Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ನೇಲ್ಯ ಮಜಲು ಬರ್ಬರ ಕೊಲೆ

230ಬೆಳ್ಳಾರೆ: ಕರಾವಳಿ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಇಸ್ಮಾಯಿಲ್‌ ನೇಲ್ಯಮಜಲು (52) ಅವರನ್ನು ಶುಕ್ರವಾರ ಮಧ್ಯಾಹ್ನ ಬೆಳ್ಳಾರೆ ಸಮೀಪದ ಐರ್ವನಾಡಿನಲ್ಲಿ ತಂಡವೊಂದು ತಲವಾರಿನಿಂದ ಕಡಿದು ಕೊಲೆಗೈದಿದೆ. ಕೊಲೆಗೆ ಪೂರ್ವ ದ್ವೇಷವೇ ಕಾರಣ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ ಐರ್ವನಾಡು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ತನ್ನ ಕಾರಿನ ಬಳಿ ಬರುತ್ತಿದ್ದ ಸಂದರ್ಭ ಹೊಂಚು ಹಾಕಿ ಕುಳಿತಿದ್ದ ತಂಡವೊಂದು ಯದ್ವಾತದ್ವವಾಗಿ ಕಡಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಹಿನ್ನಲೆ
ಬೆಳ್ಳಾರೆ-ಸುಳ್ಯ ರಸ್ತೆಯ ನೇಲ್ಯಮಜಲಿನಲ್ಲಿ ವಾಸವಾಗಿರುವ ಬೆಳ್ಳಾರೆ ಗ್ರಾ.ಪಂ. ಮಾಜಿ ಅಧ್ಯಕ್ಷೆ, ರಾಜ್ಯ ಸರಕಾರದ ನಿಗಮ ಮಂಡಳಿ ಮಾಜಿ ಸದಸ್ಯೆ ಆಗಿರುವ ವಹೀದಾ ಇಸ್ಮಾಯಿಲ್‌ ಅವರ ಪತಿ ಇಸ್ಮಾಯಿಲ್‌ ನೇಲ್ಯಮಜಲು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಕಾಂಗ್ರೆಸ್‌ ಪಕ್ಷದ ಕರಾವಳಿ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಮೃತ ಇಸ್ಮಾಯಿಲ್‌ ಅವರಿಗೆ ಬೆಳ್ಳಾರೆಯಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಕೆಲ ವ್ಯಕ್ತಿಗಳೊಂದಿಗೆ ವಿವಾದ ಇತ್ತು. ಅದೇ ಕಾರಣಕ್ಕೆ ಎರಡು ವರ್ಷದ ಹಿಂದೆ ಸುಳ್ಯದ ಗಾಂಧಿನಗರದಲ್ಲಿ ವಹೀದಾ ಇಸ್ಮಾಯಿಲ್‌ ಮತ್ತು ಇಸ್ಮಾಯಿಲ್‌ ನೇಲ್ಯಮಜಲು ಅವರಿಗೆ ಚೂರಿಯಿಂದ ಇರಿದ ಘಟನೆ ಕೂಡ ನಡೆದಿತ್ತು. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಹೀದಾ ಕೆಲ ತಿಂಗಳ ಹಿಂದೆಯಷ್ಟೆ ಚೇತರಿಸಿಕೊಂಡಿದ್ದರು.

ನ್ಯಾಯಾಲಯಕ್ಕೆ ತೆರಳಿದ್ದರು…!
ಶುಕ್ರವಾರ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ತೆರಳಿ, ಮಧ್ಯಾಹ್ನ ಮನೆಗೆ ಮರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕೆಲ ಮಾಹಿತಿ ಪ್ರಕಾರ ಇಸ್ಮಾಯಿಲ್‌ ಅವರು ಸಿವಿಲ್‌ ದಾವೆಗೆ ಸಂಬಂಧಿಸಿ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿ ಮನೆಗೆ ಮರಳುತ್ತಿದ್ದರು. ಶುಕ್ರವಾರ ಆದ ಕಾರಣ ಮಧ್ಯಾಹ್ನ ಪ್ರಾರ್ಥನೆಗೆಂದು ಐರ್ವನಾಡಿನ ಮಸೀದಿಗೆ ತೆರಳಿದ್ದರು. ಅಲ್ಲಿಂದ ಎಲ್ಲರಿಗಿಂತ ಮೊದಲು ಹೊರ ಬಂದ ಇಸ್ಮಾಯಿಲ್‌ ತನ್ನ ಕಾರು ನಿಲ್ಲಿಸಿದ್ದ ಸ್ಥಳೀಯ ಚಿಕನ್‌ ಸೆಂಟರ್‌ ಬಳಿ ಬಂದಿದ್ದರು. ಆ ವೇಳೆ ದುಷ್ಕರ್ಮಿಗಳು ತಲವಾರಿನಿಂದ ಎರಗಿದ್ದಾರೆ.

ಅಂಗರಕ್ಷಕ ಜತೆಗಿರಲಿಲ್ಲ
ಎರಡು ವರ್ಷದ ಹಿಂದೆ ಚೂರಿ ಇರಿತ ಘಟನೆ ಕಾರಣದಿಂದ ವಹೀದಾ ಅವರ ಕೋರಿಕೆಯಂತೆ ಅಂಗರಕ್ಷನನ್ನು ಭದ್ರತೆಗಾಗಿ ನೇಮಿಸಲಾಗಿತ್ತು. ಪತಿ ಮತ್ತು ಪತ್ನಿ ಹೊರಗಡೆ ತೆರಳುತ್ತಿದ್ದ ಸಂದರ್ಭ ಅಂಗರಕ್ಷಕ ಜತೆಗಿರುತ್ತಿದ್ದರು. ಆದರೆ ಶುಕ್ರವಾರ ಇಸ್ಮಾಯಿಲ್‌ ಅವರು ಒಬ್ಬಂಟಿಯಾಗಿ ತೆರಳಿದ್ದರು. ಇದೇ ಸಂದರ್ಭ ಬಳಸಿಕೊಂಡು ತಂಡ ಕೊಲೆಗೆ ಸಂಚು ರೂಪಿಸಿದೆ.

ಪೂರ್ವಯೋಜಿತ ಕೃತ್ಯ
ಜಾಗದ ವಿಚಾರಕ್ಕೆ ಸಂಬಂಧಿಸಿ ಇಸ್ಮಾಯಿಲ್‌ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದರು. ಎರಡು ವರ್ಷದ ಹಿಂದೆಯೇ ಇಸ್ಮಾಯಿಲ್‌ ದಂಪತಿ ಕೊಲೆ ಪ್ರಯತ್ನ ನಡೆದಿತ್ತು. ಶುಕ್ರವಾರದ ಘಟನೆ ಕಂಡಾಗ, ಪರಿಚತರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಮಾಹಿತಿ ಪ್ರಕಾರ, ಇಸ್ಮಾಯಿಲ್‌ ಅವರನ್ನು ತಂಡ ಕೆಲ ದಿನಗಳ ಹಿಂದಿನಿಂದಲೇ ಹಿಂಬಾಲಿಸುತ್ತಿದ್ದು, ಆ ತಂಡ ಶುಕ್ರವಾರ ಸುಳ್ಯಕ್ಕೂ ಬಂದಿತ್ತು. ಆದರೆ ಅಲ್ಲಿ ಅವಕಾಶ ಸಿಗದ ಕಾರಣ, ವಾಪಾಸು ಮರಳುತ್ತಿದ್ದ ಸಂದರ್ಭ ಹಿಂಬಾಲಿಸಿ ಕೃತ್ಯ ಎಸಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ.

ಈ ಹಿಂದೆ ಗಾಂಧಿನಗರದಲ್ಲಿ ಚೂರಿ ಇರಿತದ ಆರೋಪಿ ಜಾಮೀನು ಪಡೆದ ಅನಂತರವೂ ಇಸ್ಮಾಯಿಲ್‌ ಅವರನ್ನು ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಈತನಿಗೂ ಇಸ್ಮಾಯಿಲ್‌ ಅವರಿಗೆ ಜಾಗದ ವಿಚಾರವೊಂದಕ್ಕೆ ತಕರಾರಿತ್ತು. ಇದೇ ಜಾಡಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಗೆ ಯಾವುದೇ ರಾಜಕೀಯ ದ್ವೇಷ ಕಾರಣ ಅಲ್ಲ ಎಂಬ ಮಾಹಿತಿ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಪಿಸ್ತೂಲ್‌ ಇದ್ದರೂ ಬಚವಾಗಲಿಲ್ಲ…!
ಕೊಲೆ ಬೆದರಿಕೆ ಹಿನ್ನಲೆಯಲ್ಲಿ ಆತ್ಮರಕ್ಷಣೆಗೆ ಪಿಸ್ತೂಲ್‌ ಹೊಂದಿದ್ದ ಇಸ್ಮಾಯಿಲ್‌ ಅವರಿಗೆ ಘಟನೆ ನಡೆದ ಸಂದರ್ಭ ಅದನ್ನು ಬಳಸಲು ಸಾಧ್ಯವಾಗಿರಲಿಲ್ಲ. ನಾಲ್ಕೈದು ಮಂದಿ ಏಕಕಾಲದಲ್ಲಿ ಇಸ್ಮಾಯಿಲ್‌ ಅವರ ದೇಹದ ವಿವಿಧ ಭಾಗಗಳಿಗೆ ತಲವಾರಿನಿಂದ ಕಡಿದಿದ್ದಾರೆ. ಪರಿಣಾಮ ಕ‌ುತ್ತಿಗೆ ಭಾಗ ಛಿದ್ರವಾಗಿತ್ತು.

ಶ್ವಾನದಳ ಆಗಮನ
ಘಟನ ಸ್ಥಳಕ್ಕೆ ಶ್ವಾನ ದಳ ಆಗಮಿಸಿತ್ತು. ಸುಳ್ಯ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿದ ಶ್ವಾನ ಬಳಿಕ ಹಿಂತಿರುಗಿದೆ. ಮಳೆ ಕಾರಣದಿಂದ ಹಂತಕರ ಜಾಡು ಹಿಡಿಯಲು ಶ್ವಾನಕ್ಕೆ ಸಾಧ್ಯವಾಗಲಿಲ್ಲ.

ವಿಧಿ ವಿಜ್ಞಾನ ತಂಡ
ಇಸ್ಮಾಯಿಲ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆಯ ವಿಧಿ ವಿಜ್ಞಾನ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವೇದಮೂರ್ತಿ, ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್‌, ಸುಳ್ಯ ವೃತ್ತನಿರೀಕ್ಷಕ ಕೃಷ್ಣಯ್ಯ, ಬೆಳ್ಳಾರೆ ಪೊಲೀಸ್‌ ಠಾಣಾಧಿಕಾರಿ ಎಂ.ವಿ. ಚೆಲುವಯ್ಯ ಮೊದಲಾದವರು ಭೇಟಿ ನೀಡಿದ್ದಾರೆ.

ಇಸ್ಮಾಯಿಲ್‌ ಹಂತಕರ ಪತ್ತೆಗಾಗಿ ಪುತ್ತೂರು ಎಎಸ್ಪಿ ರಿಷ್ಯಂತ್‌ ನೇತೃತ್ವದಲ್ಲಿ ಮೂರು ತನಿಖಾ ತಂಡ ರಚಿಸಲಾಗಿದೆ. ಸುಳ್ಯ ಪೊಲೀಸ್‌ ವೃತ್ತ ನಿರೀಕ್ಷಕ ಕೃಷ್ಣಯ್ಯ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ರಾಜ್ಯಮಟ್ಟದ ನಾಯಕರ ಜತೆ ನಿಕಟ ಸಂಬಂಧ
ಮೃತ ಇಸ್ಮಾಯಿಲ್‌ ಅವರ ಬೆಳ್ಳಾರೆ ಜಾಗದಲ್ಲಿ ದೈವಸ್ಥಾನ ಇದ್ದು, ಇವರ ಮುಂದಾಳತ್ವದಲ್ಲಿ, ಊರವರ ನೇತೃತ್ವದಲ್ಲಿ ಪ್ರತಿ ವರ್ಷ ಕಾರ್ಯಕ್ರಮ ನಡೆಯುತ್ತಿತ್ತು. ಸ್ಥಳೀಯ ಪರಿಸರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ರಾಜ್ಯಮಟ್ಟದ ಕಾಂಗ್ರೆಸ್‌ ನಾಯಕರಾದ ಡಿ.ಕೆ. ಶಿವಕುಮಾರ್‌, ರೋಷನ್‌ಬೇಗ್‌ ಮೊದಲಾದವರ ಜತೆ ಅವರು ನಿಕಟ ಸಂಬಂಧ ಹೊಂದಿದ್ದರು.

No Comments

Leave A Comment