Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಂಗಳೂರು-ಬೆಂಗಳೂರು ರಸ್ತೆಯಲ್ಲಿ ಮರಣ ಗುಂಡಿಗಳು

Gundi-Higಬಂಟ್ವಾಳ : ಮಂಗಳೂರು- ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೃಹತ್‌ ಹೊಂಡಗಳು ಸೃಷ್ಟಿಯಾಗಿದ್ದು, ಪ್ರಯಾಣ ದುಸ್ತರವಾಗಿದೆ. ಕಲ್ಲಡ್ಕ- ದಾಸಕೋಡಿ ನಡುವಣ ಕೇವಲ ಒಂದು ಕಿ.ಮೀ. ವ್ಯಾಪ್ತಿಯಲ್ಲೇ ನೂರಕ್ಕೂ ಅಧಿಕ ಹೊಂಡಗಳಿದ್ದು, ದಿನದಿಂದ ದಿನಕ್ಕೆ  ಗಾತ್ರವನ್ನು  ವಿಸ್ತರಿಸಿಕೊಂಡು ಮರಣ ಗುಂಡಿಗಳಾಗಿ ಪರಿವರ್ತನೆ ಆಗುತ್ತಿವೆ.

ಇಲ್ಲಿನ ಪರಿಸ್ಥಿತಿ ಎಷ್ಟು ಅಪಾಯಕಾರಿಯಾಗಿದೆ ಎಂದರೆ ಹೊಂಡಕ್ಕೆ ಇಳಿದ ದ್ವಿಚಕ್ರ-ತ್ರಿಚಕ್ರ ವಾಹನಗಳು, ಕಾರುಗಳು ಮೇಲೆ ಬರಲಾರದೆ ಹೆಣಗಾಡುತ್ತವೆ. ದ್ವಿಚಕ್ರ ವಾಹನಗಳ ಸವಾರರಂತೂ ಹಿಂದಿನಿಂದ ಬರುವ ಘನ ವಾಹನಗಳು ಎಲ್ಲಿ ನಮ್ಮ ಮೇಲೇರಿ ಬರುತ್ತವೋ ಎಂಬ ಭೀತಿಯಿಂದಲೇ ಸಾಗಬೇಕಾಗಿದೆ. ಸರಕು ತುಂಬಿದ ವಾಹನಗಳು ಓಲಾಡುತ್ತಾ ಸಾಗುವುದನ್ನು ನೋಡುವಾಗಲೇ ಸಹಪ್ರಯಾಣಿಕರಲ್ಲಿ ಭೀತಿ ಮೂಡುತ್ತದೆ.

ಮಳೆ ಹನಿಯಲು ಆರಂಭವಾದಾಗಲೇ ಇಲ್ಲಿ ರಸ್ತೆ ಬಾಯ್ದೆರೆಯತೊಡಗಿತ್ತು.  ಮಳೆ ಬಿರುಸಾಗುತ್ತಿದ್ದಂತೆ ರಸ್ತೆ ಹೊಂಡಗಳೂ ವಿಸ್ತರಣೆಧಿಯಾಗತೊಡಗಿದ್ದವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಳಪೆ ಗುಣಮಟ್ಟದ ಕಾಮಗಾರಿಗೆ ಇದೊಂದು ಸ್ಪಷ್ಟ ಉದಾಹರಣೆ ಎಂಬಂತಿದೆ. ಬಿ.ಸಿ. ರೋಡ್‌ನಿಂದ ಮಾಣಿಯವರೆಗೆ ಇಂತಹ ಗುಂಡಿಗಳಿದ್ದರೂ ಕಲ್ಲಡ್ಕ-ದಾಸಕೋಡಿಯಲ್ಲಿ ಹೆಜ್ಜೆಗೊಂದರಂತೆ ಇವೆ.

ನಿದ್ದೆಯಿಲ್ಲದ  ರಾತ್ರಿ
ರಾತ್ರಿ ವೇಳೆ ಘನ ವಾಹನಗಳು ಹೊಂಡಗಳಲ್ಲಿ ಬಿದ್ದು ಎದ್ದು  ಸಾಗುವಾಗ ಉಂಟಾಗುವ ದಡಬಡ ಶಬ್ದದಿಂದ ಹತ್ತಿರದ ಮನೆಗಳಲ್ಲಿ ಮಲಗಿದವರು ಏನೋ ಅವಘಡ ಸಂಭವಿಸಿರಧಿಬೇಕು ಎಂದು ರಸ್ತೆಗೋಡಿ ಬರುತ್ತಾರೆ. ವಾಹನಗಳು ಬ್ರೇಕ್‌ ಹಾಕುವಾಗ ಉಂಟಾಗುವ ಶಬ್ದದಿಂದ ವಾಹನವೇ ಬಿದ್ದುಬಿಟ್ಟಂತೆ ಭಾಸವಾಗುತ್ತದೆ ಎನ್ನುತಾರೆ ಸ್ಥಳೀಯ ನಿವಾಸಿಗಳು.

ಕಣ್ಮುಚ್ಚಿ ಕುಳಿತ ಪ್ರಾಧಿಕಾರ !
ಯಾವುದೇ ಸಮಸ್ಯೆ ಎದುರಾದರೂ “ಬೃಹತ್‌ ಪ್ರತಿಭಟನೆ’ಗಳಾಗದೇ ಅದು ಸಂಬಂಧಪಟ್ಟವರ ಗಮನಕ್ಕೆ ಬರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಏನೂ ಆಗಿಲ್ಲ ಎಂಬಂತೆ ಕಣ್ಣು, ಕಿವಿ ಮುಚ್ಚಿ ಕುಳಿತಿದ್ದಾರೆ.

ಕಳೆದ ಮಳೆಗಾಲ ಮುಗಿದ ಬಳಿಕ ಎಷ್ಟೇ ಮನವಿ, ಬೇಡಿಕೆ ಸಲ್ಲಿಸಿದರೂ ಹೆದ್ದಾರಿ ಪ್ರಾಧಿಕಾರವು ಬಿ.ಸಿ.ರೋಡ್‌ನ‌ ಸರ್ವಿಸ್‌ ರಸ್ತೆಯನ್ನು ದುರಸ್ತಿ ಮಾಡುವ ಗೋಜಿಗೇ ಹೋಗಿರಲಿಲ್ಲ. ಜೂನ್‌ ತಿಂಗಳಲ್ಲಿ ಮಳೆ ಆರಂಭದ ಬಳಿಕ ಸರ್ವಿಸ್‌ ರಸ್ತೆಯಲ್ಲಿ ಇನ್ನಷ್ಟು ಕುಸಿತಗಳು ಸಂಭವಿಸಿದವು. ಇದೇ ಸಂದರ್ಭ ಸಾಮಾಜಿಕ ಸಂಘಟನೆಗಳು, ವಾಹನ ಚಾಲಕರ ಸಂಘಟನೆಧಿಗಳು ಒಂದಾಗಿ ಹೆದ್ದಾರಿಯಲ್ಲಿ ನಿರಂತರ ಸಂಚಾರ ತಡೆ ಮಾಡುವ ಪತ್ರವನ್ನು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗೆ ನೀಡಿದವು.
ಆರಂಭದಲ್ಲಿ ಇಂದು ನಾಳೆ ಎಂದು ದಿನ ಕಳೆದ ಹೆದ್ದಾರಿ ಪ್ರಾಧಿಕಾರ ಒತ್ತಡ ಹೆಚ್ಚುತ್ತಿದ್ದಂತೆ ಹೊಂಡಕ್ಕೆ ಕಾಂಕ್ರೀಟ್‌ ಮಿಶ್ರಣ ಹಾಕಿ ಡಾಮರೀಕರಣ ಮಾಡಿತ್ತು.

ಹೆದ್ದಾರಿಯ ಮರಣ ಗುಂಡಿಗಳ ವಿಚಾರದಲ್ಲೂ ಜನಸಾಮಾನ್ಯರು, ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸಿ ಒತ್ತಡ ತಂದರೆ ಮಾತ್ರ ಇಲಾಖೆಗೆ ಎಚ್ಚರವಾದೀತು.

 

No Comments

Leave A Comment