Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಈಶ್ವರಪ್ಪ ಬ್ರಿಗೇಡ್‌ ಪಟ್ಟು, ಬಿಎಸ್‌ವೈಗೆ ಇಕ್ಕಟ್ಟು

yeddyurappಬೆಂಗಳೂರು: ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಯಾವ ಕಾರಣಕ್ಕೂ ತನ್ನ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆಯಿಂದ ಹಿಂದೆ ಸರಿಯದಿರಲು ಈಶ್ವರಪ್ಪ ತೀರ್ಮಾನಿಸಿದ್ದಾರೆ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಸಂಘಟನೆ ಬಲಪಡಿಸುವ ಉದ್ದೇಶದೊಂದಿಗೆ ಮುಂದಿನ ವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪಕ್ಷದ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಮೂರು ದಿನಗಳ ಕಾಲ ಇದ್ದು ಸಮಾಲೋಚನೆ ನಡೆಸಿ ಉಭಯ ನಾಯಕರ ನಡುವಿನ ತಿಕ್ಕಾಟ ಕೊನೆಗೊಳಿಸಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗುವ ಸಂಭವವೇ ಹೆಚ್ಚು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನೊಂದಿಗೆ ಪಕ್ಷದ ಪದಾಧಿಕಾರಿಗಳು ಗುರುತಿಸಿಕೊಳ್ಳುವಂತಿಲ್ಲ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಫ‌ರ್ಮಾನು ಹೊರಡಿಸಿದ ಬೆನ್ನಲ್ಲೇ ಈಶ್ವರಪ್ಪ ಬ್ರಿಗೇಡ್‌ ಸಂಘಟನೆಯತ್ತ ಹೆಚ್ಚು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಜತೆಗೆ ರಾಮ್‌ಲಾಲ್‌, ಯಡಿಯೂರಪ್ಪ ಸಹಿತ ಯಾರೇ ಆಗಲಿ ತನ್ನ ಬ್ರಿಗೇಡ್‌ ಬಗ್ಗೆ ಪ್ರಶ್ನಿಸಿದರೂ ಅವರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ. ಪರಿಣಾಮ, ಯಡಿಯೂರಪ್ಪ ಅವರೇ ತನ್ನ ಧೋರಣೆ ಬದಲಿಸಿ ಈಶ್ವರಪ್ಪ ಅವರ ಬ್ರಿಗೇಡನ್ನು ಪ್ರತ್ಯಕ್ಷ/ಪರೋಕ್ಷ ವಾಗಿ ಬೆಂಬಲಿಸಬೇಕಾಗಿ ಬರಬಹುದು. ಒಂದು ವೇಳೆ ಬ್ರಿಗೇಡ್‌ನ‌ಲ್ಲಿ ಗುರುತಿಸಿ ಕೊಂಡಿರುವ ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದಲ್ಲಿ ಪರಿಸ್ಥಿತಿ ಬಿಗಡಾಯಿಸುವುದಂತೂ ನಿಶ್ಚಿತ ಎಂಬಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ರಾಜಿ ಸಂಧಾನ ನಡೆಸುವ ಕುರಿತು ಪಕ್ಷದ ಹಲವರು ಪ್ರಯತ್ನ ನಡೆಸಿದರೂ ಅದು ಯಶಸ್ಸು ಕಂಡಿಲ್ಲ. ಈಶ್ವರಪ್ಪ ಆ ಬ್ರಿಗೇಡ್‌ ಬಿಟ್ಟು ಹೊರಬರಬೇಕು ಎಂಬ ಷರತ್ತನ್ನು ಯಡಿಯೂರಪ್ಪ ವಿಧಿಸಿದ್ದಾರೆ. ಈ ಹಂತದಲ್ಲಿ ತಾನು ಬ್ರಿಗೇಡ್‌ ಸಂಘಟನೆ ಬಿಟ್ಟು ಬರುವುದು ಸಾಧ್ಯವಿಲ್ಲದ ಮಾತು.

ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಯಡಿಯೂರಪ್ಪ ಅವರೇ ಸಂಘಟನೆಯನ್ನು ಬೆಂಬಲಿಸಲಿ ಎಂಬ ಸಂದೇಶವನ್ನು ಈಶ್ವರಪ್ಪ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಪಕ್ಷದ ರಾಷ್ಟ್ರೀಯ ಘಟಕದಲ್ಲಿ ಪ್ರಭಾವಿಯಾಗಿರುವ ರಾಮ್‌ಲಾಲ್‌ ಆಗಮಿಸಿ ಮಾತುಕತೆ ನಡೆಸಿದರೂ ಈಶ್ವರಪ್ಪ ಅವರ ನಿಲುವು ಬದಲಾಗುವ ನಿರೀಕ್ಷೆ ಇಲ್ಲ. ಹಾಗೆ ನೋಡಿದರೆ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸುವ ಮೊದಲು ರಾಮ್‌ಲಾಲ್‌ ಅವರಿಗೆ ಮಾಹಿತಿ ನೀಡಿದ್ದರು. ಇದಕ್ಕೆ ರಾಮ್‌ಲಾಲ್‌ ಅವರ ಪರೋಕ್ಷ ಸಹಮತವಿದೆ ಎಂಬ ಮಾತೂ ಕೇಳಿಬಂದಿದೆ. ಪಕ್ಷದ ಎಲ್ಲ ನಾಯಕರೂ ಜಾತಿ ಸಂಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಹೀಗಿರುವಾಗ ನಾನು ಪಾಲ್ಗೊಳ್ಳುವುದಕ್ಕೆ ಯಡಿಯೂರಪ್ಪ ವಿರೋಧಿಸುವುದರಲ್ಲಿ ಅರ್ಥವೇ ಇಲ್ಲ. ಈ ಸಂಘಟನೆಯಿಂದ ಅಂತಿಮವಾಗಿ ಅನುಕೂಲವಾಗುವುದು ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ. ಮೇಲಾಗಿ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಪದಾಧಿಕಾರಿಯೂ ಅಲ್ಲ ಎಂಬ ಸಮಜಾಯಿಷಿಯನ್ನೂ ರಾಮ್‌ಲಾಲ್‌ ಮತ್ತಿತರ ನಾಯಕರಿಗೆ ನೀಡಲು ಈಶ್ವರಪ್ಪ ಸಜ್ಜಾಗಿದ್ದಾರೆ ಎನ್ನಲಾಗಿದೆ.

No Comments

Leave A Comment