Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಲೋಕಾಯುಕ್ತರ ಭ್ರಷ್ಟಾಚಾರ ಪ್ರಕರಣ: ರಾಜ್ಯಪಾಲ ವಾಲಾ ಪ್ರವೇಶ

vajubahi-wಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಲೋಕಾಯುಕ್ತರ ಭ್ರಷ್ಟಾಚಾರ ಪ್ರಕರಣಕ್ಕೆ ಇದೀಗ ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ಮಧ್ಯಪ್ರವೇಶಿಸಿದ್ದು, ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಈ ಹಗರಣದ ಬಗ್ಗೆ ಲೋಕಾಯುಕ್ತರಿಂದ ಸ್ಪಷ್ಟನೆ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಈ ಭ್ರಷ್ಟಾಚಾರ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿರುವ ಹಂತದಲ್ಲಿ ಸೋಮವಾರ ರಾಜ್ಯಪಾಲರು ಲೋಕಾಯುಕ್ತರಿಗೆ ದೂರವಾಣಿ ಕರೆ ಮಾಡಿ ಸುದೀರ್ಘ‌ ಮಾತುಕತೆ ನಡೆಸಿ ಪ್ರಕರಣದ ಬಗ್ಗೆ ಲೋಕಾಯುಕ್ತರಿಂದ ವಿವರಣೆ ಪಡೆದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕಿರುವ ಸಂಸ್ಥೆಯ ಬಗ್ಗೆಯೇ ಇಂತಹ ಆರೋಪ ಬರಲು ಆಸ್ಪದ ನೀಡಿದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಹೇಳಲಾಗಿದೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ನೀಡುವಂತೆಯೂ ಅವರು ಲೋಕಾಯುಕ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರಿಗೆ ವರದಿಯೊಂದನ್ನು ನೀಡಲು ಲೋಕಾಯುಕ್ತರು ಸೋಮವಾರ ಸಿದ್ಧತೆ ನಡೆಸಿದರು ಎಂದೂ ಲೋಕಾಯುಕ್ತ ಮೂಲಗಳು ಹೇಳಿವೆ.

ಸೋಮವಾರ ಬೆಳಗ್ಗೆ 9.30ರ ವೇಳೆಗೆ ಕಚೇರಿಗೆ ಆಗಮಿಸಿದ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‌ ರಾವ್‌ ಅವರು ಸಂಜೆವರೆಗೂ ಕಚೇರಿಯಲ್ಲಿದ್ದರು. ಸಾಮಾನ್ಯವಾಗಿ ಮಧ್ಯಾಹ್ನ ಊಟ ಮಾಡಲು ನಿವಾಸಕ್ಕೆ ತೆರಳುವ ಅಭ್ಯಾಸ ಹೊಂದಿರುವ ಲೋಕಾಯುಕ್ತರು ಸೋಮವಾರ ಊಟಕ್ಕೂ ತೆರಳದೆ ಸಂಜೆವರೆಗೆ ಕಚೇರಿಯಲ್ಲಿಯೇ ಕಳೆದರು. ಸಂಜೆ 5.30ರ ವೇಳೆಗೆ ಮನೆಗೆ ಹಿಂತಿರುಗಿದ್ದಾರೆ. ಈ ಅವಧಿಯಲ್ಲಿ ಪ್ರಕರಣಕ್ಕ ಸಂಬಂಧಿಸಿದಂತೆ ವರದಿಯ ಕರಡು ಸಿದ್ಧಪಡಿಸಲು ಮುಂದಾಗಿದ್ದರು ಎನ್ನಲಾಗಿದೆ.

ಮೂಟೆಯಲ್ಲಿ ಕಡತ ರವಾನೆ?

ಲೋಕಾಯುಕ್ತರು ನಿರ್ಗಮಿಸುವ ವೇಳೆ ಸಂಸ್ಥೆಗೆ ಸೇರಿದ ಕಡತಗಳನ್ನು ನಾಲ್ಕು ಮೂಟೆಗಳಲ್ಲಿ ಕಟ್ಟಿ ಸಾಗಿಸಲಾಗಿದೆ ಎಂದು ಲೋಕಾಯುಕ್ತ ಕಚೇರಿಯ ಮೂಲಗಳು ತಿಳಿಸಿವೆ. ಸಂಸ್ಥೆಯ ಕೆಲ ಸಿಬ್ಬಂದಿ ಹಲವು ಕಡತ ಹೊಂದಿದ್ದ ನಾಲ್ಕು ಮೂಟೆಗಳನ್ನು ಅವರ ಕಾರಿನಲ್ಲಿ ಸಾಗಿಸಿದರು. ಈ ಕಡತಗಳು ಯಾವುವು, ಯಾವ ಪ್ರಕರಣಕ್ಕೆ ಸಂಬಂಧಿಸಿದವು ಮತ್ತು ಅವುಗಳನ್ನು ಎಲ್ಲಿಗೆ ಹಾಗೂ ಯಾತಕ್ಕಾಗಿ ಕೊಂಡೊಯ್ಯಲಾಯಿತು ಎಂಬುದು ನಿಗೂಢವಾಗಿದೆ.

ಮೂಲಗಳ ಪ್ರಕಾರ, ರಾಜ್ಯಪಾಲರು ಮಾಹಿತಿ ಕೋರಿರುವ ಹಿನ್ನೆಲೆಯಲ್ಲಿ ವರದಿ ಸಿದ್ಧಪಡಿಸಲು ಕಡತಗಳನ್ನು ಕೊಂಡೊಯ್ದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಒಂದೆರಡು ದಿನದಲ್ಲಿ ರಾಜ್ಯಪಾಲರಿಗೆ ವರದಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಉಪಲೋಕಾ ಮಜಗೆ ಜತೆ ಚರ್ಚೆ

ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‌ ರಾವ್‌ ಅವರು ಉಪಲೋಕಾಯುಕ್ತ ನ್ಯಾ.ಎಸ್‌.ಬಿ.ಮಜಗೆ ಅವರೊಂದಿಗೆ ಸೋಮವಾರ ಮಧ್ಯಾಹ್ನ ಸುದೀರ್ಘ‌ವಾಗಿ ಚರ್ಚಿಸಿದರು. ಆದರೆ, ಚರ್ಚೆಯ ವಿವರ ಬಹಿರಂಗಗೊಂಡಿಲ್ಲ.

ಪ್ರಸ್ತುತ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆಯಾದರೂ, ಉಪಲೋಕಾಯುಕ್ತ ನ್ಯಾ.ಎಸ್‌.ಬಿ.ಮಜಗೆ ಅವರು ಅದನ್ನು ನಿರಾಕರಿಸಿದ್ದಾರೆ. ಲೋಕಾಯುಕ್ತರೊಂದಿಗೆ ಬೇರೆ ಪ್ರಕರಣಗಳ ಬಗ್ಗೆ ಚರ್ಚಿಸಲಾಗಿದೆ. ಲೋಕಾಯುಕ್ತರು ಆಗಾಗ್ಗೆ ಉಪಲೋಕಾಯುಕ್ತರನ್ನು ಕರೆದು ನಮ್ಮ ಬಳಿ ಇರುವ ಪ್ರಕರಣಗಳ ಬೆಳವಣಿಗೆ ಕುರಿತು ಮಾಹಿತಿ ಪಡೆದುಕೊಳ್ಳುತ್ತಾರೆ. ಅದರಂತೆ ಸೋಮವಾರವೂ ಚರ್ಚಿಸಲಾಗಿದೆ ಎಂದರು.

ಸರ್ಕಾರದಿಂದ ವರದಿ ಕೇಳಿಲ್ಲ: ಸಿಎಂ ಕಚೇರಿ

ಈ ನಡುವೆ ರಾಜ್ಯಪಾಲರು ಲೋಕಾಯುಕ್ತ ಪ್ರಕರಣದ ಬಗ್ಗೆ ಸರ್ಕಾರದಿಂದಲೂ ವರದಿ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಮುಖ್ಯಮಂತ್ರಿ ಕಚೇರಿಯ ಮೂಲಗಳು ಸ್ಪಷ್ಟವಾಗಿ ಅಲ್ಲಗಳೆದಿದ್ದು, ಸೋಮವಾರ ಸಂಜೆಯವರೆಗೂ ರಾಜ್ಯಪಾಲರ ಕಚೇರಿಯಿಂದ ಇಂತಹ ಯಾವುದೇ ಪತ್ರ ಬಂದಿಲ್ಲ ಎಂದು ಸ್ಪಷ್ಟಪಡಿಸಿವೆ.

ಭಾಸ್ಕರ್‌ರಾವ್‌ ಸುದೀರ್ಘ‌ ರಜೆ?

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣದ ಬೇಡಿಕೆ ಪ್ರಕರಣದ ಸಂಬಂಧ ಸಾಕಷ್ಟು ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‌ ರಾವ್‌ ಸುದೀರ್ಘ‌ ರಜೆಯ ಮೇಲೆ ತೆರಳುವಂತೆ ಅವರ ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ವಕೀಲರ ಸಂಘದ ಮಾಜಿ ಅಧ್ಯಕ್ಷ ಸುಬ್ಟಾರೆಡ್ಡಿ ಹಲವು ಬಾರಿ ಲೋಕಾಯುಕ್ತರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿ, ಇಲ್ಲವೇ ತನಿಖೆ ಮುಗಿಯುವವರೆಗೆ ರಜೆಯ ಮೇಲೆ ತೆರಳಿ ಎಂದು ಸಲಹೆ ನೀಡಿದ್ದರು. ಇವರಲ್ಲದೆ, ಇನ್ನೂ ಹಲವರು ಸದ್ಯದ ಪರಿಸ್ಥಿತಿಯಲ್ಲಿ ಸುದೀರ್ಘ‌ ರಜೆ ಮೇಲೆ ತೆರಳುವುದು ಉತ್ತಮ ಮಾರ್ಗ ಎಂದು ಲೋಕಾಯುಕ್ತರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

No Comments

Leave A Comment