Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಚ್ಚಿನ ಏಟಿಗೆ ಮಹಿಳೆಯ ಮುಂಗೈ ತುಂಡು

kai (1)ಬೆಂಗಳೂರು: ಮರಳು ವ್ಯಾಪಾರಿಗಳ ನಡುವಿನ ಗಲಾಟೆಯಲ್ಲಿ ಮಹಿಳೆಯೊಬ್ಬರು ಬಲಗೈ ಕಳೆದುಕೊಂಡ ಘಟನೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಸಮೀಪ ನಡೆದಿದೆ. ಇಲ್ಲಿನ ಕೆಂಪೇಗೌಡನಗರದ ನಿವಾಸಿ ಮಂಗಳಗೌರಿ (23) ಬಲಗೈ ಕಳೆದುಕೊಂಡವರು. ಅವರ ಪತಿ ರಾಘವೇಂದ್ರ (30)ನ ಮೇಲೆ ಸಹ ಹಲ್ಲೆ ನಡೆದಿದ್ದು, ಗಾಯಾಳುಗಳು ಸುಂಕದಕಟ್ಟೆ ಸಮೀಪದ ಲಕ್ಷ್ಮೀ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿ ಪರಾರಿಯಾಗಿರುವ ಮರಳು ವ್ಯಾಪಾರಿಗಳಾದ ಕುಣಿಗಲ್‌ನ ಟಿ. ಹೊಸಹಳ್ಳಿಯ ಕೃಷ್ಣ ಮತ್ತು ಗೊಲ್ಲರಹಟ್ಟಿಯ ಸಂದೀಪ್‌ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ರಾಘವೇಂದ್ರ ಅವರ ಮನೆಯಲ್ಲಿ ಬಾಡಿಗೆಗಿರುವ ನಂಜೇಗೌಡನ ಜತೆ ಆರೋಪಿಗಳು ಜಗಳ ಮಾಡಿದ್ದರು. ಈ ವೇಳೆ, ತಮ್ಮ ಮನೆಯ ಬಳಿ ಗಲಾಟೆ ಮಾಡದಂತೆ ಆರೋಪಿಗಳಿಗೆ ರಾಘವೇಂದ್ರ ಅವರು ತಾಕೀತು ಮಾಡಿತ್ತು. ಇದರಿಂದ ಕೋಪಗೊಂಡ ದುಷ್ಕರ್ಮಿಗಳು, ಗುರುವಾರ ರಾತ್ರಿ 8ರ ಸುಮಾರಿಗೆ ರಾಘವೇಂದ್ರ ಅವರ ನಿವಾಸಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಮಂಗಳಗೌರಿ ಅವರ ಬಲಗೈ ತುಂಡಾದರೆ, ರಾಘವೇಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಅವರ ತುಂಡಾದ ಕೈ ಜೋಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯಾರಿಗೋ ಶಿಕ್ಷೆ:
ಖಾಸಗಿ ಕಂಪನಿಯ ಉದ್ಯೋಗಿ ರಾಘವೇಂದ್ರ, ತಮ್ಮ ಪತ್ನಿ ಮತ್ತು ಮಗು ಜತೆ ಕೆಂಪೇಗೌಡನಗರದಲ್ಲಿ ವಾಸವಾಗಿದ್ದಾರೆ. ಅವರ ಒಡೆತನದಲ್ಲಿ ನಾಲ್ಕು ಮನೆಗಳಿದ್ದು, ಎರಡು ಮನೆಗಳಲ್ಲಿ ನಂಜೇಗೌಡ ಹಾಗೂ ಅವರ ಭಾಮೈದ ಕುಮಾರ್‌ ನೆಲೆಸಿದ್ದಾರೆ. ಇವರು ಮರಳು ವ್ಯವಹಾರದಲ್ಲಿ ತೊಡಗಿದ್ದು, ಮರಳು ವಿಷಯದಲ್ಲಿ ಕುಮಾರ್‌ ಜತೆ ಕೃಷ್ಣ ಮತ್ತು ಸಂದೀಪ್‌ಗೆ ಮನಸ್ತಾಪ ಉಂಟಾಗಿತ್ತು.

ಬುಧವಾರ ಮನೆ ಬಳಿಗೆ ಬಂದಿದ್ದ ಕೃಷ್ಣ, ಕುಮಾರನ ಮೇಲೆ ಕೂಗಾಡಿ ರಾದ್ಧಾಂತ ಮಾಡಿದ್ದ. ಆ ವೇಳೆ ಮಧ್ಯಪ್ರವೇಶಿಸಿದ ನಂಜೇಗೌಡ, ರಾಜೀ-ಸಂಧಾನ ನಡೆಸಲು ಮುಂದಾಗಿದ್ದಾರೆ. ಒಂದು ಲಾರಿ ಮರಳನ್ನು 50 ಸಾವಿರ ರೂ. ಬದಲಿಗೆ 30 ಸಾವಿರ ರೂ.ಗೆ ಮಾರಾಟ ಮಾಡುವಂತೆ ಕೃಷ್ಣ ಕೇಳಿದ್ದ. ಆದರೆ, ಇದಕ್ಕೆ ಕುಮಾರ್‌ ಒಪ್ಪದಿದ್ದಾಗ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ.

ತಮ್ಮ ಮನೆಯ ಬಾಡಿಗೆದಾರರ ಜತೆ ನಡೆಯುತ್ತಿದ್ದ ಗಲಾಟೆಯ ಸದ್ದು ಕೇಳಿ ಮನೆಯಿಂದ ಹೊರಬಂದ ರಾಘವೇಂದ್ರ ಅವರು ಕೃಷ್ಣ ಹಾಗೂ ಸಂದೀಪ್‌ ವರ್ತನೆಗೆ ಆಕ್ಷೇಪಿಸಿದ್ದಾರೆ. ಅಲ್ಲದೆ ಮನೆ ಹತ್ತಿರ ಬಂದು ಗಲಾಟೆ ಮಾಡದಂತೆ ಅವರಿಗೆ ತಾಕೀತು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು, ರಾಘವೇಂದ್ರಗೆ ಧಮಕಿ ಹಾಕಿ ತೆರಳಿದ್ದರು.

ಈ ಜಿದ್ದಿನಲ್ಲಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ದುಷ್ಕರ್ಮಿಗಳು, ಮತ್ತೆ ನಂಜೇಗೌಡನನ್ನು ಹುಡುಕಿಕೊಂಡು ಬಂದಿದ್ದಾರೆ. ಆದರೆ, ಆ ವೇಳೆ ನಂಜೇಗೌಡ, ತನ್ನ ಪತ್ನಿಯನ್ನು ಕರೆದುಕೊಂಡು ಕೆಂಗೇರಿ ಸಮೀಪದಲ್ಲಿರುವ ಆಕೆಯ ತವರು ಮನೆಗೆ ಹೋಗಿದ್ದರು. ಆ ವೇಳೆ ಮನೆ ಬಳಿ ಕಾಣಿಸಿಕೊಂಡ ಮಂಗಳಗೌರಿ ನಿವಾಸಕ್ಕೆ ಏಕಾಏಕಿ ಆರೋಪಿಗಳು ನುಗ್ಗಿದ್ದಾರೆ. ಆಕೆಯನ್ನು ನಂಜೇಗೌಡನ ಪತ್ನಿ ಎಂದು ಭಾವಿಸಿದ ಆರೋಪಿಗಳು, ಮಚ್ಚು ಬೀಸಿದ್ದಾರೆ. ಆ ವೇಳೆ ಆಕೆ ಬಲಗೈ ಅಡ್ಡ ತಂದಾಗ ತೀವ್ರವಾಗಿ ಪೆಟ್ಟು ಬಿದ್ದು ಮುಂಗೈ ತುಂಡಾಗಿದೆ.

ಆ ವೇಳೆ ಅಂಗಡಿಗೆ ದಿನಸಿ ಖರೀದಿಗೆ ಹೋಗಿದ್ದ ರಾಘವೇಂದ್ರ ಮನೆಗೆ ಮರಳಿದಾಗ ಅವರಿಗೂ ಮುಷ್ಠಿಯಿಂದ ಗುದ್ದಿ, ಮಚ್ಚಿನಲ್ಲಿ ಹಿಂಭಾಗದಿಂದ ಹೊಡೆದಿದ್ದಾರೆ. ಅಷ್ಟರಲ್ಲಿ ದಂಪತಿಯ ಚೀರಾಟ ಕೇಳಿ ನೆರೆಹೊರೆಯವರು ಜಮಾಯಿಸಿದ್ದು ಕೂಡಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಐದು ತಾಸು ಶಸ್ತ್ರಚಿಕಿತ್ಸೆ:
ಮಂಗಳಗೌರಿ ಅವರಿಗೆ ಲಕ್ಷ್ಮೀ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ಗುರುವಾರ ರಾತ್ರಿ ಐದು ತಾಸುಗಳ ಶಸ್ತ್ರ ಚಿಕಿತ್ಸೆ ನಡೆಸಿ ತುಂಡಾದ ಮುಂಗೈಯನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದೆ. ಘಟನೆ ನಡೆದ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಮುಂಗೈ ಸಂಪೂರ್ಣ ಬೇರ್ಪಟ್ಟಿದ್ದರಿಂದ ಮರುಜೋಡಣೆ ಸಾಧ್ಯವಾಗಿದೆ ಎಂದು ಲಕ್ಷ್ಮೀ ಆಸ್ಪತ್ರೆಯ ಮುಖ್ಯಸ್ಥ ಡಾ. ಗಿರಿಧರ್‌ ತಿಳಿಸಿದ್ದಾರೆ.

ಮಂಗಳಗೌರಿ ಅವರ ಕೈ ಮರು ಜೋಡಣೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿರುವುದರಿಂದ 24 ತಾಸು ನಿಗಾ ಘಟಕದಲ್ಲಿಡಲಾಗಿದ್ದು, ಅವರ ಆರೋಗ್ಯ ಸುಧಾರಣೆ ವರದಿ ನಂತರ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ.
-ಡಾ.ಗಿರಿಧರ್‌, ಮುಖ್ಯಸ್ಥ, ಲಕ್ಷ್ಮೀ ಸೂಪರ್‌ ಸ್ಪೆಷಾಲ್ಟಿ ಆಸ್ಪತ್ರೆ

ಕೆಂಪೇಗೌಡ ನಗರದ ಮಂಗಳಗೌರಿ ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗೆ ಮಾಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಮರಳು ವ್ಯಾಪಾರದ ವಿಚಾರವಾಗಿ ಈ ಕೃತ್ಯ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
-ಲಕ್ಷ್ಮೀ ಗಣೇಶ್‌, ಡಿವೈಎಸ್ಪಿ, ರಾಮನಗರ ಉಪವಿಭಾಗ

ಮರಳು ವಿಚಾರವಾಗಿ ಮನೆ ಬಾಡಿಗೆದಾರರ ಬಳಿ ಕೃಷ್ಣ, ಸಂದೀಪ್‌ ಗಲಾಟೆ ಮಾಡುತ್ತಿದ್ದರು. ಆಗ ಕುಡಿದು ಬಂದು ಮನೆ ಹತ್ತಿರ ಜಗಳ ಮಾಡದಂತೆ ಅವರಿಗೆ ಬುದ್ಧಿವಾದ ಹೇಳಿದ್ದೇವೆ. ಅದಕ್ಕೆ ಅವರು ಹಗೆತನ ಸಾಧಿಸಿ ನಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
-ರಾಘವೇಂದ್ರ, ಗಾಯಾಳು ಮಂಗಳಗೌರಿ ಪತಿ

No Comments

Leave A Comment