Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಎತ್ತಿನಹೊಳೆಯಲ್ಲಿರೋದು 24 ಅಲ್ಲ, 9.5 ಟಿಎಂಸಿ:ಐಐಎಸ್ಸಿ ದೃಢೀಕರಣ

yetti1ಬೆಂಗಳೂರು: ವಿವಾದಿತ ಎತ್ತಿನಹೊಳೆ ಯೋಜನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸೇರಿದಂತೆ ತಜ್ಞರು ರಿಮೋಟ್‌ ಸೆನ್ಸಿಂಗ್‌ (ಸೂಕ್ಷ್ಮ ಸಂವೇದಿ)ನಂತಹ ತಂತ್ರಜ್ಞಾನಗಳನ್ನು ಆಧರಿಸಿ ಪರಿಷ್ಕೃತ ವರದಿ ಪ್ರಕಟಿಸಿದ್ದು, ಅದರಲ್ಲಿ ಕೂಡ ಎತ್ತಿನಹೊಳೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ 9.55 ಟಿಎಂಸಿ ಎಂದು ದೃಢೀಕರಿಸಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಹೈಡ್ರಾಲಜಿ ಕರಂಟ್‌ ರಿಸರ್ಚ್‌ ಜರ್ನಲ್‌ನಲ್ಲಿ ಪಶ್ಚಿಮಘಟ್ಟದ ಕೇಂದ್ರ ಭಾಗದಲ್ಲಿ ನೀರಿನ ಸೆಳೆವು ಮತ್ತು ಹರಿವಿನ ಪ್ರಮಾಣದ ಅಧ್ಯಯನ(ಎನ್ವಿರಾನ್‌ಮೆಂಟ್‌ ಫ್ಲೊ ಅಸೆಸ್‌ಮೆಂಟ್‌ ಇನ್‌ ಎ ಲಾಟಿಕ್‌ ಎಕೊಸಿಸ್ಟಂ ಆಫ್ ಸೆಂಟ್ರಲ್‌ ವೆಸ್ಟರ್ನ್ ಘಾಟ್‌) ಎಂಬ ಶೀರ್ಷಿಕೆಯಡಿ ಈಚೆಗೆ ಲೇಖನ ಪ್ರಕಟಗೊಂಡಿದೆ. ಅದರಲ್ಲಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ 9.55 ಟಿಎಂಸಿ ಇದ್ದು, ಅದರಲ್ಲಿ 5.84 ಟಿಎಂಸಿ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿಯೇ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಪುನರುಚ್ಚರಿಸಿದ್ದಾರೆ. ಇಂಧನ ಮತ್ತು ಜೌಗುಪ್ರದೇಶಗಳ ಸಂಶೋಧನಾ ತಂಡದ ಪ್ರೊ.ಟಿ.ವಿ. ರಾಮಚಂದ್ರ, ಎಸ್‌. ವಿನಯ್‌ ಮತ್ತು ಭರತ್‌ ಎಚ್‌. ಐತಾಳ್‌ ಈ ಲೇಖನ ರಚಿಸಿದ್ದಾರೆ.

ಈ ಮೂಲಕ ಎತ್ತಿನಹೊಳೆಯಿಂದ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಲು ಉದ್ದೇಶಿಸಿರುವ ಸರ್ಕಾರದ ಯೋಜನೆಗೆ ಈ ತಂಡ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಅಂದಾಜು ಮಾಡಿದಂತೆ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ 24 ಟಿಎಂಸಿ ನೀರು ಲಭ್ಯವಿಲ್ಲ ಎಂದು ತಜ್ಞರು ಪುನರುಚ್ಚರಿಸಿದ್ದಾರೆ.

ಖುದ್ದು ಸ್ಥಳ ಪರಿಶೀಲನೆ ಅಲ್ಲದೆ, ಭಾರತೀಯ ಹವಾಮಾನ ಇಲಾಖೆ, ರಿಮೋಟ್‌ ಸೆನ್ಸಿಂಗ್‌ ಮತ್ತು ಜಲವಿಜ್ಞಾನದ ದತ್ತಾಂಶಗಳನ್ನು ಆಧರಿಸಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ಮಳೆ ಪ್ರಮಾಣ, ತಾಪಮಾನ, ಭೂಮಿಯ ಬಳಕೆ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಅದರಂತೆ ಎತ್ತಿನಹೊಳೆ ಜಲಾನಯನ ಪ್ರದೇಶದ ಒಟ್ಟಾರೆ ವ್ಯಾಪ್ತಿಯ ಪೈಕಿ ಶೇ. 45.08ರಷ್ಟು ಪರಿಸರ ಅರಣ್ಯ, ಶೇ. 29.05 ಕೃಷಿ, ಶೇ. 24.06 ಹುಲ್ಲುಗಾವಲು ಪ್ರದೇಶವಾಗಿದೆ. ಅಲ್ಲಿ ಬೀಳುವ ವಾರ್ಷಿಕ ಮಳೆ 3000-5000 ಮಿ.ಮೀ. (ರಾಜ್ಯ ಸರ್ಕಾರದ ಸಾಂಖೀÂಕ ಇಲಾಖೆ ಪ್ರಕಾರ) ಆಗಿದ್ದು, 5.84 ಟಿಎಂಸಿ ಕೃಷಿ, ತೋಟಗಾರಿಕೆ, ಜಾನುವಾರು ಮತ್ತಿತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. 2 ಟಿಎಂಸಿ ಜಲಚರಗಳಿಗೆ ಮೀಸಲಾಗಿದೆ ಎಂದು 14 ಪುಟಗಳ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪಶ್ಚಿಮಘಟ್ಟದ ವಿವಿಧ ಭೂಪ್ರದೇಶಗಳಲ್ಲಿ ಪರಿಸರ ಮತ್ತು ಜನಜೀವನದ ಜತೆ ನೀರಿನ ಹರಿವಿಗೆ ಇರುವ ಸಂಬಂಧವನ್ನು ನೋಡಿದರೆ, ಆ ಪ್ರದೇಶದಲ್ಲಿ ಮಳೆ ಪ್ರಮಾಣ 3ರಿಂದ 5 ಸಾವಿರ ಮಿ.ಮೀ. ಇದ್ದರೂ, ಅದರ ಹರಿವಿನ ಇಳುವರಿ ಸಾಕಷ್ಟು ಕಡಿಮೆ ಇದೆ. ಕೃಷಿ ಚಟುವಟಿಕೆ ಪ್ರದೇಶ ವಿಸ್ತರಣೆಯಾಗಿರುವುದು, ಗುಂಡ್ಯ ಸುತ್ತಮುತ್ತ ಕಳೆದ ಒಂದೂವರೆ ದಶಕದಲ್ಲಿ ಅರಣ್ಯ ಪ್ರದೇಶ ಶೇ. 70.74ರಿಂದ ಶೇ. 61.15ಕ್ಕೆ ಕುಸಿದಿರುವುದು ಇದಕ್ಕೆ ಕಾರಣ. ಅದೇ ರೀತಿ, ಬಿದ್ದ ನೀರಿನಲ್ಲಿ ಮುಂಗಾರಿನಲ್ಲಿ ತಿಂಗಳಿಗೆ 40 ಮಿ.ಮೀ. ಆವಿಯಾದರೆ, ಬೇಸಿಗೆಯಲ್ಲಿ 120 ಮಿ.ಮೀ.ನಷ್ಟು ಆವಿಯಾಗಿ ಹೋಗುತ್ತದೆ. ಇನ್ನು ಕೆಲವೆಡೆ ಬಿದ್ದ ನೀರು ಮರಗಳು, ಕಟ್ಟಡಗಳ ಛಾವಣಿ ಮತ್ತಿತರ ಅಡತಡೆಗಳಿಂದ ಭೂಮಿಯ ಮೇಲ್ಮೆ„ಯನ್ನು ತಲುಪುವುದೇ ಇಲ್ಲ.

ಆದ್ದರಿಂದ ಉದ್ದೇಶಿತ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲಸೀಮೆ ಪ್ರದೇಶಗಳಲ್ಲಿ ಕೆರೆ-ಕಟ್ಟೆಗಳ ಮೂಲಕ ಮಳೆ ನೀರು ಸಂಗ್ರಹ, ಈಗಿರುವ ಕೆರೆಗಳ ಪುನರುಜ್ಜೀವನ, ನೀರಿನ ಮರುಬಳಕೆ, ಅಂತರ್ಜಲ ಮರುಪೂರಣದಂತಹ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ವರದಿಯಲ್ಲಿ ಸಲಹೆ ಮಾಡಲಾಗಿದೆ.

ಎತ್ತಿನಹೊಳೆ ಅಂಕಿ-ಅಂಶ
ಒಟ್ಟಾರೆ ಪ್ರದೇಶ- 179.68 ಚದರ ಕಿ.ಮೀ.
ವಾರ್ಷಿಕ ಸರಾಸರಿ ಮಳೆ- 3,500-4,500 ಮಿ.ಮೀ.
ಜಲಾನಯನ ಪ್ರದೇಶದಲ್ಲಿ ಒಟ್ಟು ನೀರಿನ ಹರಿವು- 9.55 ಟಿಎಂಸಿ
ಇದರಲ್ಲಿ ಅಂತರ್ಜಲ ಮರುಪೂರಣ- 0.49 ಟಿಎಂಸಿ
ಆವಿ- 3.16 ಟಿಎಂಸಿ
ನೀರಾವರಿ- 2.64 ಟಿಎಂಸಿ
ಸ್ಥಳೀಯ ಅಗತ್ಯತೆ- 0.03 ಟಿಎಂಸಿ
ಜಾನುವಾರುಗಳಿಗೆ- 0.01 ಟಿಎಂಸಿ
ಪರಿಸರ ಹರಿವು- 2.8 ಟಿಎಂಸಿ

ಪರಮಶಿವಯ್ಯ ವರದಿಯಲ್ಲಿ ಹೇಮಾವತಿ, ಕೃಷ್ಣಾ, ಶರಾವತಿ ಸೇರಿದಂತೆ ಒಟ್ಟಾರೆ ಪಶ್ಚಿಮ ವಾಹಿನಿ ನದಿಗಳಲ್ಲಿರುವ ಹೆಚ್ಚುವರಿ ನೀರನ್ನು ಸಮತೋಲನ ಮಾಡಿ, ಬರಪೀಡಿತ ಪ್ರದೇಶಗಳಿಗೆ ಒದಗಿಸಬೇಕು ಎಂದು ಹೇಳಲಾಗಿದೆ. ಇನ್ನು ಇದುವರೆಗೆ ಎತ್ತಿನಹೊಳೆಯಲ್ಲಿ ಲಭ್ಯವಿರಬಹುದಾದ ನೀರಿನ ಬಗ್ಗೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೈಡ್ರಾಲಜಿ, ಕೇಂದ್ರ ಜಲ ಆಯೋಗ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿಲ್ಲ. ಮಳೆ ಮಾಪನ ಅಳವಡಿಸಿ, ಗಂಟೆ ಪ್ರಮಾಣದಲ್ಲಿ ಮಳೆ ಲೆಕ್ಕಹಾಕಿ, ಲಭ್ಯವಿರುವ ನೀರಿನ ಮಾಹಿತಿ ನೀಡಬೇಕು.
– ಆರ್‌. ಆಂಜನೇಯರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ

ವಿಜಯಕುಮಾರ್‌ ಚಂದರಗಿ

No Comments

Leave A Comment