Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬೆಳಗಾವಿ– ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ ಭೀಕರ ಕಾರು ಡಿಕ್ಕಿ: ನಾಲ್ವರ ಸಾವು

ರಾಮದುರ್ಗ (ಬೆಳಗಾವಿ ಜಿಲ್ಲೆ): ಮುಖಾಮುಖಿ ಡಿಕ್ಕಿ ಹೊಡೆದ ಎರಡು ಕಾರುಗಳು ಹೊತ್ತಿ ಉರಿದ ಪರಿಣಾಮ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಚಂದರಗಿ ಬಳಿ ಸೋಮವಾರ  ಸಂಭವಿಸಿದೆ.

ಬೆಳಗಾವಿ– ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗಿವೆ.

ಮೃತರನ್ನು ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಗ್ರಾಮದ ಮಲ್ಲಯ್ಯ ಅಡಿವೆಯ್ಯ ಮಠಪತಿ (33), ಬಸನಗೌಡ ಟೀಕನಗೌಡ ಪಾಟೀಲ (56), ಬಾಗಲಕೋಟೆ–ವಿಜಯಪುರ ಹಾಲು ಮಾರಾಟ ಮಹಾಮಂಡಳ (ಕೆ.ಎಂ.ಎಫ್‌ ಅಂಗ ಸಂಸ್ಥೆಯಾದ ಡೆಂಪೊ ಡೇರಿ) ಪ್ರಧಾನ ವ್ಯವಸ್ಥಾಪಕ, ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಡಾ.ಬದರಿನಾಥ ಭೀಮರಾವ್‌ ವಾಡಪ್ಪಿ (58) ಹಾಗೂ ಅವರ ಪತ್ನಿ ಸುಮನ್ (55) ಎಂದು ಗುರುತಿಸಲಾಗಿದೆ. ಬಸನಗೌಡ ಅವರು ಮಾಜಿ ಶಾಸಕ ದಿವಂಗತ ಆರ್‌.ಟಿ. ಪಾಟೀಲ ಅವರ ಸಹೋದರ.

ಮೃತರ ಪೈಕಿ ಸಾಲಹಳ್ಳಿಯ ಮಲ್ಲಯ್ಯ ಹಾಗೂ ಬಸನಗೌಡ ಅವರು ಕಾರಿನಿಂದ ಹೊರಬರಲಾರದೆ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ವಾಹನಗಳ ಡಿಕ್ಕಿಯ ರಭಸಕ್ಕೆ ವಾಡಪ್ಪಿ ದಂಪತಿ ಸಾವಿಗೀಡಾಗಿದ್ದು, ಅವರ ಶವಗಳನ್ನು ಹೊರತೆಗೆಯಲಾಗಿದೆ.

ಸಾಲಹಳ್ಳಿಯಿಂದ ಯರಗಟ್ಟಿ ಕಡೆಗೆ ಹೊರಟಿದ್ದ ಕಾರು ಮತ್ತು ಧಾರವಾಡದಿಂದ ಲೋಕಾಪುರ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಇದ್ದಕ್ಕಿದ್ದಂತೆಯೇ ಈ ಕಾರುಗಳಿಗೆ ಬೆಂಕಿ ತಗುಲಿದೆ. ಅದೇ ರಸ್ತೆಯಲ್ಲಿ ಹೊರಟಿದ್ದ ಕೆಲವರು ಕಾರಿನಲ್ಲಿದ್ದವರನ್ನು ಹೊರ ತೆಗೆಯಲು ಶ್ರಮಿಸಿದರಾದರೂ ಬೆಂಕಿ ಆವರಿಸಿದ್ದರಿಂದ ಒಳಗಿದ್ದವರನ್ನು ರಕ್ಷಿಸಲಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಲಹಳ್ಳಿಯ ಕಾರಿನ ಬಾಗಿಲು ಲಾಕ್ ಆಗಿದ್ದರಿಂದ ಒಳಗಿದ್ದವರು ಹೊರಬರಲಾರದೆ ಸಜೀವ ದಹನವಾಗಿದ್ದಾರೆ. ಕಟಕೋಳ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

No Comments

Leave A Comment