Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸೇವಾವತಾರ – ಸೇವಾ ಪರ್ಯಾಯ: ಪೇಜಾವರ ಶ್ರೀ

180715uk3ಉಡುಪಿ: ಭಗವಂತ ಶ್ರೀಕೃಷ್ಣನಾಗಿ ಅವತರಿಸಿದಾಗ ವಿಶೇಷವಾಗಿ ಸೇವೆಯನ್ನೇ ಮಾಡಿ ತೋರಿದವ. ತಮ್ಮ ಮುಂದಿನ ಪರ್ಯಾಯದಲ್ಲಿ ಸೇವೆಗೆ ಹೆಚ್ಚಿನ ಒತ್ತು ನೀಡುವುದಾಗಿ ಭಾವೀ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಶನಿವಾರ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ಪರ್ಯಾಯ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಭಗವಂತ ಶ್ರೀರಾಮನಾಗಿ ಅವತರಿಸಿದಾಗ ವಿಭೀಷಣ, ಹನುಮಂತ, ಶತ್ರುಘ್ನ, ಭರತ, ಲಕ್ಷ್ಮಣ ಹೀಗೆ ನಾನಾ ಜನರು ಸೇವೆ ಸಲ್ಲಿಸಿದರು. ಶ್ರೀಕೃಷ್ಣನಾಗಿ ಅವತರಿಸಿದಾಗ ತಾನೇ ಗೋವುಗಳ ಸೇವೆ, ಜನರ ಸೇವೆಯನ್ನು ಮಾಡಿದ. ಹಸ್ತಿನಾವತಿಗೆ ದೂತನಾಗಿ ಹೋದ, ಕುದುರೆಗಳಿಗೆ ಹುಲ್ಲು ತಿನ್ನಿಸಿದ. ಭೀಷ್ಮಾಚಾರ್ಯರು ಅಗ್ರಪೂಜೆಗೆ ಶ್ರೀಕೃಷ್ಣನನ್ನು ಘೋಷಿಸಿದಾಗ ಆತ ಬಂದ ಜನರ ಕಾಲುಗಳನ್ನು ತೊಳೆಯುತ್ತಿದ್ದ, ಊಟ ಮಾಡಿದವರ ಎಂಜಲು ಎಲೆಗಳನ್ನು ತೆಗೆಯುತ್ತಿದ್ದ. ಹೀಗಾಗಿ ಆಚಾರ್ಯ ಮಧ್ವರು ಪ್ರತಿಷ್ಠಾಪಿಸಿದ ಕೃಷ್ಣನ ಮೂರ್ತಿ ಪೂಜೆ ಮಾಡುವ ಜತೆ ಜನರ ಹೃದಯದಲ್ಲಿ ಕೃಷ್ಣನನ್ನು ಕಂಡು ಸೇವಾ ಕಾರ್ಯಗಳನ್ನು ನಡೆಸುವುದಾಗಿ ಹೇಳಿದರು.

ಪಾಜಕದಲ್ಲಿ ಹಿಂದೆ ಗಣಿಗಾರಿಕೆ ಗದ್ದಲ ಎದ್ದಾಗ ಆಗ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು 40 ಎಕ್ರೆ ಭೂಮಿಯನ್ನು ನೀಡಿದ್ದರು. ಅಲ್ಲಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದ ವರೆಗೆ ಊಟ, ವಸತಿ ಕೊಟ್ಟು ಶಿಕ್ಷಣ ಕೊಡುವ ಸಂಸ್ಥೆಗೆ, ಉಡುಪಿಗೆ ಬರುವ ಭಕ್ತರಿಗೆ ವಸತಿ, ಊಟದಂತಹ ಮೂಲಸೌಕರ್ಯ ಒದಗಣೆಗೆ, ಕಿರಿಯ ಶ್ರೀಗಳು ನಡೆಸುತ್ತಿರುವ ಸಾವಿರಾರು ಅನಾಥ ಗೋವುಗಳ ಗೋಶಾಲೆ, ಧಾರ್ಮಿಕ-ಸಾಂಸ್ಕೃತಿಕ ಗ್ರಂಥ ಪ್ರಕಾಶನಕ್ಕೆ ಒತ್ತು ನೀಡಲಾಗುವುದು ಎಂದು ಶ್ರೀಪಾದರು ಹೇಳಿದರು. ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಪಾರ್ಕಿಂಗ್‌ ಸ್ಥಳದಲ್ಲಿ ದರ್ಬಾರ್‌?
ರಾಜಾಂಗಣದಲ್ಲಿ ದರ್ಬಾರ್‌ ಸಭೆ ನಡೆಸಿದರೆ ಅದು ಸಾಕಾಗುವುದಿಲ್ಲ. ಹೀಗಾಗಿ ಪಾರ್ಕಿಂಗ್‌ ಸ್ಥಳದಲ್ಲಿ ಸಭೆಯನ್ನು ನಡೆಸಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀಪಾದರು ಸಾಮಾಜಿಕ ಕಾರ್ಯಗಳಿಗೆ ದೊಡ್ಡ ಹೆಸರು. ಇವರ ಪರ್ಯಾಯದಲ್ಲಿ ರಾಜ್ಯ, ರಾಷ್ಟ್ರದಲ್ಲಿ ಸಹಬಾಳ್ವೆ, ಅಭಿವೃದ್ಧಿಗೆ ಆಶೀರ್ವಾದದ ಸಂದೇಶ ಮೂಡಿಬರಲಿ ಎಂದು ಹಾರೈಸಿದರು.

ಮೂಲ-ಉತ್ಸವಮೂರ್ತಿ, ಸವೆದ ಹಾವಿಗೆ
ತಮಗೆ ಈಗ ವಯೋಮಾನದ ನಿರ್ಬಂಧವಿದೆ. ಹೀಗಾಗಿ ನಾವೇನಿದ್ದರೂ ಮೂಲಮೂರ್ತಿ, ಕಿರಿಯ ಶ್ರೀಗಳು ಉತ್ಸವ ಮೂರ್ತಿಯಂತಿರುತ್ತಾರೆ ಎಂದು ಹಿರಿಯ ಶ್ರೀಗಳು ಹೇಳಿದರೆ, ಕಿರಿಯ ಶ್ರೀಗಳು ಯೋಗ್ಯ ಶಿಷ್ಯರು. ಅವರ ಕಾಲಿನ ಮರದ ಹಾವಿಗೆ ಸವೆದು ಹೋಗಿದೆ, ಬೆರಳುಗಳು ಇರುವಲ್ಲಿ ಸವೆದು ಗುರುತು ಕಾಣುತ್ತಿದೆ. ಅಷ್ಟು ನಡೆದಾಡಿದ ಸಾಧನೆ ಅಪೂರ್ವ ಎಂದು ಡಾ| ಹೆಗ್ಗಡೆ ಬಣ್ಣಿಸಿದರು.

ಜ. 18: ಮಧ್ವನವಮಿ
ಮಧ್ವಾಚಾರ್ಯರ ಅನುಗ್ರಹವೆಂಬಂತೆ ಜ. 18ರಂದು ಮಧ್ವನವಮಿ (ಮಧ್ವರು ನಿರ್ಯಾಣವಾದ ದಿನ) ಬರುತ್ತಿದೆ ಎಂದು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಅಮೃತ್‌ ಯೋಜನೆಗೆ ಉಡುಪಿ
ಕೇಂದ್ರ ಸರಕಾರ ಘೋಷಿಸಿದ ಅಮೃತ್‌ ಯೋಜನೆಗೆ ಉಡುಪಿಯನ್ನು ಆಯ್ದುಕೊಳ್ಳಲಾಗುವುದು. ಯೋಜನೆಯಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಲಾ 100 ಕೋ.ರೂ. ವಿನಿಯೋಗಿಸಲಿವೆ. ಉಡುಪಿಗೆ 2ನೇ ಹಂತದ ಎಡಿಬಿ ನೆರವಿನಲ್ಲಿ 90 ಕೋ.ರೂ. ವಿನಿಯೋಗಿಸಲಾಗುವುದು. ಹೀಗೆ ವಿವಿಧ ಬಗೆಗಳಲ್ಲಿ ಅಭಿವೃದ್ಧಿಪಡಿಸಲು ಯತ್ನಿಸಲಾಗುವುದು ಎಂದು ಸಚಿವ ವಿನಯಕುಮಾರ ಸೊರಕೆ ಹೇಳಿದರು. ವಿಶ್ವ ಮಟ್ಟದಲ್ಲಿ ನಡೆಯುವ ಪರ್ಯಾಯಕ್ಕೆ ಸಕಲ ಸಹಕಾರ ನೀಡುವುದಾಗಿ ಸಚಿವ ಅಭಯಚಂದ್ರ ಜೈನ್‌ ಹೇಳಿದರು.

ದಸರಾ ಮಾದರಿ
ದಸರಾ ಮಾದರಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ಪ್ರಚಾರ ಮಾಡಲು ಸಲಹೆ ನೀಡುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

2ರಲ್ಲಿ ತಂದೆ, 5ರಲ್ಲಿ ಮಗ, 4ರಲ್ಲಿ ಸಂಸದ, 5ರಲ್ಲಿ ಸಚಿವ
ಶ್ರೀಗಳ 2ನೇ ಪರ್ಯಾಯದಲ್ಲಿ (1968-69) ತಂದೆ ಮಲ್ಪೆ ಮಧ್ವರಾಜರು ಮೆರವಣಿಗೆಯ ನೇತೃತ್ವ ವಹಿಸಿದ್ದರು. 1968ರಲ್ಲಿ ಹುಟ್ಟಿದ ನಾನು ಈಗ 5ನೇ ಪರ್ಯಾಯದ ಪೀಠಾರೋಹಣ ಮಾಡುವಾಗ ಶಾಸಕನಾಗಿ ಸ್ವಾಗತಿಸುತ್ತಿದ್ದೇನೆ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು. 4ನೇ ಪರ್ಯಾಯದಲ್ಲಿ ಸಂಸದನಾಗಿ ಶ್ರೀಗಳನ್ನು ಸ್ವಾಗತಿಸಿದರೆ ಈಗ ಸಚಿವನಾಗಿ ಸ್ವಾಗತಿಸುತ್ತಿದ್ದೇನೆ ಎಂದು ವಿನಯಕುಮಾರ ಸೊರಕೆ ಹೇಳಿದರು.

ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಗಣೇಶ್‌ ಕಾರ್ಣಿಕ್‌, ನಗರಸಭಾಧ್ಯಕ್ಷ ಯುವರಾಜ್‌, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ ಮಾತನಾಡಿದರು. ಹೆರಂಜೆ ಕೃಷ್ಣ ಭಟ್‌ ಸ್ವಾಗತಿಸಿ ಪ್ರದೀಪಕುಮಾರ್‌ ಕಲ್ಕೂರ ವಂದಿಸಿದರು. ಮುರಳಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು. ಡಾ| ವೀರೇಂದ್ರ ಹೆಗ್ಗಡೆಯವರು ಮಹಾಧ್ಯಕ್ಷರಾದ ವಿಸ್ತೃತ ಸ್ವಾಗತ ಸಮಿತಿ ಪದಾಧಿಕಾರಿಗಳ ಪಟ್ಟಿಯನ್ನು ಬಾಲಾಜಿ ರಾಘವೇಂದ್ರ ಆಚಾರ್ಯ ವಾಚಿಸಿದರು.

No Comments

Leave A Comment