Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆ: ಆರು ಆರೋಪಿಗಳ ಸೆರೆ ದರೋಡೆಗೆ ಬಂದವರಿಂದ ಬಯಲಾದ ಕೊಲೆ ರಹಸ್ಯ

1209kಬೆಂಗಳೂರು: ಕೆಂಗೇರಿ ಸಮೀಪದ ಫಾರೆಸ್ಟ್‌ ಬಡಾವಣೆ ಬಳಿ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಬಳ್ಳಾರಿಯ ಅನಿಲ್‌ ಕುಮಾರ್ (32) ಹಾಗೂ ಆತನ ಸಹಚರರಾದ ದಾವಣಗೆರೆಯ ಸಂತೋಷ್‌ ನಾಯ್ಕ (25), ಎಂ.ರಾಜಪ್ಪ, ಹಾಸನದ ಮಂಜುನಾಥ್‌, ತುಮಕೂರಿನ ಕಾಂತರಾಜ್‌, ಉಮೇಶ್‌ ಬಂಧಿತರು. ಅವರಿಂದ ಸ್ವಿಫ್ಟ್‌ ಕಾರು, ₹8.50 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಇವರ ವಿಚಾರಣೆ ವೇಳೆ ಕೊಲೆ ಹಾಗೂ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ಹಲವು ವರ್ಷಗಳಿಂದ ಕಳ್ಳತನ, ದರೋಡೆ ಕೃತ್ಯ ಎಸಗುತ್ತಿದ್ದರು. ಬಳ್ಳಾರಿಯಲ್ಲಿ ನಡೆದ ಕೆಲ ಪ್ರಕರಣಗಳಡಿ ಅನಿಲ್‌ಕುಮಾರ್‌ನನ್ನು ಪೊಲೀಸರು ಬಂಧಿಸಿ, ಚಿತ್ರದುರ್ಗ ಜೈಲಿನಲ್ಲಿರಿಸಿದ್ದರು. ಅದಕ್ಕೂ ಮುನ್ನವೇ ಉಳಿದೆಲ್ಲ ಆರೋಪಿಗಳು, ಅದೇ ಜೈಲಿಗೆ ಬಂದಿದ್ದರು. ಅಲ್ಲಿ ಪರಸ್ಪರ ಪರಿಚಯ ಮಾಡಿಕೊಂಡು ಸ್ನೇಹಿತರಾದ ಆರೋಪಿಗಳು, ಜಾಮೀನು ಮೇಲೆ ಹೊರಗಡೆ ಬಂದು ತಮ್ಮದೇ ಗ್ಯಾಂಗ್‌ ಕಟ್ಟಿಕೊಂಡು ಕಳ್ಳತನ ಕೃತ್ಯ ಮುಂದುವರೆಸಿದ್ದರು. ಅವರೆಲ್ಲ ಬೆಂಗಳೂರಿನಲ್ಲಿ ದರೋಡೆ ನಡೆಸಲು ಬಂದಾಗ ಸಿಕ್ಕಿಬಿದ್ದಿದ್ದಾರೆ’  ಎಂದು ವಿವರಿಸಿದರು.

ಗ್ಯಾಂಗ್‌ನಲ್ಲಿದ್ದ ಸ್ನೇಹಿತನನ್ನೇ ಕೊಂದ: ‘ಆರೋಪಿ ಅನಿಲ್‌ ಕುಮಾರ್‌, ಬಳ್ಳಾರಿಯಲ್ಲಿ ತನ್ನದೇ ಗ್ಯಾಂಗ್‌ ಕಟ್ಟಿಕೊಂಡು ಕಳ್ಳತನ ಮಾಡುತ್ತಿದ್ದ.  ಆತನ ಗ್ಯಾಂಗ್‌ನಲ್ಲಿ ಸಂತೋಷ್‌ ನಾಯ್ಕ್, ಎಂ. ರಾಜಪ್ಪ ಹಾಗೂ ಆಂಜಿನಿ ಇದ್ದರು. ಇದರಲ್ಲಿ ಆಂಜಿನಿ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದರು. ಆ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಕಾಣೆ ದೂರು ದಾಖಲಾಗಿತ್ತು. ಅದೇ ಆಂಜಿನಿ ಅವರನ್ನು ತಾನೇ ಕೊಲೆ ಮಾಡಿರುವುದಾಗಿ ಅನಿಲ್‌ ಕುಮಾರ್‌ ಒಪ್ಪಿಕೊಂಡಿದ್ದಾನೆ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಆಂಜಿನಿ ಹಾಗೂ ಅನಿಲ್‌ಕುಮಾರ್‌ ಮಧ್ಯೆ ಕದ್ದ ಹಣ ಹಂಚಿಕೊಳ್ಳುವ ವಿಚಾರವಾಗಿ ಗಲಾಟೆ ನಡೆದಿತ್ತು.  ಅದೇ ಸೇಡಿನಿಂದ ಸಂಡೂರು ಬಳಿಯ ಗಜಾಪುರ ಅರಣ್ಯ ಪ್ರದೇಶದ ಹುಲಿಬೆಟ್ಟಕ್ಕೆ ಆಂಜಿನಿ ಅವರನ್ನು ಕರೆದುಕೊಂಡು ಹೋಗಿದ್ದ ಅನಿಲ್‌ಕುಮಾರ್‌, ಕಂಠಪೂರ್ತಿ ಕುಡಿಸಿದ್ದ. ಬಳಿಕ ಜಗಳ ತೆಗೆದು ಕೊಲೆ ಮಾಡಿ ಆಂಜಿನಿ ಶವವನ್ನು ಬೆಟ್ಟದಲ್ಲೇ ಹೂತಿದ್ದ. ಅದು ಯಾರಿಗೂ ಗೊತ್ತಿರಲಿಲ್ಲ. ಈಗ ಅನಿಲ್‌ಕುಮಾರ್‌, ತನ್ನ ಕೃತ್ಯದ ಬಗ್ಗೆ ಬಾಯ್ಬಿಟಿದ್ದು, ಅದೇ ಮಾಹಿತಿಯನ್ನು ಸಂಡೂರು ಪೊಲೀಸರಿಗೆ ತಿಳಿಸಲಾಗಿದೆ. ಅವರು ಬೆಟ್ಟದಲ್ಲಿ ಆಂಜಿನಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ’ ಎಂದು ಮಾಹಿತಿ ನೀಡಿದರು.

ದರೋಡೆಗಾಗಿಯೇ ಕಾರು ಕಳವು: ‘ಕಾರವಾರದಲ್ಲಿ ರಾಜೇಶ್‌ ಶಾಂತಾರಾಮ್‌ ನಾಯ್ಕ ಎಂಬುವರಿಗೆ ಸೇರಿದ್ದ ಕಾರನ್ನು ಕದ್ದಿದ್ದ ಆರೋಪಿಗಳು, ಅದನ್ನು ದರೋಡೆಗಾಗಿ ಬಳಸುತ್ತಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ರಾಜೇಶ್‌ ತಮ್ಮ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದರು. ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ‘ಕಾರು ಬಾಡಿಗೆ ಬೇಕು’ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಅವರ ಕೈ ಕಾಲು ಕಟ್ಟಿ ಕಾರಿನ ಸಮೇತ ಪರಾರಿಯಾಗಿದ್ದರು. ಅದೇ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಹಾಗೂ ಶ್ರೀಮಂತರು ಓಡಾಡುವ ರಸ್ತೆ ಪಕ್ಕದಲ್ಲಿ ನಿಂತು ದಾರಿಯಲ್ಲಿ ಹೋಗುವರನ್ನು ಬೆದರಿಸಿ ಮೊಬೈಲ್‌, ಚಿನ್ನ, ಹಣ ದೋಚುತ್ತಿದ್ದರು. ಇವರ ವಿರುದ್ಧ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು,  ಅವುಗಳ ಮಾಹಿತಿ ಪಡೆಯಲಾಗುತ್ತಿದೆ’ ಎಂದು ವಿವರಿಸಿದರು.

ಕಾರಿನಲ್ಲೇ ವಾಸ: ‘ಕುಟುಂಬದವರಿಂದ ದೂರವಾಗಿದ್ದ  ಆರೋಪಿಗಳು, ಪ್ರತಿದಿನವೂ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮಲಗುತ್ತಿದ್ದರು.  ಜತೆಗೆ ಕಳ್ಳತನದಿಂದ ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
*
ದೇವಸ್ಥಾನದ ಹುಂಡಿಗೆ ಕನ್ನ
‘ಜೈಲಿನಿಂದ ಹೊರಬಂದ ಆರೋಪಿಗಳು, ಬಳ್ಳಾರಿಯ ಮೂಕಾಂಬಿಕಾ ದೇವಸ್ಥಾನಕ್ಕೆ ನುಗ್ಗಿ ಹುಂಡಿಯಲ್ಲಿದ್ದ ₹1.35 ಲಕ್ಷ ನಗದು ದೋಚಿದ್ದರು. ಆ ಬಗ್ಗೆ ಪ್ರಕರಣ ದಾಖಲಾದರೂ ಆರೋಪಿಗಳು ಸಿಕ್ಕಿರಲಿಲ್ಲ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಚಿತ್ರದುರ್ಗ ಜಿಲ್ಲೆಯ ಐಮಂಗಲದ ಗಣೇಶ ದೇವಸ್ಥಾನಕ್ಕೂ ನುಗ್ಗಿದ್ದ ಆರೋಪಿಗಳು, ಅಲ್ಲಿಯ  ಹುಂಡಿಯಲ್ಲಿದ್ದ ₹20 ಸಾವಿರ ಎಗರಿಸಿದ್ದರು. ಆ ಎಲ್ಲ ಕೃತ್ಯಗಳನ್ನು ತಾವೇ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.
*
ಹುಂಡಿ ಹಣದಲ್ಲೇ ಮಾರಕಾಸ್ತ್ರ ಖರೀದಿ
‘ದೇವಸ್ಥಾನ ಹುಂಡಿಯಿಂದ ಕದ್ದಿದ್ದ ಹಣದಿಂದಲೇ ಸಂಡೂರಿನ ವ್ಯಾಪಾರಿಯೊಬ್ಬರ ಬಳಿ ಆರೋಪಿಗಳು, ಮಚ್ಚು, ಲಾಂಗ್‌, ಚಾಕು ಖರೀದಿ ಮಾಡಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

No Comments

Leave A Comment