Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ತ.ನಾಡು ಉಪ ಚುನಾವಣೆ: ಒಂದೂವರೆ ಲಕ್ಷ ಮತಗಳಿಂದ ಭರ್ಜರಿ ‘ಜಯಾ’/ಕೇರಳದಲ್ಲಿ ಕೈ ಗೆ ಗೆಲುವು

jaya1

ಚೆನ್ನೈ : ಡಾ.ರಾಧಾಕೃಷ್ಣ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ, ಎಐಎಡಿಎಂಕೆ ಅಭ್ಯರ್ಥಿ ಜೆ.ಜಯಲಲಿತಾ ನಿರೀಕ್ಷೆಯಂತೆ 1,51,252 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಕೇರಳದಲ್ಲಿಯೂ ನಡೆದ ಜಿದ್ದಾಜಿದ್ದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಸ್ ಸಬರಿನಾಥ್ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಫ‌ಲಿತಾಂಶ ಪ್ರಕಟವಾಗುವ ಮುನ್ನವೆ ತಮಿಳುನಾಡಿನಾದ್ಯಂತ ಎಐಎಡಿಎಂಕೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆ ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ.

ಜಯಲಲಿತಾ  ಅವರ ನೇರ ಸ್ಫರ್ಧಿ ಸಿಪಿಎಂ ನ ಅಭ್ಯರ್ಥಿ ಸಿ. ಮಹೇಂದ್ರನ್‌ ಅವರು ಕೇವಲ  9, 690 ಮತಗಳನ್ನು ಮಾತ್ರ ಪಡೆದಿದ್ದಾರೆ.

ಚೆನ್ನೈನ  ರಾಣಿ ಮೇರಿ ಕಾಲೇಜಿನಲ್ಲಿ ಮತಎಣಿಕೆ  ನಡೆಯಿತು.ಈ ವೇಳೆ  ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು.

ತಮಿಳು ನಾಡು ರಾಜ್ಯಪಾಲ ರೋಸಯ್ಯ ಅವರು ಜಯಲಲಿತಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜೂನ್‌ 27 ರಂದು ಉಪಚುನಾವಣೆ ನಡೆದಿತ್ತು. ಸಮಾಜ ಸೇವಕ ಟ್ರಾಫಿಕ್‌ ರಾಮಸ್ವಾಮಿ ಸೇರಿದಂತೆ  28 ಅಭ್ಯರ್ಥಿಗಳು ಕಣದಲ್ಲಿದ್ದರು.

ಪ್ರಮುಖ ಪಕ್ಷಗಳಾದ ಡಿಎಂಕೆ, ಎಂಡಿಎಂಕೆ, ಕಾಂಗ್ರೆಸ್, ಪಿಎಂಕೆ, ವಿಸಿಕೆ ಮತ್ತು ಬಿಜೆಪಿ ಮೈತ್ರಿಕೂಟ ವಿವಿಧ ಕಾರಣಗಳಿಂದ ಸ್ಫರ್ಧೆಯಿಂದ ಹಿಂದೆ ಸರಿದಿದ್ದವು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾಗೆ ವಿಶೇಷ ಕೋರ್ಟ್ ನೀಡಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿ, ನಿರ್ದೋಷಿ ಎಂದು ತೀರ್ಪು ನೀಡಿತ್ತು. ಆ ಬಳಿಕಜಯಲಲಿತಾ ಅವರು ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಜಯಲಲಿತಾ ನಿರ್ದೋಷಿ ಎಂದು ತೀರ್ಪು ಬಂದ ಕೆಲ ದಿನದ ನಂತರ ಎಐಎಡಿಎಂಕೆಯ ಆರ್ ಕೆ ನಗರದ ಶಾಸಕ ಪಿ ವೇಟ್ರಿವೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಉಪಚುನಾವಣೆಯಲ್ಲಿ ಜಯಲಲಿತಾ ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದರು.

ಕೇರಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ:

ಕೇರಳದ ಅರುವಿಕ್ಕಾರಾ ಕ್ಷೇತ್ರದ ಮಿನಿ ಸಮರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಕೆಎಸ್ ಸಬರಿನಾಥ್ ಅವರು ಪ್ರತಿಸ್ಪರ್ಧಿ ಎಲ್ ಡಿಎಫ್ ಅಭ್ಯರ್ಥಿ ಎಂ.ವಿಜಯ್ ಕುಮಾರ್ ಅವರನ್ನು 10, 128 ಮತಗಳ ಅಂತರದಿಂದ ಪರಾಜಯಗೊಳಿಸಿದ್ದಾರೆ. ಬಿಜೆಪಿಯ ರಾಜಾಗೋಪಾಲ್ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.

ಕಾಂಗ್ರೆಸ್ ನ ಸಬರಿನಾಥ್ 56, 448 ಮತ ಪಡೆದಿದ್ದರೆ, ಎಲ್ ಡಿಎಫ್ ನ ವಿಜಯ್ ಕುಮಾರ್ 46, 320 ಮತ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾಗೋಪಾಲ್ 34,145 ಮತ ಪಡೆದಿದ್ದಾರೆ.

 

No Comments

Leave A Comment