Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ನ್ಯಾ.ಮುಖರ್ಜಿ, ನಾಗರತ್ನ ವಿಭಾಗೀಯ ಪೀಠದಿಂದ ಪಿಐಎಲ್‌ ಅರ್ಜಿ ವಿಚಾರಣೆ ರೈತರ ಸಾವು: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

High-couಬೆಂಗಳೂರು: ‘ರೈತರ ಆತ್ಮಹತ್ಯೆ ತಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಗಮನ ಹರಿಸಬೇಕು’ ಎಂದು ಹೈಕೋರ್ಟ್ ಸೂಚಿಸಿದೆ.

ಈ ಕುರಿತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಳೆದ ವರ್ಷ ದಾಖಲಿಸಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಕೃಷಿ ಸಚಿವಾಲಯದ ಕಾರ್ಯದರ್ಶಿ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ತುರ್ತು ನೋಟಿಸ್‌ ಜಾರಿ ಮಾಡುವಂತೆ ಆದೇಶಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, ‘ರೈತರಿಗಾಗಿಯೇ ರೂಪಿಸಲಾಗಿರುವ ಸುವರ್ಣ ಭೂಮಿ ಯೋಜನೆ, ಬರ ಪರಿಹಾರ ನಿಧಿ, ಋತುಮಾನ ಆಧಾರಿತ ಬೆಳೆ ವಿಮೆಗಳು ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದರಿಂದಾಗಿ ರಾಜ್ಯವೂ ಸೇರಿದಂತೆ ದೇಶದ ವಿವಿಧೆಡೆ ರೈತರ ಆತ್ಮಹತ್ಯೆ ಮತ್ತು ವಲಸೆ ಪ್ರಕರಣಗಳು ಹೆಚ್ಚುತ್ತಿವೆ’ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ವಕೀಲರು, ‘ಈ ಪ್ರಕರಣದಲ್ಲಿ ಅರ್ಜಿದಾರರು  ರೈತರ ಪರವಾಗಿ ಪ್ರಶ್ನಿಸುವ ಹಕ್ಕು ಹೊಂದಿಲ್ಲ’ ಎಂದು ಪ್ರತಿಪಾದಿಸಿದರು. ಆದರೆ ಆಕ್ಷೇಪಣೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಇದು ಕಾನೂನು ಪರಿಧಿಯಲ್ಲಿನ ತಾಂತ್ರಿಕ ಅಂಶಗಳಿಂದ ನೋಡುವಂಥದ್ದಲ್ಲ. ಬದಲಿಗೆ ಇದನ್ನು ಮಾನವೀಯತೆಯ ಆಧಾರದಿಂದ ನೋಡಬೇಕು’ ಎಂದಿತು.

‘ರೈತರಿಗಾಗಿ ಇರುವ ಯೋಜನೆಗಳನ್ನು ಯಾಕೆ ಸರಿಯಾಗಿ ಜಾರಿಗೊಳಿಸುತ್ತಿಲ್ಲ’ ಎಂದು ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿದ ಪೀಠ, ‘ಬಹುಶಃ ಯೋಜನೆಗಳ ಸಮರ್ಪಕ ಜಾರಿಯೊಂದರಿಂದಲೇ ಈ ಆತ್ಮಹತ್ಯೆಗಳು ನಿಲ್ಲುವುದಿಲ್ಲ. ಆದರೆ ಅವುಗಳ ಪ್ರಮಾಣ ಒಂದಿಷ್ಟು ಕಡಿಮೆಯಾಗಬಹುದೇನೋ’ ಎಂದು ಹೇಳಿತು. ಪ್ರಕರಣವನ್ನು ಎರಡು ವಾರ ಮುಂದೂಡಲಾಗಿದೆ.
*
ಈ ಪ್ರಕರಣವನ್ನು ಕಾನೂನಿನ ತಾಂತ್ರಿಕ ಆಧಾರಗಳಲ್ಲಿ  ನೋಡುವುದಕ್ಕಿಂತ ಮಾನವೀಯತೆಯ ನೆಲೆಗಟ್ಟಿನಲ್ಲಿ ಗಮನಿಸಬೇಕು
– ಎಸ್‌.ಕೆ.ಮುಖರ್ಜಿ,
ಹಂಗಾಮಿ ಮುಖ್ಯ ನ್ಯಾಯಮೂರ್ತಿ

*
ನದಿಗೆ ಹಾರಿ ರೈತ ಆತ್ಮಹತ್ಯೆ
ರಟ್ಟೀಹಳ್ಳಿ (ಹಾವೇರಿ ಜಿಲ್ಲೆ):
 ಸಾಲಬಾಧೆ ತಾಳಲಾರದೇ ರೈತರೊಬ್ಬರು ಕುಮುದ್ವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಸಣ್ಣಗುಬ್ಬಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಮಾರುತೆಪ್ಪ ಸಿದ್ಧಪ್ಪ ಮಕರಿ (65) ಎಂದು ಗುರುತಿಸಲಾಗಿದ್ದು, ಗುರುವಾರ ಮುಂಜಾನೆ ನದಿ ಕಡೆಗೆ ಹೋದವರು ಮರಳಿ ಬಂದಿರಲಿಲ್ಲ. ಆದರೆ ಶುಕ್ರವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.
ಹೊನ್ನಾಳಿ ವರದಿ: ಹೀರಾಭೋವಿ (65) ಎಂಬ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಟಿ. ಗೋಪಗೊಂಡನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
*
‘ತಿನ್ನುವ ಅನ್ನ ಕಂಪ್ಯೂಟರ್‌ನಲ್ಲಿ ಬೆಳೆಯೊಲ್ಲ’
ಬೆಳಗಾವಿ: 
‘ಐ.ಟಿ, ಬಿ.ಟಿ ಗುಂಗಿನಲ್ಲಿರುವ ನಗರ ವಾಸಿಗಳು ಅಕ್ಕಿ, ರಾಗಿ, ಜೋಳ ಬೆಳೆಯುವ ರೈತರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ತಿನ್ನುವ ಆಹಾರ ಕಂಪ್ಯೂಟರ್‌ನಲ್ಲಿ ಬೆಳೆಯುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್‌. ಪುಟ್ಟಣ್ಣಯ್ಯ ಹೇಳಿದರು.

ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಕೃಷಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ರೈತರ ಸಾವನ್ನು ಹಗುರವಾಗಿ ಪರಿಗಣಿಸಬಾರದು. ರೈತರ ಸಾವು ನಮಗೂ ಸಾಯಲು ಸಿದ್ಧರಿರುವಂತೆ ನೀಡುತ್ತಿರುವ ಸ್ಪಷ್ಟ ಸಂದೇಶ’ ಎಂದು ಎಚ್ಚರಿಸಿದರು.

‘ರೈತರ ಸಾವಿನ ವಿಷಯದಲ್ಲಿ ರಾಜಕಾರಣ ಮಾಡಬಾರದು. ಅನ್ನ ನೀಡುವವನು ಉಳಿದರೆ ನಾವೆಲ್ಲರೂ ಉಳಿಯುತ್ತೇವೆ ಎಂಬುದನ್ನು ಅರಿತು,  ‘ನಿಮ್ಮ ಕಾಲಿಗೆ ಬೀಳ್ತೀವಿ ರೈತರೇ ಸಾಯಬೇಡಿ’ ಎಂದು ಬೇಡಿಕೊಳ್ಳಬೇಕು’ ಎಂದರು.

ಸಾಲ ಮನ್ನಾ ಮಾಡಿ: ರಾಜ್ಯದಲ್ಲಿ ಮುಂದುವರಿದಿರುವ ರೈತರ ಸರಣಿ ಆತ್ಮಹತ್ಯೆ ತಡೆಯಲು ಸರ್ಕಾರ ಅವರ ಸಾಲ ಮನ್ನಾ ಮಾಡುವುದೊಂದೇ ಮಾರ್ಗ ಎಂದು ಜೆಡಿಎಸ್‌ನ ಎನ್‌.ಎಚ್‌. ಕೋನರಡ್ಡಿ ತಿಳಿಸಿದರು.
*
ಬ್ಯಾಂಕ್‌ಗಳು ಕಾರ್‌ ಮೇಳ ನಡೆಸಿ ಸ್ಥಳದಲ್ಲೇ ಸಾಲ ನೀಡುತ್ತವೆ. ಅದರ ಬದಲು ಗ್ರಾಮೀಣರಿಗಾಗಿ ಹಸು ಮೇಳ, ಹಂದಿ ಮೇಳ, ಕುರಿ ಮೇಳ ನಡೆಸಿ ಬಡ್ಡಿರಹಿತ, ಸಬ್ಸಿಡಿ ಸಾಲ ಕೊಡಲಿ.
– ಕೆ.ಎಸ್‌. ಪುಟ್ಟಣ್ಣಯ್ಯ,
ಶಾಸಕ

No Comments

Leave A Comment