ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ:ಉಡುಪಿಗೆ ಆಗಮಿಸಿದ ಸಿಐಡಿ ತಂಡ- ತನಿಖೆ ಆರಂಭ
ಉಡುಪಿ: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಗೃಹ ಸಚಿವರು ಸಿಐಡಿ ತಂಡಕ್ಕೆ ನೀಡಿದ್ದ ಕಾರಣ ಸಿಐಡಿ ಎಸ್ಪಿ ಡಾ| ಡಿ.ಸಿ. ರಾಜಪ್ಪ ನೇತೃತ್ವದ ತಂಡವು ಬೆಂಗಳೂರಿನಿಂದ ವಿಮಾನದ ಮೂಲಕ ಗುರುವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಕಾರಿನಲ್ಲಿ ಉಡುಪಿಗೆ ಬಂದಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಕಾರ್ಕಳ ಎಎಸ್ಪಿ ಡಾ| ಸುಮನಾ ಡಿ.ಪಿ. ಅವರು ತನಿಖಾ ವರದಿಯನ್ನು ಡಾ| ಡಿ.ಸಿ. ರಾಜಪ್ಪ ಅವರ ತಂಡಕ್ಕೆ ಗುರುವಾರ ಹಸ್ತಾಂತರಿಸಿದ್ದಾರೆ. ಸಿಐಡಿ ತಂಡವು ಕಟಪಾಡಿ ಸರಕಾರಿಗುಡ್ಡೆಯಲ್ಲಿರುವ ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಶೆಡ್ತಿ ಅವರ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿದೆ. ಸಿಐಡಿ ತಂಡದ ತನಿಖೆಯು ಮೊದಲ ದಿನದಲ್ಲಿಯೇ ವೇಗ ಪಡೆದಿದೆ.
ಡಿಎನ್ಎ ಅನುಮತಿ: ಕಾಲಾವಕಾಶ ಕೋರಿಕೆ: ಡಿಎನ್ಎಗಾಗಿ ಭಾಸ್ಕರ್ ಶೆಟ್ಟಿ ಅವರ ತಾಯಿ, ಸಹೋದರರ ರಕ್ತದ ಮಾದರಿ ಪಡೆಯಲು ಪೊಲೀಸರು ಹಾಕಿದ್ದ ಅರ್ಜಿಯ ವಿಚಾರಣೆಯು ಗುರುವಾರ ಕೋರ್ಟ್ನಲ್ಲಿ ನಡೆದಿದ್ದು, ಈ ವೇಳೆ ತನಿಖೆಯು ಸಿಐಡಿಗೆ ಹಸ್ತಾಂತರ ವಾದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಯಾರೆಂದು ಈವರೆಗೂ ಸ್ಪಷ್ಟವಾಗಿರದ ಕಾರಣ ಆದೇಶಕ್ಕೆ ಕಾಲಾವಕಾಶವನ್ನು ನೀಡಬೇಕು ಎಂದು ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್.ಎನ್. ಕೋರಿದರು. ಅದರಂತೆ ಕಾಲಾವಕಾಶವನ್ನು ನೀಡಿ ಡಿಎನ್ಎ ಕುರಿತ ಅರ್ಜಿಯ ವಿಚಾರಣೆಯನ್ನು ಆ. 24ಕ್ಕೆ ನ್ಯಾಯಾಧೀಶರು ನಿಗದಿಪಡಿಸಿದರು.
ಜಾಮೀನು ಅರ್ಜಿ ಸಲ್ಲಿಕೆ ಪ್ರಕರಣದಲ್ಲಿ ಸಾಕ್ಷ್ಯನಾಶದ ಆರೋಪಿಗಳಾದ ನಂದಳಿಕೆಯ ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ (56) ಮತ್ತು ನಿರಂಜನನ ಕಾರು ಚಾಲಕ ರಾಘು ಯಾನೆ ರಾಘವೇಂದ್ರ (25) ಅವರಿಗೆ ಮಂಗಳೂರಿನ ವಕೀಲರೊಬ್ಬರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯೂ ಆ. 24ರಂದು ನಡೆಯಲಿದೆ.