Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಣಿಪಾಲ ವಿವಿ ವಿರುದ್ಧ ಮುಂದುವರಿದ ನಗರಸಭೆ ‘ಸಮರ’

UD-J30-CMCಉಡುಪಿ; ಕಳೆದ ಎರಡು ಸಾಮಾನ್ಯ ಸಭೆಗಳಲ್ಲಿ ಮಣಿಪಾಲ ವಿವಿಯ ಅಕ್ರಮಗಳ ವಿರುದ್ಧ ಮೊಳಗಿಸಿದ ರಣಕಹಳೆಯನ್ನು ಉಡುಪಿ ನಗರಸಭೆ ಇಂದು ನಡೆದ ಸಾಮಾನ್ಯ ಸಭೆಯಲ್ಲೂ ಮುಂದುವರಿಸಿದ್ದು, ವಿವಿಯ ಅಕ್ರಮಗಳಿಗೆ ಕಡಿವಾಣ ಹಾಕಲು ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಗರಸಭೆ ಅಧ್ಯಕ್ಷ ಯುವರಾಜ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಣಿಪಾಲ ವಿವಿಯ ಅಕ್ರಮ ಕಟ್ಟಡ, ಅಕ್ರಮ ವಿದ್ಯುತ್ ಸಂಪರ್ಕ, ಒತ್ತುವರಿ ಭೂಮಿ, ಕಟ್ಟಡ ಪರವಾನಿಗೆ, ಪಾರ್ಕಿಂಗ್‌ಗೆ ಸಂಬಂಧಪಟ್ಟ ಅತ್ಯಂತ ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು.

ಕಾರ್ಯಪಡೆ ರಚನೆ: ಮಣಿಪಾಲ ವಿವಿಯ ಅಕ್ರಮ ಕಟ್ಟಡ ಹಾಗೂ ಜಾಗದ ಬಗ್ಗೆ ಪರಿಶೀಲನೆಗೆ ಸ್ಥಳೀಯ ನಗರಸಭೆ ಸದಸ್ಯರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಯುವರಾಜ್ ಸಭೆಗೆ ತಿಳಿಸಿದರು.

ಮಣಿಪಾಲ ವಿವಿ ಯಾವುದೇ ಕಟ್ಟಡ ನಿರ್ಮಿಸ ಬೇಕಾದರೂ ನಗರಸಭೆಯಿಂದ ಪರವಾನಿಗೆ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಬೇಕು. ಈ ಬಗ್ಗೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಕಳುಹಿ ಸಬೇಕು ಎಂದು ಯಶ್‌ಪಾಲ್ ಸುವರ್ಣ ಹೇಳಿದರು. ಕೆಲವು ಪಿಡಬ್ಲುಡಿ ರಸ್ತೆಗಳನ್ನು ನಗರ ಸಭೆಯ ಗಮನಕ್ಕೆ ತಾರದೆ ಖಾಸಗಿಯವರಿಗೆ ಹಸ್ತಾಂ ತರ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಬೇಕು ಎಂದು ಮಹೇಶ್ ಠಾಕೂರ್ ಆಗ್ರಹಿಸಿದರು.

ಅಧ್ಯಕ್ಷರು ಮಾತನಾಡಿ, ಮಣಿಪಾಲ ವಿವಿ ಯವರ ಅಕ್ರಮ ಕಟ್ಟಡಗಳಿಗೆ ಜಿಲ್ಲಾಧಿಕಾರಿ 1,123 ಕೋಟಿ ರೂ. ದಂಡ ವಿಧಿಸಿದ್ದಾರೆ. 14.95 ಎಕರೆ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ನಿರ್ಮಿಸಿರುವ ಕಟ್ಟಡಕ್ಕೆ ಎಷ್ಟು ದಂಡ ವಿಧಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನು ಮುಂದೆ ಅವರು ಯಾವುದೇ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಪರವಾನಿಗೆ ಪಡೆಯಬೇಕು ಎಂದರು. ಮುಂದೆ ಗ್ರೇಟರ್ ಉಡುಪಿ ನಿರ್ಮಾಣಕ್ಕೆ ನಗರಸಭೆಗೆ ಭೂಮಿಯ ಅಗತ್ಯವಿದ್ದು, ಮಣಿಪಾಲ ವಿವಿಯಿಂದ ವಶಪಡಿಸಿಕೊಂಡ ಭೂಮಿಯನ್ನು ನಗರಸಭೆಗೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ಈಗಾಗಲೇ ವಿವಿಯವರು ಎರಡು ಭೂಮಿಯನ್ನು ಜಿಲ್ಲಾಡಳಿತಕ್ಕೆ ನೀಡಲು ಮುಂದೆ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಣಿಪಾಲ ವಿವಿಯ ವಶದಲ್ಲಿರುವ ಭೂಮಿಯ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.

ಹೈಕೋರ್ಟ್ ತಡೆಯಾಜ್ಞೆ: ಮಣಿಪಾಲ ವಿವಿಗೆ ಸಂಬಂಧಪಟ್ಟ ಅಕ್ರಮ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದನ್ನು ಕಡಿತಗೊಳಿಸುವ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ಬಗ್ಗೆ ಮೆಸ್ಕಾಂ ಹಾಗೂ ನಗರಸಭೆಗೆ ಸೂಚನೆ ನೀಡಲಾಗಿದೆ.

ಈ ವಿಷಯವನ್ನು ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು. ಈಗಾಗಲೇ ಈ ಕಟ್ಟಡಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ಬಗ್ಗೆ ನೋಟಿಸ್ ನೀಡಿ, ವಿಜಿಲೆನ್ಸ್‌ಗೆ ಪತ್ರ ಬರೆಯಲಾಗಿತ್ತು. ಬಳಿಕ ಈ ಕುರಿತು ಪರಿಶೀಲನೆ ನಡೆಸಿದಾಗ ಈ ಕಟ್ಟಡಕ್ಕೆ ಡೋರ್ ನಂಬರ್ ಇಲ್ಲದಿರುವುದು ಕಂಡುಬಂದಿತ್ತು. ಆದರೆ ಕ್ರಮ ತೆಗೆದುಕೊಳ್ಳುವ ಮೊದಲೇ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಡೋರ್ ನಂಬರ್ ಇಲ್ಲದೇ ವಿದ್ಯುತ್ ಸಂಪರ್ಕ ನೀಡುವುದು ಅಕ್ರಮವಾಗಿರುತ್ತದೆ. ಈ ಬಗ್ಗೆ ಕಳೆದ ಎರಡು ತಿಂಗಳುಗಳಿಂದ ನಗರಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಆದರೂ ಮೆಸ್ಕಾಂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿರುವುದರಿಂದ ಇದೀಗ ತಡೆಯಾಜ್ಞೆ ತರಲು ಮಣಿಪಾಲ ವಿವಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಮೆಸ್ಕಾಂ ಸರಕಾರದ ಪರ ಇರಬೇಕೇ ಹೊರತು ಖಾಸಗಿ ಸಂಸ್ಥೆಯ ಪರ ಅಲ್ಲ. ಈ ಬಗ್ಗೆ ಇಂಧನ ಸಚಿವರಿಗೆ ಪತ್ರ ಬರೆದು ಇಲಾಖಾ ತನಿಖೆಗೆ ಮನವಿ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಪೌರಾಯುಕ್ತ ಡಿ.ಮಂಜುನಾಥಯ್ಯ ಮಾತ ನಾಡಿ, ಈ ತಡೆಯಾಜ್ಞೆಯು ಜು.15ರವರೆಗಿದ್ದು, ಇದನ್ನು ತೆರವು ಮಾಡಲು ನಗರಸಭೆ ಜೊತೆಗೆ ಮೆಸ್ಕಾಂ ಕೂಡ ಕ್ರಮ ತೆಗೆದುಕೊಳ್ಳಬೇಕು. ನಾವು ಮಾತ್ರ ತೆರವು ಮಾಡಿದರೆ ಸಾಲದು. ಮೆಸ್ಕಾಂ ಕೂಡ ವಕೀಲರನ್ನು ನೇಮಿಸಿ ಕೂಡಲೇ ಕ್ರಮ ತೆಗೆದುಕೊಳ್ಳ ಬೇಕು ಎಂದರು.

ಪಾರ್ಕಿಂಗ್ ವಿರುದ್ಧ ಕ್ರಮ: ಮಣಿಪಾಲದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕುರಿತು ರಮೇಶ್ ಕಾಂಚನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಕೆಎಂಸಿ ತುರ್ತು ಘಟಕದ ಎದುರು ತುರ್ತು ಘಟಕದ ಆವರಣದೊಳಗೆ ಪಾರ್ಕಿಂಗ್ ಮಾಡುವಂತೆ ಸೂಚಿಸುವ ಬೋರ್ಡ್ ಹಾಕುವ ಬಗ್ಗೆ ನಿರ್ಣಯ ಮಾಡಿ ಮಣಿಪಾಲ ಪೊಲೀಸ್ ನಿರೀಕ್ಷಕರಿಗೆ ಕಳುಹಿಸಲಾಗಿದೆ ಎಂದರು.

ಅವರ ಆಸ್ಪತ್ರೆ, ರೋಗಿಗಳಿಂದಾಗಿ ನಡೆಯುತ್ತಿರುವುದು. ಹಾಗಾಗಿ ರೋಗಿ ಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಅವರ ಜವಾಬ್ದಾರಿ. ಇನ್ನು ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್, ಈಗಾಗಲೇ ಟೈಗರ್ ಸರ್ಕಲ್‌ನಿಂದ ಎಂಐಟಿ ಬಸ್ ನಿಲ್ದಾಣದವರೆಗೆ ರಸ್ತೆ ಬದಿ ಪಾರ್ಕಿಂಗ್ ಮಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ರೋಗಿಗಳಿಗಿಂತ ವೈದ್ಯರ ವಾಹನಗಳೇ ಹೆಚ್ಚು ಪಾರ್ಕ್ ಮಾಡಲಾಗುತ್ತಿವೆ. ನಗರಸಭೆ ನಿರ್ಣಯದ ಬಗ್ಗೆ ಎಸ್ಪಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.


ರಸ್ತೆಗೆ ನಾಮಕರಣ: ಮನವಿ
ಉಡುಪಿ ನಗರದ ಅಭಿವೃದ್ಧಿಗೆ ಡಾ.ವಿ.ಎಸ್.ಆಚಾರ್ಯರ ಕೊಡುಗೆ ಅಪಾರ. ಜಿಲ್ಲಾಧಿಕಾರಿ ಸಂಕೀರ್ಣ ನಿರ್ಮಾಣಕ್ಕೆ ಕಾರಣೀಭೂತರಾದ ಅವರ ಹೆಸರನ್ನು ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಗೆ ನಾಮಕರಣ ಮಾಡಬೇಕು. ಜು.6ರಂದು ಅವರ ಹುಟ್ಟುಹಬ್ಬದ ದಿನದಂದು ಈ ಘೋಷಣೆ ಮಾಡಬೇಕು ಎಂದು ವಿಪಕ್ಷ ನಾಯಕ ಡಾ.ಎಂ.ಆರ್.ಪೈ ಸಭೆಗೆ ಆಗ್ರಹಿಸಿದರು. ಜನಾರ್ದನ ಭಂಡಾರ್ಕರ್ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯ ಪ್ರಗತಿಗೆ ಕಾರಣರಾಗಿದ್ದ ಮಾಜಿ ಸಚಿವ ಟಿ.ಎಂ.ಎ.ಪೈ ಹೆಸರನ್ನು ಇಡುವ ಬಗ್ಗೆ ಈಗಾಗಲೇ ಮನವಿ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಇವರಿಬ್ಬರ ಕೊಡುಗೆ ಜಿಲ್ಲೆಯ ಪ್ರಗತಿ ಸಾಕಷ್ಟು ಇದ್ದು, ಈ ಬಗ್ಗೆ ಸರ್ವ ಸದಸ್ಯರ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. 

‘ರಾಸ್ಕಲ್’ ಪದ ಬಳಕೆ: ಕೋಲಾಹಲ
ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಮೇಶ್ ಕಾಂಚನ್ ವಿರೋಧ ಪಕ್ಷದ ಸದಸ್ಯರುಗಳಿಗೆ ‘ರಾಸ್ಕಲ್’ ಎಂಬ ಅಸಂವಿಧಾನಿಕ ಪದ ಬಳಕೆ ಮಾಡಿರುವುದಾಗಿ ಆರೋಪಿಸಿ ಡಾ.ಎಂ.ಆರ್.ಪೈ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.

ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಪಕ್ಷೇತರ ಸದಸ್ಯ ನಿತ್ಯಾನಂದ ಒಳಕಾಡು ಅವರಿಗೆ ಡಾ.ಎಂ.ಆರ್.ಪೈ ಇಂತಹ ಪದ ಬಳಕೆ ಮಾಡಿ ಅವರಿಗೆ ಹಿಂಸೆ ನೀಡಿ ಸಭೆಗೆ ಬರದಂತೆ ಮಾಡಿದ್ದರು ಎಂದು ರಮೇಶ್ ಕಾಂಚನ್ ಸಭೆಯಲ್ಲಿ ದೂರಿದರು. ಇದು ವಿಪಕ್ಷಗಳ ಸಿಟ್ಟಿಗೆ ಕಾರಣವಾಯಿತು. ಇದರಿಂದ ಸದಸ್ಯರುಗಳ ಮಧ್ಯೆ ವಾಗ್ವಾದ ನಡೆದು ಇಡೀ ಸಭೆ ಗದ್ದಲಮಯವಾಯಿತು.

No Comments

Leave A Comment