Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಬಾಂಗ್ಲಾ; ಸೈಕಲ್ ಕದ್ದಿದ್ದಕ್ಕೆ ಪೈಶಾಚಿಕ ಹಿಂಸೆ ನೀಡಿ ಬಾಲಕನ ಹತ್ಯೆ

BOY-600ಢಾಕಾ: ಸೈಕಲ್‌ ಕದ್ದನೆಂಬ ಕಾರಣಕ್ಕೆ ಹದಿಮೂರರ ಹರೆಯದ ಬಾಲಕನನ್ನು, ಕಣ್ಣಲ್ಲಿ ನೆತ್ತರಿಲ್ಲದ ರಾಕ್ಷಸ ಪೀಡಕರು, ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹೊಡೆದು ಕೊಂದ ವಿಡಿಯೋ ಚಿತ್ರಿಕೆಯೊಂದು ಸಾಮಾಜಿಕ ಜಾಲ ತಾಣದಲ್ಲಿ ಸಾಂಕ್ರಾಮಿಕವಾಗಿ ವ್ಯಾಪಿಸಿಕೊಂಡದ್ದನ್ನು ಅನುಸರಿಸಿ ಬಾಂಗ್ಲಾದೇಶದಲ್ಲಿ ಘಟನೆಯನ್ನು ಖಂಡಿಸಿ ಭಾರೀ ಜನ ಪ್ರತಿಭಟನೆ ವ್ಯಕ್ತವಾಗಿದೆ. ಬಾಲಕನನ್ನು ಅಮಾನುಷವಾಗಿ ಹೊಡೆದು ಕೊಂದವರನ್ನು ನಿರ್ದಯವಾಗಿ ಗಲ್ಲಿಗೇರಿಸಬೇಕೆಂಬ ಕೂಗು ದೇಶದ ಎಲ್ಲೆಡೆಯಿಂದ ಕೇಳಿ ಬರತೊಡಗಿದೆ.

ಬಾಲಕನನ್ನು ಹೊಡೆದ ಕೊಂದ ಕೃತ್ಯದಲ್ಲಿ ಶಾಮೀಲಾದ ಗುಂಪಿನ ಶಂಕಿತನೋರ್ವ ಘಟನೆ ನಡೆದ ಮಧ್ಯಾಹ್ನವೇ ಸೌದಿ ಅರೇಬಿಯದ ಜೆದ್ದಾಕ್ಕೆ ಓಡಿ ಹೋಗಿದ್ದು ಅಲ್ಲಿನ ಬಾಂಗ್ಲಾ ಪ್ರಜೆಗಳ ಪ್ರಯತ್ನದ ಫ‌ಲವಾಗಿ ಆತನನ್ನು ಬಂಧಿಸಲಾಗಿದೆ. ಆತನು ತಾನು ಎಸಗಿರುವ ಅಮಾನುಷ ಅಪರಾಧವನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.

ಜುಲೈ 8ರಂದು ನಡೆದಿರುವ ಈ ಅಮಾನುಷ ಹಲ್ಲೆ ಮತ್ತು ಹತ್ಯಾ ಪ್ರಕರಣದಲ್ಲಿ ಸಾವಿಗೀಡಾದ ಬಾಲಕನ ಹೆಸರು ಸಮೀಉಲ್‌ ಆಲಂ ರಾಜನ್‌ ಎಂದು ತಿಳಿದು ಬಂದಿದೆ.

ಈಶಾನ್ಯ ಸಿಲ್‌ಹೆಟ್‌ ನಗರದಲ್ಲಿ ಒಂದು ಸೈಕಲನ್ನು ಕದ್ದ ಎಂಬ ಕಾರಣಕ್ಕೆ ಯುವಕರ ಗುಂಪೊಂದು ಬಾಲಕ ಸಮೀಉಲ್‌ನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಹೊಡೆದು ಹಿಂಸಿಸಿದ್ದಾರೆ. ಕಣ್ಣಲ್ಲಿ ನೆತ್ತರಿಲ್ಲದ ಈ ಯುವಕರ ಪೈಶಾಚಿಕ ಹಿಂಸೆಯನ್ನು ತಾಳಲಾರದೆ ಬಾಲಕನು “ನನ್ನನ್ನು ಹೀಗೆ ಹೊಡೆಯಬೇಡಿ; ನಾನು ಸತ್ತೇ ಹೋಗುತ್ತೇನೆ; ನನಗೆ ಕುಡಿಯಲು ಸ್ವಲ್ಪ ನೀರು ಕೊಡಿ’ ಎಂದು ರೋದಿಸುತ್ತಾ ಹಿಂಸಕರಲ್ಲಿ ಬೇಡುವ ದೃಶ್ಯ 28 ನಿಮಿಷಗಳ ನರಕ ಸದೃಶ ಹಿಂಸಾತ್ಮಕ ವಿಡಿಯೋ ಚಿತ್ರಿಕೆಯಲ್ಲಿ ದಾಖಲಾಗಿದೆ.

ಈ ವಿಡಿಯೋ ಚಿತ್ರಿಕೆಯನ್ನು ಶೂಟ್‌ ಮಾಡಿದವರು ಯಾರೆಂಬುದು ಗೊತ್ತಾಗಿಲ್ಲ; ಇದನ್ನು ಸ್ಮಾರ್ಟ್‌ ಫೋನ್‌ ಬಳಸಿ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸ್ಥಳೀಯ ಪೊಲೀಸ್‌ ಮುಖ್ಯಸ್ಥ ಅಖ್‌ತರ್‌ ಹುಸೇನ್‌ ಅವರು ಕಳೆದ ರಾತ್ರಿಯಿಂದೀಚೆಗೆ ಈ ಅಮಾನುಷ ಪ್ರಕರಣಕ್ಕೆ ಸಂಬಂಧಿಸಿ ಮೂವರು ಶಂಕಿತರನ್ನು ಬಂಧಿಸಲಾಗಿದೆ. ಇವರಲ್ಲಿ ಶಂಕಿತ ವ್ಯಕ್ತಿಯ ಪತ್ನಿಯೂ ಸೇರಿದ್ದು ಈ ಮೂವರೂ ಬಾಲಕನಿಗೆ ಪೈಶಾಚಿಕ ಹಿಂಸೆ ನೀಡುವಾಗ ಸ್ಥಳದಲ್ಲಿದ್ದರು ಎಂದು ತಿಳಿಸಿದ್ದಾರೆ. ಈ ಪೈಶಾಚಿಕ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಯಾರನ್ನೇ ಆದರೂ ನಾವು ಬಂಧಿಸದೇ ಬಿಡುವುದಿಲ್ಲ ಎಂದವರು ಹೇಳಿದ್ದಾರೆ.

ಈ ಮೂವರ ಬಂಧನದೊಂದಿಗೆ ಈ ತನಕ ಈ ಪ್ರಕರಣಕ್ಕೆ ಸಂಬಂಧಪಟ್ಟ ಸೆರೆ ಹಿಡಿಯಲ್ಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಇದರಲ್ಲಿ ಈ ಪೈಶಾಚಿಕ ಕೊಲೆ ಕೃತ್ಯದ ರಿಂಗ್‌ ಲೀಡರ್‌ ಆಗಿರುವ ಮೂಹಿತ್‌ ಆಲಂ ಹಾಗೂ ಆತನ ಪ್ರಧಾನ ಸಹವರ್ತಿ ಕಮರೂಲ್‌ ಇಸ್ಲಾಂ ಸೇರಿದ್ದು ಈ ಇಬ್ಬರನ್ನು ಸೌದಿ ಅರೇಬಿಯದಲ್ಲಿ ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ವಿದೇಶ ಸಚಿವಾಲಯ ತಿಳಿಸಿದೆ.

No Comments

Leave A Comment