Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಡಿಜಿಟಲ್‌ ಇಂಡಿಯಾಗೆ ಮೋದಿ ಚಾಲನೆ: ಭಾರತ ಜ್ಞಾನಸಂಪನ್ನ ದೇಶವಾಗಬೇಕು

modiಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಹಾಗೂ ಅಚ್ಚುಮೆಚ್ಚಿನ ಡಿಜಿಟಲ್‌ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಾಲನೆ ನೀಡಿ, ಇಡಿಯ ವಿಶ್ವದ ಮೇಲೆ ಕಾರ್ಮುಗಿಲಿನಂತೆ ಮುಸುಕಿರುವ ಸೈಬರ್‌ ಸಮರ ಭೀತಿಯಿಂದ ವಿಶ್ವವನ್ನು ನಾವು ಕಾಪಾಡಬೇಕಾಗಿದೆ ಎಂದು ಹೇಳಿದರು.

ದೇಶದ ಎಲ್ಲ ಗ್ರಾಮ ಪಂಚಾಯತ್‌ಗಳನ್ನು ಬ್ರಾಂಡ್‌ ಬ್ಯಾಂಡ್‌ ಇಂಟರ್‌ನೆಟ್‌ ಮೂಲಕ ಪರಸ್ಪರ ಜೋಡಿಸುವ, ವಿದ್ಯುನ್ಮಾನ ಆಡಳಿತವನ್ನು ಊರ್ಜಿತಗೊಳಿಸುವ ಮತ್ತು ಭಾರತವನ್ನು ಜ್ಞಾನಸಂಪನ್ನ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಮಹೋನ್ನತ ಉದ್ದೇಶಗಳನ್ನು ಡಿಜಿಟಲ್‌ ಇಂಡಿಯಾ ಯೋಜನೆ ಹೊಂದಿದೆ ಎಂದವರು ಹೇಳಿದರು.

ಇಡಿಯ ದೇಶವನ್ನು ಒಗ್ಗೂಡಿಸಿ ಪರಸ್ಪರ ಬೆಸೆಯುವ ಹೈಸ್ಪೀಡ್‌ ಡಿಜಿಟಲ್‌ ಹೈವೇಗಳು ಕಾರ್ಯಾಚರಿಸುವ ಡಿಜಿಟಲ್‌ ಭಾರತದ ಅತ್ಯಪೂರ್ವ ಕನಸನ್ನು ನಾನು ಕಾಣುತ್ತಿದ್ದೇನೆ ಎಂದು ತನ್ನ ಭಾಷಣದಲ್ಲಿ ಹೇಳಿದ ಮೋದಿ, ನಾವು ಇಡಿಯ ವಿಶ್ವವನ್ನು ಸೈಬರ್‌ ಸಮರದಿಂದ ರಕ್ಷಿಸಬೇಕಾಗಿದೆ ಎಂದರು.

ಮೇಕ್‌ ಇನ್‌ ಇಂಡಿಯಾ ನಮಗೆ ಎಷ್ಟು ಮುಖ್ಯವೋ ಡಿಸೈನ್‌ ಇನ್‌ ಇಂಡಿಯಾ (ಭಾರತದಲ್ಲೇ ವಿನ್ಯಾಸೀಕರಣ) ಅಷ್ಟೇ ಮುಖ್ಯವಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಆರಂಭಿಕ ಉದ್ಯಮಶೀಲ ಯುವಕರು ಮುಂದೆ ಬಂದು ತಮ್ಮ ಯೋಗದಾನ ನೀಡಬೇಕಾಗಿದೆ. ಅವರಿಗೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲ ಬಗೆಯ ಬೆಂಬಲಗಳನ್ನು ನೀಡುತ್ತೇವೆ ಎಂದು ಮೋದಿ ಹೇಳಿದರು.

ಆಡಳಿತೆಯಲ್ಲಿ ಸರಕಾರದ ಪಾತ್ರವನ್ನು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸುವ ನಮ್ಮ ಕನಸನ್ನು ನಾವು ಸಾಕಾರಗೊಳಿಸಬೇಕಾದರೆ ನಾವು ತಂತ್ರಜ್ಞಾನ ರಂಗದಲ್ಲಿ ಭಾರೀ ದೊಡ್ಡ ಪಾತ್ರವನ್ನು ವಹಿಸಬೇಕಾಗಿದೆ. ನಮ್ಮೆಲ್ಲರ ಮೇಲೆ ಈಗ ಸೈಬರ್‌ ಯುದ್ಧದ ಕಾರ್ಮೋಡಗಳು ಮುಸುಕಿವೆ. ಸೈಬರ್‌ ಸಮರದಿಂದ ನಾವು ಇಡಿಯ ವಿಶ್ವವನ್ನೇ ಕಾಪಾಡಬೇಕಾಗಿದೆ. ಅದಕ್ಕಾಗಿ ಯುವಕರು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬಂದು ತಮ್ಮಲ್ಲಿನ ತಾಂತ್ರಿಕ ಪ್ರತಿಭೆಯನ್ನು ದೇಶದ ಉನ್ನತಿಗಾಗಿ, ರಕ್ಷಣೆಗಾಗಿ ವಿನಿಯೋಗಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರಿಲಯನ್ಸ್‌ ಸಮೂಹದ ಅನಿಲ್‌ ಅಂಬಾನಿ ಅವರು ಮಾತನಾಡಿ ತಮ್ಮ ಕಂಪೆನಿಯು ತಂತ್ರಜ್ಞಾನ ಕ್ಷೇತ್ರದಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಹೂಡುವುದಾಗಿ ಹೇಳಿದರು.

 

No Comments

Leave A Comment