Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸ್ವಚ್ಛ, ಸುಂದರ, ಸಮೃದ್ಧ ಕಾಪು ನಿರ್ಮಾಣ ಸಂಕಲ್ಪ: ಸಚಿವ ಸೊರಕೆ

Sorake-Saಕಾಪು : ಸ್ವಚ್ಛ, ಸುಂದರ ಮತ್ತು ಸಮೃದ್ಧ ಕಾಪು ನಿರ್ಮಾಣದ ಸಂಕಲ್ಪದೊಂದಿಗೆ ಕಾಪುವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಕಾಪು ಪುರಸಭೆ ರಚನೆ ಮಾಡಲಾಗಿದೆ. ಕಾಪು ಪುರಸಭಾ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಮೂಲಕ 100 ಕೋ. ರೂ. ಅನುದಾನದೊಂದಿಗೆ ಸಮಗ್ರ ಅಭಿವೃದ್ಧಿ ನಡೆಸಿ, ರಾಜ್ಯದಲ್ಲೇ ಮಾದರಿಯಾದ ಪೌರಾಡಳಿತ ಸಂಸ್ಥೆಯನ್ನಾಗಿ ರೂಪಿಸುವುದಾಗಿ ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ಕಾಪು ಅಭಿವೃದ್ಧಿ ಸಮಿತಿ ಮತ್ತು ವಿನಯ ಕುಮಾರ್‌ ಸೊರಕೆ ಪೌರ ಸಮ್ಮಾನ ಸಮಿತಿ ಸಂಯೋಜನೆಯಲ್ಲಿ ಕಾಪು ಪುರಸಭಾ ವ್ಯಾಪ್ತಿಯ ಕಾಪು, ಮಲ್ಲಾರು ಮತ್ತು ಉಳಿಯಾರಗೋಳಿ ಗ್ರಾಮಗಳ ಗ್ರಾಮಸ್ಥರ ವತಿಯಿಂದ ರವಿವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಪೌರ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪುರಸಭೆ ರಚನೆಯಲ್ಲಿ ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲ

ರಾಜಕೀಯವಾಗಿ ತೀವ್ರ ಕಳೆಗುಂದಿದ್ದ ನನಗೆ ರಾಜಕೀಯ ಪುರ್ನಜನ್ಮ ನೀಡಿದ್ದು ಕಾಪು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದ ಮತದಾರರ ಆಶೀರ್ವಾದದಿಂದ ಕಾಪು ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದು, ಮುಂದೆ ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ಸ್ವೀಕರಿಸುವಂತಾಯಿತು. ಇದಕ್ಕೆ ಕಾರಣರಾದ ಕಾಪು ಕ್ಷೇತ್ರದ ಜನರ ಋಣ ತೀರಿಸುವ ಉದ್ದೇಶದೊಂದಿಗೆ ನಗರಾಭಿವೃದ್ಧಿ ಇಲಾಖೆ ಮೂಲಕ ಬೃಹತ್‌ ಯೋಜನೆ ರೂಪಿಸುವುದು ಅನಿವಾರ್ಯವಾಗಿದ್ದು, ಇದಕ್ಕಾಗಿ ಕಾಪು ಪುರಸಭೆಯನ್ನು ಅನುಷ್ಠಾನಕ್ಕೆ ತಂದಿದ್ದೇನೆಯೇ ವಿನಃ ಯಾವುದೇ ರಾಜಕೀಯ ಪ್ರತಿಫಲಾಪೇಕ್ಷೆಯಿಂದಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಕಾಪು ಅಭಿವೃದ್ಧಿ ಸಮಿತಿ ರಾಜ್ಯಕ್ಕೇ ಮಾದರಿ
ಸರಕಾರದಿಂದ ಮಾತ್ರ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಜನರೂ ನಮ್ಮೊಂದಿಗೆ ಕೈ ಜೋಡಿಸಬೇಕು. ಸರಕಾರದ ಯೋಜನೆಗಳಿಗೆ ಜನರ ಬೆಂಬಲ ಮತ್ತು ಸಹಕಾರವೂ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಪು ಅಭಿವೃದ್ಧಿ ಸಮಿತಿ ಕಳೆದ 15 ವರ್ಷಗಳಿಂದ ಕಾಪು ಅಭಿವೃದ್ಧಿಗೆ ದೂರದರ್ಶಿತ್ವದ ಯೋಜನೆ ರೂಪಿಸಿತ್ತು. ಅಂದಿನ ಕಲ್ಪನೆ ಇಂದು ಸಾಕಾರಗೊಳ್ಳುತ್ತಿದ್ದು, ಇದೇ ಮಾದರಿಯ ಅಭಿವೃದ್ಧಿ ಸಮಿತಿ ರಾಜ್ಯದಾದ್ಯಂತ ಪ್ರಾರಂಭಿಸಲು ಸೂಚನೆ ಹೊರಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅವರು ಹೇಳಿದರು.

ಮುಂದೆ ಕಾಪು ತಾಲೂಕು ಕೇಂದ್ರ
ಅಭಿವೃದ್ಧಿ ಕೆಲಸಗಳ ಪರ ಇರುವವರೂ ಇರುತ್ತಾರೆ. ವಿರುದ್ಧ ಇರುವವರೂ ಇರುತ್ತಾರೆ. ಕಾಪು ಅಭಿವೃದ್ಧಿಯಲ್ಲಿ ಹಿಂದಿನ ಶಾಸಕರಾದ ಭಾಸ್ಕರ್‌ ಶೆಟ್ಟಿ, ವಸಂತ ವಿ. ಸಾಲ್ಯಾನ್‌, ಲಾಲಾಜಿ ಆರ್‌. ಮೆಂಡನ್‌ ಅವರ ಕೊಡುಗೆ ಅಪಾರವಾಗಿದ್ದು, ನಾನು ಕೂಡ ಅವರದ್ದೇ ಹಾದಿಯಲ್ಲಿ ಭಿನ್ನ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಕ್ಷೇತ್ರದ ಜನರ ಇಚ್ಛೆಯಂತೆ ಈಗ ಕಾಪು ಪುರಸಭೆ ರಚಿಸಿದ್ದು, ಮುಂದಿನ ದಿನಗಳಲ್ಲಿ ಕಾಪುವನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವ ಇಚ್ಛೆಯಿದೆ ಎಂದರು.

ಮುಖ್ಯಮಂತ್ರಿಯಾಗುವ ಭಾಗ್ಯ ಸೊರಕೆಯವರದ್ದಾಗಲಿ: ಶೀರೂರು ಶ್ರೀ…

ಉಡುಪಿ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ರಾಜಕಾರಣಿಗಳು ಒಮ್ಮೆ ನೀಡಿದ ಭರವಸೆಯನ್ನು ಮತ್ತೆ ನೆನಪಿಸಿಕೊಳ್ಳುವುದು ಅತೀ ವಿರಳ. ಆದರೆ ಸೊರಕೆ ಅವರು ಮಾತ್ರ ಮೊದಲಿನಿಂದಲೂ ಕಾಪು ಪುರಸಭೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಇಂದು ಅದನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಇವರಂತವರು ರಾಜಕೀಯಕ್ಕೆ ಭಾರೀ ಅಪರೂಪ. ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುವ ಭಾಗ್ಯವನ್ನು ಶ್ರೀ ದೇವರು ಕರುಣಿಸಲಿ ಎಂದರು.

ಸೊರಕೆ ಸಮಗ್ರ ಕರ್ನಾಟಕದ ಸೊತ್ತು: ಡಾ| ಮೋಹನ್‌ ಆಳ್ವ…

ಅಭಿನಂದನ ಭಾಷಣ ಮಾಡಿದ ಮೂಡಬಿದಿರೆ ಆಳ್ವಾಸ್‌ ಫೌಂಡೇಶನ್‌ನ ಅಧ್ಯಕ್ಷ ಡಾ| ಮೋಹನ್‌ ಆಳ್ವ ಮಾತನಾಡಿ, ಸಚಿವ ವಿನಯ ಕುಮಾರ್‌ ಸೊರಕೆ ಅಧಿಕಾರ ಇದ್ದಾಗಲೂ, ಇಲ್ಲದೇ ಇದ್ದಾಗಲೂ ಸದಾ ಸಾಮಾನ್ಯ ಜನರೊಂದಿಗೇ ಒಡನಾಟ ಇಟ್ಟುಕೊಂಡವರು. ಜಾತಿ, ಮತ, ಭೇಧಗಳ ತಾರತಮ್ಯವಿಲ್ಲದೇ ಕಾರ್ಯ ನಿರ್ವಹಿಸುತ್ತಾ ಬರುತ್ತಿರುವ ಸೊರಕೆ ಕೇವಲ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸೀಮಿತರಾದವರಲ್ಲ. ಇಡೀ ಕರ್ನಾಟಕ ರಾಜ್ಯದ ಆಸ್ತಿ ಮತ್ತು ಸಮಸ್ತ ಕನ್ನಡಿಗರ ಸೊತ್ತು ಎಂದರು.

ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ: ಕಟಪಾಡಿ ಶಂಕರ ಪೂಜಾರಿ

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮಾತನಾಡಿ, ಪ್ರಾರಂಭದಲ್ಲಿ ಕಾಪು ಪಟ್ಟಣ ಪಂಚಾಯತ್‌ ನಿರ್ಮಾಣಕ್ಕೆ ನನ್ನ ವಿರೋಧ ಇತ್ತು. ಆದರೆ ಈಗ ಪುರಸಭೆ ನಿರ್ಮಾಣವಾಗಿದೆ. ಆ ಮೂಲಕ ಅಭಿವೃದ್ಧಿಗೆ ತೆರದುಕೊಂಡ ಕ್ಷೇತ್ರವಾಗಿ ಮೂಡಿ ಬಂದಿದೆ. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಅಭಿವೃದ್ಧಿ ಮಾಡುವಾಗ ಜನರಿಗೆ ತೊಂದರೆಗಳಾಗದಂತೆ ನೋಡಿಕೊಳ್ಳುವುದು ಅತ್ಯವಶ್ಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ನಾಡೋಜ ಡಾ| ಜಿ. ಶಂಕರ್‌, ಶಿರ್ವ ಚರ್ಚ್‌ನ ಧರ್ಮಗುರು ರೆ| ಫಾ| ಸ್ಟಾನಿ ತಾವ್ರೋ, ಮೂಳೂರು ಅಲ್‌ ಇಹ್ಸಾನ್‌ ಸಂಸ್ಥೆಯ ಧರ್ಮಗುರು ಮೌಲಾನಾ ಯು.ಕೆ. ಮುಸ್ತಫಾ ಸ ಅದಿ ಶುಭಾಶಂಸನೆಗೈದರು.

ಪೌರ ಸಮ್ಮಾನ ಸಮಿತಿ ಸಂಚಾಲಕರಾದ ಕೆ.ಪಿ. ಆಚಾರ್ಯ, ಡಾ| ಕೆ. ಪ್ರಭಾಕರ ಶೆಟ್ಟಿ, ಶೇಖರ್‌ ಸಾಲ್ಯಾನ್‌, ಮೋಹನ್‌ ಬಂಗೇರ, ಶ್ರೀಧರ ಶೆಣೈ, ರಮೇಶ್‌ ಹೆಗ್ಡೆ, ಶಭೀ ಅಹಮ್ಮದ್‌ ಖಾಝಿ, ಮನೋಹರ್‌ ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಾಧವ ಆರ್‌. ಪಾಲನ್‌ ಮೊದಲಾದವರು ಉಪಸ್ಥಿತರಿದ್ದರು.

ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಹರೀಶ್‌ ನಾಯ್ಕ ವಂದಿಸಿದರು. ನವೀನ್‌ ಶೆಟ್ಟಿ ಎಡ್ಮೆಮಾರು, ನೀಲಾನಂದ್‌ ನಾಯ್ಕ, ಶಿವಣ್ಣ ಬಾಯಾರ್‌ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment