Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸಹೋದ್ಯೋಗಿಯಿಂದಲೇ ಕೊಲೆ: ಆರೋಪಿಯ ಬಂಧನ

ಪಡುಬಿದ್ರಿ: ತನ್ನ ತಂಗಿ ಮದುವೆಗೆ ಕಲುºರ್ಗಿಗೆ ಹೋಗಿ ಬರುವೆನೆಂದು ಎ. 17ರಂದು ರಜೆ ಹಾಕಿ ನಿಗೂಢವಾಗಿ ನಾಪತ್ತೆಯಾಗಿದ್ದು ಸುಮಾರು 20 ದಿನಗಳ ಬಳಿಕ ಶವವಾಗಿ ಪಾದೆಬೆಟ್ಟಿನ ಬಿಕ್ರಿಗುತ್ತು ಹಾಡಿಯಲ್ಲಿ ಛಿದ್ರ, ಛಿದ್ರವಾಗಿ ಪತ್ತೆಯಾಗಿದ್ದ ವಿದ್ಯುದುತ್ಪಾದನಾ ಯುಪಿಸಿಎಲ್‌ ಕಂಪೆನಿಯಲ್ಲಿ ಹೆಲ್ಪರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ ಪಟೇಲ್‌(24) ಇದೀಗ ತನ್ನ ಸಹೋದ್ಯೋಗಿಯಿಂದಲೇ ಎ. 17ರಂದು ಕೊಲೆಯಾಗಿದ್ದನೆಂಬುದು ಬಹಿರಂಗವಾಗಿದೆ.

ಆತನೊಂದಿಗೆ ಫಿಟ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುದುರೆಮುಖ ಸಮೀಪದ ನೆಲ್ಲಿಬೀಡುವಿನ ಸುಬ್ರಹ್ಮಣ್ಯನೇ ರಾಜ ಪಟೇಲ್‌ನನ್ನು ತನ್ನ ಬಾಡಿಗೆ ಮನೆಯಲ್ಲಿಯೇ ನೈಲಾನ್‌ ರೋಪ್‌ ಮತ್ತು ಪ್ಲಾಸ್ಟಿಕ್‌ ಚೀಲವನ್ನು ಬಳಸಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂತೋಷ್‌ಕುಮಾರ್‌ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿನ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಆರೋಪಿ ಸುಬ್ರಹ್ಮಣ್ಯನನ್ನು ರವಿವಾರ ಬೆಳಿಗ್ಗೆ ಪಾದೆಬೆಟ್ಟು ಸುಬ್ರಹ್ಮಣ್ಯ ದ್ವಾರದ ಬಳಿ ಬಂಧಿಸಲಾಗಿದೆ.

ಪಾರ್ಟಿ ಮತ್ತು; ಪ್ರಾಣಕ್ಕೆ ಬಂತು ಆಪತ್ತು

ಕೊಲೆ ಆರೋಪಿ ಸುಬ್ರಹ್ಮಣ್ಯ ಹಾಗೂ ಕೊಲೆಯಾದ ರಾಜ ಪಟೇಲ್‌ ಸುಮಾರು ಒಂದೂವರೆ ವರ್ಷದಿಂದ ಜೊತೆಯಲ್ಲಿ ಕೆಲಸಮಾಡುತ್ತಿದ್ದು ರಜಾ ಮಜಾಕ್ಕೆ ರಜೆಯಲ್ಲಿ ತೆರಳುವವರು ಹಿರಿಯ ಸಹೋದ್ಯೋಗಿಗಳಿಗೆ ಗುಂಡು ಪಾರ್ಟಿ ನೀಡಬೇಕೆಂಬ ಅಲಿಖೀತ ಹೊಂದಾಣಿಕೆಯೇ ಈ ಪ್ರಕರಣದಲ್ಲಿ ರಾಜ ಪಟೇಲ್‌ ಅಂತ್ಯಕ್ಕೆ ಹೇತುವಾಗಿದೆ. ತಂಗಿಯ ಮದುವೆಗಾಗಿ ರಾಜಾ ಪಟೇಲ್‌ ತೆರಳುತ್ತಿದ್ದು ಆತನ ಬಳಿ 50000ಕ್ಕೂ ಮಿಕ್ಕಿ ಹಣವಿರಬಹುದೆಂದು ಗ್ರಹಿಸಿ ಆರೋಪಿಯು ತನ್ನ ಲಾಭಕ್ಕಾಗಿ ಕೊಲೆಯನ್ನು ಗೈದಿದ್ದಾನೆ.

ಎ. 17ರಂದು ಪಾರ್ಟಿ ಮುಗಿಸಿ ನೇರ ತನ್ನ ಪಾದೆಬೆಟ್ಟಿನ ಬಾಡಿಗೆ ಮನೆಗೆ ರಾಜ ಪಟೇಲ್‌ನನ್ನು ಆರೋಪಿ ಸುಬ್ರಹ್ಮಣ್ಯ ಕರೆತಂದಿದ್ದ. ಮಧ್ಯಾಹ್ನದ 11-30ರ ಸುಮಾರಿಗೆ ಜೋರಾಗಿ ಶಬ್ದ ಬರುವಂತೆ ತನ್ನ ರೂಮಿನ ಟಿವಿಯನ್ನು ಹಾಕಿ ನೆರೆಮನೆಯಲ್ಲಿರುವವರಿಗೆ ತನ್ನಲ್ಲೇನು ನಡೆಯುತ್ತಿದೆ ಎಂಬುದೂ ಗಮನಕ್ಕೆ ಬಾರದಂತೆ ಮುಂಜಾಗ್ರತೆಯನ್ನು ಆರೋಪಿಯು ಮೊದಲಾಗಿ ವಹಿಸಿದ್ದ. ಬಳಿಕ ರಾಜಾ ಪಟೇಲ್‌ನ ಹಿಂಬದಿಯಿಂದ ಬಂದು ನೈಲಾನ್‌ ರೋಪ್‌ನಿಂದ ಕುತ್ತಿಗೆಯನ್ನು ಬಿಗಿದು ಪ್ಲಾಸ್ಟಿಕ್‌ ಕವರ್‌ ಬಳಸಿ ಆತನ ಮುಖವನ್ನು ಮುಚ್ಚಿ ಉಸಿರುಗಟ್ಟಿ ಸಾಯುವಂತೆ ಮಾಡಿದ್ದ. ರಾಕ್ಷಸೀ ಪ್ರವೃತ್ತಿಯವನಾದ ಆರೋಪಿಯು ನಂತರ ಬ್ಲೇಡಿನಿಂದ ರಾಜ ಪಟೇಲ್‌ನ ಕುತ್ತಿಗೆಯನ್ನು ಕೊಯಿದು ಆತ ಸತ್ತಿರುವುದನ್ನು ದೃಢಪಡಿಸಿಕೊಂಡಿದ್ದನು.

ಮಧ್ಯಾಹ್ನ ಕೊಲೆ – ರಾತ್ರಿ ಹಾಡಿಯಲ್ಲಿ ಬಿಸುಟು ಕೈತೊಳೆದುಕೊಂಡ ಆರೋಪಿ

ರಾಜ ಪಟೇಲ್‌ ಪರ್ಸ್‌ನಲ್ಲಿದ್ದ 1300 ರೂ. ನಗದನ್ನು ತನ್ನ ಜೇಬಿಗಿಳಿಸಿಕೊಂಡ ಆರೋಪಿ ಸುಬ್ರಹ್ಮಣ್ಯ ರಾಜ ಪಟೇಲ್‌ ಬಳಿಯಿದ್ದ ಎರಡು ಸಿಮ್‌ಗಳು, 2 ಎಟಿಎಂ ಕಾರ್ಡ್‌ಗಳು ಹಾಗೂ ಪರ್ಸನ್ನು ಸುಡಲು ಯತ್ನಿಸಿ ಆರೆಬರೆ ಸುಟ್ಟಿದ್ದ ಪರ್ಸನ್ನು ಅದೇ ಹಾಡಿಯಲ್ಲಿ ದೂರಕ್ಕೆ ಎಸೆದಿದ್ದನು. ಮಧ್ಯಾಹ್ನದ ಬಳಿಕ ಮತ್ತೆ ಪಡುಬಿದ್ರಿ ಪೇಟೆಗೆ ಬಂದು ಮತ್ತೇರಿಸಿಕೊಂಡ ಆರೋಪಿ ರಾತ್ರಿ ಸುಮಾರು 8ರವೇಳೆಗೆ ತನ್ನ ರೂಮಿಗೆ ಮರಳಿ ರಾಜ ಪಟೇಲ್‌ ಸತ್ತಿರುವುದನ್ನು, ಕುತ್ತಿಗೆಯಲ್ಲಿನ ಗಾಯದಿಂದ ನೆತ್ತರ ಕೋಡಿ ಹರಿದಿರುವುದನ್ನು ಗಮನಿಸಿ ಬಳಿಕ ಮನೆಯಂಚಿನ ಸಣ್ಣ ಓಣಿಯ ಮೂಲಕ, ಬಾವಿಯೊಂದನ್ನು ದಾಟಿ ಮನೆಯ ಹಿಂಬದಿಯ ಹಾಡಿಯಲ್ಲಿ ಸುಮಾರು 100ಮೀಟರ್‌ ದೂರಕ್ಕೆ ಪ್ಲಾಸ್ಟಿಕ್‌ ಅಕ್ಕಿ ಚೀಲವನ್ನು ತುಂಡರಿಸಿ ಅದರಲ್ಲಿ ಹೆಣವನ್ನು ಕಟ್ಟಿ ಹೆಗಲಿಗೇರಿಸಿಕೊಂಡು ಅದನ್ನು ಬಿಸುಟು ಬಂದಿದ್ದನು ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಂತೋಷ್‌ಕುಮಾರ್‌ ವಿವರಿಸಿದ್ದಾರೆ.

ಮೈ ತುಂಬ ಸಾಲವಿದ್ದ ಆರೋಪಿ ಸುಬ್ರಹ್ಮಣ್ಯ

ತನ್ನ ಪತ್ನಿ ಹಾಗೂ ಎರಡು ಪುಟ್ಟ ಹೆಣ್ಣು ಮಕ್ಕಳನ್ನು ತಾಯಿ ಮನೆಯಿರುವ ಬಾಳೆಹೊನ್ನೂರಿಗೆ ಕಳುಹಿಸಿ ತನ್ನ ಮಾಸ್ಟರ್‌ ಪ್ಲಾನನ್ನು ಕೃತಿಗಿಳಿಸಿದ್ದ ಆರೋಪಿ ಸುಬ್ರಹ್ಮಣ್ಯ ಬಾಳೆಹೊನ್ನೂರಿನಲ್ಲೇ ಸುಮಾರು 50,000ರೂ.ಗಳಷ್ಟು ಚಿನ್ನವನ್ನು ಅಡವಿರಿಸಿ ಸಾಲ ಪಡೆದಿದ್ದ. ಇಷ್ಟರಲ್ಲೇ ಅವು ಏಲಂಗೂ ಹೋಗುವ ಸ್ಥಿತಿಯಿತ್ತು. ಪಾದೆಬೆಟ್ಟಿನ ತನ್ನ ನೆರೆಹೊರೆಯವರಿಂದಲೇ 10,000ರೂ. ಕೈ ಸಾಲವನ್ನೂ ಮಾಡಿಕೊಂಡಿದ್ದ ಆರೋಪಿ ಸುಬ್ರಹ್ಮಣ್ಯನಿಗೆ ದುಡ್ಡು ಅತೀ ಅಗತ್ಯವೆಂಬಂತಹಾ ಸ್ಥಿತಿಯು ಏರ್ಪಟ್ಟಿತ್ತು. ಹಾಗಾಗಿ ತಾನು ಈ ಕೃತ್ಯವನ್ನು ಎಸಗಿರುವುದಾಗಿ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.

ಕೊಲೆ ಬಳಿಕ ಏನೂ ತಿಳಿಯದಂತಿದ್ದ

ಕೊಲೆಯನ್ನು ಗೈದ ಮರುದಿನ ತನ್ನ ಹುಟ್ಟೂರು ನೆಲ್ಲಿಬೀಡುವಿಗೆ ತೆರಳಿದ್ದ ಆರೋಪಿ ಏನೂ ನಡೆದಿಲ್ಲವೆಂಬಂತೆ ದಿನಗಳೆದಿದ್ದ. 3-4 ದಿನಗಳ ರಜೆಯ ಬಳಿಕ ಮಾಮೂಲಿನಂತೆ ತನ್ನ ಉದ್ಯೋಗಕ್ಕೂ ಹಾಜರಾಗಿ ಎಲ್ಲಾ ವಿಷಯಗಳನ್ನು ಬಚ್ಚಿಟ್ಟಿದ್ದ. ತನ್ನ ಮನೆಯ ಹಿಂಬದಿಯ ಹಾಡಿಯಲ್ಲಿ ರಾತ್ರಿಯ ವೇಳೆ ನಾಯಿ ಮತ್ತಿತರ ಪ್ರಾಣಿಗಳು ಘೂಳಿಡುತ್ತಿದ್ದದನ್ನೂ ಗಮನಿಸಿದ್ದ ಆರೋಪಿಯು ಸಹಜವಾಗಿ ತನಗೆ ದುರ್ನಾತ ಬರತೊಡಗಿದ್ದರೂ ಯಾರಲ್ಲೂ ಹೇಳದೇ ಸುಮ್ಮನಿದ್ದನೆಂದೂ ಪೊಲೀಸರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಎ. 8ರಂದು ಸ್ಥಳೀಯರಾದ ಸಂದೇಶ್‌ ಶೆಟ್ಟಿ ಪಡುಬಿದ್ರಿ ಪೊಲೀಸ್‌ ಠಾಣೆಗೆ ಶವವೊಂದು ಛಿದ್ರ ಸ್ಥಿತಿಯಲ್ಲಿ ಕಾಣಸಿಕ್ಕ ಬಗ್ಗೆ ದೂರು ನೀಡಿದ್ದರು. ಇದನ್ನು ಬೆನ್ನತ್ತಿ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ನಾಪತ್ತೆಯಾದ ರಾಜ ಪಟೇಲ್‌ ಸಹವರ್ತಿಗಳು ಶವವು ಆತನದ್ದೆಂದು ಗುರುತಿಸಿದ ಬಳಿಕ ಕೊಲೆ ಪ್ರಕರಣವಾಗಿ ನಾಪತ್ತೆ ದೂರನ್ನು ಪರಿವರ್ತಿಸಿಕೊಂಡು ತನಿಖೆಯನ್ನು ಪೊಲೀಸ್‌ ತಂಡವೊಂದನ್ನು ರಚಿಸಿ ಮುಂದುವರಿಸಿದ್ದರು. ಇದೀಗ ಆರೋಪಿಯ ವಿರುದ್ಧ ಸಾಕ್ಷ ನಾಶದ ಕುರಿತಾಗಿಯೂ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಜ ಪಟೇಲ್‌ ಸಹೋದ್ಯೋಗಿಗಳನ್ನು ವಿಚಾರಿಸಿಕೊಂಡು ಆತನ ಮೊಬೈಲ್‌ ನೀಡಿದ ಸುಳಿವಿನ ಸಹಿತ ಇತರ ಸಾಕ್ಷಾಧಾರಗಳೊಂದಿಗೆ ಈ ಕೊಲೆ ಪ್ರಕರಣವನ್ನು ಬೇಧಿಸಲು ಶ್ರಮಿಸಿರುವ ಪೊಲೀಸ್‌ ತಂಡಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಣ್ಣಾಮಲೈ ಬಹುಮಾನವನ್ನು ಘೋಷಿಸಲಿರುವುದಾಗಿಯೂ ಎಡಿಶನಲ್‌ ಎಸ್ಪಿ ಸಂತೋಷ್‌ಕುಮಾರ್‌ ಹೇಳಿದ್ದಾರೆ. ಕಾರ್ಕಳ ಡಿವೈಎಸ್ಪಿ ವಿನಯ ಎಸ್‌ ನಾಯಕ್‌, ಕಾಪು ಸಿಪಿಐ ಸುನಿಲ್‌ ನಾಯಕ್‌ ಹಾಗೂ ಪಡುಬಿದ್ರಿ ಠಾಣಾ ಪಿಎಸ್‌ಐ ಅಜ್ಮತ್‌ ಅಲಿ ಉಪಸ್ಥಿತರಿದ್ದರು.

No Comments

Leave A Comment