Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಪತ್ನಿಯನ್ನು 32 ಬಾರಿ ಇರಿದು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ

Murder-bgಮುಂಬಯಿ: ವಿಚ್ಛೇದನ ಕೋರಿದ ಪತ್ನಿಯ ಮೇಲಿನ ಸಿಟ್ಟಿನ ಪರಾಕಾಷ್ಠೆಯಲ್ಲಿ ಆಕೆಯ ದುಪಟ್ಟಾವನ್ನು ಆಕೆಯ ಬಾಯಿಗೆ ತುರುಕಿ ಕೊಲ್ಲಲೆತ್ನಿಸಿ ಬಳಿಕ ಆಕೆಯನ್ನು 32 ಬಾರಿ ಚೂರಿಯಿಂದ ಇರಿದು ಕೊಂದು, ಅನಂತರ ತಾನು ಸೇತುವೆಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದರೂ ಸಾಯದ ಪತಿ ಮಹಾಶಯನೊಬ್ಬ ಈಗ ಜೈಲು ಸೇರಿದ್ದಾನೆ.

27 ವರ್ಷ ಪ್ರಾಯದ ರಾಜೇಶ್‌ ನಾರಾಯಣ್‌ ಮತ್ತು 22 ವರ್ಷ ಪ್ರಾಯದ ರಿತು ಪರಸ್ಪರ ಪ್ರೇಮಿಸಿ, ಐದು ವರ್ಷಗಳ ಕಾಲ ಡೇಟಿಂಗ್‌ ನಡೆಸಿ, ಕಳೆದ ವರ್ಷವಷ್ಟೇ ಪರಸ್ಪರ ಮದುವೆಯಾಗಿದ್ದರು. ಆದರೆ ಮದುವೆಯಾದಂದಿನಿಂದಲೂ ಅವರಲ್ಲಿ ಪರಸ್ಪರ ಅರಿತು ಬಾಳುವ ಹೊಂದಾಣಿಕೆಯೇ ಇರಲಿಲ್ಲ. ಮುಂಬಯಿ ಖಾಜುರ್‌ವಾಡಿಯ ನಿವಾಸಿಗಳಾಗಿರುವ ಈ ಇಬ್ಬರೂ ಬೇರೆ ಬೇರೆ ಕಾಲ್‌ ಸೆಂಟರ್‌ಗಳಲ್ಲಿ ಉದ್ಯೋಗಿಗಳಾಗಿದ್ದರು.

ಸತ್ಯ ವಿಷಯವೇನೆಂದರೆ ರಾಜೇಶ್‌ ನಾರಾಯಣ್‌ ಖುದ್ದಾಗಿ ಮೂವರು ಗರ್ಲ್ ಫ್ರೆಂಡ್‌ಗಳನ್ನು ಹೊಂದಿರುವ ಪತಿರಾಯ. ಹಾಗಿದ್ದರೂ ಈತನಿಗೆ ಸದಾ ತನ್ನ ಪತ್ನಿಯ ಮೇಲೆ ಶಂಕೆ. ಆಕೆಗೆ ಯಾವುದೋ ಪುರುಷನೊಂದಿಗೆ ಅಫೇರ್‌ ಇದೆ ಎಂಬ ಗುಮಾನಿ ಈತನಿಗೆ. ಈ ಹಿನ್ನೆಲೆಯಲ್ಲೇ ಪತ್ನಿಯೊಂದಿಗೆ ಆತನಿಗೆ ದಿನ ನಿತ್ಯ ಜಗಳ. ಪತ್ನಿ ರಿತು ಗೆ ಕೂಡ ಈತನೊಂದಿಗೆ ಹೊಂದಾಣಿಕೆ ಎಂಬುದಿರಲಿಲ್ಲ.

ಪತ್ನಿಯ ಮೇಲಿನ ಶಂಕೆಯಲ್ಲಿ ಕೆಲ ಸಮಯದ ಹಿಂದೆ ಪತಿ ರಾಜೇಶ್‌ ನಾರಾಯಣ್‌ ನಡು ರಸ್ತೆಯಲ್ಲೇ ರಿತುಗೆ ಸಿಟ್ಟಿನ ಭರದಲ್ಲಿ ಕಪಾಳಮೋಕ್ಷ ಮಾಡಿದ್ದ. ಈ ಪ್ರಕರಣ ಡಿ ಎನ್‌ ನಗರ ಪೊಲೀಸ್‌ ಠಾಣೆಯ ಮೆಟ್ಟಲೇರಿತ್ತು. ಈ ದಂಪತಿಯ ವೈವಾಹಿಕ ಬದುಕು ಸರಿಯಾಗಿ ನಡೆಯುತ್ತಿಲ್ಲ ಎಂಬುದನ್ನು ಅರಿತ ಪೊಲೀಸರು ಅಂದು ಇವರೊಳಗೆ ಹೇಗಾದರೂ ಒಂದು ಹೊಂದಾಣಿಕೆಯನ್ನು ತರಲು ಮಧ್ಯಸ್ಥಿಕೆ ವಹಿಸಿದ್ದರು. ಇಬ್ಬರಿಗೂ ಬುದ್ಧಿಮಾತು ಹೇಳಿದ್ದ ಅವರು, ಮತ್ತೆ ಹೊಸದಾಗಿ ಸೌಹಾರ್ದದ ವೈವಾಹಿಕ ಬದುಕನ್ನು ಆರಂಭಿಸುವಂತೆ ಸೂಚಿಸಿ ಕಳುಹಿಸಿದ್ದರು.

ಅದಾಗಿ ಮೊನ್ನೆ ಜೂನ್‌ 9ರಂದು ಆಫೀಸಿನಲ್ಲಿದ್ದ ರಾಜೇಶ್‌ಗೆ ಫೋನ್‌ ಮಾಡಿ ಸ್ವಲ್ಪ ವೈಯಕ್ತಿಕವಾಗಿ ಮಾತನಾಡುವುದಿದೆ ಎಂದು ಹೇಳಿ ಮನೆಗೆ ಬರಮಾಡಿಕೊಂಡಿದ್ದಳು.

ಹಾಗೆ ಮನೆಗೆ ಬಂದ ರಾಜೇಶನಿಗೆ ರಿತು, “ನಾನು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದೇನೆ; ನೀನು ನನಗೆ ಡೈವೋರ್ಸ್‌ ಕೊಡು’ ಎಂದು ಒತ್ತಾಯಿಸಿದಳು.

ಸಿಟ್ಟಿಗೆದ್ದ ರಾಜೇಶ ಆಕೆಯನ್ನು ಹೊಡೆದು ಕೊಲ್ಲಲು ಮುಂದಾಗಿ ಆಕೆಯ ದುಪಟ್ಟಾವನ್ನು ಆಕೆಯ ಬಾಯಿಗೆ ತುರುಕಲು ಯತ್ನಿಸಿದ. ಆಗ ರಿತು ಆತನ ಬೆರಳನ್ನು ಬಲವಾಗಿ ಕಚ್ಚಿದಳು. ಪರಿಣಾಮವಾಗಿ ರಾಜೇಶನ ಬೆರಳು ಮೂಳೆ ಮುರಿದು ಅಸಹನೀಯ  ನೋವುಂಟುಮಾಡಿತು.

ಇದರಿಂದ ತೀವ್ರ ಸಿಟ್ಟಿಗೆದ್ದ ಆತ ರಿತುವನ್ನು ಹರಿತವಾದ ಚೂರಿಯಿಂದ 32 ಬಾರಿ ಇರಿದು ಕೊಂದು ಆಕೆಯ ಶವವನ್ನು ಬಾತ್‌ರೂಮಿನಲ್ಲಿ ಹಾಕಿ ಹೊರಬಂದು ಏಳು ಪುಟಗಳ ಡೆತ್‌ ನೋಟ್‌ ಬರೆದಿಟ್ಟ.

ಬಳಿಕ ವಾಶಿ ಸೇತುವೆಯತ್ತ ಹೋಗಿ ಅಲ್ಲಿಂದ ಪೊಲೀಸರಿಗೆ “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಫೋನ್‌ ಮಾಡಿ ಸೇತುವೆಯಿಂದ ಕೆಳಗೆ ಹಾರಿದ. ಆದರೆ ಸಾಯಲಿಲ್ಲ. ಅಲ್ಲೇ ಕೆಳಗಿದ್ದ ಮೀನುಗಾರರು ಆತನನ್ನು ರಕ್ಷಿಸಿ ಮೇಲೆಳೆದು ತಂದರು.

ಈಗ ರಾಜೇಶ್‌ ನಾರಾಯಣ್‌, ಡಿಎನ್‌ ನಗರ ಪೊಲೀಸ್‌ ಠಾಣೆಯ ಕಸ್ಟಡಿಯಲ್ಲಿದ್ದಾನೆ. ಪೊಲೀಸರು ಆತನ ಬೆರಳ ಮೂಳೆ ಮುರಿತದ ಬಗ್ಗೆ ವೈದ್ಯಕೀಯ ವರದಿಯನ್ನು ತರಿಸಿಕೊಂಡು ಇಡಿಯ ಪ್ರಹಸನವನ್ನು ಖಾತರಿಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

No Comments

Leave A Comment