್ನು ಸಿಐಡಿ ಸಂಗ್ರಹಿಸಿಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಒಂದೂವರೆ ತಿಂಗಳ ಬಳಿಕ ಟ್ವಿಸ್ಟ್‌
ಮೊದಲಿಗೆ ಪಳ್ಳಿ ಕಲ್ಕಾರು ನದಿ, ಆಮೇಲೆ ಎಪದೆಕ್ಯಾರು ಕೊನೆಗೆ ಮುಂಡ್ಕೂರಿನಿಂದ ಅನತಿ ದೂರದ ನದಿಗೆ ಮೂಳೆ ಇನ್ನಿತರ ಸೊತ್ತುಗಳನ್ನು ಎಸೆಯಲಾಗಿದೆ ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡು ಭಾರೀ ಹುಡುಕಾಟ ನಡೆಸಿದ್ದರು. ಕೆಲವೊಂದು ಸಾಕ್ಷಿ ಸಿಕ್ಕಿದೆ ಎನ್ನುತ್ತಿದ್ದರು. ಆದರೆ ಏನೇನು ಸಿಕ್ಕಿದೆ ಎಂದು ಪೊಲೀಸರು ಬಾಯ್ಬಿಟ್ಟಿರಲಿಲ್ಲ.

ಸಿಐಡಿ ತಂಡವು ನವನೀತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಅಲೆವೂರಿನ ನದಿಯೊಂದಕ್ಕೆ ರಾಡು ಎಸೆದಿರುವ ವಿಚಾರ ಗೊತ್ತಾಗಿ ಅದನ್ನು ಮುಳುಗುತಜ್ಞರ ನೆರವಿನಿಂದ ಪತ್ತೆ ಹಚ್ಚಲಾಗಿದೆ. ಉಳಿದಂತೆ ಮೊಬೈಲು, ವಾಚು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಈ ಹಿಂದೆ 3 ಬೇರೆ ನದಿಗಳಲ್ಲಿ ಹುಡುಕಿದ್ದರು ಅಷ್ಟೆ. ಈ ವೇಳೆ ಮೂಳೆ ಪತ್ತೆಯಾಗಿತ್ತು. ಅದು ಕೂಡ ಭಾಸ್ಕರ ಶೆಟ್ಟಿಯವರದ್ದೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ರಾಜಾತಿಥ್ಯದ ಮೂಲಕ ಆರೋಪಿಗಳು ಹೇಳಿದ್ದನ್ನೇ ನಂಬಿದ್ದ ಪೊಲೀಸರು ಸಕತ್ತಾಗಿ ಯಾಮಾರಿದ್ದರು ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಪೊಲೀಸರ ತನಿಖೆಯಲ್ಲಿ ವೈಫ‌ಲ್ಯವಾಗಿದೆ ಎನ್ನುವುದಕ್ಕೆ ಇದೊಂದು ನಿದರ್ಶನವೇ ಸಾಕು. ಸಿಐಡಿ ತನಿಖೆಯಿಂದ ಒಂದೂವರೆ ತಿಂಗಳ ಬಳಿಕ ಪ್ರಕರಣದಲ್ಲಿ ಟ್ವಿಸ್ಟ್‌ ದೊರೆತಿದೆ.

ಪ್ರೇತಬಾಧೆ ತಪ್ಪಿಸಲು 3 ಕಡೆ ಎಸೆದರು?
ನಂದಳಿಕೆ ನಿರಂಜನ ಭಟ್ಟ ಹೇಳಿ ಕೇಳಿ ಸ್ವಯಂಘೋಷಿತ ಜೋತಿಷಿಯಾದರೂ ಅಲ್ಲಿ ಇಲ್ಲಿ ಹೋಗಿ ಹೋಮ ಹವನ ಮಾಡಿ ಅಲ್ಪ ಸ್ವಲ್ಪ ಧಾರ್ಮಿಕ ವಿಚಾರಗಳನ್ನು ಅರಗಿಸಿಕೊಂಡಿದ್ದ. ಹಾಗಾಗಿ ಆತ ನಂದಳಿಕೆ ಮಾತ್ರವಲ್ಲದೆ ಬೇರೆ ಊರುಗಳ ಮೂರು ಭಾಗದ ನದಿಗಳಿಗೆ ಭಾಸ್ಕರ ಶೆಟ್ಟಿಯವರ ಎಲುಬುಗಳನ್ನು ಎಸೆದಿದ್ದಾನೆ. ಅದ್ಯಾಕೆ ಎಂದು ಅರಸುತ್ತಾ ಹೋದಾಗ 3 ಹರಿಯುವ ನದಿಗಳಿಗೆ ಎಲುಬು, ಬೂದಿಗಳನ್ನು ಎಸೆದರೆ ಪ್ರೇತಬಾಧೆ ಬರುವುದಿಲ್ಲ ಎನ್ನುವ ನಂಬಿಕೆಯೊಂದು ಇದೆಯಂತೆ. ಹಾಗಾಗಿ ನಿರಂಜನ ಈ ರೀತಿ ಮಾಡಿದ್ದಿರಲೂಬಹುದು ಎಂದು ಹಿರಿಯ ವ್ಯಕ್ತಿಯೋರ್ವರು ತಿಳಿಸಿದ್ದಾರೆ.

“ಹರಿಯುವ ನೀರನ್ನೇ ಬಳಸಿಕೊಂಡರು’
ಪೊಲೀಸರು/ಸಿಐಡಿ ತಂಡದವರು ಕಲೆ ಹಾಕಿರುವ ರೀತಿಯಲ್ಲಿಯೇ ಕೃತ್ಯ ನಡೆದಿದೆ ಎಂದು ಹೇಳುವುದಾದರೆ ಆರೋಪಿಗಳು ಬಹಳ ಚೆನ್ನಾಗಿ ಯೋಜನೆ ರೂಪಿಸಿದ್ದರು ಎನ್ನಬಹುದು. ಸಾಕ್ಷ್ಯಗಳ ಸಂಪೂರ್ಣ ನಾಶಕ್ಕಾಗಿ ಅವರು ಎಲ್ಲ ಹಂತಗಳಲ್ಲಿಯೂ ಹರಿಯುವ ನದಿಯ ನೀರನ್ನೇ ಪ್ರಮುಖವಾಗಿ ಬಳಸಿಕೊಂಡದ್ದು. ಎಲ್ಲ ಸೊತ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಸಾಕ್ಷಿಯೇ ಇರುವುದಿಲ್ಲವಲ್ಲ. ಅದು ಕೂಡ ಮಳೆಗಾಲದ ನೀರು ರಭಸವಾಗಿಯೇ ಹರಿಯುತ್ತದೆ ಎನ್ನುವ ಯೋಚನೆ ಅವರದ್ದಾಗಿರಬಹುದು. ಆದರೆ ಕಬ್ಬಿಣದ ರಾಡು ಭಾರವಾದ ವಸ್ತುವಾದ ಕಾರಣ ಅವರು ಎಸೆದ ಭಾಗದ ಆಸುಪಾಸಿನಲ್ಲಿಯೇ ಇದ್ದಿತ್ತು. ಉಳಿದ ಸೊತ್ತುಗಳು ಮಾತ್ರ ಕೊಚ್ಚಿಕೊಂಡು ಹೋಗಿರಬಹುದು.

No Comments

Leave A Comment