Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉಪವಿಭಾಗಕ್ಕೊಬ್ಬರು ಚುನಾವಣಾ ವೀಕ್ಷಕರು ರಾಜ್ಯದಾದ್ಯಂತ ಭಾನುವಾರ ಬೆಳಿಗ್ಗೆ ನೀತಿ ಸಂಹಿತೆ ಜಾರಿ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಸಲುವಾಗಿ ಭಾನುವಾರದಿಂದ ರಾಜ್ಯದಾದ್ಯಂತ ನೀತಿ ಸಂಹಿತೆ  ಜಾರಿಗೆ ಬಂದಿದೆ.

‘ಭಾನುವಾರ ಬೆಳಿಗ್ಗೆ 8 ಗಂಟೆಯಿಂದಲೇ ನೀತಿ ಸಂಹಿತೆ ಆರಂಭವಾಗಿದೆ. ಮತ ಎಣಿಕೆ ಕಾರ್ಯ ಜೂ.5ರಂದು ಪೂರ್ಣಗೊಳ್ಳಲಿದ್ದು, ಜೂ.7ರವರೆಗೆ ರಾಜ್ಯದಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ನೀತಿ ಸಂಹಿತೆ ಅನ್ವಯಿಸುವುದಿಲ್ಲ’ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌.ಶ್ರೀನಿವಾಸಾಚಾರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನೀತಿ ಸಂಹಿತೆ ಪ್ರಕಾರ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಹೆಸರು ಅಥವಾ ಚಿಹ್ನೆಯನ್ನು  ಬಳಸಿ ಅಭ್ಯರ್ಥಿ ಪರ ಪ್ರಚಾರ ನಡೆಸುವಂತಿಲ್ಲ. ಸಚಿವರು ಸರ್ಕಾರಿ ಸಾರಿಗೆಯನ್ನು ಹಾಗೂ ಸಿಬ್ಬಂದಿಯನ್ನು ಚುನಾವಣೆ ಪ್ರಚಾರಕ್ಕೆ ಬಳಸುವಂತಿಲ್ಲ. ಸರ್ಕಾರಿ ಸಭೆಗಳನ್ನು ನಡೆಸಬಹುದು ಆದರೆ, ಮತದಾರರ ಮೇಲೆ ಪ್ರಭಾವ ಬೀರುವ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ. ಚುನಾವಣಾ ಉದ್ದೇಶದಿಂದ ಸಚಿವರು ನಡೆಸುವ ಚುನಾವಣಾ ಸಭೆಗಳಲ್ಲಿ ರಕ್ಷಣಾ ಸಿಬ್ಬಂದಿ  ಹೊರತುಪಡಿಸಿ ಯಾವುದೇ ಸರ್ಕಾರಿ ಅಧಿಕಾರಿಗಳು ಭಾಗವಹಿಸುವಂತಿಲ್ಲ.

ಮಾಧ್ಯಮಗಳ ಮೂಲಕ ಸರ್ಕಾರದ ಸಾಧನೆಗೆ ಸಂಬಂಧಿಸಿದ ಜಾಹೀರಾತುಗಳನ್ನು ನೀಡುವಂತಿಲ್ಲ. ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸುವಂತಿಲ್ಲ. ಚುನಾವಣಾ ಆಯೋಗದ ಪೂರ್ವಾನುಮತಿ ಇಲ್ಲದೇ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ.
ಶಾಸಕರು ಹಾಗೂ ಸಂಸದರು ತಮ್ಮ ವಿಶೇಷ ನಿಧಿಯಿಂದ ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಯಾವುದೇ ಹೊಸ ಕಾಮಗಾರಿ ನಡೆಸುವಂತಿಲ್ಲ. ನೂತನ ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರಲು ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಆಶ್ವಾಸನೆ ನೀಡುವಂತಿಲ್ಲ.

ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ. ಧರ್ಮ, ಜಾತಿ, ಭಾಷಾ ಸಮುದಾಯಗಳ ಮಧ್ಯೆ ದ್ವೇಷ ಹುಟ್ಟಿಸುವಂತಹ ಚಟುವಟಿಕೆ ನಡೆಸುವಂತಿಲ್ಲ.

‘ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಿಗಾ ಇಡುವ ಸಲುವಾಗಿ ಪ್ರತಿ ಉಪವಿಭಾಗಕ್ಕೆ ಒಬ್ಬರಂತೆ ವೀಕ್ಷಕರನ್ನು  ನಿಯೋಜಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ಕಂಡುಬಂದರೆ ಚುನಾವಣಾ ವೀಕ್ಷಕರಿಗೆ ದೂರು ನೀಡಬಹುದು’ ಎಂದು ಶ್ರೀನಿವಾಸಾಚಾರಿ ತಿಳಿಸಿದರು.

ಕಾಂಗ್ರೆಸ್‌ ಸಮಾವೇಶಕ್ಕೆ ಅಡ್ಡಿ ಇಲ್ಲ
ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಸಂಭ್ರಮಾಚರಣೆಗಾಗಿ ಕಾಂಗ್ರೆಸ್‌ ಪಕ್ಷವು ಇದೇ 16ರಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ರಾಜ್ಯಮಟ್ಟದ ಸಮಾವೇಶಕ್ಕೆ  ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ.

‘ರಾಜಕೀಯ ಸಮಾವೇಶಗಳಿಗೆ ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ. ಇಂತಹ ಸಮಾವೇಶಗಳಿಗೆ ಯಾವುದೇ ಸರ್ಕಾರಿ ಯಂತ್ರವನ್ನು ಬಳಸುವಂತಿಲ್ಲ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು  ಕಾಂಗ್ರೆಸ್‌ ಪಕ್ಷದ ಸಮಾವೇಶಕ್ಕೆ ಅವಕಾಶ ನೀಡುವ ಬಗ್ಗೆ ನಿರ್ಧಾರಕೈ
ಗೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದರು.

‘ಯಾವುದೇ ಅಭ್ಯರ್ಥಿಗೂ ಮತ ನೀಡದಿರಲು ಅವಕಾಶ ಕಲ್ಪಿಸುವ  ನೋಟಾ ಚಲಾವಣೆಗೆ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಕಾಶ ನೀಡಿಲ್ಲ’   
ಪಿ.ಎನ್‌.ಶ್ರೀನಿವಾಸಾಚಾರಿ, 
ರಾಜ್ಯ ಚುನಾವಣಾ ಆಯುಕ್ತರು

No Comments

Leave A Comment