Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

‘ಮಕ್ಕಳ ಶಿಕ್ಷಣ ಎಲ್ಲರ ಜವಾಬ್ದಾರಿ’:ನ್ಯಾಯಾಧೀಶರಾದ ಲತಾ

DSCN3428ಉಡುಪಿ:ಯಾವುದೇ ಮಗು ಶಾಲೆಯಿಂದ ಹೊರಗುಳಿದು, ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳುವುದು ಸಮಾಜದ ಎಲ್ಲರ ಜವಾಬ್ದಾರಿ ಎಂದು ಜಿಲ್ಲಾ ಸಿವಿಲ್ ನ್ಯಾಯಾಧೀಶರಾದ ಲತಾ ತಿಳಿಸಿದ್ದಾರೆ.

ಅವರು ಗುರುವಾರ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಗರಸಭೆ, ಕಟ್ಟಡ ಕಾರ್ಮಿಕರ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಏರ್ಪಡಿಸಿದ್ದ ಶಾಲೆ ಕಡೆ ನನ್ನ ಕಡೆ- ಶಿಕ್ಷಣ ಮೂಲಭೂತ ಹಕ್ಕು ಜನಾಂದೋಲನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಾಲೆಯಿಂದ ಹೊರಗುಳಿಯುವ ಹೆಚ್ಚಿನ ಮಕ್ಕಳು ವಲಸೆ ಕಾರ್ಮಿಕರ ಮಕ್ಕಳಾಗಿದ್ದು, ವಲಸೆ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿನ ಮಾಲೀಕರು ಮತ್ತು ಗುತ್ತಿಗೆದಾರರು ಕಾರ್ಮಿಕರ ಮಕ್ಕಳು ಶಾಲೆಗೆ ಹೋಗುವ ಕುರಿತು ಪರಿಶೀಲಿಸಿ, ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶರು ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಮಾತನಾಡಿ, ವಲಸೆ ಮತ್ತು ಬಡತನದ ಕಾರಣ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ, ಶಾಲೆಯಿಂದ ಹೊರಗುಳಿದ ಹೆಚ್ಚಿನ ಮಕ್ಕಳು ದೌರ್ಜನ್ಯ ಮತ್ತು ಸಮಾಜದ್ರೋಹಿ ಪ್ರಕರಣಗಳಲ್ಲಿ ತೊಡಗುತ್ತಾರೆ, ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಉಚಿತವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು, ವಲಸೆ ಕಾರ್ಮಿಕರಿಗೆ ಈ ಬಗ್ಗೆ ಮಾಲೀಕರುಗಳು ಮಾಹಿತಿ ನೀಡಬೇಕು, ಇತ್ತೀಚೆಗೆ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಕುರಿತು ನಡೆಸಿದ ಆಂದೋಲನದಲ್ಲಿ ೨೧೭ ಮಕ್ಕಳು ಪತ್ತೆಯಾಗಿದ್ದಾರೆ, ರಾಜ್ಯದ ಕೊಪ್ಪಳ, ಬೀದರ್, ಬಿಜಾಪುರ ಜಿಲ್ಲೆಯಲ್ಲಿ ೨೫೦೦೦ ಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ , ಶಾಲೆ ಬಿಟ್ಟ ಮಕ್ಕಳಿಗೆ ಪ್ರತ್ಯೇಕ ಶಾಲೆ ತೆರಯುವ ಚಿಂತನೆ ಇದ್ದು, ಉಡುಪಿ ಜಿಲ್ಲೆಯಲ್ಲಿ ಶೀಘ್ರದಲ್ಲಿ ಮಕ್ಕಳ ಸಹಾಯವಾಣಿ ಆರಂಭಿಸಲಾಗುವುದು, ೨೦೨೦ ರ ವೇಳೆಗೆ ರಾಜ್ಯವನ್ನು ಬಾಲ ಕಾರ್ಮಿಕ ಮುಕ್ತ, ಬಾಲ್ಯ ವಿವಾಹ ಮುಕ್ತ, ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ಹಾಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ರಾಜ್ಯವನ್ನಾಗಿಸುವ ಚಿಂತನೆಯನ್ನು ಆಯೋಗ ಹೊಂದಿದ್ದು, ಇದಕ್ಕಾಗಿ ಸರಕಾರಿ ಇಲಾಖೆಗಳು ಮಾತ್ರವಲ್ಲದೇ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತೊರವಿ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ , ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು.

ಡಿಡಿಪಿ‌ಐ ದಿವಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್ ಸ್ವಾಗತಿಸಿದರು. ಶ್ವೇತಾ ನಿರೂಪಿಸಿದರು.

No Comments

Leave A Comment