Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ನಾನು ಸಾಯುವ ಮೊದಲು ಚಿನ್ನ ಗೆಲ್ಲಿ: ಮಿಲ್ಖಾ ಸಿಂಗ್

ನವದೆಹಲಿ: ನಾನು ಸಾಯುವ ಮೊದಲು ಭಾರತೀಯರೊಬ್ಬರು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂದು ಖ್ಯಾತ ಮಾಜಿ ಅಥ್ಲೀಟ್ ಹಾಗೂ  ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತರಾಗಿದ್ದ ಮಿಲ್ಕಾ ಸಿಂಗ್ ಅವರು ಹೇಳಿದ್ದಾರೆ.

ಕ್ರೀಡಾ ಪ್ರಶಸ್ತಿ ಪ್ರಧಾನಿ ಸಮಾರಂಭ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಿಲ್ಖಾ ಸಿಂಗ್ ಅವರು, ನಾನು ಸಾಯುವ ಮುನ್ನ ಭಾರತೀಯ ಅಥ್ಲೀಟ್ ಓರ್ವರು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಬೇಕು. ಇದು ನನ್ನ ಏಕೈಕ ಆಸೆ ಎಂದು ತಮ್ಮ ಅಭಿಲಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಮಿಲ್ಕಾ ಸಿಂಗ್, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವಾರು ಕ್ರೀಡಾಪಟುಗಳು ಬೆಳಕಿಗೆ ಬಂದರಾದರೂ ಒಬ್ಬರಿಂದಲೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. 1960ರ ರೋಮ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಾನು ಕೂದಲೆಳೆ ಅಂತರದಲ್ಲಿ ಪದಕವಂಚಿತನಾಗಿದ್ದೆ. ಆದರೆ ಭಾರತೀಯರು ಈ ಸಾಧನೆ ಮಾಡುವುದನ್ನು ನಾನು ಖಾತರದಿಂದ ಎದುರು ನೋಡುತ್ತಿದ್ದೇನೆ. ಅದು ಕೂಡ ನಾನು ಸಾಯುವುದರೊಳಗೆ ಒಲಿಂಪಿಕ್ಸ್ ನಲ್ಲಿ ಭಾರತೀಯರು ಚಿನ್ನದ ಪದಕ ಗೆಲ್ಲಬೇಕು” ಎಂದು ಮಿಲ್ಖಾ ಸಿಂಗ್ ತಮ್ಮ ಮನದ ಆಸೆಯನ್ನು ಹೊರಹಾಕಿದ್ದಾರೆ.

ಇದೇ ವೇಳೆ, 1994ರಲ್ಲಿ ಕಾರ್ಲ್ ಲಿವಿಸ್ ಚಿನ್ನದ ಪದಕ ಗೆದ್ದ ಘಳಿಗೆಯನ್ನು ಮಿಲ್ಕಾ ಸಿಂಗ್ ಮೆಲುಕು ಹಾಕಿದರು. ಮಿಲ್ಕಾ ಸಿಂಗ್ ಅವರಿಗೆ ಈ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಂಬತ್ತು ಒಲಿಂಪಿಕ್ ಚಿನ್ನದ ಪದಕ ಗೆದ್ದಿರುವ ವಿಶ್ವಖ್ಯಾತ ಓಟಗಾರ ಕಾರ್ಲ್ ಲಿವಿಸ್ ಅವರೇ ಖುದ್ದಾಗಿ ಮಿಲ್ಕಾ ಸಿಂಗ್’ಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವಾರು ಅಥ್ಲೆಟಿಕ್ಸ್’ಗಳು ಬೆಳೆದರಾದರೂ ಒಲಿಂಪಿಕ್ಸ್’ನಲ್ಲಿ ದೇಶವನ್ನು ಪ್ರತಿನಿಧಿಸಿದ್ದು ಕಡಿಮೆಯೇ. ಒಲಿಂಪಿಕ್ಸ್’ನಲ್ಲಿ ಪಾಲ್ಗೊಂಡರೂ ಫೈನಲ್ ತಲುಪಿದ್ದು ವಿರಳ. ಮಿಲ್ಕಾ ಸಿಂಗ್(1960), ಗುರಬಚನ್ ಸಿಂಗ್ ರಂಧವಾ(1964), ಶ್ರೀರಾಮ ಸಿಂಗ್(1976) ಮತ್ತು ಪಿಟಿ ಉಷಾ(1984) ಫೈನಲ್ ತಲುಪಿದವರು. ಆದರೆ, ಇವರಾರಿಂದಲೂ ಪದಕ ಗೆಲ್ಲಲಾಗಲಿಲ್ಲ. ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತರಾಗಿದ್ದ ಮಿಲ್ಕಾ ಸಿಂಗ್ ಒಲಿಂಪಿಕ್ಸ್’ನಲ್ಲಿ ಪದಕ ಗೆಲ್ಲುವುದು ನಿಶ್ಚಿತ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ದುರದೃಷ್ಟಕ್ಕೆ ದಕ್ಷಿಣ ಆಫ್ರಿಕಾದ ಸ್ಪೆನ್ಸರ್ ಅವರು ಮಿಲ್ಕಾ ಅವರನ್ನ ಹಿಂದಿಕ್ಕಿ ಕಂಚಿನ ಪದಕ ಗೆದ್ದುಬಿಟ್ಟರು.

No Comments

Leave A Comment