Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ತೆರೆಸಾ ಅವರು ಸ್ಥಾಪಿಸಿರುವ ಅನಾಥಾಲಯದ ಮುಖ್ಯಸ್ಥೆ ಮದರ್ ತೆರೆಸಾ ಉತ್ತರಾಧಿಕಾರಿ ವಿಧಿವಶ

pvec2ಕೋಲ್ಕತ್ತ (ಪಿಟಿಐ): ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೆಸಾ ಅವರು ಸ್ಥಾಪಿಸಿರುವ ಅನಾಥಾಲಯದ (ಮಿಷನರಿಸ್ ಆಫ್ ಚಾರಿಟಿ) ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ ಜೋಷಿ (81) ಮಂಗಳವಾರ ಬೆಳಿಗ್ಗೆ ಇಲ್ಲಿ ನಿಧನ ಹೊಂದಿದರು.

ತೆರೆಸಾ ಉತ್ತರಾಧಿಕಾರಿ ಆಗಿದ್ದ ನಿರ್ಮಲಾ ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.
ಮದರ್ ತೆರೆಸಾ ಅವರು ನಿಧನ ಹೊಂದುವುದಕ್ಕೆ ಆರು ತಿಂಗಳು ಮೊದಲು ಅಂದರೆ 1997ರ ಮಾರ್ಚ್ 13ರಂದು ನಿರ್ಮಲಾ ಅವರನ್ನು ತೆರೆಸಾ ಉತ್ತಾಧಿಕಾರಿ ಆಗಿ ಆಯ್ಕೆ ಮಾಡಲಾಗಿತ್ತು. 2009ರ ಮಾರ್ಚ್ 24ರ ವರೆಗೂ ಅವರು ಅನಾಥಾಲಯದ ಸುಪೀರಿಯರ್ ಜನರಲ್  ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ ಅವರ ಉತ್ತರಾಧಿಕಾರಿ ಆಗಿ ಮೇರಿ ಪ್ರೇಮಾ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

1934ರಲ್ಲಿ ರಾಂಚಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಿರ್ಮಲಾ ಅವರು ತಮ್ಮ 17ನೇ ವಯಸ್ಸಿನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿ ಮದರ್ ತೆರೆಸಾ ಅವರ ಅನಾಥಾಲಯಕ್ಕೆ ಸೇರಿಕೊಂಡರು.

ತೆರೆಸಾ ಅವರು ಬಡವರು ಮತ್ತು ನಿರ್ಗತಿಕರಿಗೆ ಸಲ್ಲಿಸುತ್ತಿದ್ದ ಸೇವೆಗಳನ್ನು ನೋಡಿ ಪ್ರೇರಿತರಾದ ನಿರ್ಮಲಾ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿ ತೆರೆಸಾ ಅವರಂತೆ ನಿರ್ಗತಿಕರ ಸೇವೆಯಲ್ಲಿ ತೊಡಗಿದರು.

ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಿರ್ಮಲಾ ಅವರು ಮಿಷಿನರಿಯ ಧಾರ್ಮಿಕ ಚಿಂತನೆ ವಿಭಾಗದ ಮುಖ್ಯಸ್ಥರಾಗಿದ್ದರು. ತೆರೆಸಾ ಅವರು ನಿಧನ ಹೊಂದಿದ ನಂತರ ಅವರ ಉತ್ತರಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದರು. ಮೂರು ಬಾರಿಗೆ ಅವರು ಸುಪೀರಿಯರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದರು. ನಂತರ ವಯಸ್ಸು ಮತ್ತು ಅನಾರೋಗ್ಯದ ಕಾರಣ ಜವಾಬ್ದಾರಿಯಿಂದ ಬಿಡುಗಡೆ ಕೋರಿದ್ದರು.

ಸಮಾಜಕ್ಕೆ ಅವರು ಸಲ್ಲಿಸಿದ ಸೇವೆಗಾಗಿ 2009ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.

ಪ್ರಧಾನಿ ಶೋಕ: ಬಡವರು ಮತ್ತು ನಿರ್ಗತಿಕರ ಉದ್ಧಾರಕ್ಕಾಗಿ ಜೀವನವಿಡೀ ಸೇವೆ ಸಲ್ಲಿಸಿದ್ದ ನಿರ್ಮಲಾ ಅವರ ನಿಧನದಿಂದ ದೇಶಕ್ಕೆ ಭಾರಿ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಮತಾ ಸಂತಾಪ: ಸಿಸ್ಟರ್ ನಿರ್ಮಲಾ ಅವರ ನಿಧನದಿಂದ ದುಃಖವಾಗಿದೆ. ಅವರ ಸಾವು ಇಡೀ ವಿಶ್ವಕ್ಕೇ ಭಾರಿ ನಷ್ಟ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

No Comments

Leave A Comment