Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ನಿಷೇಧಿತ 10 ರೂ. ಮ್ಯಾಗಿಗೆ ಫುಲ್ ಡಿಮ್ಯಾಂಡ್ ಬೆಲೆ ಮಾತ್ರ 102 ರೂ.!

Maggi-Nಹೊಸದಿಲ್ಲಿ: ನಿಷೇಧಿತ ಮ್ಯಾಗೀ ನೂಡಲ್ಸ್‌ ನ ನಿಷ್ಠಾವಂತ ಬಳಕೆದಾರರು ನೀವಾಗಿದ್ದರೆ, ಮತ್ತು ಮ್ಯಾಗಿ ತಿನ್ನದೇ ಇರಲು ಸಾಧ್ಯವೇ ಇಲ್ಲವೆಂದು ನೀವು ಹೇಳುವವರಾದರೆ, ದೇಶದ ಹಲವೆಡೆಗಳಲ್ಲಿ ಇರುವಂತೆ ದಕ್ಷಿಣ ದಿಲ್ಲಿಯ ವಸಂತ ವಿಹಾರ್‌ ಪ್ರದೇಶದಲ್ಲಿರುವ ಸ್ಥಳೀಯ ಮಾರ್ಕೆಟ್‌ನಲ್ಲಿ ಕೂಡ ನಿಮಗೆ ನಿಷೇಧಿತ ಮ್ಯಾಗೀ ನೂಡಲ್ಸ್‌ ಪ್ಯಾಕೆಟ್‌ಗಳು ಖರೀದಿಗೆ ಸಿಗುತ್ತವೆ. ಆದರೆ 10 ರೂ.ಗಳ ಪ್ಯಾಕಿಗೆ ನೀವು ತೆರಬೇಕಾದ ಬೆಲೆ ಮಾತ್ರ 102 ರೂ.

ಮೊನ್ನೆ ಮೊನ್ನೆಯ ವರೆಗೂ ಅತೀ ಜನಪ್ರಿಯವಾಗಿದ್ದ ಹಳದಿ ಬಣ್ಣದ ಟೂ ಮಿನಿಟ್‌ ಮ್ಯಾಗೀ ನೂಡಲ್ಸ್‌ ಪ್ಯಾಕ್‌ಗಳು ಅತ್ಯಧಿಕ ವಿಷಕಾರಿ ಸೀಸದ ಅಂಶ ಹೊಂದಿರುವ ಕಾರಣಕ್ಕೆ ನಿಷೇಧಕ್ಕೆ ಗುರಿಯಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಆದರೂ ಮ್ಯಾಗೀ ಸೇವನೆಗೆ ಕಟ್ಟುಬಿದ್ದು ಅದನ್ನು ತ್ಯಜಿಸಲು ಸಾಧ್ಯವೇ ಇಲ್ಲವೆನ್ನುವಷ್ಟು ಅದಕ್ಕೆ ಅಂಟಿಕೊಂಡಿರುವ ಬಳಕೆದಾರರು ಈಗಲೂ ಗುಟ್ಟಾಗಿ ಅಂಗಡಿಗಳಲ್ಲಿ ಸಿಗುವ ಹಳದಿ ಪ್ಯಾಕನ್ನು ಖರೀದಿಸುತ್ತಾರೆ. ಅಂಗಡಿಯವರು ಕೂಡ ಅಂತಹ ಗಿರಾಕಿಗಳಿಗೆ ಗುಟ್ಟಾಗಿ ಮ್ಯಾಗಿಯನ್ನು ಮಾರುತ್ತಾರೆ. ಆದರೆ ಬೆಲೆ ಮಾತ್ರ ಹತ್ತು ಪಟ್ಟು ಜಾಸ್ತಿ.

ಮ್ಯಾಗಿ ನೂಡಲ್ಸ್‌ ಪ್ಯಾಕ್‌ ಬೇಕೇ ಬೇಕೆಂದು ಬಯಸುವ ಖರೀದಿದಾರರಿಗೆ ಕೆಲವು ಅಂಗಡಿಯವರು ಕಪ್ಪು ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಿ ಯಾರಿಗೂ ಗೊತ್ತಾಗದಂತೆ ಮಾರಿದರೆ ಇನ್ನು ಕೆಲವು ಅಂಗಡಿಯವರು ಗ್ರಾಹಕರ ಮನೆ ಬಾಗಿಲಿಗೇ ಅವುಗಳನ್ನು ಪೂರೈಸುತ್ತಾರೆ.

ಎಷ್ಟು ದರವಾದರೂ ಅಡ್ಡಿ ಇಲ್ಲ; ಯಾವ ಬೆಲೆಗಾದರೂ ಮ್ಯಾಗಿ ಬೇಕೇ ಬೇಕೆಂದು ಹಟ ಹಿಡಿಯುವ ಗ್ರಾಹಕರಿಗೆ ನಾವು ಅದನ್ನು ಕೊಟ್ಟರೆ ತಪ್ಪೇನು? ಎಂದು ದಕ್ಷಿಣ ದಿಲ್ಲಿಯ ಸ್ಥಳೀಯ ಮಾರ್ಕೆಟಿನ ಒಬ್ಬ ಅಂಗಡಿದಾರ ಪ್ರಶ್ನಿಸುತ್ತಾರೆ.

29 ವರ್ಷ ಪ್ರಾಯದ ಗ್ರಾಹಕಿ ರಶ್ಮೀ ಸಿನ್ಹಾ ಹೇಳುತ್ತಾರೆ: ವಿಷದ ಅಂಶವಿದೆ ಎಂಬ ಕಾರಣಕ್ಕೆ ಹಿಂಜರಿದರೆ ನಾವು ಈ ದೇಶದಲ್ಲಿ ಉಪವಾಸ ಬೀಳಬೇಕಾಗುತ್ತದೆ. ನಮ್ಮ ದೇಶದಲ್ಲಿ ವಿಷಕಾರಿ ಅಲ್ಲದ, ಕಲಬೆರಕೆ ಇಲ್ಲದ ಯಾವ ಆಹಾರ ವಸ್ತು ಇದೆ ಹೇಳಿ ನೋಡೋಣ. ಆದುದರಿಂದ ನಾವು ಮ್ಯಾಗಿಯನ್ನು ಈ ವರೆಗೆ ತಿನ್ನುವಂತೆ ಇನ್ನು ಮುಂದೆಯೂ ತಿನ್ನುತ್ತೇವೆ.

No Comments

Leave A Comment