ಬ್ರಹ್ಮಾವರ:ಹಿ೦ದೂ ಸ೦ಘಟನೆಯ ಪ್ರವೀಣ್ ಪೂಜಾರಿಯ ಮೇಲೆ ಹಿ೦ದೂ ಸ೦ಘಟನೆಯ ಯುವಕರ ತ೦ಡದಿ೦ದ ಭೀಕರ ಹಲ್ಲೆ ನಡೆಸಿ ಕೊಲೆ -16ಮ೦ದಿಯ ಬ೦ಧನ
ಉಡುಪಿ : ಹೆಬ್ರಿ ಸಮೀಪದ ಕೆಂಜೂರು ಎಂಬಲ್ಲಿ ಗೋ ಸಾಗಾಣಿಕೆ ಮಾಡುತ್ತಿದ್ದ ಟೆಂಪೋವೊಂದನ್ನು ಹಿಂದು ಪರ ಸಂಘಟನೆಗೆ ಸೇರಿದ ಎನ್ನಲಾದ ಗುಂಪೊಂದು ತಡೆದು ಮಾರಾಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೆಂಜೂರು ಶಾಲೆಯ ಬಳಿ ಬುಧವಾರ ತಡರಾತ್ರಿ ಘಟನೆ ನಡೆದಿದ್ದು ದನಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎನ್ನಲಾದ ಟೆಂಪೋವನ್ನು ತಡೆದು ಅದರಲ್ಲಿದ್ದ ಪ್ರವೀಣ್ ಪೂಜಾರಿ(31) ಮತ್ತು ಅಕ್ಷಯ್ ದೇವಾಡಿಗ (19)ಎನ್ನುವವರಿಗೆ ಸುಮಾರು 30ಕ್ಕೂ ಹೆಚ್ಚು ಮಂದಿಯ ತಂಡ ಹಿಗ್ಗಾಮುಗ್ಗಾ ಥಳಿಸಿದೆ.ಮಾರಣಾಂತಿಕವಾಗಿ ಗಾಯಗೊಂಡ ಪ್ರವೀಣ್ ಸಾವನ್ನಪ್ಪಿದ್ದು ಅಕ್ಷಯ್ ದೇವಾಡಿಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರವೀಣ್ ಪೂಜಾರಿ
ಸ್ಥಳಕ್ಕೆ ಪೊಲೀಸ್ ತಂಡಗಳು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಘಟನೆ ಸಂಬಂಧ 16ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.
ಪ್ರವೀಣ್ ಕೆಂಜೂರಿನ ನಿವಾಸಿಯಾಗಿದ್ದು ಚಿಕನ್ ಸ್ಟಾಲ್ ನಡೆಸುತ್ತಿದ್ದ. ಈತ ಬಿಜೆಪಿಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದು ಪಕ್ಷದ ಪರ ಫೇಸ್ಬುಕ್ನಲ್ಲಿ ಪೋಸ್ಟ್ಗಳನ್ನು ಹಾಕಿರುವುದು ಸೂಚಿಸಿದೆ.
ಗೋಸಾಗಾಣಿಕೆಯ ವಿಚಾರದಲ್ಲಿ ಕೊಲೆ ನಡೆದಿದೆಯೊ ಇಲ್ಲ ಬೇರೆ ಯಾವುದೋ ದ್ವೇಷದಲ್ಲಿ ನಡೆದಿದೆಯೊ ಎನ್ನುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆಯಾದರೂ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಕೆ.ಟಿ.ಬಾಲಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .