Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಭಾರತದ ಸಿಡಿಲಮರಿಗೆ ಪ್ಯಾರಾಲಿಂಪಿಕ್ಸ್‌ ಚಿನ್ನದ ಗರಿ

mariyappaರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್‌ ಕಳಪೆ ಪ್ರದರ್ಶನದ ನೆನಪಿನಲ್ಲೇ ಇದ್ದ ಭಾರತೀಯರಿಗೆ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಸಂಭ್ರಮದ ಸುದ್ದಿ ಸಿಕ್ಕಿದೆ. ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತದ ಇಬ್ಬರು ಸ್ಪರ್ಧಿಗಳು ಮೊದಲ ಬಾರಿಗೆ ಒಂದೇ ಪದಕ ವೇದಿಕೆಯಲ್ಲಿ ನಿಂತು ರಾಷ್ಟ್ರಧ್ವಜ ಹಾರಿಸಿದ್ದಾರೆ.

5ನೇ ವರ್ಷದಲ್ಲೇ ಬಸ್ಸು ಹರಿದು ಕಾಲು ಕಳೆದುಕೊಂಡಿದ್ದ ತಮಿಳುನಾಡಿನ ಮರಿಯಪ್ಪನ್‌ ತಂಗವೇಲು ಎತ್ತರ ಜಿಗಿತದಲ್ಲಿ ಚಿನ್ನ, ಪೋಲಿಯೋ ರೋಗಕ್ಕೆ ತುತ್ತಾಗಿದ್ದ ಉತ್ತರ ಪ್ರದೇಶದ ವರುಣ್‌ ಸಿಂಗ್‌ ಭಾಟಿ ಕಂಚು ಗೆದ್ದಿದ್ದಾರೆ. ಮರಿಯಪ್ಪನ್‌ ಚಿನ್ನ ಸಾಧನೆ ಭಾರತದ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಕೇವಲ 3ನೇಯದ್ದು ಎನ್ನುವುದು ಗಮನಾರ್ಹ.

ಮರಿಯಪ್ಪನ್‌ ತಂಗವೇಲು 1.89 ಮೀ. ನೆಗೆತದ ಸಾಧನೆಯೊಂದಿಗೆ ಸ್ವರ್ಣ ಪದಕದಿಂದ ಸಿಂಗಾರಗೊಂಡರು. ಈ ಸಾಧನೆಯ ವೇಳೆ ತಂಗವೇಲು ಅಮೆರಿಕದ ವಿಶ್ವದಾಖಲೆಯ ವೀರ ಸ್ಯಾಮ್‌ ಗ್ರೂé ಅವರನ್ನು ಹಿಂದಿಕ್ಕಿದ್ದರು. ಸ್ಯಾಮ್‌ 1.86 ಮೀ. ನೆಗೆತದೊಂದಿಗೆ ರಜತ ಪದಕ ಜಯಿಸಿದರು. ಇಷ್ಟೇ ಎತ್ತರದ ಸಾಧನೆಯೊಂದಿಗೆ ಸ್ಪರ್ಧೆ ಮುಗಿಸಿದ ಗ್ರೇಟರ್‌ ನೋಯ್ಡಾದ ವರುಣ್‌ ಭಾಟಿ ಕಂಚಿಗೆ ಸಮಾಧಾನಪಡಬೇಕಾಯಿತು.

ಹೀಗೆ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಇಬ್ಬರು ಸ್ಪರ್ಧಿಗಳು ಮೊದಲ ಸಲ ಪದಕ ವೇದಿಕೆ ಮೇಲೆ ಒಟ್ಟಿಗೇ ಕಾಣಿಸಿಕೊಂಡರು.

6 ಮಂದಿಯ ತೀವ್ರ ಸ್ಪರ್ಧೆ: ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೂಬ್ಬ ಸ್ಪರ್ಧಿ ಶರದ್‌ ಕುಮಾರ್‌ ಪೋಡಿಯಂ ಏರುವಲ್ಲಿ ವಿಫ‌ಲರಾದರು. ಒಂದು ಹಂತದಲ್ಲಿ ಶರದ್‌ 1.55 ಮೀ. ಹಾಗೂ 1.60 ಮೀ. ಸಾಧನೆಯೊಂದಿಗೆ ಮುಂಚೂಣಿಯಲ್ಲಿದ್ದರು. ಆದರೆ ಅವರ ಶ್ರೇಷ್ಠ ನೆಗೆತ 1.77 ಮೀ.ಗೆ ಸೀಮಿತಗೊಂಡಿತು. ಹೀಗಾಗಿ ಶರದ್‌ 6ನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು. ಹನ್ನೆರಡರಲ್ಲಿ 6 ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. ಮೊದಲ 7 ಅವಕಾಶಗಳಲ್ಲಿ ಇವರೆಲ್ಲ 1.74 ಮೀ. ನೆಗೆತವನ್ನು ಯಶಸ್ವಿಯಾಗಿ ಪೂರೈಸಿದ್ದರು. 10ನೇ ಅವಕಾಶದಲ್ಲಿ ತಂಗವೇಲು 1.77 ಮೀ. ಜಿಗಿತವನ್ನು ಯಶಸ್ವಿಯಾಗಿ ಪೂರೈಸಿದರು.

ಇವರೊಂದಿಗೆ ಶರದ್‌ ಕುಮಾರ್‌ ಸಹಿತ, ಪೋಲೆಂಡ್‌ ಮತ್ತು ಚೀನಾದ ಮೂವರು ಸಾಧಕರಿದ್ದರು. ಅಂತಿಮವಾಗಿ ಸ್ಪರ್ಧೆಯನ್ನು ಮೂವರಿಗೆ ಸೀಮಿತಗೊಳಿಸಿದಾಗ ಭಾಟಿ 1.83 ಮೀ. ಜಂಪ್‌ನೊಂದಿಗೆ ತಂಗವೇಲು ಜತೆ ಸರಿಸಮಾನರಾಗಿ ಕಾಣಿಸಿಕೊಂಡರು. ಇನ್ನೇನು ಭಾರತ ಚಿನ್ನ ಹಾಗೂ ಬೆಳ್ಳಿ ಎರಡನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತದೆ ಎನ್ನುವಾಗಲೇ ಅಮೆರಿಕದ ಸ್ಯಾಮ್‌ 1.86 ಮೀ. ಸಾಧನೆ ದಾಖಲಿಸಿ ಅಗ್ರಸ್ಥಾನಕ್ಕೇರಿದರು. ಸ್ಪರ್ಧೆ ತೀವ್ರಗೊಂಡಿತು. ಬಳಿಕ ಭಾರತೀಯರಿಬ್ಬರೂ ಈ ಎತ್ತರವನ್ನು ಸರಿದೂಗಿಸಿದರು. ಕೊನೆಯಲ್ಲಿ ತಂಗವೇಲು 1.89 ಮೀ. ಜಂಪ್‌ ಮಾಡಿ ಚಿನ್ನಕ್ಕೆ ಕೈಚಾಚಿದರು.

No Comments

Leave A Comment