Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮಣಿಪುರ ಉಗ್ರರಿಗೆ 18 ಯೋಧರು ಬಲಿ: ಉಗ್ರರ ದುಷ್ಕೃತ್ಯ

Manipur-56ಇಂಫಾಲ/ನವದೆಹಲಿ: ರಾಕೆಟ್‌ನಿಂದ ಉಡಾಯಿಸಬಹುದಾದ ಗ್ರೆನೇಡ್‌, ಸುಧಾರಿತ ಸ್ಫೋಟಕ ಹಾಗೂ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ಶಂಕಿತ ನಾಗಾ ಮತ್ತು ಮಣಿಪುರಿ ಉಗ್ರರು ಗುರುವಾರ 18 ಸೇನಾ ಯೋಧರ ಮಾರಣ ಹೋಮ ನಡೆಸಿರುವ ಘಟನೆ ಮಣಿಪುರದ ಚಾಂಡೆಲ್‌ ಜಿಲ್ಲೆಯಲ್ಲಿ ನಡೆದಿದೆ.

ಹತ ಯೋಧರು ಡೋಗ್ರಾ ಇನ್‌ಫೆಂಟ್ರಿ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ಮೋಲು¤ಕ್‌ ಕಣಿವೆಯಿಂದ ವಾಹನಗಳಲ್ಲಿ ಹಿಂತಿರುಗುತ್ತಿದ್ದ ಈ ಯೋಧರ ಮೇಲೆ ಮಣಿಪುರ ರಾಜಧಾನಿ ಇಂಫಾಲದಿಂದ 30 ಕಿ.ಮೀ. ದೂರದಲ್ಲಿರುವ ಪಾರಾಲಾಂಗ್‌ ಹಾಗೂ ಚಾರಂಗ್‌ ಎಂಬ ಗ್ರಾಮಗಳ ನಡುವೆ ದಾಳಿ ನಡೆದಿದೆ.

ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ ಪರ್ರಿಕರ್‌, ಗೃಹ ಸಚಿವ ರಾಜನಾಥ ಸಿಂಗ್‌, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾರತ-ಮ್ಯಾನ್ಮಾರ್‌ ಗಡಿ ಮುಚ್ಚಲು ಭಾರತ ಸರ್ಕಾರ ನಿರ್ಧರಿಸಿದ್ದು, ದಾಳಿಕೋರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲು ನಿರ್ಧರಿಸಿದೆ. ಮಣಿಪುರ ಮತ್ತು ಹೊಂದಿಕೊಂಡ ರಾಜ್ಯಗಳಲ್ಲಿ ಮತ್ತೆ ಇಂಥದ್ದೇ ಘಟನೆ ನಡೆಯಬಹುದು ಎಂಬ ಕಾರಣದಿಂದ ಭದ್ರತೆ ಬಿಗಿಗೊಳಿಸಲಾಗಿದೆ.

ಆಗಿದ್ದೇನು: ಮೊದಲು ಸೈನಿಕರ ಮೇಲೆ ಸುಧಾರಿತ ಸ್ಫೋಟಕ ಬಳಸಿ ಸ್ಫೋಟ ನಡೆಸಿರುವ ಉಗ್ರರು ನಂತರ ಗ್ರೆನೇಡ್‌ಗಳ ಮಳೆ ಸುರಿಸಿದ್ದಾರೆ. ರಾಕೆಟ್‌ನಿಂದ ಉಡಾಯಿಸಬಹುದಾದ ಗ್ರೆನೇಡ್‌ಗಳನ್ನು ಬಳಸಿ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ 18 ಮಂದಿ ಯೋಧರು ಮೃತಪಟ್ಟಿದ್ದರೆ, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತೆಗೆ ಹೋರಾಡುವ ನಾಗಾ ಉಗ್ರಗಾಮಿ ಸಂಘಟನೆ ಎನ್‌ಎಸ್‌ಸಿಎನ್‌ (ಕೆ) ಹಾಗೂ ಮಣಿಪುರದ ಸಂಯುಕ್ತ ರಾಷ್ಟ್ರೀಯ ವಿವೋಚನಾ ರಂಗ (ಯುಎನ್‌ಎಲ್‌ಎಫ್)ದ ಉಗ್ರರು ಜತೆಗೂಡಿ ಈ ದಾಳಿ ನಡೆಸಿರಬಹುದು ಎಂಬ ಶಂಕೆ ಇದೆ.

ಒಂದೇ ದಿನ ಇಷ್ಟು ಯೋಧರ ಹತ್ಯೆ ಕಾರ್ಗಿಲ್‌ ಬಳಿಕ ಇದೇ ಮೊದಲು
1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ಬಳಿಕ ಸೇನಾ ಸಶಸ್ತ್ರ ಪಡೆಗಳ ಇಷ್ಟೊಂದು ಯೋಧರು ಒಂದೇ ದಿನದಲ್ಲಿ ಬಲಿಯಾದ ಘೋರ ದುರಂತ ಇದಾಗಿದೆ ಎಂದು ಹೇಳಲಾಗಿದೆ. ದೇಶದಲ್ಲಿ ಮತ್ತು ಗಡಿಯಲ್ಲಿ ಕಾರ್ಗಿಲ್‌ ನಂತರ ನಡೆದ ಘಟನೆಗಳಲ್ಲಿ ಒಂದೇ ದಿನ ಹತ್ತಾರು ಯೋಧರು ಬಲಿಯಾಗಿದ್ದರೂ ಅವರೆಲ್ಲ ಬಿಎಸ್ಸೆಫ್, ಸಿಆರ್‌ಪಿಎಫ್ನಂಥ ಅರೆಸೇನಾ ಪಡೆಯ ಯೋಧರು. ಅವರು ರಕ್ಷಣಾ ಇಲಾಖೆ ಅಧೀನದಲ್ಲಿರುವ ಸೇನೆಗೆ ಸಂಬಂಧಪಡದೇ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಅರೆಸೇನಾ ಯೋಧರು.

ಬಂಡುಕೋರರ ದಾಳಿಗೆ ಮಣಿಪುರದ 18 ಸೈನಿಕರು ಪ್ರಾಣ ತೆತ್ತಿದ್ದು ಅತ್ಯಂತ ನೋವಿನ ಸಂಗತಿ. ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಯೋಧರಿಗೆ ನಾನು ತಲೆಬಾಗಿ ನಮಿಸುತ್ತೇನೆ.
– ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಸೈನಿಕರ ಮೇಲೆ ದಾಳಿ ಮಾಡಿದವರನ್ನು ಖಂಡಿತ ಶಿಕ್ಷೆಗೆ ಒಳಪಡಿಸುತ್ತೇವೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಮತ್ತು ಜನ ಜೀವನವನ್ನು ಯಥಾಸ್ಥಿತಿಗೆ ತರಲು ಸೈನ್ಯ ತನ್ನ ಪ್ರಯತ್ನ ಮುಂದುವರೆಸಲಿದೆ.
– ಮನೋಹರ ಪರ್ರಿಕರ್‌, ರಕ್ಷಣಾ ಸಚಿವ

ನನಗೆ ಈ ಘಟನೆಯಿಂದ ಆಘಾತವಾಗಿದೆ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ನಾವು ಬಿಡುವುದಿಲ್ಲ.
– ರಾಜನಾಥ ಸಿಂಗ್‌, ಕೇಂದ್ರ ಗೃಹ ಸಚಿವ

ಇಂಥ ದುರಂತಮಯ ಸಂದರ್ಭದಲ್ಲಿ ನಾವು ಯೋಧರ ಜತೆಗೆ ನಿಲ್ಲಲಿದ್ದೇವೆ. ಯೋಧರ ಮಾರಣ ಹೋಮದ ವಿಷಯ ನನಗೆ ತೀವ್ರ ನೋವು ತಂದಿದೆ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

ಎಲ್ಲಿ?
ರಾಜಧಾನಿ ಇಂಫಾಲದಿಂದ 30 ಕಿಮೀ ದೂರದಲ್ಲಿ

ಯಾವಾಗ?
ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ

ಏನಾಯ್ತು?
ಭಾರತೀಯ ಸೇನೆಯ ಡೋಗ್ರಾ ಇನ್‌ಫೆಂಟ್ರಿ ರೆಜಿಮೆಂಟ್‌ಗೆ ಸೇರಿದ ಯೋಧರು ಟ್ರಕ್‌ಗಳಲ್ಲಿ ಸಂಚರಿಸುತ್ತಿದ್ದಾಗ ಶಂಕಿತ ನಾಗಾ ಮತ್ತು ಮಣಿಪುರ ಉಗ್ರರಿಂದ ದಾಳಿ. ರಾಕೆಟ್‌ ಲಾಂಚರ್‌, ಆಟೋಮ್ಯಾಟಿಕ್‌ ಗನ್‌ ಹಾಗೂ ಸುಧಾರಿತ ಸ್ಫೋಟಕಗಳಿಂದ ದಾಳಿ. 18 ಸೈನಿಕರು ಹುತಾತ್ಮ, 11 ಮಂದಿಗೆ ಗಾಯ.

No Comments

Leave A Comment