Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕಲ್ಮಾಡಿ ಬಗ್ಗುಮುಂಡದ ಬಳಿ ಪತ್ತೆಯಾದ ದೈವದ ಮರ?

maraಮಲ್ಪೆ: ಆಧುನಿಕ ಕಾಲದಲ್ಲಿ ದೈವ-ದೇವರುಗಳ ಲೀಲೆ, ಪವಾಡಗಳು ನಡೆಯುವುದಿಲ್ಲ ಎಂಬ ಮಾತಾಡುವ ಜನರ ನಡುವೆ ಇದೀಗ ವಿಸ್ಮಯವೊಂದು ಕಲ್ಮಾಡಿಯಲ್ಲಿ ಘಟಿಸಿದೆ! ಈ ಘಟನೆ ವಿಚಿತ್ರವಾದರೂ ಸತ್ಯ.

ಮಲ್ಪೆ ಸಮೀಪದ ಕಲ್ಮಾಡಿ ಬಳಿಯ ಬಗ್ಗು ಪಂಜುರ್ಲಿ ದೈವಸ್ಥಾನದ 400 ವರ್ಷಗಳ ಹಿಂದಿನ ಕತೆಗೆ ಪೂರಕವೆಂಬಂತೆ ಕಲ್ಮಾಡಿ ಬಗ್ಗು ಮುಂಡ ಪ್ರದೇಶದ ಹೊಳೆಯಲ್ಲಿ ಡ್ರೆಜ್ಜಿಂಗ್‌ ನಡೆಸುವ ವೇಳೆ ನೀರಿನಡಿ ಬೃಹತ್‌ ಗಾತ್ರದ ಮರವೊಂದು ದೊರೆತಿರುವುದು ಪರಿಸರದ ಜನರಲ್ಲಿ ಇದೀಗ ಅಚ್ಚರಿ ಮೂಡಿಸಿದೆ.

ಕಾರಣಿಕತೆದ ಕತೆಗೆ ತಲೆ ಬಾಗಿದ ಹಿಟಾಚಿ

ಒಂದು ತಿಂಗಳ ಹಿಂದೆ ಹೊಳೆಯಲ್ಲಿ ಡ್ರೆಜ್ಜಿಂಗ್‌ ನಡೆಸುವಾಗ ಯಂತ್ರದ ಚಕ್ರಕ್ಕೆ ಸಿಲುಕಿಕೊಂಡ ಈ ಮರವನ್ನು ಮೇಲೆತ್ತಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಮೇಲೆತ್ತಲು ಬಂದ ಹಿಟಾಚಿಯೂ ಜಲಸಮಾಧಿಯಾಗಿತ್ತು ಎಂದು ಹೇಳಲಾಗುತ್ತಿದೆ. ಗ್ರಾಮದ ದೈವದೇವರುಗಳಿಗೆ ಪ್ರಾರ್ಥನೆ ಮಾಡಿದರೂ ಪ್ರಯೋಜನವಾಗಲಿಲ್ಲ. ಕೆಸರಿನಲ್ಲಿ ಮರೆಯಾಗಿದ್ದು ತಮ್ಮ ಕೆಲಸಕ್ಕೆ ಅಡ್ಡಿಯಾಗಿರುವ ವಸ್ತು ಯಾವುದೆಂದು ತಿಳಿಯದೆ ಡ್ರೆಜ್ಜಿಂಗ್‌ ಕಾರ್ಮಿಕರು ತಲೆಕೆಡಿಸಿಕೊಂಡಿದ್ದರು.

ಪ್ರಾರ್ಥನೆಗೆ ಸಂದ ಫ‌ಲ

ಕೈ ಸೋತು ಕುಳಿತ ಕಾರ್ಮಿಕರಿಗೆ ಸ್ಥಳೀಯ ಹಿರಿಯರು, “ಸಮೀಪದಲ್ಲಿ ಬಗ್ಗುಪಂಜುರ್ಲಿ ದೈವಸ್ಥಾನವಿದೆ. ಅಲ್ಲಿ ಪ್ರಾರ್ಥನೆ ಮಾಡಿ’ ಎಂದು ಸಲಹೆ ನೀಡಿದ್ದು, ಅದರಂತೆ ದೈವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಕಾಮಗಾರಿ ಆರಂಭಿಸಿದಾಗ ಕೆಸರಿನಡಿ ಭದ್ರವಾಗಿ ಕುಳಿತಿದ್ದ ವಸ್ತು ಮೇಲೆ ಬಂದಿತ್ತು. ಬೃಹತ್‌ ಗಾತ್ರದ ಮರದ ತುಂಡನ್ನು ನೋಡಿ ಅವರು ಅಚ್ಚರಿಪಟ್ಟರು. ಪ್ರಸ್ತುತ ಮೇಲಕ್ಕೆತ್ತಿದ ಆ ಮರವನ್ನು ಹೊಳೆಯ ದಂಡೆಯ ಬದಿ ಇರಿಸಲಾಗಿದೆ.

ಈ ಉಪ್ಪುನೀರಿನ ಹೊಳೆಗೆ ಇಷ್ಟು ದೊಡ್ಡ ಮರ ಬಂದಿದ್ದಾದರೂ ಎಲ್ಲಿಂದ? ಇಷ್ಟು ಕಾಲ ಯಾಕೆ ಯಾರ ಕಣ್ಣಿಗೂ ಬೀಳಲಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿ ಸ್ಥಳೀಯರನ್ನು ಕಾಡತೊಡಗಿತು. ಈ ಮರವನ್ನು ಗರಗಸದಿಂದ ಕತ್ತರಿಸಿದ ಯಾವುದೇ ಗುರುತುಗಳಿಲ್ಲ. ನೂರಾರು ವರ್ಷ ಸಂದರೂ ಈ ಮರ ಎಳ್ಳಷ್ಟೂ ಹಾಳಾಗಿಲ್ಲ. ಒಟ್ಟಿನಲ್ಲಿ ಸ್ಥಳಿಯರ ಪಾಲಿಗೆ ಈ ಮರ ಅಚ್ಚರಿಯ ಕೇಂದ್ರ ಬಿಂದು ಆಗಿದೆ.

ಮರ್ಣೆಯಿಂದ ಬಂದ ಮರವೇ?

ಮರ್ಣೆಯಿಂದ ಮರದ ಬೆನ್ನು ಹಿಡಿದು ಪಂಜುರ್ಲಿ ದೈವ ಕಲ್ಮಾಡಿಗೆ ಬಂದ ಬಗ್ಗೆ ಪಾಡªನಗಳಲ್ಲಿ ಉಲ್ಲೇಖವಿದೆ. ಆ ಮರವನ್ನು ನಾಲ್ಕು ತುಂಡು ಮಾಡಿ ನದಿಗೆ ದೂಡಲಾಗಿತ್ತು ಎಂದು ಐತಿಹ್ಯ ಹೇಳುತ್ತದೆ. ಕಲ್ಮಾಡಿಯಲ್ಲಿ ಈ ಹಿಂದೆ 3 ಮರದ ತುಂಡುಗಳನ್ನು ಮಾತ್ರ ಮೇಲಕ್ಕೆ ಎತ್ತಲಾಗಿದೆ ಎಂದು ದೈವ ದರ್ಶನದ ಸಂದರ್ಭದಲ್ಲಿ ಇಂದಿಗೂ ಹೇಳಲಾಗುತ್ತದೆ. ಹಾಗಾದರೆ ಹೊಳೆಯಲ್ಲಿ ಬಾಕಿ ಉಳಿದ ಒಂದು ತುಂಡು ಇದೇ ಆಗಿರಬಹುದೇ? ಬಗ್ಗು ಎಂಬ ಮಹಿಳೆಯು ಬಾಳಿ ಬದುಕಿದ ಮನೆ ಇಂದಿಗೂ ಇದೆ. ಆಕೆಯ ವಂಶಸ್ಥರು ಇಂದಿಗೂ ಈ ಕ್ಷೇತ್ರದಲ್ಲಿ ಇದ್ದಾರೆ. ಅಂದಿನ ಕಾಲದಲ್ಲಿ ಬಗ್ಗು ನಿರ್ಮಿಸಿದ ಎಣ್ಣೆಯ ಗಾಣವನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ. ಬಗ್ಗು ಎಂಬಾಕೆ ಅದೆಷ್ಟು ಕಾರಣಿಕವನ್ನು ಹೊಂದಿದ್ದಳೆಂದರೆ, ಇಂದಿಗೂ ಈ ಇಡೀ ಪ್ರದೇಶವನ್ನು ಆಕೆಯ ಹೆಸರಿನಿಂದಲೇ ಕರೆಯುತ್ತಾರೆ.

ಬೆಲೆ ಕಟ್ಟಲಾಗದೆ ಮರಳಿದರು!

ಇದು ಭಾರೀ ಗಾತ್ರದ (ಸುಮಾರು 30 ಅಡಿ ಉದ್ದ, ಸುಮಾರು 4 ಅಡಿ ಸುತ್ತಳತೆ) ಹೆಬ್ಬಲಸು ಮರವಾಗಿದ್ದು ಈಗಾಗಲೇ ಮರದ ವ್ಯಾಪಾರಿಗಳು ಬಂದು ಈ ಮರಕ್ಕೆ ಬೆಲೆ ಕಟ್ಟಿ ಹೋಗುತ್ತಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ಈ ಮರದ ಸಹವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪಂಜುರ್ಲಿಯ ಎಚ್ಚರಿಕೆ ತಿಳಿಯುತ್ತಿದ್ದಂತೆ ಮರದ ವ್ಯಾಪಾರಿಗಳು ಈ ಮರದ ಹತ್ತಿರವೂ ಸುಳಿಯುತ್ತಿಲ್ಲವೆಂದು ದೈವಸ್ಥಾನದ ಆಡಳಿತ ಮಂಡಳಿಯವರು ತಿಳಿಸುತ್ತಾರೆ. 400 ವರ್ಷದ ಹಿಂದೆ ಮರ್ಣೆ ಗ್ರಾಮದಿಂದ ಕಲ್ಮಾಡಿಗೆ ನದಿ ಮಾರ್ಗದಲ್ಲಿ ಹರಿದು ಬಂದ ಈ ಮರ, 4 ಶತಮಾನಗಳ ಕಾಲ ಈ ಗುಂಡಿಯಲ್ಲೇ ಹರಿಯದೇ ಹೇಗೆ ನಿಂತಿತ್ತು? ಎನ್ನುವುದೇ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ. ಸಂಶೋಧನಾತ್ಮಕ ದೃಷ್ಟಿಯಿಂದ ನೋಡುವವರಿಗೆ ಇದೊಂದು ಅವಕಾಶವಾಗಿ ಒದಗಿ ಬಂದಿದೆ.

ದೈವದ ನುಡಿ-ಕುರುಹು ಪತ್ತೆ

ಈ ಪ್ರದೇಶದ ಹೆಸರು “ಬಗ್ಗು ಮುಂಡ’. ಬಗ್ಗು ಮುಂಡದಲ್ಲಿ ಪ್ರತಿ ಸಂಕ್ರಾತಿಯ ದಿನ ಪಂಜುರ್ಲಿ ದೈವದ ಸಂದರ್ಶನ ನಡೆಯುತ್ತದೆ. ಕಳೆದ ಎರಡು ತಿಂಗಳ ಹಿಂದೆ ದರ್ಶನದಲ್ಲಿ ದೈವ ಕೆಲವೊಂದು ಕುರುಹುಗಳನ್ನು ಬೆಳಕಿಗೆ ತರುತ್ತೇನೆ ಎಂದು ನುಡಿಕೊಟ್ಟಿತ್ತು. ಇದಾದ ಒಂದೇ ತಿಂಗಳಲ್ಲಿ ಈ ಘಟನೆ ನಡೆದಿದೆ. ಜೂ. 15ರ ಸಂಕ್ರಾತಿಯಂದು ನಡೆದ ದೈವ ದರ್ಶನದಲ್ಲಿ ಈ ಮರದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಪಂಜುರ್ಲಿ ದೈವವು ‘ಈ ಮರ ನನಗೆ ಸೇರಿದ್ದು, ಯಾರಾದರೂ ಕೊಂಡು ಹೋದರೆ ಬೆನ್ನು ಹಿಡಿಯದೇ ಬಿಡುವುದಿಲ್ಲ’ ಎನ್ನುವ ನುಡಿ ಬಂದಿದೆ.

– ದೈವಸ್ಥಾನ ಮನೆಯ ಚಂದ್ರಶೇಖರ್‌

No Comments

Leave A Comment