Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮಣಿಪಾಲ: ಹೃದ್ರೋಗ ತಜ್ಞರಿಂದ ಅಪರೂಪದ ಕಾರ್ಡಿಯಾಕ್‌ ಪ್ರಕ್ರಿಯೆ

Heart-Sಉಡುಪಿ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಡಾ| ಟಾಮ್‌ ದೇವಾಸಿಯಾ ನೇತೃತ್ವದ ಹೃದ್ರೋಗ ಪರಿಣಿತರ ತಂಡ ಅಪರೂಪದ ಕಾರ್ಡಿಯಾಕ್‌ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಕೃತಕ ಹೃದಯ ಕವಾಟವಿರುವ (ಪ್ರಾಸ್ಥೆಟಿಕ್‌ ವಾಲ್‌) ರೋಗಿಗೆ ಈ ತೆರನಾದ ಪ್ರಕ್ರಿಯೆ ಭಾರತದಲ್ಲೇ ಪ್ರಪ್ರಥಮ ಎಂದು ಹೇಳಲಾಗಿದೆ.

ಹಲವಾರು ವರ್ಷಗಳ ಹಿಂದೆ ಎಡಭಾಗದ ಹೃದಯ ಕವಾಟದ ಬದಲಿ ಜೋಡಣೆ ಮಾಡಿಸಿಕೊಂಡು, ಏಟ್ರಿಯಲ್‌ ಫೈಬ್ರಿಲ್ಲೇಷನ್‌ಗಾಗಿ (ಹೃದಯವು ವೇಗವಾಗಿ ಮತ್ತು ಅನಿಯಮಿತವಾಗಿ ಬಡಿಯುವ ಒಂದು ಸ್ಥಿತಿ, ಇದರಿಂದಾಗಿ ರೋಗಿಯು ಲಕ್ವಾಕ್ಕೆ ಒಳಗಾಗುವ ಅಪಾಯ ಇರುತ್ತದೆ) ವಾರ್‌ಫಾರಿನ್‌ ಔಷಧಿ ತೆಗೆದುಕೊಳ್ಳುತ್ತಿದ್ದ 68 ವರ್ಷ ವಯಸ್ಸಿನ ವ್ಯಕ್ತಿಯು ಇತ್ತೀಚೆಗೆ ಹೊಟ್ಟೆಯಲ್ಲಿ ಹುಣ್ಣುಗಳಾಗಿ ಕರುಳಿನ ರಕ್ತಸ್ರಾವದಿಂದ ನರಳುತ್ತಿದ್ದರು. ಇದು ಒಂದು ವಿಶಿಷ್ಟ ಪರಿಸ್ಥಿತಿಯನ್ನು ತಂದೊಡ್ಡಿತು, ಹೇಗೆಂದರೆ ರಕ್ತ ಸರಾಗವಾಗಿ ಹರಿಯುವುದಕ್ಕೋಸ್ಕರ ರೋಗಿ ತೆಗೆದುಕೊಳ್ಳುತ್ತಿದ್ದ ವಾರ್‌ಫಾರಿನ್‌ ಔಷಧಿಯನ್ನು ಅವರು ಈಗ ಬಳಸುವಂತಿರಲಿಲ್ಲ.

ಈಗ ಲಕ್ವಾಕ್ಕೆ ಒಳಗಾಗುವ ಅಪಾಯ ಇನ್ನೂ ಹೆಚ್ಚಾಯಿತು. ಆದುದರಿಂದ ಹೃದ್ರೋಗ ತಜ್ಞರು ಪಕ್ಷವಾತಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಲು ಎಡಭಾಗದಲ್ಲಿ ಏಟ್ರಿಯಲ್‌ ಪ್ಲಗ್‌ ಸಾಧನ ಉಪಯೋಗಿಸಿದರು. ಈ ಪ್ರಕ್ರಿಯೆಯನ್ನು ಏಟ್ರಿಯಲ್‌ ಫೈಬ್ರಿಲ್ಲೇಷನ್‌ ಇರುವ ಆದರೆ ರಚನಾಸಂಬಂಧಿ ಇತರ ಯಾವುದೇ ಹೃದಯ ಕಾಯಿಲೆಗಳಿಲ್ಲದಿರುವ ರೋಗಿಗಳಲ್ಲಿ ನಡೆಸಲಾಗುತ್ತದೆ ಹಾಗೂ ವಾರ್‌ಫಾರಿನ್‌ ತೆಗೆದುಕೊಳ್ಳುತ್ತಿರುವವರಲ್ಲಿ ಪ್ರಕ್ರಿಯೆಯನ್ನು ನಡೆಸುವಂತಿಲ್ಲ.

ಈಗಾಗಲೇ ಜೈವಿಕ ಕೃತಕ ಕವಾಟವನ್ನು ಹೊಂದಿರುವವರಲ್ಲಿ ಮತ್ತು ರಕ್ತ ತೆಳುಮಾಡುವ ವಾರ್‌ಫಾರಿನ್‌ನಂಥ ಔಷಧಿಗಳನ್ನು ತೆಗೆದುಕೊಳ್ಳುವ ಸಂದರ್ಭ ಈ ಸಾಧನದ ಬಳಕೆಗೆ ನಿರ್ಬಂಧವಿರುವ ಪರಿಸ್ಥಿತಿಯಲ್ಲಿ ರೋಗಿಗಳಲ್ಲಿ ಲಕ್ವಾ ತಡೆಗಟ್ಟಲು ಈ ಸಾಧನ ಬಳಸುತ್ತಿರುವುದು ಭಾರತದಲ್ಲೇ ಪ್ರಥಮ ಬಾರಿ ಎಂದು ಡಾ| ಟಾಮ್‌ ದೇವಾಸಿಯಾ ಹೇಳಿದರು. ರೋಗಿಯು ಚೆನ್ನಾಗಿ ಚೇತರಿಸಿಕೊಂಡಿದ್ದು ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದರು.

ಈ ಬಗೆಯ ಕಾರ್ಡಿಯಾಕ್‌ ಪ್ರಕ್ರಿಯೆ ವಿನೂತನ ವಿಧಾನವಾಗಿದೆ. ಜಾಗತಿಕ ಮಟ್ಟದಲ್ಲಿ ಹೋಲಿಸಿದರೂ ಸಹ ಕೆಲವೇ ಕೇಂದ್ರಗಳು ಮಾತ್ರ ಇಂತಹ ಸುಧಾರಿತ ಪ್ರಕ್ರಿಯೆಗಳನ್ನು ನೆರವೇರಿಸುತ್ತಾರೆ. ರೋಗಿಯು ಉತ್ತಮ ಆರೋಗ್ಯದೊಂದಿಗೆ ಮನೆಗೆ ತೆರಳಿರುವುದು ಅತ್ಯಂತ ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|ಎಂ.ದಯಾನಂದ ತಿಳಿಸಿರುತ್ತಾರೆ.

No Comments

Leave A Comment