Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಈಗ ವಯಸ್ಸು 22 ಏನ್ಮಾಡ್ಲಿ!12 ವರ್ಷಕ್ಕೆ ಮಾರಾಟ, ರೇಪ್, ನರಕಯಾತನೆ

Child-trಹೊಸದಿಲ್ಲಿ : ಆಕೆಗೆ ಆಗ ಇನ್ನೂ 12ರ ಹರೆಯ. ದಿಲ್ಲಿಯ ಹಳೆ ಮನೆಗಳ ಸಾಲಿನಲ್ಲಿ ಆಕೆಯ ಮನೆ. ಯಾವುದೋ ಕೆಲವು ಆಹಾರ ಸಾಮಗ್ರಿ ತರಲೆಂದು ಜನನಿಬಿಡ ಮಾರುಕಟ್ಟೆಗೆ ಹೋಗಿದ್ದಳು. ಇದ್ದಕ್ಕಿದ್ದಂತೆಯೇ ಆಕೆಯ ಕಣ್ಣು, ಬಾಯಿ, ಮುಖವನ್ನು ಅದ್ಯಾರೋ ಬಲವಂತವಾಗಿ ಮುಚ್ಚಿದರು. ಸ್ವಲ್ಪವೇ ಹೊತ್ತಿನಲ್ಲಿ ಆಕೆ ಕಣ್ತೆದರೆದಾಗ ಆಕೆಯ ಮುಂದೆ ನರಕವೇ ಇತ್ತು !

ಆ ಕೋಣೆ ತುಂಬಾ ಹುಡುಗಿಯರಿದ್ದರು. ಸಣ್ಣ ಪ್ರಾಯದವರು, ದೊಡ್ಡ ಪ್ರಾಯದವರು. ಕೆಲವರು ಅಳುತ್ತಿದ್ದರು; ಇನ್ನು ಕೆಲವು ಪ್ರಜ್ಞಾಹೀನರಾಗಿ ಬಿದ್ದುಕೊಂಡಿದ್ದರು.

ಆಗ ಯಾರೋ ಮೆಲು ಧ್ವನಿಯಲ್ಲಿ  ಆಕೆಗೆ ಹೇಳಿದರು : ನೀನೀಗ ಇರುವುದು ಅಂಬಾಲಾದಲ್ಲಿ ಮತ್ತು ಸದ್ಯದಲ್ಲೇ ನಿನ್ನನ್ನು ಮಾರಲಾಗುತ್ತದೆ.

ಅದಾಗಿ ಹತ್ತು ವರ್ಷಗಳಾಗಿವೆ. ಈಗ ಆಕೆಗೆ 22 ವರ್ಷ ಪ್ರಾಯ. ಆದರೆ ನೋಡಲು ಬಹುತೇಕ ಮುದುಕಿಯಂತೆ ಕಾಣಿಸುತ್ತಾಳೆ; ಕಾರಣ : ಆಕೆಯ ಮೈತುಂಬ ಕಲೆಗಳು, ಸುಟ್ಟು ಗಾಯಗಳ ಕಲೆಗಳು, ಕಚ್ಚಿ ಮಾಡಿದ ಗಾಯಗಳು. ಇಂಜೆಕ್ಷನ್‌ ನೀಡಲಾದ ಕುರುಹುಗಳು ಮತ್ತು ಇತರ ಹಲವು ಬಗೆಯಲ್ಲಿ ಲೈಂಗಿಕ ಚಿತ್ರಹಿಂಸೆ ನೀಡಲಾದ ಗುರುತುಗಳು !

ಕಳೆದ ಹತ್ತು ವರ್ಷಗಳಲ್ಲಿ ಆಕೆಯ ಮೇಲೆ ನಡೆದ ಅತ್ಯಾಚಾರಗಳು, ಲೈಂಗಿಕ ಕಿರುಕುಳಗಳು, ಬಲವಂತದಿಂದ ಕುಡಿಸಲಾದ ಮಾದಕ ದ್ರವ್ಯಗಳು – ಲೆಕ್ಕವಿಲ್ಲದಷ್ಟು ದೌರ್ಜನ್ಯಗಳು. ಈ ಎಲ್ಲದರ ನಡುವೆ ಆಕೆಗೆ ಇಬ್ಬರು ಮಕ್ಕಳು ಕೂಡ ಹುಟ್ಟಿದ್ದಾರೆ; ಆದರೆ ಅವರನ್ನು ಆಕೆಯಿಂದ ಬೇರ್ಪಡಿಸಲಾಗಿದೆ ! ಕಳೆದ ಹತ್ತು ವರ್ಷಗಳಲ್ಲಿ ತಾನು ಪಟ್ಟ ನರಕ ಯಾತನೆಯನ್ನು ಆಕೆ ಹೀಗೆ ವಿವರಿಸುತ್ತಾಳೆ :

ನನ್ನನ್ನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕನಿಷ್ಠ 9 ಮಂದಿಗೆ 15ರಿಂದ 20,000 ರೂ. ಬೆಲೆಗೆ ಮಾರಲಾಗಿದೆ. ನನ್ನನ್ನು ಕೊಂಡವರಲ್ಲಿ ಕೆಲವರು ನನಗೆ ಬಲವಂತದಿಂದ ಮಾದಕ ದ್ರವ್ಯ ಕುಡಿಸಿದ್ದಾರೆ, ಹಾರ್ಮೋನ್‌ ಇಂಜೆಕ್ಷನ್‌ಗಳನ್ನು ಚುಚ್ಚಿದ್ದಾರೆ.

ಪ್ರತೀ ಸಲ ನಾನು ಕಣ್ತೆರೆದು ನೋಡಿದಾಗ ಯಾವ್ಯಾವುದೋ ಸ್ಥಳಗಳಲ್ಲಿ ಇರುತ್ತಿದ್ದೆ. ಕಳೆದ ತಿಂಗಳಲ್ಲಿ ನಾನು ಹೇಗೋ ಕಷ್ಟಪಟ್ಟು ನನ್ನ ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡೆ; ಬಾರ್‌ ಡ್ಯಾನ್ಸರ್‌ ಒಬ್ಟಾಕೆ ನನಗೆ ನೆರವಾದಳು. ದಶಕದ ಬಳಿಕ ನಾನು ನನ್ನ ತಾಯಿಯನ್ನು ಮತ್ತೆ ಸೇರುವಲ್ಲಿ ಆಕೆಯೇ ಸಹಾಯ ಮಾಡಿದಳು. ನನಗೆ ಒಟ್ಟು ಎಂಟು ಜನ ತಂಗಿಯರು. ಆದರೆ ದುರಂತವೆಂಬಂತೆ ಅವರೆಲ್ಲರೂ, ನನ್ನಂತೆಯೇ, ತಾಯಿಯಿಂದ ದೂರವಾಗಿದ್ದಾರೆ !

ನನ್ನ ಅಪಹರಿಸಿದವರು ಅಥವಾ ಕ್ರಯಕೊಟ್ಟು ತೆಗೆದುಕೊಂಡವರು ನನಗೆ ಅನ್ನಾಹಾರ ನೀಡದೆ ಹೊಲ ಗದ್ದೆಗಳಲ್ಲಿ ದುಡಿಸಿಕೊಳ್ಳುತ್ತಿದ್ದರು. ರಾತ್ರಿ ಹೊತ್ತು ನನಗೆ ಕೊಡಲಾಗುವ ಆಹಾರದಲ್ಲಿ ಅಮಲನ್ನು ಸೇರಿಸಲಾಗುತ್ತಿತ್ತು. ಹಾಗಾಗಿ ನನ್ನ ಪ್ರತಿರೋಧವಿಲ್ಲದೆ ಅನೇಕರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದರು.

ನಾನು ಅಪಹರಿಸಲ್ಪಟ್ಟು 3 ವರ್ಷಗಳ ಬಳಿಕ ಯಾರೋ ನನ್ನನ್ನು 66 ವರ್ಷ ಪ್ರಾಯದ ವ್ಯಕ್ತಿಯೊಬ್ಬನಿಗೆ ಚಿನ್ನ ಪಡೆದು ಮಾರಿದರು. ಗುರುದ್ವಾರವೊಂದರಲ್ಲಿ ನನ್ನ ಮದುವೆ ನಡೆಯಿತು. ನಾನು ಈಗಿರುವಂತೆ 15 ವರ್ಷ ಪ್ರಾಯದಷ್ಟು ದೊಡ್ಡವಳಾಗಿ ಕಾಣುವುದಕ್ಕಾಗಿ ನನಗೆ ಹಾರ್ಮೋನ್‌ ಇಂಜೆಕ್ಷನ್‌ ಚುಚ್ಚಿಸಲಾಯಿತು.

ನನಗೆ ನನ್ನ ಪತಿಯಿಂದ ವರ್ಷದೊಳಗೆ ಗಂಡು ಮಗು ಹುಟ್ಟಿತು. ಎರಡು ವರ್ಷಗಳ ಬಳಿಕ ಇನ್ನೊಂದು ಗಂಡು ಮಗು ಹುಟ್ಟಿತು. ಅದಾಗಿ ನನ್ನ ಗಂಡ ತೀರಿಕೊಂಡ. ಗಂಡನ ತಮ್ಮಂದಿರು ನನ್ನ ಮೇಲೆ ದಿನ ನಿತ್ಯ ಎಂಬಂತೆ ಅತ್ಯಾಚಾರ ಎಸಗುತ್ತಿದ್ದರು.

ಗಂಡನ ತಂಗಿ ನನ್ನ ಮೊದಲನೇ ಗಂಡು ಮಗುವನ್ನು ತಾನೇ ಇರಿಸಿಕೊಂಡಳು. ಇನ್ನೊಂದು ಗಂಡು ಮಗುವನ್ನು, ನನ್ನ ಜತೆಗೆ ಯಾರಿಗೋ ಮಾರಿದಳು. ನಾನು ಯಾರ್ಯಾರದೋ ಮನೆಗಳಲ್ಲಿ, ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದೆ. ಕಾಯಿಲೆ ಬೀಳುತ್ತಿದ್ದೆ. ಹಾಗಾಗಿ ನನ್ನನ್ನು ಮತ್ತೆ ಯಾರಿಗೋ ಮಾರಲಾಯಿತು.

ಈಗ ನನ್ನ ಬದುಕಿನಲ್ಲಿ ಏನೂ ಉಳಿದಿಲ್ಲ; ನನ್ನ ಇಬ್ಬರು ಗಂಡು ಮಕ್ಕಳನ್ನೂ ನನ್ನಿಂದ ಕಸಿದು ಕೊಳ್ಳಲಾಗಿದೆ. ನಾನೀಗ ತಾಯಿಯ ಜತೆಗೆ ಇದ್ದೇನೆ. 22ರ ಹರೆಯದವಳಾಗಿದ್ದೂ ಮುದುಕಿಯಾಗಿ ಹೋಗಿದ್ದೇನೆ. ನನ್ನ ಮಕ್ಕಳನ್ನು ನನಗೆ ಮರಳಿಸುವುದಕ್ಕೆ ಯಾರಾದರೂ ಸಹಾಯ ಮಾಡಬೇಕು ಎಂದು ನಾನು ಪ್ರಾರ್ಥಿಸುತ್ತೇನೆ. ಮಾನವ ಕಳ್ಳಸಾಗಣೆದಾರರಿಂದಾಗಿ ನನ್ನ ಬದುಕು ನರಕ ಪ್ರಾಯವಾಯಿತು…..’

ಅಂದ ಹಾಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದಿನನಿತ್ಯ ಎಂಬಂತೆ 22 ಮಕ್ಕಳು ನಾಪತ್ತೆಯಾಗುತ್ತಿದ್ದಾರೆ.ಇವರಲ್ಲಿ ಹೆಚ್ಚಿನವರು ಹುಡುಗಿಯರೇ ಆಗಿದ್ದು ಅವರ ವಯಸ್ಸು 8ರಿಂದ 15 ವರ್ಷ ಇರುವುದು ಸಾಮಾನ್ಯವಾಗಿದೆ. ದಿಲ್ಲಿ ಪೊಲೀಸರ ಪ್ರಕಾರ ಕಳೆದ ವರ್ಷ ಇಲ್ಲಿ ನಾಪತ್ತೆಯಾದ ಮಕ್ಕಳ ಸಂಖ್ಯೆ 2,683 !

 

No Comments

Leave A Comment