Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

2.25 ಕೋಟಿ ರು. ಮೌಲ್ಯದ 900 ಐಫೋನ್ ಕದ್ದ ಖತರ್ನಾಕ್ ಕಳ್ಳರು!

iphone-6sಐಫೋನ್ ಮತ್ತು ಕಳ್ಳರ ಹಿಡಿದ ಪೊಲೀಸರು (ಐಎಎನ್ಎಸ್ ಚಿತ್ರ)

ನವದೆಹಲಿ: ಐಫೋನ್ ಸಾಗಿಸುತ್ತಿದ್ದ ಟ್ರಕ್ ಅನ್ನು ಹೆದ್ದಾರಿಯಲ್ಲೇ ತಡೆದು ಬರೊಬ್ಬರಿ 2.25 ಕೋಟಿ ರು. ಮೌಲ್ಯದ ಐಫೋನ್ ಗಳನ್ನು ಕದ್ದು ಹೊತ್ತೊಯ್ದ ಕಳ್ಳರಿಬ್ಬರನ್ನು ದೆಹಲಿ ಪೊಲೀಸರು  ಬಂಧಿಸಿದ್ದಾರೆ.

ಬಂಧಿತರನ್ನು 24 ವರ್ಷದ ಮೆಹತಾಬ್ ಆಲಂ ಹಾಗೂ 22 ವರ್ಷದ ಅರ್ಮಾನ್ ಎಂದು ಗುರುತಿಸಲಾಗಿದ್ದು, ಇಬ್ಬರೂ ದೆಹಲಿಯ ಮಹಿಪಾಲ್ ಪುರ ಪ್ರದೇಶದ ನಿವಾಸಿಗಳು ಎಂದು  ತಿಳಿದುಬಂದಿದೆ. ಬಂಧಿತರಿಂದ ಪೊಲೀಸರು ಸುಮಾರು 2.25 ಕೋಟಿ ರು ಮೌಲ್ಯದ 900 ಐಫೋನ್ ಗಳನ್ನು ಮತ್ತು ಕಳ್ಳತನಕ್ಕೆ ಬಳಸಲಾಗುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ  ಕಳ್ಳತನದಲ್ಲಿ ಭಾಗಿಯಾಗಿದ್ದ ಮತ್ತೆ ಮೂವರ ಹೆಸರನ್ನು ಕೂಡ ಅವರು ಬಾಯಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.ಇದೇ ಸೆಪ್ಟೆಂಬರ್13 ರಂದು ದಕ್ಷಿಣ ದೆಹಲಿಯ ದ್ವಾರಕಾ ಬಳಿ ಸಂಚರಿಸುತ್ತಿದ್ದ ಭಾರಿ ಟ್ರಕ್ ಅನ್ನು ಹಿಂಬಾಲಿಸಿ ಒಕ್ಲಾ ಪ್ರದೇಶದ ರಾಜೋಕ್ರಿ ಮೇಲ್ಸೇತುವೆಯಲ್ಲಿ ತಡೆದ ಐದು ಮಂದಿಯ ಕಳ್ಳರ  ತಂಡ ಚಾಲಕನನ್ನು ಥಳಿಸಿ ಅದರೊಳಗಿದ್ದ ಸುಮಾರು 2.25 ಕೋಟಿ ರು. ಮೌಲ್ಯದ 900 ಐಫೋನ್ ಸೆಟ್ ಗಳನ್ನು ಕದ್ದು ಒಯ್ದಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು  ತನಿಖೆ ನಡೆಸುತ್ತಿದ್ದ ವೇಳೆ ಮೆಹತಾಬ್ ಆಲಂ ಹಾಗೂ ಅರ್ಮಾನ್ ಸಿಕ್ಕಿಬಿದ್ದಿದ್ದು, ಮತ್ತೆ ಮೂವರು ಆರೋಪಿಗಳಾದ ಭೋಲಾ, ಪ್ರದೀಪ್ ಹಾಗೂ ಜಿತೇಂದರ್ ತಲೆ ಮರೆಸಿಕೊಂಡಿದ್ದಾರೆ.ಈ ಪೈಕಿ ಭೋಲಾ, ಪ್ರದೀಪ್ ಇದೇ ಟ್ರಕ್ ನ ಮಾಜಿ ಚಾಲಕರಾಗಿದ್ದು, ಟ್ರಕ್ ನಲ್ಲಿ ಬೆಲೆ ಬಾಳುವ ಐಫೋನ್ ಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ಮಾಹಿತಿ ತಿಳಿದು ತಮ್ಮ ಇತರೆ  ಮೂವರು ಸ್ನೇಹಿತರ ಸಹಾಯದಿಂದ ದರೋಡೆಗೆ ಸಂಚು ರೂಪಿಸಿದ್ದರು ಎಂದು ದೆಹಲಿ ಡಿಸಿಪಿ ಈಶ್ವರ್ ಸಿಂಗ್ ಹೇಳಿದ್ದಾರೆ.

ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಪೊಲೀಸರು  ತಲೆಮರೆಸಿಕೊಂಡಿರುವ ಇತರೆ ಮೂವರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

No Comments

Leave A Comment