Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಜಿಗಿಶಾ ಮರ್ಡರ್ ಕೇಸ್; ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ ಶಿಕ್ಷೆ

jigishaನವದೆಹಲಿ: 2009ರಲ್ಲಿ ನಡೆದಿದ್ದ ಕಾಲ್ ಸೆಂಟರ್ ಉದ್ಯೋಗಿ ಜಿಗಿಶಾ ಘೋಷ್ ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಇಬ್ಬರಿಗೆ ಮರಣದಂಡನೆ ಹಾಗೂ ಮತ್ತೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

2009ರಲ್ಲಿ ಜಿಗಿಶಾ ಘೋಷ್ ಅವರನ್ನು ಕಿಡ್ನಾಪ್ ಮಾಡಿ ದರೋಡೆ ನಡೆಸಿ ಹತ್ಯೆಗೈದಿದ್ದ ಪ್ರಕರಣದಲ್ಲಿ ರವಿ ಕಪೂರ್, ಅಮಿತ್ ಶುಕ್ಲಾ ಹಾಗೂ ಬಲ್ಜೀತ್ ಸಿಂಗ್ ಮಲಿಕ್ ಸೇರಿ ಮೂವರನ್ನು ದೋಷಿ ಎಂದು ಶನಿವಾರ ದೆಹಲಿಯ ಸಾಕೇತ್ ಕೋರ್ಟ್ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.

ಪ್ರಕರಣದಲ್ಲಿ ಮೂವರಿಗೂ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಮೋಹನ್ ಕೋರ್ಟ್ ನಲ್ಲಿ ವಾದ ಮಂಡಿಸಿ ಮನವಿ ಮಾಡಿಕೊಂಡಿದ್ದರು.

ಆ ನಿಟ್ಟಿನಲ್ಲಿ ರವಿ ಕಪೂರ್ ಹಾಗೂ ಅಮಿತ್ ಶುಕ್ಲಾಗೆ ಅಡಿಷನಲ್ ಸೆಷನ್ಸ್ ಜಡ್ಜ್ ಸಂದೀಪ್ ಯಾದವ್ ಮರಣದಂಡನೆ ವಿಧಿಸಿದ್ದರೆ, ಬಲ್ಜೀತ್ ಸಿಂಗ್ ಮಲಿಕ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಈ ಆರೋಪಿಗಳು ಇಂಡಿಯಾ ಟುಡೇ ಗ್ರೂಪ್ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹಾಗೂ ಕಾರು ಚಾಲಕನ ಹತ್ಯೆ ಪ್ರಕರಣದಲ್ಲಿಯೂ ವಿಚಾರಣೆ ಎದುರಿಸುತ್ತಿದ್ದಾರೆ.

ಏನಿದು ಪ್ರಕರಣ: 28 ವರ್ಷದ ಜಿಗಿಶಾ ಘೋಷ್ ಅವರು ಹೆವಿಟ್ ಅಸೋಸಿಯೇಟ್ಸ್ ಪ್ರೈ ಲಿಮಿಟೆಡ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2009ರ ಮಾರ್ಚ್ 18ರಂದು ದಕ್ಷಿಣ ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ಕಚೇರಿ ಕ್ಯಾಬ್ ನಲ್ಲಿ ಜಿಗಿಶಾಗೆ ಡ್ರಾಪ್ ನೀಡಿದ ಬಳಿಕ ಆಕೆಯನ್ನು ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಕಿಡ್ನಾಪ್ ಮಾಡಿ ಕೊಲೆಗೈಯಲಾಗಿತ್ತು. 2009ರ ಮಾರ್ಚ್ 20ರಂದು ಜಿಗಿಶಾ ಶವ ಹರ್ಯಾಣದ ಸೂರಜ್ ಕುಂಡ್ ಸಮೀಪ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಪೂರ್, ಶುಕ್ಲಾ ಹಾಗೂ ಮಲಿಕ್ ನನ್ನು ಬಂಧಿಸಿದ್ದರು.

No Comments

Leave A Comment