Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

ಕಾಶ್ಮೀರ ಬಿಕ್ಕಟ್ಟು ಶಮನಕ್ಕೆ ಮೆಹಬೂಬ ಮೂರು ಸೂತ್ರ

kashshshsನವದೆಹಲಿ/ ಶ್ರೀನಗರ (ಪಿಟಿಐ): ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮೂರು ಸೂತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಇಟ್ಟಿದ್ದಾರೆ.

ಸಂಧಾನ ಮಾತುಕತೆಯಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನವನ್ನು ಸೇರಿಸಿಕೊಳ್ಳುವುದು  ಮೆಹಬೂಬ ಅವರು ಪ್ರಧಾನಿ  ಎದುರಿಟ್ಟಿರುವ ಸೂತ್ರಗಳಲ್ಲಿ ಪ್ರಮುಖವಾದುದು ಎಂದು ಗೊತ್ತಾಗಿದೆ.

ಸರ್ವ ಪಕ್ಷಗಳ ನಿಯೋಗವನ್ನು ಕಾಶ್ಮೀರಕ್ಕೆ ಕಳುಹಿಸುವುದು, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರನ್ನು ಬದಲಿಸುವುದು, ಶಾಂತಿ ಸ್ಥಾಪನೆ ವಿಚಾರದಲ್ಲಿ ಸಂಬಂಧಪಟ್ಟ ಎಲ್ಲರ ಜತೆ ಮಾತುಕತೆಗೆ ಸಂಧಾನಕಾರರೊಬ್ಬರನ್ನು ನೇಮಿಸಬೇಕು ಎಂಬ ಕೋರಿಕೆಯೂ ಸಂಧಾನ ಸೂತ್ರದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಪ್ರಧಾನಿ ಅವರನ್ನು ಭೇಟಿಯಾದ ಮೆಹಬೂಬ ಸಂಧಾನ ಸೂತ್ರಗಳ ಬಗ್ಗೆ ವಿವರಣೆ ನೀಡಿದ್ದಾರೆ. ಕಾಶ್ಮೀರದಲ್ಲಿ ಹಿಂಸಾಚಾರ ಆರಂಭವಾದ (ಜುಲೈ 8) ಬಳಿಕ ಮೆಹಬೂಬ ಮತ್ತು ಪ್ರಧಾನಿ ನಡುವಿನ ಮೊದಲ ಮಾತುಕತೆ ಇದಾಗಿದೆ. ಇಬ್ಬರೂ ಸಮಾರು 45 ನಿಮಿಷ ಚರ್ಚೆ ನಡೆಸಿದರು.

‘ಕಾಶ್ಮೀರ ಹಿಂಸಾಚಾರದ ಬಗ್ಗೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಮತ್ತೆ ಶಾಂತಿ ನೆಲೆಸಬೇಕೆಂಬುದು ಅವರ ಬಯಕೆ’ ಎಂದು ಪ್ರಧಾನಿ ಭೇಟಿಯ ಬಳಿಕ ಮೆಹಬೂಬ ಸುದ್ದಿಗಾರರಿಗೆ ತಿಳಿಸಿದರು.

‘ಕಾಶ್ಮೀರದಲ್ಲಿರುವ ಎಲ್ಲ ಪಕ್ಷಗಳು ಮತ್ತು ಸಂಘಟನೆಗಳ ನಾಯಕರ ಜತೆ ಮಾತುಕತೆ ನಡೆಯಬೇಕು. ಇದಕ್ಕಾಗಿ  ಕಾಶ್ಮೀರದ ಜನರ ನಂಬಿಕೆಗೆ ಅರ್ಹರಾದ ವ್ಯಕ್ತಿಯನ್ನು ಸಂಧಾನಕಾರರಾಗಿ ನೇಮಿಸಬೇಕು. ಸಂಧಾನ ಪ್ರಕ್ರಿಯೆಗೆ ಸಾಂಸ್ಥಿಕ ರೂಪ ನೀಡುವುದು ಅಗತ್ಯ’ ಎಂದು ಮೆಹಬೂಬ ಹೇಳಿದ್ದಾರೆ.

ಸರ್ವಪಕ್ಷಗಳ ನಿಯೋಗ ಸೆಪ್ಟೆಂಬರ್‌ ಮೊದಲ ವಾರ ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಆ ಬಳಿಕ ಸಂಧಾನಕಾರರನ್ನು ನೇಮಿಸುವ ಸಾಧ್ಯತೆಯಿದೆ.
ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಧಾನಕ್ಕೆ ಬರಬೇಕು ಎಂದು ಪ್ರತ್ಯೇಕತಾವಾದಿ ಮುಖಂಡರಿಗೆ ಮೆಹಬೂಬ ಮನವಿ ಮಾಡಿದ್ದಾರೆ.

ಹಿಜ್ಬುಲ್‌ ಮುಜಾಹಿದೀನ್ ಕಮಾಂಡರ್‌ ಬುರ್ಹಾನಿ ವಾನಿ ಹತ್ಯೆಯ  ಬಳಿಕ ಭುಗಿಲೆದ್ದ ಹಿಂಸಾಚಾರಕ್ಕೆ ಕಣಿವೆ ರಾಜ್ಯದಲ್ಲಿ ಇದುವರೆಗೆ 68 ಮಂದಿ ಬಲಿಯಾಗಿದ್ದಾರೆ.

ಒಂದು ಅವಕಾಶ ನೀಡಿ: ‘ನಿಮ್ಮ ಎಲ್ಲ ಆತಂಕಗಳನ್ನು ನಿವಾರಣೆ ಮಾಡಿ ಆಶೋತ್ತರಗಳನ್ನು ಈಡೇರಿಸಲು ನನಗೆ ಒಂದು ಅವಕಾಶ ನೀಡಿ. ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸುತ್ತೇನೆ’  ಎಂದು ಮೆಹಬೂಬ ಕಾಶ್ಮೀರದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಗಿಲಾನಿ ಬಂಧನ: ಗೃಹಬಂಧನ ಆಜ್ಞೆ ಉಲ್ಲಂಘಿಸಿ ಮೆರವಣಿಗೆಗೆ ಮುಂದಾದ ಹುರ್ರಿಯತ್‌ ಕಾನ್ಫರೆನ್ಸ್‌ ನಾಯಕ ಸೈಯದ್‌ ಅಲಿ ಶಾ ಗಿಲಾನಿ ಅವರನ್ನು ಪೊಲೀಸರು ಶನಿವಾರ ಶ್ರೀನಗರದಲ್ಲಿ ಬಂಧಿಸಿದ್ದಾರೆ.

ಗಿಲಾನಿ ಇತರ ಪ್ರತ್ಯೇಕತಾವಾದಿ ನಾಯಕರೊಂದಿಗೆ ಬಾದಾಮಿಬಾಗ್‌ನಲ್ಲಿರುವ ಸೇನೆಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಂಡಿದ್ದರು.

ಪಿಡಿಪಿ ಮನವಿ:ಕಾಶ್ಮೀರದ ಜನರ ಆಶೋತ್ತರಗಳನ್ನು ಈಡೇರಿಸಲು ಮೆಹಬೂಬ ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷವು (ಪಿಡಿಪಿ) ಗಿಲಾನಿ ಅವರಿಗೆ ಮನವಿ ಮಾಡಿದೆ.

‘ಮೆಹಬೂಬಾ ಅವರು ನಿಮಗೆ ಮಗಳಿದ್ದಂತೆ. ಶಾಂತಿ ಸ್ಥಾಪಿಸಲು ಅವರಿಗೆ ಸಹಕರಿಸಿ’ ಎಂದು ಪಿಡಿಪಿ ವಕ್ತಾರ ಮೆಹಬೂಬ್‌ ಬೇಗ್‌ ಹೇಳಿದ್ದಾರೆ.
*
‘ಹಿಂಸೆಗೆ ಪಾಕಿಸ್ತಾನದಿಂದ ಕುಮ್ಮಕ್ಕು’
ನವದೆಹಲಿ (ಪಿಟಿಐ):
 ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆ ವ್ಯಾಪಿಸಲು ಪಾಕಿಸ್ತಾನವೇ ಕಾರಣ ಎಂದು ಮೆಹಬೂಬ ನೆರೆಯ ದೇಶವನ್ನು ನೇರವಾಗಿ ಟೀಕಿಸಿದ್ದಾರೆ.

‘ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನತೆ ಸೃಷ್ಟಿಸಲು ಪಾಕಿಸ್ತಾನ ಬಹಿರಂಗವಾಗಿ ಪ್ರಚೋದನೆ ನೀಡುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಪಾಕಿಸ್ತಾನಕ್ಕೆ ಕಾಶ್ಮೀರದ ಜನರ ಮೇಲೆ ನಿಜವಾದ ಕಳಕಳಿಯಿದ್ದರೆ, ಯುವಕರನ್ನು ಹಿಂಸೆಗೆ ಪ್ರಚೋದಿಸುವ ಬದಲು ಶಾಂತಿ ನೆಲೆಸಲು ಸಹಕರಿಸಲಿ’ ಎಂದಿದ್ದಾರೆ.  ಪಾಕಿಸ್ತಾನದ ಜತೆ ಸಂಧಾನ ಮಾತುಕತೆ ಮುಂದುವರಿಸಲು ಪ್ರಯತ್ನಿಸಿದ ಮೋದಿ ಮತ್ತು ಗೃಹಸಚಿವ ರಾಜನಾಥ್‌ ಸಿಂಗ್‌ ಅವರನ್ನು ಮೆಹಬೂಬ ಶ್ಲಾಘಿಸಿದರು.

‘ಮೋದಿ ಪ್ರಮಾಣವಚನ ಸಮಾರಂಭಕ್ಕೆ ನವಾಜ್‌ ಷರೀಫ್‌ ಅವರನ್ನು ಆಹ್ವಾನಿಸುವ ಮೂಲಕ ಪಾಕ್‌ ಜತೆ ಸ್ನೇಹ ಹಸ್ತ ಚಾಚಿದ್ದರು. ದುರದೃಷ್ಟವೆಂದರೆ ಅದರ ಬೆನ್ನಲ್ಲೇ ಪಠಾಣ್‌ಕೋಟ್‌ ಮೇಲಿನ ದಾಳಿ ನಡೆಯಿತು.

‘ಕಾಶ್ಮೀರದಲ್ಲಿ ಹಿಂಸಾಚಾರ ಹರಡಲು ಪಾಕಿಸ್ತಾನ ಪ್ರಚೋದನೆ ನೀಡುತ್ತಿರುವುದರ ಮಧ್ಯೆಯೇ ಗೃಹ ಸಚಿವ ರಾಜನಾಥ್‌ ಸಿಂಗ್‌ ಆ ದೇಶಕ್ಕೆ ಭೇಟಿ ಕೊಟ್ಟಿದ್ದರು. ಆದರೆ ಭಾರತದ ಜತೆ ಶಾಂತಿ ಮಾತುಕತೆ ಮುಂದುವರಿಸಲು ಲಭಿಸಿದ್ದ ಚಿನ್ನದಂತಹ ಅವಕಾಶವನ್ನು ಪಾಕ್‌ ಮತ್ತೆ ಹಾಳುಮಾಡಿಕೊಂಡಿತು. ಒಬ್ಬ ಅತಿಥಿಗೆ  ತೋರಿಸಬೇಕಾದ ಗೌರವವನ್ನೂ ಗೃಹಸಚಿವರಿಗೆ ತೋರಿಸಲಿಲ್ಲ’ ಎಂದು ನೆರೆಯ ರಾಷ್ಟ್ರವನ್ನು ದೂರಿದರು.

ಒವೈಸಿ ಸಲಹೆ: ಕಾಶ್ಮೀರದಲ್ಲಿರುವ ಆತಂಕಕಾರಿ ಸ್ಥಿತಿಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರವು ಸಂಬಂಧಪಟ್ಟವರ ಎಲ್ಲರೊಂದಿಗೆ ಶೀಘ್ರ ಮಾತುಕತೆ ನಡೆಸಬೇಕೆಂದು ಅಖಿಲ ಭಾರತ ಮಜ್ಲಿಸ್‌–ಇ–ಇತೆಹಾದುಲ್‌ ಮುಸ್ಲಿಮೀನ್‌ನ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಶನಿವಾರ ಆಗ್ರಹಿಸಿದರು.

ಕಾಶ್ಮೀರದಲ್ಲಿ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ), ವಿರೋಧ ಪಕ್ಷವಾದ ನ್ಯಾಷನಲ್‌ ಕಾನ್ಫರೆನ್‌್ಸ (ಎನ್‌ಸಿ) ಮತ್ತು ಹುರಿಯತ್‌ ನಾಯಕರು ನೆಲೆ ಕಳೆದುಕೊಂಡಿದ್ದಾರೆ. ಶಾಂತಿ ಮರುಸ್ಥಾಪನೆಗೆ ಯಾರ ಜತೆ ಮಾತುಕತೆ ನಡೆಸಬೇಕೆಂದು ತಿಳಿಯಲಾಗದ ಸ್ಥಿತಿಯಲ್ಲಿ ಸರ್ಕಾರ ಇದೆ ಎಂದು ಒವೈಸಿ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಸರ್ಕಾರ ಕೂಡಲೇ ಮಾತುಕತೆಗೆ ಮುಂದಾಗಬೇಕು ಎಂದು ಹೈದರಾಬಾದ್‌ನ ಸಂಸದರೂ ಆಗಿರುವ ಒವೈಸಿ ಅವರು ಒತ್ತಾಯಿಸಿದರು.
*
ಪಾಕ್‌ನಿಂದ 22 ರಾಯಭಾರಿಗಳ ನೇಮಕ
ಇಸ್ಲಾಮಾಬಾದ್‌ (ಪಿಟಿಐ):
 ಕಾಶ್ಮೀರ ವಿಷಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖವಾಗಿ ಬಿಂಬಿಸಲು ಪಾಕಿಸ್ತಾನ ತನ್ನ 22 ಸಂಸದರನ್ನು ವಿಶೇಷ ರಾಯಭಾರಿಗಳನ್ನಾಗಿ ನೇಮಿಸಿದೆ ಎಂದು ಪ್ರಧಾನಿ ನವಾಜ್‌ ಷರೀಫ್‌ ಶನಿವಾರ ಹೇಳಿದ್ದಾರೆ.

‘ವಿಶೇಷ ರಾಯಭಾರಿಗಳು ತಮ್ಮ ಪ್ರಯತ್ನದ ಬಗ್ಗೆ ಮಾಹಿತಿ ನೀಡಬೇಕು, ಈ ಮಾಹಿತಿ ಆಧರಿಸಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಅಧಿವೇಶನದ  ವೇಳೆ ಕಾಶ್ಮೀರ ವಿಷಯವನ್ನು  ಪ್ರಸ್ತಾಪಿಸುವುದಾಗಿ ಷರೀಫ್‌ ಹೇಳಿದ್ದಾರೆ ’ ಎಂದು ಪಾಕಿಸ್ತಾನ ರೇಡಿಯೊ ವರದಿ ಮಾಡಿದೆ.

‘ಕಾಶ್ಮೀರ ಸಮಸ್ಯೆ ಬಗೆಹರಿಸುವಲ್ಲಿ ಎಡವಿರುವುದು ವಿಶ್ವಸಂಸ್ಥೆಯ ಬಹು ದೊಡ್ಡ ವೈಫಲ್ಯ. ‘ಕಾಶ್ಮೀರ ಆಡಳಿತದ ಬಗ್ಗೆ ಅಲ್ಲಿಯ ಜನರು ಸ್ವಯಂನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆ ಹಿಂದೆ ಹೇಳಿತ್ತು. ಅದನ್ನು ನಾವು ಮತ್ತೊಮ್ಮೆ  ನೆನಪಿಸುತ್ತಿದ್ದೇವೆ’ ಎಂದು  ಅವರು ಸ್ಪಷ್ಟಪಡಿಸಿದ್ದಾರೆ.

No Comments

Leave A Comment