Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಉತ್ತರಪ್ರದೇಶ: ಲಂಚ ನೀಡದ ಪತ್ರಕರ್ತನ ತಾಯಿಗೆ ಪೊಲೀಸರಿಂದ ಬೆಂಕಿ

Woman-ಬಾರಾಬಂಕಿ: ಉತ್ತರ ಪ್ರದೇಶ ಪೊಲೀಸರ ದುರುಳತನಕ್ಕೆ ಸಾಕ್ಷಿ ಎಂಬಂತೆ ಪತ್ರಕರ್ತನೊಬ್ಬನ ಮಧ್ಯ ವಯಸ್ಸಿನ ತಾಯಿ ತಮಗೆ ಲಂಚ ಕೊಡಲು ನಿರಾಕರಿಸಿದಳೆಂಬ ಕಾರಣಕ್ಕೆ ಇಬ್ಬರು ಪೊಲೀಸರು ಆಕೆಯ ಮೇಲೆ ಲೈಂಗಿಕ ಕಿರುಕುಳ ಕೊಟ್ಟು, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ.

ತೀವ್ರ ಸುಟ್ಟಗಾಯಗಳೊಂದಿಗೆ ಲಕ್ನೋ ಆಸ್ಪತ್ರೆಗೆ ದಾಖಲಿಸಲ್ಪಟ್ಟ 40 ವರ್ಷ ಪ್ರಾಯದ ಆ ಮಹಿಳೆ ಸೋಮವಾರ ಮಧ್ಯ ರಾತ್ರಿಯ ಬಳಿಕ ಕೊನೆಯುಸಿರೆಳೆದಿರುವುದಾಗಿ ಪೊಲೀಸ್‌ ಸುಪರಿಂಟೆಂಡೆಂಟ್‌ ಅಬ್ದುಲ್‌ ಹಮೀದ್‌ ತಿಳಿಸಿದ್ದಾರೆ.

ಈ ಅಮಾನುಷ ಹಾಗೂ ನಾಚಿಕೆಗೇಡಿನ ಪ್ರಕರಣದ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರು ಆದೇಶಿಸಿದ್ದಾರೆ. ಅಪರಾಧ ಎಸಗಿರುವ ಪೊಲೀಸರಾದ ಠಾಣಾಧಿಕಾರಿ ರಾಮ್‌ ಸಾಹೇಬ್‌ ಸಿಂಗ್‌ ಯಾದವ್‌ ಮತ್ತು ಎಸ್‌ಐ ಅಖೀಲೇಶ್‌ ರೈ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದೆಂಬ ಭರವಸೆಯನ್ನು ಅವರು ನೀಡಿದ್ದಾರೆ.

ಈ ಆಘಾತಕಾರಿ ಘಟನೆಯು ಸೋಮವಾರ ಕೋಠಿ ಪೊಲೀಸ್‌ ಠಾಣೆಯಲ್ಲಿ ನಡೆಯಿತು. ಈ ಘಟನೆಯನ್ನು ಅನುಸರಿಸಿ ಹಿರಿಯ ಅಧಿಕಾರಿಗಳು ಆರೋಪಿ ಪೊಲೀಸರಿಬ್ಬರನ್ನು ಸೇವೆಯಿಂದ ಅಮಾನತು ಮಾಡಿ ಅವರ ವಿರುದ್ಧ ಕೇಸು ದಾಖಲಿಸಿದರು.

ವಿಚಿತ್ರವೆಂದರೂ ಈ ಪ್ರಕರಣದ ಆರೋಪಿಗಳಾಗಿರುವ ಇಬ್ಬರೂ ಪೊಲೀಸರು ತಮ್ಮ ಮೇಲೆ ಆರೋಪಗಳನ್ನು ಅಲ್ಲಗಳೆದಿದ್ದಾರೆ ಮತ್ತು ಮಹಿಳೆಯು ತಾನೇ ತನ್ನ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

ಮೃತಪಟ್ಟಿರುವ ಮಹಿಳೆಯ ಹೆಸರು ನೀತೂ ದ್ವಿವೇದಿ ಎಂದು ತಿಳಿದುಬಂದಿದೆ.
“ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ನನ್ನ ಪತಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ಠಾಣೆಗೆ ಹೋಗಿದ್ದ ನನ್ನ ಮೇಲೆ ಅಲ್ಲಿನ ಇಬ್ಬರು ಪೊಲೀಸರು ಲೈಂಗಿಕವಾಗಿ ಹಲ್ಲೆ ನಡೆಸಿ ಅವಮಾನಿಸಿದರು. ಪತಿಯ ಬಿಡುಗಡೆಗೆ ಒಂದು ಲಕ್ಷ ರೂ. ಲಂಚ ಕೊಡಬೇಕೆಂದು ಆ ಪೊಲೀಸರು ಕೇಳಿದ್ದರು. ಅದನ್ನು ಕೊಡಲು ನಾನು ನಿರಾಕರಿಸಿದೆ. ಅದಕ್ಕಾಗಿ ಅವರು ಈ ರೀತಿಯಾಗಿ ನನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ಮಹಿಳೆಯು ಮ್ಯಾಜಿಸ್ಟ್ರೇಟರು ಹಾಗೂ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಉತ್ತರ ಪ್ರದೇಶ ಪೊಲೀಸರು ಶಹಜಹಾನ್‌ಪುರ ಜಿಲ್ಲೆಯಲ್ಲಿ ಪತ್ರಕರ್ತ ಜಗೇಂದ್ರ ಸಿಂಗ್‌ ಅವರನ್ನು ಬೆಂಕಿ ಹಚ್ಚಿ ಕೊಂದಿರುವುದಾಗಿ ಆರೋಪಿಸಲಾಗಿತ್ತು. ಇದೀಗ ಅದೇ ಬಗೆಯ ಘಟನೆಯ ಪುನರಾವರ್ತನೆ ಎಂಬಂತೆ ನಡೆದಿರುವ ಈ ಘಟನೆಯಲ್ಲಿ ಮಹಿಳೆಯ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಫೋಟೋಗಳು ವಿದ್ಯುನ್ಮಾನ ಮಾಧ್ಯಮದಲ್ಲಿ ಸಾಂಕ್ರಾಮಿಕವಾಗಿ ಅಸಂಖ್ಯ ಜನರನ್ನು ತಲುಪುತ್ತಿದ್ದು ಪೊಲೀಸ್‌ ವ್ಯವಸ್ಥೆ ವ್ಯಾಪಕ ಖಂಡನೆಗೆ ಗುರಿಯಾಗುತ್ತಿದೆ.

No Comments

Leave A Comment