Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ನಾನು, ನನ್ನವರು ಭ್ರಷ್ಟಾಚಾರ ಎಸಗಿಲ್ಲ: ಲೋಕಾಯುಕ್ತ ಭಾಸ್ಕರ ರಾವ್‌

26BNP20-lokaಬೆಂಗಳೂರು: ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎನಿಸಿದ ಲೋಕಾಯುಕ್ತದಲ್ಲೇ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಡೀ ಘಟನೆಯ ಬಗ್ಗೆ ಬೆಂಗಳೂರು ಸಿಸಿಬಿ (ಸಿಟಿ ಕ್ರೈಮ್‌ ಬ್ರ್ಯಾಂಚ್‌) ಪೊಲೀಸರ ಮೂಲಕ ತನಿಖೆ ನಡೆಸಲು ಲೋಕಾಯುಕ್ತ ನ್ಯಾ|ವೈ.ಭಾಸ್ಕರ್‌ರಾವ್‌ ನಿರ್ಧರಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಈ ಭ್ರಷ್ಟಾಚಾರ ಹಗರಣದಲ್ಲಿ ತಮ್ಮ ರಕ್ತ ಸಂಬಂಧಿಗಳ ಹೆಸರು ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಜತೆಗೆ, ತನಿಖೆಯಲ್ಲಿ ತಾವು ತಪ್ಪಿತಸ್ಥರು ಎಂದು ಕಂಡು ಬಂದರೆ ಕೂಡಲೇ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದರು.

ತಮ್ಮ ರಕ್ತ ಸಂಬಂಧಿಗಳ ಬಗ್ಗೆ ಕೇಳಿ ಬಂದಿರುವ ಆರೋಪಗಳನ್ನು ಈ ಸಂದರ್ಭದಲ್ಲಿ ಸಾರಸಗಟಾಗಿ ತಿರಸ್ಕರಿಸಿದ ಅವರು, ತಮ್ಮ ಪುತ್ರ ಅಶ್ವಿ‌ನ್‌ರಾವ್‌ ಸೇರಿದಂತೆ ಯಾರೂ ಭ್ರಷ್ಟಾಚಾರ ನಡೆಸಿಲ್ಲ. ಒಂದು ವೇಳೆ ಆರೋಪ ಸಾಬೀತಾದರೆ ಹುದ್ದೆ ತ್ಯಜಿಸಲು ತಾವು ಸಿದ್ಧ ಎಂದರು.

ಲೋಕಾಯುಕ್ತ ಕಚೇರಿ ಆವರಣದಲ್ಲಿ ಎಂಜಿನಿಯರ್‌ವೊಬ್ಬರಿಗೆ ಹಾಗೂ ಲೋಕಾಯುಕ್ತರ ನಿವಾಸದಲ್ಲಿ ಅಧಿಕಾರಿಯೊಬ್ಬರಿಗೆ ತಲಾ ಒಂದು ಕೋಟಿ ರೂ. ಲಂಚ ನೀಡುವಂತೆ ಬ್ಲ್ಯಾಕ್‌ವೆುàಲ್‌ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಪತ್ರಿಕಾಗೋಷ್ಠಿ ನಡೆಸಿ ಆರೋಪಗಳನ್ನು ತಳ್ಳಿಹಾಕಿದರು.

ಅಲ್ಲದೆ ಪ್ರಕರಣವನ್ನು ಸಿಸಿಬಿಗೆ ವಹಿಸಿ, ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ (ಅಪರಾಧ) ಚಂದ್ರಶೇಖರ್‌ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಆದರೆ, ತನಿಖೆಗೆ ಯಾವುದೇ ಕಾಲಮಿತಿಯನ್ನು ನೀಡಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್‌ ರಾವ್‌, ಈ ಭ್ರಷ್ಟಾಚಾರ ಆರೋಪಗಳ ಬಗ್ಗೆ ಲೋಕಾಯುಕ್ತ ಐಜಿಪಿ ಮತ್ತು ಎಸ್‌ಪಿ ಸೋನಿಯಾ ನಾರಂಗ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು. ಆದರೆ, ಲೋಕಾಯುಕ್ತ ಸಂಸ್ಥೆಯಲ್ಲೇ ಹಗರಣ ನಡೆದಿರುವುದರಿಂದ ಹೊರಗಿನ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತ ಎಂಬುದನ್ನು ಪರಿಗಣಿಸಿ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ದಾಖಲೆಗಳನ್ನು ಮತ್ತು ಘಟನೆಗೆ ಅಗತ್ಯ ಇರುವ ಮಾಹಿತಿಗಳನ್ನು ಶೀಘ್ರದಲ್ಲಿಯೇ ಹಸ್ತಾಂತರಿಸುವಂತೆ ಸೂಚಿಸಲಾಗಿದೆ. ಇಬ್ಬರು ಉಪ ಲೋಕಾಯುಕ್ತರೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ತನಿಖೆ ನಡೆಸಿ ಶೀಘ್ರದಲ್ಲಿಯೇ ವರದಿಯನ್ನು ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ಸಿಸಿಬಿಗೆ ಆದೇಶಿಸಲಾಗಿದೆ ಎಂದು ಹೇಳಿದರು.

ರಾಜೀನಾಮೆಗೆ ಸಿದ್ಧ: ಆರೋಪ ಮಾಡಲಾಗುತ್ತಿರುವಂತೆ ಅಧಿಕಾರಿಗಳಿಂದ ಲಂಚದ ಬೇಡಿಕೆಯಿಟ್ಟಿರುವ ಕೃಷ್ಣರಾವ್‌ ಎಂಬಾತ ಯಾರು ಎಂಬುದು ನನಗೆ ಗೊತ್ತಿಲ್ಲ. ಕೃಷ್ಣರಾವ್‌ ಯಾರು ಎಂಬುದೇ ನನಗೆ ಗೊತ್ತಿಲ್ಲ. ನಾನು ನ್ಯಾಯಾಧೀಶನಾಗಿದ್ದ ವೇಳೆ ಕೃಷ್ಣರಾವ್‌ ನನ್ನ ಆಪ್ತ ಸಹಾಯಕನಾಗಿದ್ದ ಎಂದು ಆರೋಪಿಸಲಾಗುತ್ತಿದೆ. ಆದರೆ, ಆ ವೇಳೆಯಲ್ಲಿ ನನ್ನ ಆಪ್ತ ಸಹಾಯಕರಾಗಿದ್ದವರ ಹೆಸರು ಉಪಾಧ್ಯಾಯ ಎಂದು ಸ್ಪಷ್ಟಪಡಿಸಿದರು.

ಪ್ರಕರಣದಲ್ಲಿ ಹೆಸರು ಕೇಳಿ ಬಂದ ಅಶ್ವಿ‌ನ್‌ರಾವ್‌ ನನ್ನ ಮಗ. ಆದರೆ, ಆತ ಇಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಸಿಸಿಬಿ ಪೊಲೀಸರು ತನಿಖೆ ನಡೆಸಲಿ. ವರದಿಯಲ್ಲಿ ಆರೋಪ ಸಾಬೀತಾದರೆ ಕೂಡಲೇ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದರು.

ಸಮಿತಿ ರಚನೆ: ಲೋಕಾಯುಕ್ತ ಕಚೇರಿಯಲ್ಲಿ ಈ ಹಗರಣ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಹೀಗಾಗಿ ಲೋಕಾಯುಕ್ತ ಸಂಸ್ಥೆಗೆ ಆಗಮಿಸುವ ಸಾರ್ವಜನಿಕರ ಮೇಲೆ ಕಣ್ಣಿಡಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.

ಲೋಕಾಯುಕ್ತ ಸಂಸ್ಥೆಯ ಐಜಿಪಿ, ಎಡಿಜಿಪಿ, ಎಸ್‌ಪಿ ಸೋನಿಯಾ ನಾರಂಗ್‌ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ. ಸಂಸ್ಥೆಯೊಳಗೆ ಸಾರ್ವಜನಿಕರಿಂದ ಯಾವ ದಾಖಲೆಗಳನ್ನು ಪಡೆದು ಪ್ರವೇಶಕ್ಕೆ ಅನುಮತಿ ನೀಡಬೇಕು ಎಂಬ ಬಗ್ಗೆ ಚರ್ಚಿಸಿ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಸಮಿತಿ ತನ್ನ ವರದಿ ನೀಡಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಆರೋಪಗಳೇನು?: ಲೋಕಾಯುಕ್ತ ಕಚೇರಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಎಂಬುವರಿಗೆ ಲೋಕಾಯುಕ್ತ ಕಚೇರಿಯ ಆವರಣದಲ್ಲೇ ಲೋಕಾಯುಕ್ತ ಆಪ್ತ ಎಂದು ಹೇಳಿಕೊಂಡ ಕೃಷ್ಣರಾವ್‌ ಎಂಬಾತ ಒಂದು ಕೋಟಿ ರೂ. ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಮಾಹಿತಿಯು ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್‌ ಅವರಿಗೆ ತಿಳಿಯುತ್ತಿದ್ದಂತೆ ಲೋಕಾಯುಕ್ತ ರೆಜಿಸ್ಟ್ರಾರ್‌ಗೆ ಘಟನೆ ವಿವರ ನೀಡಿ ಪತ್ರ ಬರೆದಿದ್ದರು.

ಇದಾದ ನಂತರ ಲೋಕಾಯುಕ್ತರ ನಿವಾಸಕ್ಕೆ ಅಧಿಕಾರಿಯೊಬ್ಬರನ್ನು ಕರೆಸಿ ಅಶ್ವಿ‌ನ್‌ರಾವ್‌ ಹಾಗೂ ಕೃಷ್ಣ ರಾವ್‌ ಅವರು ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು.

“ಲೋಕಾಯುಕ್ತರ ಸಂಬಂಧಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾದ ವದಂತಿ ಇದೆ’ ಎಂದು ಮಾಜಿ ಉಪ ಲೋಕಾಯುಕ್ತ ನ್ಯಾ|ಚಂದ್ರಶೇಖರಯ್ಯ ಅವರು “ಉದಯವಾಣಿ’ಯ ಗುರುವಾರದ (ಜೂ.25) ಸಂಚಿಕೆಯಲ್ಲಿ ಪ್ರಕಟವಾದ “ನೇರಾನೇರ’ ಸಂದರ್ಶನದಲ್ಲಿ ಹೇಳಿದ್ದರು.

ಲಂಚ ಬೇಡಿಕೆ ಇಟ್ಟಿದ್ದಾನೆ ಎನ್ನಲಾದ ಕೃಷ್ಣರಾವ್‌ ಯಾರೆಂದೇ ನನಗೆ ಗೊತ್ತಿಲ್ಲ. ಆತ ಹಿಂದೆ ನನ್ನ ಆಪ್ತ ಸಹಾಯಕನಾಗಿದ್ದ ಎಂದು ಆರೋಪಿಸಲಾಗುತ್ತಿದೆ. ಆದರೆ, ನನ್ನ ಆಪ್ತ ಸಹಾಯಕ ಆಗಿದ್ದದ್ದು ಉಪಾಧ್ಯಾಯ ಎಂಬವರು. ಇನ್ನು, ಪ್ರಕರಣದಲ್ಲಿ ಹೆಸರು ಕೇಳಿ ಬಂದ ಅಶ್ವಿ‌ನ್‌ ರಾವ್‌ ನನ್ನ ಮಗ. ಆತ ಇಂತಹ ಯಾವ ಪ್ರಕರಣದಲ್ಲೂ ಭಾಗಿಯಾಗಿಲ್ಲ. ಸಿಸಿಬಿ ತನಿಖೆ ನಡೆಸಲಿ. ನಾನು ತಪ್ಪಿತಸ್ಥ ಎಂದಾದರೆ ಕೂಡಲೇ ರಾಜೀನಾಮೆ ನೀಡುತ್ತೇನೆ.
– ನ್ಯಾ|ವೈ.ಭಾಸ್ಕರ ರಾವ್‌

 

No Comments

Leave A Comment