Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಜೂ.17: ಬಿಜೆಪಿ ಮಹಾಸಂಪರ್ಕ ಅಭಿಯಾನ ಆರಂಭ

bjp-logo_0ಉಡುಪಿ: ಬಿಜೆಪಿ ಸದಸ್ಯತ್ವ ಅಭಿಯಾನದ ಎರಡನೇ ಹಂತವಾಗಿ “ಮಹಾಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಸದಸ್ಯತ್ವ ಪಡೆದಿರುವವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾಹಿತಿ ಪಡೆಯುವ ಕಾರ್ಯಕ್ರಮ ಈ ಅಭಿಯಾನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಜೂ.12ರಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾ ಡಿದ ಅವರು, ದೇಶದಲ್ಲಿ 11 ಕೋಟಿಗೂ ಅಧಿಕ ಮಂದಿ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ಇದರಿಂದಾಗಿ ವಿಶ್ವದಲ್ಲೇ ಅಧಿಕ ಸದಸ್ಯತ್ವ ಪಡೆದಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಉಡುಪಿ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ನವೀಕರಿಸಲ್ಪಟ್ಟ/ಹೊಸ ಸದಸ್ಯರ ನೋಂದಣಿಯಾಗಿದೆ. ಇವರೆಲ್ಲರನ್ನೂ ನೇರವಾಗಿ ಸಂಪರ್ಕಿಸುವ ಕೆಲಸ ಅಭಿಯಾನದಲ್ಲಿ ನಡೆಯಲಿದೆ.

ಮಹಾಸಂಪರ್ಕ ಉಡುಪಿ ಜಿಲ್ಲಾ ಮಟ್ಟದ ಅಭಿಯಾನಕ್ಕೆ ಜೂ.17ರಂದು ಸಂಜೆ 4 ಗಂಟೆಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಮನೆಯಲ್ಲಿ  ಚಾಲನೆ ನೀಡಲಿದ್ದಾರೆ. ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅನಂತರ ಮಂಡಲ ಹಂತದಲ್ಲಿ ನಡೆಯಲಿದೆ. ಆ ಬಳಿಕ ಮನೆ ಮನೆಗಳಲ್ಲಿ ನಡೆಯಲಿದೆ. ಇದು ಜೂ.23ರಿಂದ ಜು.6ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿಯೂ ಸದಸ್ಯತ್ವ ನೋಂದಣಿಗೆ ಅವಕಾಶವಿದೆ ಎಂದು ತಿಳಿಸಿದರು.

ಜೂ.21: ವಿಶ್ವ ಯೋಗ ದಿನ

ನರೇಂದ್ರ ಮೋದಿಯವರ ಕೋರಿಕೆಯಂತೆ ವಿಶ್ವಸಂಸ್ಥೆ ಜೂ.21ರಂದು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುತ್ತಿದೆ. ಭಾರತ ದೇಶದಲ್ಲೂ ಈ ಕಾರ್ಯಕ್ರಮ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಗೀತಾಂಜಲಿ ಸುವರ್ಣ ಅವರು ಸಹ ಸಂಚಾಲಕರಾಗಿರುತ್ತಾರೆ ಎಂದು ಹೆಗ್ಡೆ ತಿಳಿಸಿದರು.

ನರೇಂದ್ರ ಮೋದಿಯವರು ದೇಶದ ಜನರಿಗಾಗಿ ಹಾಕಿಕೊಂಡಿರುವ ಯೋಜನೆಗಳಲ್ಲಿ ಜನಧನ್‌, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ವಿಮಾ ಯೋಜನೆ ಮೊದಲಾದ ಯೋಜನೆಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದ ಅವರು ಮ್ಯಾನ್ಮಾರ್‌ನ ಗಡಿಯೊಳಗೆ ನುಗ್ಗಿ ಉಗ್ರರನ್ನು ದಮನಿಸಿದ ಸೈನಿಕರ ಕಾರ್ಯಾಚರಣೆ ಶ್ಲಾಘನೀಯ ಎಂದು ಹೇಳಿದರು. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ  ಕುತ್ಯಾರು ನವೀನ್‌ ಶೆಟ್ಟಿ ಮತ್ತು ಸಂಧ್ಯಾ ರಮೇಶ್‌, ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಿಷ್ಪಕ್ಷಪಾತ ಮೀಸಲಾತಿ ಆಶಯ

ಜಿಲ್ಲೆಯಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಸಂಘಟಿತ ಪ್ರಯತ್ನದಿಂದ ಹೆಚ್ಚಿನ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ. ಸಕ್ರಿಯ ಆಡಳಿತ, ಅಭಿವೃದ್ಧಿ, ಗ್ರಾಮ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಕ್ಷವು ತನ್ನ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಪಕ್ಷ ಬಯಸುತ್ತದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಮ್ಯಾಗಿ ನಿಷೇಧಕ್ಕೆ ವಿಳಂಬ ಬೇಡ

ಮ್ಯಾಗಿಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶಗಳು ಇರುವುದರ ಬಗ್ಗೆ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮ್ಯಾಗಿಯನ್ನು ಕೂಡಲೇ ರಾಜ್ಯ ಸರಕಾರ ನಿಷೇಧಿಸಬೇಕು. ವಿಳಂಬ ಮಾಡಿದರೆ ಇದರಿಂದ ಅಪಾಯ ಹೆಚ್ಚಾಗಲಿದೆ ಎಂದು ಹೆಗ್ಡೆ ಹೇಳಿದರು.

No Comments

Leave A Comment