Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮತ್ತೂಮ್ಮೆ ಆಯುಕ್ತರಿಲ್ಲದ ಮಂಗಳೂರು…!

RAni-Korlapatiಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಕ್ಷ ಆಡಳಿತದ ಮೂಲಕ ಸಂಚಲನ ಮೂಡಿಸಿದ್ದ ಆಯುಕ್ತೆ ಹೆಪ್ಸಿಭಾರಾಣಿ ಕೊರ್ಲಪಾಟಿ ಅಧಿಕಾರ ಸ್ವೀಕರಿಸಿದ ಐದೂವರೆ ತಿಂಗಳೊಳಗೆ ವರ್ಗಾವಣೆಗೊಂಡಿದ್ದಾರೆ.

ಹೆಪ್ಸಿಭಾ ಅವರನ್ನು ಸರಕಾರ ವಿಜಯಪುರ ಜಿ. ಪಂ.ನ ಸಿಇಒ ಆಗಿ ವರ್ಗಾಯಿಸಿದ್ದು, ಅವರು ಮಂಗಳೂರು ಪಾಲಿಕೆ ಆಯುಕ್ತ ಹುದ್ದೆಯಿಂದ ಯಾವಾಗ ಬಿಡುಗಡೆ ಹೊಂದಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇದೀಗ ಹೆಪ್ಸಿಭಾ ಅವರ ಜಾಗಕ್ಕೆ ನೂತನ ಆಯುಕ್ತರ ನೇಮಕ ಆಗದ ಹಿನ್ನೆಲೆಯಲ್ಲಿ ಈ ಹಿಂದೆ “ಆಯುಕ್ತರಿಲ್ಲದ ಮನಪಾ’ ಎಂಬ ಸ್ಥಿತಿ ಮತ್ತೂಮ್ಮೆ ನಿರ್ಮಾಣವಾಗಲಿದೆಯೇ? ಎಂಬ ಪ್ರಶ್ನೆ ಮೂಡಿದೆ.

ಬೀದರ್‌ ಜಿಲ್ಲೆ ಬಸವಕಲ್ಯಾಣದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಪ್ಸಿಭಾ ಅವರು 2014ರ ಡಿ. 31ರಂದು ಮನಪಾ ಆಯುಕ್ತರಾಗಿ ನೇಮಕಗೊಂಡಿದ್ದರು. ಬಳಿಕ ದಕ್ಷ ಆಡಳಿತದ ಮೂಲಕ ಕಾಂಗ್ರೆಸ್‌ ಕಾರ್ಪೊರೇಟರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ, ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು “ಹೆಪ್ಸಿಭಾ ಅವರು ಉತ್ತಮ ಅಧಿಕಾರಿ’ ಎಂದು ಸರ್ಟಿಫಿಕೇಟ್‌ ನೀಡಿದ್ದರು.

ಇವರು ಅಧಿಕಾರ ಪಡೆಯುವುದಕ್ಕೂ ಮುನ್ನ ಮನಪಾ ಆಯುಕ್ತ ಹುದ್ದೆ ಹಲವು ತಿಂಗಳುಗಳ ಕಾಲ ಖಾಲಿಯಾಗಿತ್ತು. ಹಿಂದಿನ ಆಯುಕ್ತರಾಗಿದ್ದ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಅವರನ್ನು ಬೇರೆ ಹುದ್ದೆಗೆ ನೇಮಕಗೊಳಿಸಿದ ಬಳಿಕ ಆಯುಕ್ತ ಹುದ್ದೆಗೆ ಸಂಬಂಧಿಸಿ ರಾಜಕೀಯ ಆಟ ನಡೆದಿತ್ತು. ಹಲವು ಪ್ರತಿಭಟನೆಗಳ ಅನಂತರ ಐಎಎಸ್‌ ಶ್ರೇಣಿಯ ಹೆಪ್ಸಿಭಾ ಅವರನ್ನು ನೇಮಕ ಮಾಡಲಾಗಿತ್ತು.

ಹೆಪ್ಸಿಭಾ ಅವರು ಆಡಳಿತ ವಹಿಸಿದ ಅನಂತರ ಎಲ್ಲವನ್ನು ಕಾನೂನು ದೃಷ್ಟಿಯಿಂದ ನೋಡುವ ಪರಿಣಾಮ ಮನಪಾದಲ್ಲಿ ಯಾವುದೇ ತುರ್ತು ಕಾಮಗಾರಿಗಳು ನಡೆಯುತ್ತಿಲ್ಲ. ಸದಸ್ಯರ ಅನುದಾನ ಬಿಡುಗಡೆಯಾಗುತ್ತಿಲ್ಲ ಹಾಗೂ ಮನಪಾ ಸದಸ್ಯರಿಗೆ ಗೌರವ ನೀಡುತ್ತಿಲ್ಲ ಎಂದು ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಆರೋಪಿಸಿ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಒತ್ತಡ ತಂದಿದ್ದರು.

ಕಾರ್ಪೊರೇಟರ್‌ಗಳ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ದೂರಿದ್ದರು. ಆಯುಕ್ತರ ವಿವಿಧ ನಿರ್ಧಾರಗಳಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಸಚಿವರು, ಶಾಸಕರ ಮೂಲಕ ಸರಕಾರದ ಗಮನ ಸೆಳೆದು, ಆಯುಕ್ತರ ವರ್ಗಾವಣೆಗೆ ತೀವ್ರ ಲಾಬಿ ನಡೆಸಿದ್ದರು.

ಸ್ಮಾರ್ಟ್‌ ಸಿಟಿ-ಕಟಿಪಿಟಿ…!
ಮಂಗಳೂರನ್ನು ಸ್ಮಾರ್ಟ್‌ ಸಿಟಿ ಮಾಡುವ ಹಿನ್ನೆಲೆಯಲ್ಲಿ ಅಮೆರಿಕದಿಂದ ಮನಪಾಕ್ಕೆ ಬಂದ ನಿಯೋಗ ಅಧಿಕೃತ ತಂಡ ಅಲ್ಲ. ಮನಪಾ ಆಯುಕ್ತರು ಅಧಿಕಾರ ದುರುಪಯೋಗ ಮಾಡಿದ್ದು, ಯಾರಿಗೋ ರಾಜಾಥಿತ್ಯ ನೀಡಿದ್ದಾರೆ ಎಂದು ಪಾಲಿಕೆ ಸದಸ್ಯ ಅಬ್ದುಲ್‌ ರವೂಫ್‌ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ಧ್ವನಿ ಎತ್ತಿದ್ದರು. ಆದರೆ, ಇದು ನನ್ನ ವೈಯಕ್ತಿಕ ಕಾರ್ಯಕ್ರಮವಾಗಿರಲಿಲ್ಲ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಇ-ಮೇಲ್‌ ನಿರ್ದೇಶನದ ಮೇರೆಗೆ ಅಮೆರಿಕದಿಂದ ಬಂದ ತಂಡವನ್ನು ಮೇಯರ್‌ ಅವರ ಗಮನಕ್ಕೆ ತಂದು ಸ್ವಾಗತಿಸಲಾಗಿತ್ತು ಎಂದು ಆಯುಕ್ತರು ಸ್ಪಷ್ಟೀಕರಣ ನೀಡಿದ್ದರು. ಆದರೂ, ಮೇಯರ್‌ ಅವರು ಈ ಬಗ್ಗೆ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಸಿ, ಅದಕ್ಕೆ ತಗಲಿರುವ ಸಂಪೂರ್ಣ ವೆಚ್ಚವನ್ನು ಅಧಿಕಾರಿಗಳು ಭರಿಸಬೇಕು ಎಂದು ರೂಲಿಂಗ್‌ ನೀಡಿದ್ದರು. ಈ ಮೂಲಕ ಆಯುಕ್ತರು ಹೊಸ ವಿವಾದಕ್ಕೆ ಕಾರಣರಾಗಿದ್ದರು. ಇದು ಸುದ್ದಿಯಲ್ಲಿರುವಾಗಲೇ ಆಯುಕ್ತರನ್ನು ವರ್ಗ ಮಾಡಲಾಗಿದೆ.

No Comments

Leave A Comment