Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಾವೇರಿ ಕಿಚ್ಚಿಗೆ ಓರ್ವನ ಬಲಿ; ಬೆಂಗಳೂರಲ್ಲಿ ಹಿಂಸಾಚಾರ, ಕರ್ಫ್ಯೂ

baliಬೆಂಗಳೂರು: ತಮಿಳುನಾಡಿಗೆ ಸೆ.20ರವರೆಗೆ ನಿತ್ಯ 12ಸಾವಿರ ಕ್ಯೂಸೆಕ್‌ ನೀರು ಹರಿಸಬೇಕೆಂದು ಸೋಮವಾರ ಸುಪ್ರೀಂ ಕೋರ್ಟ್‌ ನೀಡಿದ  ತೀರ್ಪಿನ ವಿರುದ್ಧ ಮತ್ತು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಪ್ರತಿಭಟನಾಕಾರರು ರೊಚ್ಚಿಗೆದ್ದ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ಪ್ರದೇಶ ಹೊತ್ತಿ ಉರಿಯಿತು. ಬೆಂಗಳೂರಿನಲ್ಲಿ ನೂರಾರು ವಾಹನಗಳಿಗೆ ಬೆಂಕಿ ಹಚ್ಚಿದ ಗಲಭೆಕೋರರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ ಒಬ್ಬ ಸಾವನ್ನಪ್ಪಿದ್ದಾನೆ. ಡಿಸಿಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಡೀ ಬೆಂಗಳೂರು ಉದ್ವಿಗ್ನಗೊಂಡಿದ್ದು 144ನೇ ಸೆಕ್ಷನ್‌ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು 1000 ಅರೆಸೇನಾ ಯೋಧರನ್ನು ಕೇಂದ್ರ ರವಾನಿಸಿದೆ.

ಇದೇ ವೇಳೆ ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದಲ್ಲೂ  ಬೆಂಬಲ ವ್ಯಕ್ತವಾಗಿದ್ದು, ಅಲ್ಲೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಎರಡು ಪೊಲೀಸ್‌ ವಾಹನಗಳು ಸೇರಿದಂತೆ ರಾಜ್ಯಾದ್ಯಂತ 80ಕ್ಕೂ ಹೆಚ್ಚು ಬಸ್‌ಗಳು, 40ಕ್ಕೂ ಹೆಚ್ಚು ಲಾರಿಗಳು, 12ಕ್ಕೂ ಹೆಚ್ಚು ಕಾರುಗಳು ಸೇರಿದಂತೆ 300ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ರೈತರಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ರಾಜ್ಯದ ಹಲವೆಡೆ ಲಾಠಿ ಪ್ರಹಾರ ನಡೆಸಲಾಗಿದೆ. ಬೆಂಗಳೂರು, ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಅಶ್ರುವಾಯು ಸಿಡಿಸಲಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳವಾರವೂ ಈ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಇದೇ ವೇಳೆ ಉತ್ತರ ಕರ್ನಾಟಕದ ಜಿಲ್ಲೆಗಳಾದ ದಾವಣಗೆರೆ, ಗದಗ, ಹಾವೇರಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಮತ್ತಿತರರೆಡೆ  ಪ್ರತಿಭಟನೆ ವ್ಯಕ್ತವಾಗಿದೆ.

ತಮಿಳುನಾಡಲ್ಲಿ ಹೊತ್ತಿತು ಕಿಡಿ
ವ್ಯತಿರಿಕ್ತ ತೀರ್ಪಿನ ಜತೆಗೆ ತಮಿಳುನಾಡಿನಲ್ಲಿನ ಕನ್ನಡಿಗರು ಮತ್ತು ಕರ್ನಾಟಕ ಮೂಲದ ಮಳಿಗೆಗಳ ಮೇಲೆ ಹಲ್ಲೆ ನಡೆದಿದ್ದು ರಾಜ್ಯದಲ್ಲಿ ಬೆಂಕಿಯ ಕಿಡಿ ಕೆನ್ನಾಲಿಯಾಗಿ ವ್ಯಾಪಿಸಿತು. ಒಂದೆಡೆ ನೀರಿನ ಕೊರತೆ ನಡುವೆಯೂ ಸುಪ್ರೀಂಕೋರ್ಟ್‌ನ ವ್ಯತಿರಿಕ್ತ ಆದೇಶ ಮತ್ತೂಂದೆಡೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆಯು ರಾಜ್ಯದ ಜನರನ್ನು ಕೆರಳಿಸಿತು.

ಕಾವೇರಿ ಕಣಿವೆಯ ಜಿಲ್ಲೆಗಳಾದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಬೆಂಗಳೂರಲ್ಲಿ ಪ್ರತಿಭಟನೆ ತೀವ್ರಗೊಂಡಿತು. ರಾಜಧಾನಿ ಬೆಂಗಳೂರಿನ ನಾಯಂಡಹಳ್ಳಿ, ಡಿಸೋಜನಗರ, ನ್ಯೂಟಿಂಬರ್‌ ಯಾರ್ಡ್‌ ಲೇಔಟ್‌, ರಾಜಾಜಿನಗರ, ಮಂಡ್ಯದ ಪಾಂಡವಪುರ, ಮೈಸೂರು, ಮತ್ತಿತರ ಕಡೆಗಳಲ್ಲಿ ತಮಿಳುನಾಡು ನೋಂದಣಿಯ ಲಾರಿ, ಬಸ್‌ಗಳು, ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದರು. ಬೆಂಗಳೂರಲ್ಲಿ ಸಾಲುಗಟ್ಟಿ ನಿಲ್ಲಿಸಿದ್ದ ಅಂದಾಜು 35ಕೆಪಿಎನ್‌ ಟ್ರಾವೆಲ್ಸ್‌ನ ಬಸ್‌ಗಳು ಸೇರಿದಂತೆ 70ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೀಣ್ಯ ಕೈಗಾರಿಕೆ ಪ್ರದೇಶದ ಹೆಗ್ಗನಹಳ್ಳಿಯಲ್ಲಿ ಉದ್ರಿಕ್ತರು ಪೊಲೀಸ್‌ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ ಗುಂಡು ತಗುಲಿ ಖಾಸಗಿ ಕಂಪನಿಯ ಕಾರ್ಮಿಕ, ಸುಂಕದಕಟ್ಟೆ ನಿವಾಸಿ ಉಮೇಶ್‌ ಎಂಬಾತ ಸಾವನ್ನಪ್ಪಿದ್ದಾನೆ. ರಾಜೇಶ್‌, ಚಂದ್ರಮೋಹನ್‌, ಪ್ರದೀಪ್‌ ಎಂಬುವರು ಗುಂಡು ತಗುಲಿ ಗಾಯಗೊಂಡಿದ್ದು ಸ್ಥಿತಿ ಗಂಭೀರವಾಗಿದೆ. ಹಾಗೆಯೇ ಡಿಸಿಪಿ ಸೇರಿದಂತೆ 8 ಪೊಲೀಸರು ಗಾಯಗೊಂಡಿದ್ದಾರೆ.

ಹೋರಾಟ ಉಗ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೂ ದಿಢೀರ್‌ ರಜೆ ಘೋಷಿಸಲಾಯಿತು. ಬೆಂಗಳೂರಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕೆಲ ಕಾಲ ಸ್ಥಗಿತಗೊಳಿಸಲಾಯಿತು. ದಿಢೀರ್‌ ವ್ಯಾಪಾರ-ವಹಿವಾಟು ಸ್ತಬ್ಧಗೊಂಡಿತು. ತಮಿಳು ಚಿತ್ರಗಳ ಪ್ರದರ್ಶನ ನಿಲ್ಲಿಸಲಾಯಿತು. ಮೂರು ದಿನಗಳ ಹಿಂದಷ್ಟೇ ಬಂದ್‌ಗೆ ತತ್ತರಿಸಿದ್ದ ಕಾವೇರಿ ಕಣಿವೆಯ ಜಿಲ್ಲೆಗಳು ಸೋಮವಾರ ಎದುರಾದ ಮತ್ತೂಂದು ಅಘೋಷಿತ ಬಂದ್‌ಗೆ ನಲುಗಿತು.

ಲಾಠಿ ಪ್ರಹಾರ, ಇಬ್ಬರಿಂದ ಆತ್ಮಹತ್ಯೆಗೆ ಯತ್ನ
ಮಂಡ್ಯದಲ್ಲಿ ಎರಡು ಲಾರಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಗಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವಪ್ಪ ಅವರ ಮನೆಗೆ ಬೆಂಕಿ ಹಚ್ಚಲು ಯತ್ನ ನಡೆದಿದೆ. ಮದ್ದೂರು, ಶ್ರೀರಂಗಪಟ್ಟಣದಲ್ಲಿ ಟ್ಯಾಂಕರ್‌ ಮತ್ತು ಟಿಪ್ಪರ್‌ಗೆ ಬೆಂಕಿ ಹಚ್ಚಿದ್ದು, ಅಲ್ಲಲ್ಲಿ ಕಲ್ಲು ತೂರಾಟ ನಡೆದಿದೆ. ಹಲವೆಡೆ ತಮಿಳು ಪೋಸ್ಟರ್‌ಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಲಾಯಿತು. ಚಾಮರಾಜನಗರದಲ್ಲಿ ಪೆಟ್ರೋಲ್‌ ಸುರುವಿಕೊಂಡು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಡ್ಯದಲ್ಲಿ ಒಬ್ಬ ಪ್ರತಿಭಟನೆ ವೇಳೆ ಬೆಂಕಿಗೆ ಹಾರಲು ಯತ್ನಿಸಿ ಗಾಯಗೊಂಡಿದ್ದಾನೆ.

ಕಾವೇರಿ ನಮ್ಮದು: ಮಂಡ್ಯ ಸೇರಿದಂತೆ ಮತ್ತಿತರರೆಡೆಗಳಲ್ಲಿ ತಮಿಳು ಪ್ರವಾಸಿಗರಿಂದ ಕಾವೇರಿ ನಮ್ಮದು ಎಂದು ಘೋಷಣೆ ಕೂಗಿಸಲಾಗಿದೆ. ಅಲ್ಲದೇ, ಕೆಲವು ತಮಿಳುನಾಡು ವಾಹನಗಳ ಮೇಲೆ ಕಾವೇರಿ ನಮ್ಮದು ಎಂಬ ಬರಹ ಬರೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ವ್ಯಾಪಕ ಹಿಂಸಾಚಾರ, ತಮಿಳುನಾಡಿನ ಬಸ್‌, ಲಾರಿಗಳಿಗೆ ಬೆಂಕಿ,

– ಬೆಂಗ್ಳೂರಲ್ಲಿ ಪೊಲೀಸರ ಗುಂಡು ತಗುಲಿ ಒಬ್ಬನ ಸಾವು ನಿಷೇಧಾಜ್ಞೆ ಜಾರಿ, ಕೇಂದ್ರದಿಂದ 1000 ಯೋಧರ ರವಾನೆ
– ಹೊಯ್ಸಳ ಸೇರಿ ನೂರಾರು ವಾಹನ ಬೆಂಕಿಗಾಹುತಿ
-ಬೆಂಗಳೂರು, ಮಂಡ್ಯದಲ್ಲಿ ಶಾಲೆಗಳಿಗೆ ರಜೆ
-ಪಾಂಡವಪುರದಲ್ಲಿ ನಿವೃತ್ತ ಜಡ್ಜ್ ಮನೆ ಮೇಲೆ ದಾಳಿ
-ಬೆಂಗಳೂರಿನ ವಿಜಯನಗರದಲ್ಲಿ ಸಿಎಂ ಸಿದ್ದರಾಮಯ್ಯ ಮನೆಗೆ ಕಲ್ಲು
– 80 ಬಸ್‌ಗಳು, 30 ಲಾರಿಗಳು, 6 ಕಾರುಗಳು, 300 ಒಟ್ಟು ವಾಹನಗಳು

No Comments

Leave A Comment