Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಕರ್ನಾಟಕಕ್ಕೆ ಮತ್ತೆ ಬರೆ; 30 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಿ

cauvery-story_ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತಂತೆ (ಇಂದು ಕಾವೇರಿ ಸಭೆ; ಕರ್ನಾಟಕಕ್ಕೆ ಸಿಗುತ್ತಾ ನ್ಯಾಯ?) ಸೋಮವಾರ ನವದೆಹಲಿಯ ಶ್ರಮಶಕ್ತಿ ಭವನದಲ್ಲಿ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿಯ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಮತ್ತೆ ಬರೆ ಬಿದ್ದಂತಾಗಿದ್ದು, 10 ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯೂಸೆಕ್ (ಒಟ್ಟು 30ಸಾವಿರ ಕ್ಯೂಸೆಕ್) ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿದೆ. ಅಲ್ಲದೇ ಕರ್ನಾಟಕ ಕೂಡಾ ತಮಿಳುನಾಡಿಗೆ ನೀರು ಬಿಡಲು ಒಪ್ಪಿರುವುದಾಗಿ ಸಮಿತಿ ಅಧ್ಯಕ್ಷ ಶಶಿಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾವೇರಿ ನೀರು ಬಿಡುಗಡೆ ವಿವಾದದಲ್ಲಿ ಈಗ ಕರ್ನಾಟಕಕ್ಕೆ ಮೇಲುಸ್ತುವಾರಿ ಸಮಿತಿ ಸಭೆಯಲ್ಲೂ ನ್ಯಾಯ ಸಿಕ್ಕಿಲ್ಲದಂತಾಗಿದೆ.

ಸೆ.21ರಿಂದ 30ರವರೆಗೆ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಮೇಲುಸ್ತುವಾರಿ ಸಮಿತಿ ಸೂಚಿಸಿದೆ. ಇಂದು ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ನೇತೃತ್ವದಲ್ಲಿ ಸುದೀರ್ಘವಾಗಿ ಸಭೆ ನಡೆದಿತ್ತು.

ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಹಾಗೂ ಕೇರಳ ರಾಜ್ಯದ ಅಧಿಕಾರಿಗಳು, ಮುಖ್ಯಕಾರ್ಯದರ್ಶಿಗಳು ಭಾಗವಹಿಸಿದ್ದರು.

ಸುಪ್ರೀಂಗೆ ಯಾವುದೇ ವರದಿ ಸಲ್ಲಿಕೆ ಇಲ್ಲ; ಶಶಿಶೇಖರ್
ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಹಾಗಾಗಿ ಸುಪ್ರೀಂಕೋರ್ಟ್ ಗೆ ಯಾವುದೇ ವರದಿ ಸಲ್ಲಿಸುವುದಿಲ್ಲ ಎಂದು ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ಅವರು ಸಭೆ ಮುಕ್ತಾಯವಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಎಲ್ಲಾ ರಾಜ್ಯಗಳ ವಾದ, ಪ್ರತಿವಾದವನ್ನು ಆಲಿಸಿದ ನಂತರವೇ ಈ ಆದೇಶ ನೀಡಲಾಗಿದೆ. ಈ ಬಗ್ಗೆ ಸಮಾಧಾನವಾಗದಿದ್ದರೆ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶ ಇದೆ. ನಾಳೆ ಅರ್ಜಿ ವಿಚಾರಣೆ ಇದ್ದು, ಈ ಆದೇಶದ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು. ಅಕ್ಟೋಬರ್ ನಲ್ಲಿ ಮತ್ತೆ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದೆ ಎಂದು ವಿವರಿಸಿದರು.

ಕಾವೇರಿ ಕೊಳ್ಳದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ:
ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಮತ್ತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಆದೇಶ ನೀಡಿರುವುದನ್ನು ಖಂಡಿಸಿ ಸೋಮವಾರ ಸಂಜೆ ಕಾವೇರಿ ಕೊಳ್ಳದ ರೈತರು, ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಇಂದು ಸಮಿತಿ ಕೈಗೊಳ್ಳುವ ತೀರ್ಮಾನ ರಾಜ್ಯದ ಪಾಲಿಗೆ ನಿರ್ಣಾಯಕವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕಾವೇರಿ ಕೊಳ್ಳದಲ್ಲಿ 20 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮಂಡ್ಯದಲ್ಲಿ ಸೋಮವಾರ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿತ್ತು.

ನೀರು ಬಿಡುಗಡೆ ಸಂಬಂಧ ಚರ್ಚೆ:
ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಆರಂಭವಾಗಿದ್ದು, ಶಶಿಶೇಖರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ತಮಿಳುನಾಡು ಮುಖ್ಯಕಾರ್ಯದರ್ಶಿ ರಾಮ್ ಮೋಹನ್ ರಾವ್, ಕರ್ನಾಟಕ, ಕೇರಳ, ಪುದುಚೇರಿ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಕಾವೇರಿ ನೀರಿಗಾಗಿ ತಮಿಳುನಾಡು ಪಟ್ಟು:
ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕರ್ನಾಟಕ ನಿಗದಿಯಂತೆ ಬಿಡುಗಡೆ ಮಾಡಬೇಕಿರುವ ಕಾವೇರಿ ನೀರನ್ನು ಬಿಡಬೇಕೆಂದು ತಮಿಳುನಾಡು ಪರ ಅಧಿಕಾರಿಗಳು ವಾದ ಮಂಡಿಸಿದ್ದಾರೆ.

ಕರ್ನಾಟಕ ಕೇವಲ 16 ಟಿಎಂಸಿ ನೀರನ್ನು ಮಾತ್ರ ಬಿಟ್ಟಿದೆ. ಜೂನ್ ನಿಂದ ನಮಗೆ ಇದುವರೆಗೆ 50 ಟಿಎಂಸಿ ನೀರು ಬಿಡಬೇಕಾಗಿತ್ತು. ತಮಿಳುನಾಡಿಗೆ ಸಾಂಬಾ, ಕುರುವೈ ಬೆಳೆಗೆ ನೀರಿನ ಅಗತ್ಯವಿದೆ. ಈಶಾನ್ಯ ಮಳೆಗೆ ಕಾದು ಕುಳಿತರೆ ಬೆಳೆ ನಾಶವಾಗುತ್ತದೆ. ಹಾಗಾಗಿ ಕರ್ನಾಟಕ ಸರ್ಕಾರ ನಮಗೆ ಬಿಡಬೇಕಾಗಿರುವ ನೀರನ್ನು ಬಿಡಬೇಕೆಂದು ಸಭೆಯಲ್ಲಿ ಪಟ್ಟು ಹಿಡಿದಿದೆ ಎಂದು ಟಿವಿ9 ವರದಿ ತಿಳಿಸಿದೆ.

No Comments

Leave A Comment